ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುಮಠಕಲ್‌: ಗಡಿಯ ಬದುಕು ಬವಣೆ– ಗಡಿ ಜನರ 'ವಲಸೆ ಬದುಕು'

ಗಡಿ ಭಾಗದಲ್ಲಿ ಜೀವನಕ್ಕೆ ತೆಲುಗು ಅವಶ್ಯ; ಆಡಳಿತ ಭಾಷೆಯಾಗಿ ಕನ್ನಡ
Last Updated 21 ನವೆಂಬರ್ 2022, 19:30 IST
ಅಕ್ಷರ ಗಾತ್ರ

ಗುರುಮಠಕಲ್: ಸ್ಥಳೀಯವಾಗಿ ಉದ್ಯೋಗಾವಕಾಶದ ಕೊರತೆಯಿಂದ ಬದುಕು ಕಟ್ಟಿಕೊಳ್ಳಲು ಗುಳೆ ಹೋಗುವುದು ತಪ್ಪಿಲ್ಲ. ಕನ್ನಡ ಭಾಷೆಯಲ್ಲಿ ವಿದ್ಯಾಭ್ಯಾಸ ಮಾಡಿದರೂ ನಮಗೆ ತೆಲುಗು ಜೀವನಾವಶ್ಯಕ ಭಾಷೆ. ಇದು ತೆಲಂಗಾಣ ಗಡಿ ಭಾಗವನ್ನು ಹಂಚಿಕೊಂಡಿರುವ ಗುರುಮಠಕಲ್ ತಾಲ್ಲೂಕು ಜನರ ಅಳಲು.

ತಾಲ್ಲೂಕು ಕೇಂದ್ರದಿಂದ 20 ಕಿ.ಮೀ. ದೂರದಲ್ಲಿ ತೆಲಂಗಾಣದ ಜಿಲ್ಲಾ ಕೇಂದ್ರ ನಾರಾಯಣಪೇಟ ಮತ್ತು ರಾಜಧಾನಿ ಹೈದರಾಬಾದ್ 150 ಕಿ.ಮೀ. ಅಂತರದಲ್ಲಿದೆ. ತಾಲ್ಲೂಕಿನಿಂದ ಸಾಮಾನ್ಯ ವ್ಯವಹಾರ, ಕೃಷಿ ಉತ್ಪನ್ನಗಳ ಖರೀದಿ-ಮಾರಾಟ, ಅವಶ್ಯಕ ಸಾಮಗ್ರಿಗಳ ಖರೀದಿ ಸೇರಿ ಇತರೆ ವ್ಯವಹಾರಕ್ಕೆ ಇಲ್ಲಿನ ಜನ ನಾರಾಯಣಪೇಟವನ್ನೇ ಅವಲಂಬಿಸಿದ್ದಾರೆ.

‘ನಮ್ಮಲ್ಲಿ ಉದ್ಯೋಗಾವಕಾಶ ತೀರಾ ಇಲ್ಲವೆನ್ನುವಂತಿದೆ. ಇದರಿಂದ ಜನ ಹೈದರಾಬಾದ್ ನಗರಕ್ಕೆ ಗುಳೆ ಹೋಗುವುದೂ ಕೂಡ ತೆಲುಗು ಪ್ರಭಾವ ಇನ್ನೂ ಮುಂದುವರಿಯಲು ಕಾರಣ‘ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಮಹಾದೇವ.

‘ನಮ್ಮ ಭಾಗದ ಜನರಿಗೆ ತೆಲುಗು ಮಾತೃಭಾಷೆಯಂತೆ. ಬದುಕಲು ಅವಶ್ಯವಾದುದ್ದನ್ನು ಕಲಿಯುವುದು ಪ್ರಕೃತಿ ಸಹಜ ಗುಣ. ಅಂತೆಯೇ ನಮ್ಮ ಭಾಗದ ಜನರಿಗೆ ಕನ್ನಡದಿಂದ ಸ್ಥಳೀಯವಾಗಿಯೇ ಅನ್ನ ಸಿಕ್ಕರೆ ಕನ್ನಡ ಭಾಷೆ ಬೆಳೆಯಲಿದೆ. ನಮ್ಮನ್ನೂ ಕನ್ನಡಿಗರೆಂದು ಸರ್ಕಾರ ಭಾವಿಸಿದಂತೆ ನಮಗೇನೂ ಕಾಣಿಸದು. ರಾಜ್ಯದಲ್ಲೇ ನಮ್ಮ ತಾಲ್ಲೂಕಿನಿಂದ ಅತಿ ಹೆಚ್ಚು ಜನ ಗುಳೆ ಹೋಗುತ್ತಿದ್ದಾರೆ. ಸರ್ಕಾರ ಗುಳೆ ತಪ್ಪಿಸುವ ಭರವಸೆ ನೀಡುತ್ತದೆ. ಆದರೆ, ಈಡೇರಿಸಿದ್ದು ಇಲ್ಲ‘ ಎಂದು ಯುವ ಮುಖಂಡ ಅನಿಲ ಕಂದಕೂರ ಅಸಹನೆ ವ್ಯಕ್ತಪಡಿಸಿದರು.

‘ಗಡಿ ಭಾಗದ ಐತಿಹಾಸಿಕ ಸ್ಥಳಗಳನ್ನು ಅಭಿವೃದ್ಧಿಗೊಳಿಸಿ ಪ್ರವಾಸಿ ಕೇಂದ್ರಗಳಾಗಿ ರೂಪಿಸಿದರೆ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯಾಗುತ್ತದೆ. ಜತೆಗೆ ಇಲ್ಲಿನ ಸಂಪನ್ಮೂಲಗಳನ್ನು ಬಳಸಿಕೊಂಡು ಕೈಗಾರಿಕೆಗಳನ್ನು ಸ್ಥಾಪಿಸಿಯೂ ಉದ್ಯೋಗ ಸೃಷ್ಟಿಸಬಹುದು. ಸರ್ಕಾರ ಈ ನಿಟ್ಟಿನಲ್ಲಿ ಗಂಭೀರವಾಗಿ ಚಿಂತಿಸಿ ಅನುಷ್ಠಾನಕ್ಕೆ ತರಲಿ‘ ಎಂದು ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯ ರಾಜ್ಯ ಘಟಕದ ಉಪಾಧ್ಯಕ್ಷ ರಝಾಕ್ ಉಸ್ತಾದ್ ಹೇಳುತ್ತಾರೆ.

ಕನ್ನಡಪರ ಸಂಸ್ಥೆಗಳು, ಸಾಹಿತ್ಯ ಪರಿಷತ್ತು, ಗಡಿ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಜಾಗೃತಿ ಸಮಿತಿ ಹೀಗೆ ಹಲವು ಸಂಸ್ಥೆಗಳು ಗಡಿ ಭಾಗದ ಕನ್ನಡಿಗರ ಅಭಿವೃದ್ಧಿ ಹಾಗೂ ಗಡಿ ಪ್ರದೇಶದ ಕನ್ನಡ ಅಸ್ಮಿತೆಯ ಉಳಿವಿಗೆ ಶ್ರಮಿಸಬೇಕು. ಕೇವಲ ನವೆಂಬರ್ ತಿಂಗಳಿಗೆ ಮಾತ್ರ ಕನ್ನಡ ಭಾಷೆ ನೆನಪಾದರೆ ಹೇಗೆ? ನಮ್ಮ ಗಡಿ ಭಾಗದ ಗ್ರಾಮಗಳಲ್ಲಿ ಶಾಲೆ, ಕಾಲೇಜು ಮತ್ತು ಕಚೇರಿಗಳಿಗೆ ಮಾತ್ರ ಕನ್ನಡ ಭಾಷೆ ಸೀಮಿತವಾಗಿದೆ. ಮಾತೃ ಭಾಷೆಯಾಗಿ ಮತ್ತು ವ್ಯವಹಾರಿಕ ಭಾಷೆಯಾಗಿ ತೆಲುಗು ತನ್ನ ಸ್ಥಾನ ಇನ್ನೂ ಉಳಿಸಿಕೊಂಡಿದೆ ಎಂದು ಹೇಳುತ್ತಾರೆ ತೆಲಂಗಾಣ ಗಡಿಯ ಅಜಲಾಪುರ, ಪುಟಪಾಕ, ನಂದೇಪಲ್ಲಿ ಗ್ರಾಮಗಳ ಜನ.

ಒಟ್ಟಾರೆ ತಾಲ್ಲೂಕಿನ ಕರ್ನಾಟಕ - ತೆಲಂಗಾಣ ಗಡಿ ಗ್ರಾಮಗಳಲ್ಲಿ ಶೇ 90 ರಷ್ಟು ತೆಲುಗು ಪ್ರಭಾವವಿದ್ದು, ಕನ್ನಡ ಕೇವಲ 'ಸರ್ಕಾರಿ ಭಾಷೆ'ಯಾಗಿ ಮಾತ್ರ ಸೀಮಿತವಾಗಿದೆ. ವ್ಯವಹಾರಕ್ಕೆ ಮತ್ತು ಬದುಕು ಕಟ್ಟಿಕೊಳ್ಳಲು ತೆಲುಗು ಭಾಷೆ ಅನಿವಾರ್ಯ ಎನ್ನುವ ಭಾವನೆ ಇಲ್ಲಿನ ಜನರದ್ದಾಗಿದೆ.

***

ಮುಂದಿನ ದಿನಗಳಲ್ಲಿ ಶಾಲಾ ಹಂತದಿಂದ ಕನ್ನಡ ಪರ ಚಟುವಟಿಕೆಗಳನ್ನು ಆಯೋಜಿಸಲು ಚಿಂತಿಸಿದ್ದೇವೆ. ಪರಿಷತ್ತಿನಿಂದ ಗಡಿ ಭಾಗದಲ್ಲಿ ಕನ್ನಡ ಭಾಷಾಭಿವೃದ್ಧಿಗೆ ಪೂರಕ ಕಾರ್ಯಕ್ರಮ ನಡೆಸಲಾಗುವುದು
- ಬಸರೆಡ್ಡಿ ಎಂ.ಟಿ.ಪಲ್ಲಿ, ಅಧ್ಯಕ್ಷ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಗುರುಮಠಕಲ್‌

***

ಗಡಿ ಭಾಗದಲ್ಲಿ ದ್ವಿಭಾಷೆ, ತ್ರಿಭಾಷೆ ಬಳಕೆ ಸಾಮಾನ್ಯ. ಆದರೆ, ಗಡಿ ಜನರ ವಲಸೆ ನಿಲ್ಲುವಂತಾಗಲು ಕೈಗಾರಿಕೆಗಳ ಸ್ಥಾಪನೆಗೆ ಆದ್ಯತೆ ನೀಡಬೇಕು. ಇದರಿಂದ ಸ್ಥಳೀಯವಾಗಿ ಜೀವನ ಕಟ್ಟಿಕೊಂಡವರು ಆಡಳಿತ ಭಾಷೆಯನ್ನೇ ಮುಂದುವರಿಸಲು ಸಾಧ್ಯವಾಗುತ್ತದೆ.
- ರಝಾಕ್ ಉಸ್ತಾದ್, ರಾಜ್ಯ ಉಪಾಧ್ಯಕ್ಷ, ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ

***

ತೆಲಂಗಾಣ ಗಡಿ ಭಾಗದಲ್ಲಿರುವ ನಮ್ಮನ್ನೂ ಕನ್ನಡಿಗರೆಂದು ಸರ್ಕಾರ ಭಾವಿಸಲಿ. ನಮ್ಮ ಜನರಿಗೆ ಇಲ್ಲಿಯೇ ಉದ್ಯೋಗ ಸಿಕ್ಕರೆ ಅನ್ಯ ಭಾಷೆಯ ಅಗತ್ಯವಿರದು.
- ಅನಿಲ ಕಂದಕೂರ, ಅಧ್ಯಕ್ಷ, ಕರ್ನಾಟಕ ಜನಸೇನಾ ಸಂಘಟನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT