ಕೆಟ್ಟ ರಾಜಕೀಯ ಅಭಿವೃದ್ಧಿ ಹಿನ್ನಡೆಗೆ ಕಾರಣ: ಡಿ.ವಿ.ಸದಾನಂದಗೌಡ

7

ಕೆಟ್ಟ ರಾಜಕೀಯ ಅಭಿವೃದ್ಧಿ ಹಿನ್ನಡೆಗೆ ಕಾರಣ: ಡಿ.ವಿ.ಸದಾನಂದಗೌಡ

Published:
Updated:

ಯಾದಗಿರಿ: ‘ನಾನು ರಾಜಕೀಯ ಮಾತನಾಡುವುದಿಲ್ಲ. ಇಲ್ಲಿನವರು ಕೆಟ್ಟ ರಾಜಕೀಯ ಮಾಡುತ್ತಾ ಬಂದಿರುವುದರಿಂದಲೇ ಇಂದಿಗೂ ಈ ಜಿಲ್ಲೆ ಹಿಂದುಳಿಯಲು ಕಾರಣವಾಗಿದೆ’ ಎಂದು ಕೇಂದ್ರದ ಸಾಂಖ್ಯಿಕ ಹಾಗೂ ಕಾರ್ಯಕ್ರಮ ಅನುಷ್ಠಾನ ಸಚಿವ ಡಿ.ವಿ.ಸದಾನಂದಗೌಡ ಹೇಳಿದರು.

ಸೋಮವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,‘ಜನರಿಗೆ ಅಭಿವೃದ್ಧಿ ಮಾಡುವುದಾಗಿ ಹೇಳುತ್ತಲೇ ಆರಿಸಿ ಬರುತ್ತೇವೆ. ಇಲ್ಲಿಗೆ ಬಂದ ಮೇಲೆ ಜನರ ಅಭಿವೃದ್ಧಿ ಬಿಟ್ಟು ಬೇರೆಲ್ಲಾ ಮಾಡುತ್ತೇವೆ. ಜಿಲ್ಲೆಯಲ್ಲಿ ಹಿಂದಿದ್ದ ಜನಪ್ರತಿನಿಧಿಗಳು ಅಂತಹ ಕೆಲಸ ಮಾಡಿದ್ದರಿಂದಲೇ ಯಾದಗಿರಿ ಅಭಿವೃದ್ಧಿಯ ವೇಗ ಪಡೆದಿಲ್ಲ’ ಎಂದು ಪರೋಕ್ಷವಾಗಿ ಕಾಂಗ್ರೆಸ್‌ ನಾಯಕರಿಗೆ ತಿವಿದರು.

‘ಹಿಂದುಳಿದ ಜಿಲ್ಲೆಗೆ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಆಯುಷ್ಮಾನ್ ಭಾರತ ಯೋಜನೆ ಪ್ರಯೋಜನವಾಗಲಿದೆ. ಈ ಯೋಜನೆಯಲ್ಲಿ ಪ್ರಥಮ ಹಂತದಲ್ಲಿ ಜಿಲ್ಲೆಯಲ್ಲಿ 109 ಆರೋಗ್ಯ ಕ್ಷೇಮ ಕೇಂದ್ರಗಳನ್ನು ತೆರೆಯಲು ಉದ್ದೇಶಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು163 ಆರೋಗ್ಯ ಕ್ಷೇಮ ಕೇಂದ್ರಗಳನ್ನು ತೆರೆಯುವ ಗುರಿ ಇದ್ದು, ಹಂತಹಂತವಾಗಿ ವಿಸ್ತರಿಸಲಾಗುವುದು’ ಎಂದರು.

‘ಹಿಂದುಳಿದ ಜಿಲ್ಲೆಗಳಲ್ಲಿ ಆರೋಗ್ಯ ಸೇವೆ ಲಭ್ಯವಿಲ್ಲದೇ ಜನರು ಸಂಕಷ್ಟಪಡುತ್ತಿದ್ದಾರೆ. ಸಾಂಕ್ರಾಮಿಕ ರೋಗಗಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ಲಭ್ಯ ಇದೆ. ಆದರೆ, ಜನರಿಗೆ ಅಸಾಂಕ್ರಾಮಿಕ ರೋಗಗಳಿಗೆ ನಿಖರ ಕಾರಣ ತಿಳಿದು ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತಿಲ್ಲ. ರಕ್ತ, ಮೂತ್ರ ಪರೀಕ್ಷೆ, ರಕ್ತದೊತ್ತಡ, ಮಧುಮೇಹದಂತಹ ರೋಗಗಳ ಪತ್ತೆಗೆ ದೂರದ ನಗರಗಳನ್ನೇ ಗ್ರಾಮೀಣ ಜನರು ಅವಲಂಬಿಸಬೇಕಿದೆ. ಆರೋಗ್ಯ ಕ್ಷೇಮಕೇಂದ್ರ ಅಸಾಂಕ್ರಾಮಿಕ ರೋಗಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಿವೆ’ ಎಂದು ವಿವರಿಸಿದರು.

‘ಹೈದರಾಬಾದ್‌ ಕರ್ನಾಟಕ ವ್ಯಾಪ್ತಿಯ ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳನ್ನು ಕೇಂದ್ರ ಸರ್ಕಾರ ಮಹತ್ವಾಕಾಂಕ್ಷಿ ಜಿಲ್ಲೆಗಳನ್ನಾಗಿ ಗುರುತಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತಿದೆ’ ಎಂದರು.

‘ಯಾವುದೇ ದಾಖಲೆ ಮತ್ತು ಶುಲ್ಕ ಇಲ್ಲದೇ ರೋಗಿಗಳಿಗೆ ಇಲ್ಲಿ ಆರೋಗ್ಯ ಕ್ಷೇಮ ಕೇಂದ್ರಗಳಲ್ಲಿ ತಪಾಸಣೆ ನಡೆಸಲಾಗುವುದು. ಅಸಾಂಕ್ರಾಮಿಕ ರೋಗಗಳಿಗೆ ಸಂಬಂಧಿಸಿದಂತೆ ರಕ್ತಪರೀಕ್ಷೆ ನಡೆಸಲಾಗುವುದು. ಈ ಕುರಿತು ಜಿಲ್ಲೆಗಳಲ್ಲಿ ಈಗಾಗಲೇ ಆರೋಗ್ಯ ಸಮೀಕ್ಷಾ ಕಾರ್ಯ ಭರದಿಂದ ಸಾಗಿದೆ’ ಎಂದರು.

‘ಕೇಂದ್ರ ಶೇ 80ರಷ್ಟು, ರಾಜ್ಯ ಶೇ 20ರಷ್ಟು ಹೊಣೆಹೊತ್ತು ಈ ಯೋಜನೆಗೆ ಜಾರಿಗೆ ತರಲಾಗಿದೆ. ಆರೋಗ್ಯ ಕ್ಷೇಮಕೇಂದ್ರಗಳ ನಿರ್ವಹಣೆಯನ್ನು ರಾಜ್ಯಕ್ಕೆ ವಹಿಸಲಾಗಿದೆ’ ಎಂದರು.

‘ಸಮರ್ಥ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ಗ್ರಾಮೀಣ ಭಾಗದಲ್ಲಿ ಆರೋಗ್ಯ ಕ್ಷೇಮಕೇಂದ್ರಗಳನ್ನು ನಿರ್ಮಾಣ ಮಾಡಲಾಗುತ್ತಿದೆ. 2020ರೊಳಗಾಗಿ ಈ ಜಿಲ್ಲೆ ರೋಗಮುಕ್ತ ಆಗಬೇಕಿದೆ’ ಎಂದು ಹೇಳಿದರು.

ಶಾಸಕ ವೆಂಕಟರೆಡ್ಡಿ ಮುದ್ನಾಳ, ಮಾಜಿ ಶಾಸಕ ಡಾ.ವೀರಬಸಂತರೆಡ್ಡಿ, ಬಿಜೆಪಿ ಜಿಲ್ಲಾ ಅಧ್ಯಕ್ಷ ಚಂದ್ರಶೇಖರಗೌಡ ಮಾಗನೂರ, ಮುಖಂಡರಾದ ನಾಗರತ್ನಾ ಕುಪ್ಪಿ, ಭೀಮನಗೌಡ ಕ್ಯಾತನಾಳ, ಶರಣಗೌಡ ಬಾಡಿಯಾಳ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !