ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗ್ರಾಮ ಒನ್’ ಪರಿಣಾಮಕಾರಿ ಅನುಷ್ಠಾನವಾಗಲಿ

ಯೋಜನೆಯ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಸೂಚನೆ
Last Updated 6 ಜುಲೈ 2022, 16:27 IST
ಅಕ್ಷರ ಗಾತ್ರ

ಯಾದಗಿರಿ: ಗ್ರಾಮ ಒನ್ ಯೋಜನೆಯ ಸೇವೆಯನ್ನು ಜನರ ಸಮೀಪಕ್ಕೆ ತಲುಪಿಸುವುದಕ್ಕೆ ಪ್ರಯತ್ನಿಸಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅಧಿಕಾರಿಗಳಿಗೆ ಸೂಚಿಸಿದರು.

ಗ್ರಾಮ ಒನ್ ಯೋಜನೆ ಪ್ರಗತಿ ಸಂಬಂಧಿಸಿದಂತೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಪ್ರಗತಿ ‍ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಸೇವಾ ಸಿಂಧು, ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ, ಮುಂದಿನ ದಿನಗಳಲ್ಲಿ ಆಧಾರ್ ಕಾರ್ಡ್ ತಿದ್ದುಪಡಿ ಸೇವೆ, ಬೆಳೆ ವಿಮೆ, ಪ್ರಾದೇಶಿಕ ಸಾರಿಗೆ, ಬ್ಯಾಂಕ್ ಸೇವೆ ಇ-ಸ್ಟಾಂಪ್ ಸೇರಿದಂತೆ ಹಲವು ಸೇವೆಗಳನ್ನು ಒದಗಿಸಲಾಗುವುದು. ಪಡಿತರ ಚೀಟಿ, ಪ್ಯಾನ್ ಕಾರ್ಡ್, ಮ್ಯೂಟೇಷನ್ ಪ್ರತಿ ಹೀಗೆ ಹಲವು ಸೇವೆಗಳನ್ನು ಸೇರ್ಪಡೆ ಮಾಡಬಹುದಾಗಿದೆ. ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ತೋಟಗಾರಿಕೆ, ಹೀಗೆ ಹಲವು ಇಲಾಖೆಗಳ ಮತ್ತಷ್ಟು ಸೇವೆಗಳನ್ನು ಸೇರ್ಪಡೆ ಮಾಡಬಹುದಾಗಿದೆ ಎಂದು ತಿಳಿಸಿದರು.

ತಮ್ಮ ಇಲಾಖೆಗಳಲ್ಲಿ ಸರ್ಕಾರದ ಸೇವೆಗಳನ್ನು ಕಾಲಮಿತಿಯಲ್ಲಿ ಒದಗಿಸಬೇಕು. ಆ ನಿಟ್ಟಿನಲ್ಲಿ ಗ್ರಾಮ ಒನ್ ಕೇಂದ್ರಗಳ ಮೂಲಕ ಗ್ರಾಮ ಮಟ್ಟದಲ್ಲಿ ಹೆಚ್ಚು ಸೇವೆಗಳನ್ನು ಸ್ಥಳೀಯರಿಗೆ ಕಲ್ಪಿಸಲು ಶ್ರಮಿಸಬೇಕು ಎಂದರು.

‘ಒಂದು ಊರು, ಸೇವೆಗಳು ಹಲವಾರು’ ಹೆಸರಿನಡಿ ಸರ್ಕಾರವು ಗ್ರಾಮ ಒನ್ ಯೋಜನೆ ಜಾರಿಗೊಳಿಸಿದೆ. ಆ ನಿಟ್ಟಿನಲ್ಲಿ ಹಲವು ಇಲಾಖೆಗಳ ಸೇವೆಗಳು ಸಕಾಲದಲ್ಲಿ ದೊರೆಯಬೇಕು. ಸರ್ಕಾರದ ಸೇವೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ತಲುಪಿಸಲು ಶ್ರಮಿಸಬೇಕು ಎಂದು ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಸೂಚಿಸಿದರು.

ಗ್ರಾಮ ಒನ್ ಯೋಜನೆಗೆ ಹಲವು ಇಲಾಖೆಗಳ ಮತ್ತಷ್ಟು ಸೇವೆಯನ್ನು ಸೇರ್ಪಡೆ ಮಾಡುವಲ್ಲಿ ಮುಂದಾಗಲಾಗಿದೆ. ಆ ದಿಸೆಯಲ್ಲಿ ವಿಶೇಷ ಕಾರ್ಯಕ್ರಮ
ಹಮ್ಮಿಕೊಳ್ಳಲಾಗುವುದು.

ಗ್ರಾಮ ಒನ್ ಯೋಜನೆಯು ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷೆ ನಾಗರಿಕ ಸ್ನೇಹಮಯಿ ಕಾರ್ಯಕ್ರಮವಾಗಿದೆ. ಒಂದೇ ಸೂರಿನಡಿ ಎಲ್ಲಾ ಇಲಾಖೆಗಳ ಸೇವೆಗಳನ್ನು ಗ್ರಾಮೀಣ ನಾಗರಿಕರಿಗೆ ಅವರ ಸ್ವಂತ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ತಲುಪಿಸುವ ಗುರಿ ಹೊಂದಬೇಕು
ಎಂದರು.

ಜಿಲ್ಲೆಯಲ್ಲಿ ಒಟ್ಟು 355 ಅರ್ಜಿಗಳು ಸ್ವೀಕೃತವಾಗಿದ್ದು, ಇದರಲ್ಲಿ 198 ಗ್ರಾಮ ಒನ್ ಕೇಂದ್ರಗಳನ್ನು ಸ್ಥಾಪಿಸಬೇಕಾಗಿದೆ. ಈ ಅರ್ಜಿಗಳನ್ನು ತಹಶೀಲ್ದಾರ್‌ ಹಂತದಲ್ಲಿ ಪರಿಶೀಲಿಸಿ ವರದಿ ಸಲ್ಲಿಸಿರುವ ಆಧಾರದ ಮೇಲೆ 188 ಕೇಂದ್ರಗಳಿಗೆ ಅನುಮೋದನೆ ನೀಡಿ ಸರ್ಕಾರಕ್ಕೆ ಸಲ್ಲಿಸಿದೆ ಎಂದು ಸಂಬಂಧಿಸಿದ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ಜೂನ್ ತಿಂಗಳಲ್ಲಿ ಜಿಲ್ಲೆಯಲ್ಲಿ 78 ಗ್ರಾಮ ಒನ್ ಕೇಂದ್ರದ ಮುಖಾಂತರ ಒಟ್ಟು 2,287 ಅರ್ಜಿಗಳು ಸ್ವೀಕೃತಿಯಾಗಿವೆ. ಜುಲೈ ತಿಂಗಳಲ್ಲಿಯೂ ಇಲ್ಲಿಯವರೆಗೆ 77 ಗ್ರಾಮ ಒನ್ ಕೇಂದ್ರ ಮುಖಾಂತರ ಒಟ್ಟು 1,204 ಅರ್ಜಿಗಳು ಸ್ವೀಕೃತಿಯಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಈ ವೇಳೆ ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ, ಉಪವಿಭಾಗಾಧಿಕಾರಿ ಶಾ ಆಲಂ ಹುಸೇನ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಚನ್ನಬಸವ ಎಸ್, ಪಶುಪಾಲನೆ ಇಲಾಖೆ ಉಪನಿರ್ದೇಶಕ ಡಾ.ರಾಜು ದೇಶಮುಖ್, ಜಂಟಿ ಕೃಷಿ ನಿರ್ದೇಶಕ ಅಬಿದ್ ಎಸ್‌ ಎಸ್, ಶಹಾಪುರ ತಹಶೀಲ್ದಾರ್‌ ಮಧುರಾಜ್, ವಡಗೇರಾ ತಹಶೀಲ್ದಾರ್‌ ಸುರೇಶ ಅಂಕಲಗಿ, ಗುರುಮಠಕಲ್ ತಹಶೀಲ್ದಾರ್‌ ಶರಣಬಸವ, ಜಿಲ್ಲಾ ಮಲೇರಿಯಾ ಅಧಿಕಾರಿ ಡಾ.ಲಕ್ಷ್ಮೀಕಾಂತ ಒಂಟಿಪೀರ
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT