ರಾಜ್ಯ ಹಣಕಾಸು ಸಂಸ್ಥೆಗೆ ₹25.55 ಕೋಟಿ ನಿವ್ವಳ ಲಾಭ

7
ಮೊದಲ ಪೀಳಿಗೆ ಉದ್ದಿಮೆದಾರರಿಗೆ ₹ 77.95 ಕೋಟಿ ಹಣಕಾಸು ನೆರವು

ರಾಜ್ಯ ಹಣಕಾಸು ಸಂಸ್ಥೆಗೆ ₹25.55 ಕೋಟಿ ನಿವ್ವಳ ಲಾಭ

Published:
Updated:

ಯಾದಗಿರಿ: ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯು 2017-18ನೇ ಹಣಕಾಸು ವರ್ಷದಲ್ಲಿ ನಿವ್ವಳ ಲಾಭ ಗಳಿಸಿದೆ. ಸಂಸ್ಥೆಯು ತನ್ನ ಹಣಕಾಸಿನ ಸ್ಥಿತಿಗತಿಗಳನ್ನು ಕ್ರೋಢೀಕರಿಸಿ ಮಾರ್ಚ್ 2018ರ ಅಂತ್ಯದವರೆಗೆ ಒಟ್ಟು ₹25.55ಕೋಟಿ ನಿವ್ವಳ ಲಾಭ ದಾಖಲಿಸಿದೆ ಎಂದು ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಳೆದ ವರ್ಷ ಜಾರಿಗೊಂಡ ಸರಕು ಸೇವಾ ತೆರಿಗೆ ಹಾಗೂ ಅನಾಣ್ಯೀಕರಣಗಳ ಪರಿಣಾಮಗಳ ನಡುವೆಯೂ ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯು ಧನಾತ್ಮಕ ಬೆಳವಣಿಗೆಯನ್ನು ದಾಖಲಿಸಿದೆ. ಸಂಸ್ಥೆಯು ಮಂಜೂರಾತಿಯಲ್ಲಿ ಅಲ್ಪ ಪ್ರಮಾಣದ ಸುಧಾರಣೆಯನ್ನು ಸಾಧಿಸಿದ್ದರೂ ಕೂಡ, ಕರ್ನಾಟಕ ಸರ್ಕಾರದ ನೆರವಿನಿಂದಾಗಿ ₹ 842.13 ಕೋಟಿ ಸಾಲ ಮಂಜೂರಾತಿ, ₹ 561.21 ಕೋಟಿ ಸಾಲ ವಿತರಣೆ ಹಾಗೂ ₹781.91 ಕೋಟಿ ಸಾಲ ವಸೂಲಾತಿ ಮಾಡಿದೆ. ಸಂಸ್ಥೆಯ ವತಿಯಿಂದ ಮಹಿಳಾ ಉದ್ದಿಮೆದಾರರಿಗೆ ₹200.48 ಕೋಟಿ ಹಣಕಾಸಿನ ನೆರವನ್ನು ನೀಡಿ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಉದ್ದಿಮೆದಾರರಿಗೆ ₹269.20 ಕೋಟಿ ಹಾಗೂ ಮೊದಲ ಪೀಳಿಗೆ ಉದ್ದಿಮೆದಾರರಿಗೆ ₹ 77.95 ಕೋಟಿ ಹಣಕಾಸಿನ ನೆರವು ನೀಡಿದೆ ಎಂದು ವಿವರಿಸಿದೆ.

2018-19ನೇ ಸಾಲಿನ ಮುನ್ನೋಟ:  ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯು ಪ್ರಸಕ್ತ 2018-19ನೇ ಸಾಲಿನಲ್ಲಿ ₹1,000 ಕೋಟಿಸಾಲ ಮಂಜೂರಾತಿ, ₹800 ಕೋಟಿ ಸಾಲ ವಿತರಣೆ ಹಾಗೂ ₹740 ಕೋಟಿ ಸಾಲ ವಸೂಲಾತಿ ಗುರಿಯನ್ನು ಹೊಂದಿದೆ. ಪ್ರಸ್ತುತ ವರ್ಷ 2018-19ನೇ ಸಾಲಿನ ಕರ್ನಾಟಕ ಸರ್ಕಾರದ ಆಯವ್ಯಯದಲ್ಲಿ ಪ್ರಕಟಿಸಿರುವಂತೆ ಕೆಎಸ್ಎಫ್ ಸಿ ಮುಖಾಂತರ ಸಾಲ ಪಡೆಯುವ ಅತಿ ಸಣ್ಣ ಮತ್ತು ಸಣ್ಣ ಪ್ರಮಾಣದ ತಯಾರಿಕಾ ಕೈಗಾರಿಕಾ ಘಟಕಗಳ ಉದ್ದಿಮೆದಾರರಿಗೆ ಸಾಲದ ಮೊದಲ ಕಂತನ್ನು ಬಿಡುಗಡೆ ಮಾಡಿದ ದಿನಾಂಕದಿಂದ ಐದು ವರ್ಷಗಳ ಅವಧಿಗೆ ಶೇ10ರಷ್ಟು ಬಡ್ಡಿ ಸಹಾಯಧನದ ಸೌಲಭ್ಯ ಕಲ್ಪಿಸಲಾಗಿದೆ.

ನೂತನ ಯೋಜನೆಗಳನ್ನು ಪರಿಚಯಿಸಿರುವುದರಿಂದ ಪ್ರಸ್ತುತ ಯೋಜನೆಗಳ ಬಗೆಗಿನ ಮೃದು ಧೋರಣೆ, ಸಡಿಲಿಕೆಯಿಂದಾಗಿ, ಮಹಿಳಾ ಉದ್ದಿಮೆದಾರರ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಉದ್ದಿಮೆದಾರರ ಯೋಜನೆಗಳ ಬಡ್ಡಿದರದಲ್ಲಿನ ಕಡಿತದಿಂದಾಗಿ ಸಂಸ್ಥೆಯ ವತಿಯಿಂದ ವ್ಯವಹಾರ ಅಭಿವೃದ್ಧಿ ಸಭೆಗಳನ್ನು ನಡೆಸಲು ಹಣಕಾಸು ವರ್ಷ 2018–19ಕ್ಕೂ ಹೆಚ್ಚು ಸೂಕ್ತವಾಗಿದೆ. ರಾಜ್ಯದಾದ್ಯಂತ ವ್ಯವಹಾರ ಅಭಿವೃದ್ಧಿ ಸಭೆಗಳ ಮೂಲಕ ಸುಧಾರಿತ ಸೇವೆಗಾಗಿ, ಸ್ನೇಹಿ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ. ಸಂಸ್ಥೆಯು ತನ್ನ ಕಾರ್ಯಾಚರಣೆಯಲ್ಲಿ ದಕ್ಷತೆಯನ್ನು ಹೆಚ್ಚಿಸಲು ರಾಜ್ಯದ ಸಂಭಾವ್ಯ ಸ್ಥಳಗಳಲ್ಲಿ ವ್ಯಾಪಾರವನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ವ್ಯವಹಾರ ಅಭಿವೃದ್ಧಿ ಸಭೆಗಳನ್ನು ನಡೆಸುತ್ತಿದೆ. ಪ್ರಸ್ತುತ ಸಾಲಿನಲ್ಲಿ ’ಪೂರಕ ಭದ್ರತಾ ಖಾತರಿ ಯೋಜನೆ’ ಹಾಗೂ ಜವಳಿ ಉದ್ದಿಮೆಗಳನ್ನು ಸ್ಥಾಪಿಸಲು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ಉದ್ದಿಮೆದಾರರಿಗೆ ವಿಶೇಷ ಯೋಜನೆಯನ್ನು ಜಾರಿಗೊಳಿಸಿರುವುದು ಸಹ ಸಂಸ್ಥೆಯು ತನ್ನ ಕಾರ್ಯಾಚರಣೆಯಲ್ಲಿ ಮಹತ್ವದ ತಿರುವು ಪಡೆಯುವಲ್ಲಿ ಸಹಕಾರಿಯಾಗಲಿದೆ ಎಂದು ಮಾಹಿತಿ ನೀಡಿದೆ.

ಪ್ರಸ್ತುತ ವರ್ಷ 2018–19 ಅನ್ನು ವಿತರಣೆಯ ವರ್ಷ ಎಂದು ಘೋಷಿಸುವುದರೊಂದಿಗೆ ಬದ್ಧತೆಯ ನೆರವೇರಿಕೆಯಲ್ಲಿ ಬೆಳವಣಿಗೆಯನ್ನು ಕಾಣುವ ಗುರಿಯನ್ನು ಹೊಂದಿದೆ. ಅಷ್ಟೇ ಅಲ್ಲದೇ, ಪ್ರಸ್ತುತ ವರ್ಷವನ್ನು ವಸೂಲಾಗದ ಸಾಲಗಳ ವಿಶ್ಲೇಷಣಾ ವರ್ಷ (D-III, Post-MoU & pre-MoU) ಎಂದು ಘೋಷಿಸಿ ಸಂಸ್ಥೆಯ ಉತ್ತಮವಲ್ಲದ ಸಾಲಗಳ ಪೋರ್ಟ್‌ ಪೊಲಿಯೋ (ಅಧಿಕಾರ ಕ್ಷೇತ್ರ) ವನ್ನು ಶುದ್ಧೀಕರಿಸುವ ಕಾರ್ಯಕ್ಕೆ ಪ್ರಚೋದನೆಯನ್ನು ನೀಡಲಾಗಿದೆ ಎಂದು ತಿಳಿಸಿದೆ.

ಸಂಸ್ಥೆಯು ಪ್ರಸ್ತುತ ವರ್ಷದಲ್ಲೂ ಸಹ ವ್ಯವಸ್ಥಾಪಕ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಪ್ರತಿ ವೃತ್ತ ಮಟ್ಟದಲ್ಲಿ ಕನಿಷ್ಠ ಒಂದು ವ್ಯವಹಾರ ಸಭೆಯನ್ನು ನಡೆಸಲು ಯೋಜಿಸಲಾಗಿದ್ದು, ಸದರಿ ಸಭೆಯಲ್ಲೇ ಉದ್ದಿಮೆದಾರರ ಯೋಜನೆಗಳ ಬಗ್ಗೆ ಚರ್ಚಿಸಿ, ಸಾಲ ಪ್ರಸ್ತಾವನೆಗಳಿಗೆ ಸ್ಥಳದಲ್ಲೇ ಒಪ್ಪಿಗೆ ನೀಡಲಾಗುವುದು ಎಂದು ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ ತಿಳಿಸಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !