ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ| ಜಿಲ್ಲೆಯಲ್ಲಿ ರಕ್ತದಾನದ ಅರಿವಿನ ಕೊರತೆ

ಜೂನ್ 14ರಂದು ವಿಶ್ವ ರಕ್ತದಾನ ದಿನಾಚರಣೆ,
Last Updated 13 ಜೂನ್ 2019, 17:17 IST
ಅಕ್ಷರ ಗಾತ್ರ

ಯಾದಗಿರಿ: ಜೂನ್ 14ರಂದು ವಿಶ್ವ ರಕ್ತದಾನಿಗಳ ದಿನ ಆಚರಿಸಲಾಗುತ್ತದೆ. ಇದರ ಮುಖ್ಯ ಉದ್ದೇಶ ರಕ್ತದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದಾಗಿದೆ.

ರೆಡ್‌ ಕ್ರಾಸ್ ಸಂಸ್ಥೆ ವತಿಯಿಂದ ಜಿಲ್ಲೆಯ ವಿವಿಧೆಡೆ ತಿಂಗಳಲ್ಲಿ 2–3 ಬಾರಿ ವಿಶೇಷ ಶಿಬಿರ ಹಮ್ಮಿಕೊಂಡು ತಿಳಿವಳಿಕೆ ನೀಡಿದರೂ ಜನರು ರಕ್ತದಾನ ಮಹತ್ವದ ಬಗ್ಗೆ ಜಾಗೃತಿಗೊಳ್ಳುತ್ತಿಲ್ಲ. ಹೀಗಾಗಿ ಈ ಬಾರಿ ರಕ್ತದಾನ ಶಿಬಿರ ಹಾಗೂ ಅತಿ ಹೆಚ್ಚು ಬಾರಿ ರಕ್ತದಾನ ಮಾಡಿದವರನ್ನು ಗುರುತಿಸಿ ಸನ್ಮಾನ ಮಾಡಲಾಗುತ್ತಿದೆ.

ನಗರದ ಜಿಲ್ಲಾಸ್ಪತ್ರೆ ಹತ್ತಿರವಿರುವ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ರಕ್ತದಾನ ಮಹತ್ವದ ಬಗ್ಗೆ ಹಾಗೂ ರಕ್ತದಾನ ವಿಶೇಷ ಶಿಬಿರ ಹಮ್ಮಿಕೊಳ್ಳುತ್ತಿದೆ.

ಶಹಾಪುರ, ಸುರಪುರ ತಾಲ್ಲೂಕುಗಳಲ್ಲಿ ಜನರಿಗೆ ರಕ್ತದಾನದ ಬಗ್ಗೆ ಅರಿವು ಮೂಡಿದೆ. ಇನ್ನುಳಿದ ತಾಲ್ಲೂಕುಗಳಲ್ಲಿ ರಕ್ತದಾನದ ಬಗ್ಗೆ ಅಸಡ್ಡೆತನ ಇದೆ ಎನ್ನುವುದು ರೆಡ್ ಕ್ರಾಸ್‌ ಸಂಸ್ಥೆಯ ಅಧಿಕಾರಿಗಳು ಆರೋಪ.

ರಕ್ತಕ್ಕೆ ಪರ್ಯಾಯ (ಬದಲಿಯಾದ) ವಸ್ತುವಿಲ್ಲ. ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ. ರಕ್ತದಾನ ಮಾಡುವುದು ಪ್ರತಿ ಆರೋಗ್ಯವಂತ ವ್ಯಕ್ತಿಯ ಕರ್ತವ್ಯವೆಂದು ಭಾವಿಸಿ ಆಗಾಗ ರಕ್ತದಾನ ಮಾಡಿದಲ್ಲಿ ಮಾತ್ರ ರೋಗಿಗಳನ್ನು ಹಾಗೂ ಗಾಯಾಳುಗಳನ್ನು ಬದುಕಿಸಲು ಸಾಧ್ಯ ಎಂದು ರೆಡ್ ಕ್ರಾಸ್ ಸಂಸ್ಥೆ ಜಾಗೃತಿ ಮೂಡಿಸುತ್ತಿದೆ.

ಆದರೂ ಜಿಲ್ಲೆಯಲ್ಲಿ 2018ರ ಏಪ್ರಿಲ್‌ನಿಂದ 2019ರ ಮೇ ವರೆಗೆ 1,025 ಯುನಿಟ್ ರಕ್ತ ಸಂಗ್ರಹಿಸಲಾಗಿದೆ. ಆದರೂ ಕೂಡ ಇದು ಏನೆನೂ ಸಾಲದಾಗಿದೆ. ತುರ್ತು ಶಸ್ತ್ರ ಚಿಕಿತ್ಸೆ ಸಂದರ್ಭಕ್ಕೆ ರಕ್ತ ಬೇಕಾಗುತ್ತದೆ. ಕ್ಯಾನ್ಸರ್‌ ರೋಗಿಗಳು, ಗರ್ಭಿಣಿಯರು, ಥ್ಯಾಲಸೀಮಿಯಾ, ಹಿಮೊಫಿಲಿಯಾ ಸಿಕಲ್‌ಸೆಲ್ ಅನಿಮೀಯಾ ಮುಂತಾದ ರೋಗಿಗಳು ರಕ್ತದಾನಿಗಳನ್ನೇ ಅವಲವಂಬಿಸಿರುತ್ತಾರೆ.

‘ರಕ್ತದಾನ ಮಾಡಿದ ನಂತರ ಆ ರಕ್ತವನ್ನು ಮಲೇರಿಯಾ, ಲೈಂಗಿಕ ಸಂಪರ್ಕದ ರೋಗಗಳು– ಸಿಫಿಲಿಸ್‌ ಇತ್ಯಾದಿ, ಹೆ‍ಪಟೈಟಿಸ್‌ ಬಿ ಮತ್ತು ಸಿ ಸೋಂಕಿನಿಂದುಂಟಾಗುವ ಕಾಮಾಲೆ, ಎಚ್ಐವಿ ಸೋಂಕು ಪರೀಕ್ಷಿಸಿದ ನಂತರವೇ ಇನ್ನೊಬ್ಬರಿಗೆ ರಕ್ತ ವರ್ಗಾವಣೆ ಮಾಡಲಾಗುತ್ತಿದೆ’ ಎಂದು ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ.ಶೈಲಜಾ ಶರಣಭೂಪಾಲರೆಡ್ಡಿ ಹೇಳುತ್ತಾರೆ.

‘ನಮ್ಮ ದೇಹದಲ್ಲಿರುವ ರಕ್ತಕಣಗಳು 120 ದಿನಗಳ ತನಕ ಜೀವಂತವಾಗಿರುತ್ತವೆ. ನಂತರ ಅವು ಸತ್ತು ಹೊಸದಾಗಿ ಹುಟ್ಟುತ್ತವೆ. ಹೀಗಾಗಿ ರಕ್ತದಾನ ಮಾಡುವುದರಿಂದ ದೇಹದಲ್ಲಿ ಹೊಸ ರಕ್ತ ಬಂದು ಮನುಷ್ಯ ಆರೋಗ್ಯಪೂರ್ಣನಾಗಿ ಇರುತ್ತಾನೆ’ ಎಂದು ರೆಡ್‌ಕ್ರಾಸ್ ಸಂಸ್ಥೆಯ ಅಧ್ಯಕ್ಷ ಡಾ.ಶರಣಭೂಪಾಲರೆಡ್ಡಿ ತಿಳಿಸುತ್ತಾರೆ.

‘ಈ ಭಾಗದಲ್ಲಿ ವೈದ್ಯಕೀಯ ಶಿಕ್ಷಣದ ಕೊರತೆ ಇದೆ. ಅಲ್ಲದೆ, ಮೂಢ ನಂಬಿಕೆಯೂ ಹೆಚ್ಚಿರುವುದರಿಂದ ರಕ್ತದಾನ ಮಾಡಲು ಜನರು ಹಿಂಜರಿಯುತ್ತಾರೆ. ರಕ್ತದಾನದ ಮಹತ್ವದ ಬಗ್ಗೆ ತಿಳಿದುಕೊಂಡರೆ ಪ್ರತಿಯೊಬ್ಬರು ರಕ್ತದಾನ ಮಾಡುತ್ತಾರೆ’ ಎನ್ನುತ್ತಾರೆ ಅವರು.

‘ನಾನು ಪಿಯುಸಿ ಮುಗಿಸಿದ ನಂತರ ಇಲ್ಲಿಯವರೆಗೆ 44 ನಾಲ್ಕು ಬಾರಿ ರಕ್ತದಾನ ಮಾಡಿದ್ದೇನೆ. ಈಗ ನನಗೆ 43 ವರ್ಷವಾಗಿದೆ. ಸುಮಾರು ನೂರಾರು ಜನರು ನನ್ನ ರಕ್ತ ಪಡೆದಿದ್ದಾರೆನ್ನುವ ಖುಷಿ’ ಎಂದು ರಕ್ತದಾನಿ ಹಾಗೂ ನಗರಸಭೆ ಮಾಜಿ ಸದಸ್ಯ ಸಿದ್ದರಾಮರೆಡ್ಡಿ ತಿಪ್ಪಾರೆಡ್ಡಿ ಹೇಳುತ್ತಾರೆ.

‘1992 ರಿಂದ ರಕ್ತದಾನ ಮಾಡುವುದನ್ನು ರೂಢಿಸಿಕೊಂಡಿದ್ದೇನೆ. ಹಲವಾರು ಬಾರಿ ರಕ್ತದಾನ ಬಗ್ಗೆ ಶಿಬಿರ ಹಮ್ಮಿಕೊಂಡು ಜನರಿಗೆ ತಿಳಿವಳಿಕೆ ಮೂಡಿಸಿ ರಕ್ತದಾನಕ್ಕೆ ಪ್ರೇರೇಪಿಸಿದ್ದೇನೆ’ ಎಂದು ತಿಳಿಸುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT