ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮಗಳನ್ನು ಸ್ವಚ್ಛವಾಗಿಟ್ಟುಕೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ಚವಾಣ್‌ ಸಲಹೆ

ಮುದ್ನಾಳ ಗ್ರಾಮದಲ್ಲಿ ‘ನಮ್ಮ ನಡಿಗೆ ತ್ಯಾಜ್ಯ ಮುಕ್ತ ಕಡೆಗೆ’ ಕಾರ್ಯಕ್ರಮ
Last Updated 6 ಮಾರ್ಚ್ 2021, 16:46 IST
ಅಕ್ಷರ ಗಾತ್ರ

ಮುದ್ನಾಳ (ಯಾದಗಿರಿ): ಸ್ವಚ್ಛತೆ ಪ್ರತಿಯೊಬ್ಬರ ಜವಾಬ್ದಾರಿ. ಗ್ರಾಮಗಳು ಸ್ವಚ್ಛವಾಗಿದ್ದಲ್ಲಿ ಸಾಮಾಜಿಕ, ಆರ್ಥಿಕ ಅಭಿವೃದ್ಧಿ ಸಾಧಿಸುವುದಲ್ಲದೆ, ಆರೋಗ್ಯಕರ ಜೀವನ ನಡೆಸಬಹುದು. ಗ್ರಾಮಸ್ಥರು ಪ್ರತಿ ಓಣಿಗಳಲ್ಲಿ ಸ್ವಚ್ಛತೆ ಕಾರ್ಯಕ್ರಮ ಹಮ್ಮಿಕೊಂಡು ಗ್ರಾಮದಲ್ಲಿ ನೈರ್ಮಲ್ಯ ಕಾಪಾಡಬೇಕು ಎಂದು ಪಶುಸಂಗೋಪನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಬಿ.ಚವಾಣ್‌ ಹೇಳಿದರು.

ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಯೋಜನೆಯಡಿ ತಾಲ್ಲೂಕಿನ ಮುದ್ನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ನಮ್ಮ ನಡಿಗೆ ತ್ಯಾಜ್ಯ ಮುಕ್ತ ಕಡೆಗೆ’ ಜಿಲ್ಲಾಮಟ್ಟದ ಜನಾಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಗ್ರಾಮಗಳಲ್ಲಿ ವ್ಯವಸ್ಥಿತ ತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿ ವ್ಯವಸ್ಥೆ ಕಲ್ಪಿಸಿ ತ್ಯಾಜ್ಯವನ್ನು ಸೂಕ್ತವಾಗಿ ನಿರ್ವಹಣೆ ಮಾಡುವುದರ ಮೂಲಕ ಸ್ವಚ್ಛ-ಸ್ವಸ್ಥ ಗ್ರಾಮಗಳನ್ನು ರೂಪಿಸಿ ಸದೃಢ ಸಮಾಜ ರೂಪಿಸಬಹುದಾಗಿದೆ. ಈ ತ್ಯಾಜ್ಯ ಸಮರ್ಪಕ ನಿರ್ವಹಣಾ ಕಾರ್ಯಕ್ಕೆ ಗ್ರಾಮೀಣ ಜನರು ಕೈ ಜೋಡಿಸಬೇಕು ಎಂದರು.

ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ನೈರ್ಮಲ್ಯ ವ್ಯವಸ್ಥೆಯು ಮಾನವನ ಮೂಲಭೂತ ಹಕ್ಕಾಗಿದ್ದು, ಉತ್ತಮ ಆರೋಗ್ಯ ಹೊಂದಿ ಗೌರವಯುತ ಜೀವನ ನಡೆಸಲು ಅಗತ್ಯ ಎಂದು ಹೇಳಿದರು.

ನೈರ್ಮಲ್ಯ ವ್ಯವಸ್ಥೆಯು ಸುವ್ಯವಸ್ಥಿತವಾಗಿರದೆ ಅಸುರಕ್ಷತೆಯಿಂದ ಕೂಡಿದ್ದರೆ, ಅದು ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಮತ್ತು ಆರೋಗ್ಯಕ್ಕೆ ಹಿನ್ನಡೆಯಾಗುತ್ತದೆ ಎಂದು ವಿಷಾದ ವ್ಯಕ್ತಡಿಸಿದರು.

ಮುದ್ನಾಳ ಗ್ರಾಮವು ಸ್ವಚ್ಛ ಸುಂದರ ಗ್ರಾಮವಾಗಿ ರೂಪಗೊಳ್ಳುವಂತೆ ಮಾಡಲು ಎಲ್ಲಾ ಸದಸ್ಯರು ಹಾಗೂ ಗ್ರಾಮಸ್ಥರು ಸಹಕರಿಸಬೇಕೆಂದು ಕೋರಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಚ್ಛ ಸುಂದರ ಕರ್ನಾಟಕವನ್ನಾಗಿಸುವ ವಿಶಾಲ ದೃಷ್ಟಿಕೋನದಿಂದ ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಯೋಜನೆಯಡಿ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಶ್ರಮಿಸಬೇಕು ಎಂದರು.

ಇದಕ್ಕೆ ಪೂರಕವಾಗಿ ಜಿಲ್ಲೆಯ ಎಲ್ಲಾ ಗ್ರಾಮೀಣ ಕುಟುಂಬಗಳಲ್ಲಿ ಘನ ಮತ್ತು ದ್ರವ ತ್ಯಾಜ್ಯವನ್ನು ಸುವ್ಯವಸ್ಥಿತವಾಗಿ ನಿರ್ವಹಣೆ ಮಾಡಬೇಕಾದ ಅಗತ್ಯತೆಯಿದೆ. ಆದ್ದರಿಂದ ಗ್ರಾಮಗಳಲ್ಲಿ ವ್ಯವಸ್ಥಿತ ತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿ ವ್ಯವಸ್ಥೆ ಕಲ್ಪಿಸಿದರೆ ತ್ಯಾಜ್ಯ ಸೂಕ್ತವಾಗಿ ನಿರ್ವಹಣೆ ಮಾಡಿ ಸ್ವಚ್ಛ-ಸ್ವಸ್ಥ ಗ್ರಾಮಗಳನ್ನು ರೂಪಿಸಲು ಸಹಕಾರಿಯಾಗಲಿದೆ ಎಂದು ಹೇಳಿದರು.

ಈ ಜನಾಂದೋಲನದ ಕಾರ್ಯಕ್ರಮದಲ್ಲಿ ಸ್ವಚ್ಛತೆ ಕಾಪಾಡುವ ಕುರಿತು ಪ್ರತಿಜ್ಞಾ ವಿಧಿ ಬೋಧನೆ ಮಾಡಲಾಯಿತು. ಶಾಲಾ ಮಕ್ಕಳಿಂದ ಜಾಥಾ, ಶ್ರಮದಾನ ಹಾಗೂ ಮಕ್ಕಳಿಂದ ಕಿರು ನಾಟಕ ಪ್ರದರ್ಶನ ನಡೆಯಿತು.

ಈ ವೇಳೆ ಯಾದಗಿರಿ ಮತಕ್ಷೇತ್ರದ ಶಾಸಕ ವೆಂಕಟರೆಡ್ಡಿ ಮುದ್ನಾಳ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಸನಗೌಡ ಪಾಟೀಲ ಯಡಿಯಾಪುರ, ನಗರಸಭೆ ಅಧ್ಯಕ್ಷ ವಿಲಾಸ ಪಾಟೀಲ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಅನಿತಬಾಯಿ ಸುರೇಶ ರಾಠೋಡ, ತಾಲ್ಲೂಕು ಪಂಚಾಯಿತಿ ಸದಸ್ಯೆ ಗೋರಿಬಾಯಿ ನಾನ್ಯಾ ರಾಠೋಡ, ಮುದ್ನಾಳ ಗ್ರಾಪಂ ಅಧ್ಯಕ್ಷ ಲಕ್ಷ್ಮೀ ಶರಣಪ್ಪ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮುಕ್ಕಣ ಕರಿಗಾರ, ಉಪವಿಭಾಗಾಧಿಕಾರಿ ಶಂಕರಗೌಡ ಸೋಮನಾಳ ಇದ್ದರು.

***

ಓದುವ ಬೆಳಕು ಕಾರ್ಯಕ್ರಮ ಉದ್ಘಾಟನೆ

ಯಾದಗಿರಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕಲಿಕೆ- ಟಾಟಾ ಟ್ರಸ್ಟ್ ಸಹಯೋಗದಲ್ಲಿ ‘ಓದುವ ಬೆಳಕು ಕಾರ್ಯಕ್ರಮ’ (ಗ್ರಂಥಾಲಯ)ವನ್ನು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್‌ ಉದ್ಘಾಟಿಸಿದರು.

ನಂತರ ಮಾತನಾಡಿದ ಸಚಿವ, ಓದುವ ಬೆಳಕು ಕಾರ್ಯಕ್ರಮದ ಕಲ್ಪನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಪುಸ್ತಕಗಳ ಬಗ್ಗೆ ಪ್ರಶ್ನೆ ಕೇಳುವ ಮೂಲಕ ಅವರ ಬುದ್ಧಿಮತ್ತತೆ ಪರೀಕ್ಷಿಸಿದರು.

ಈ ವೇಳೆ ಗ್ರಂಥಾಲಯದ ಬಗ್ಗೆ ಮಾಹಿತಿ ನೀಡಿದ ಟಾಟಾ ಕಲಿಕಾ ಟ್ರಸ್ಟ್‌ ಕಾರ್ಯಕ್ರಮ ಅಧಿಕಾರಿ ಮಯೂರ್ ಪೂಜಾರ, 6 ರಿಂದ 8ನೇ ತರಗತಿ ಮಕ್ಕಳಿಗೆ ಪಠ್ಯಗಳಲ್ಲದೆ, ಜ್ಞಾನವೃದ್ಧಿಸುವ ಸ್ಪರ್ಧಾತ್ಮಕ ಪರೀಕ್ಷೆಯ ಪುಸ್ತಗಳು, ಕಥೆ-ಕಾದಂಬರಿ ಗ್ರಂಥಗಳು ಮುಂತಾದವು ಇಲ್ಲಿವೆ. ನೋಂದಣಿ ಮಾಡಿಕೊಂಡ ವಿದ್ಯಾರ್ಥಿಗಳು ಉಚಿತವಾಗಿ ಪುಸ್ತಕಗಳನ್ನು ಪಡೆದು, ಓದಿ ಹಿಂದಿರುಗಿಸಬೇಕಾಗುತ್ತದೆ ಎಂದು ತಿಳಿಸಿದರು.

ಟಾಟಾ ಕಲಿಕಾ ಟ್ರಸ್ಟ್‌ ಸಂಯೋಜಕ ಮಹೇಶ್ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT