ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸಲು ಸೂಚನೆ

7
ಎಚ್‌ಕೆಆರ್‌ಡಿಬಿ: ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲಿಸಿದ ಪ್ರಾದೇಶಿಕ ಆಯುಕ್ತ ಸುಬೋಧ್ ಯಾದವ್

ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸಲು ಸೂಚನೆ

Published:
Updated:
Deccan Herald

ಯಾದಗಿರಿ: ‘ಹೈದರಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ(ಎಚ್‌ಕೆಆರ್‌ಡಿಬಿ)ಯಲ್ಲಿ ಸಾವಿರ ಕೋಟಿ ರೂಪಾಯಿ ಅನುದಾನವಿದ್ದು, ಅದರ ಸದ್ಬಳಕೆಗೆ ನಿಗದಿತ ಕಾಲ ಮಿತಿಯೊಳಗೆ ನಿಶ್ಚಿತ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು’ ಎಂದು ಪ್ರಾದೇಶಿಕ ಆಯುಕ್ತ ಸುಬೋಧ್ ಯಾದವ್ ಸೂಚಿಸಿದರು.

ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಅನುಷ್ಠಾನಗೊಳಿಸುತ್ತಿರುವ ಜಿಲ್ಲೆಯ ಮೈಕ್ರೋ ಮತ್ತು ಮ್ಯಾಕ್ರೋ ಕಾಮಗಾರಿಗಳ ಕುರಿತು ಇಲಾಖೆವಾರು ಪ್ರಗತಿ ಪರಿಶೀಲಿಸಿ ಅವರು ಮಾತನಾಡಿದರು.

‘ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡ ಒಂದು ವಾರದೊಳಗೆ ಮೂರನೇ ತಂಡದ ಪರಿಶೀಲನೆಗೆ ಶಿಫಾರಸು ಮಾಡಬೇಕು. ತಂಡದ ಪರಿಶೀಲನಾ ವರದಿಯ ನಂತರ ನಿಗದಿತ ಅನುದಾನವನ್ನು ಬಿಡುಗಡೆ ಮಾಡಬೇಕು. 2013–14ರಿಂದ 2017–18ನೇ ಸಾಲಿನ ವರೆಗಿನ ಮೈಕ್ರೋ ಮತ್ತು ಮ್ಯಾಕ್ರೋ ಅಭಿವೃದ್ಧಿ ಕಾಮಗಾರಿಗಳ ಮೇಲೆ ಶೇ53ರಿಂದ ಶೇ 56ರಷ್ಟು ಮಾತ್ರ ಅನುದಾನ ಬಳಕೆಯಾಗಿದೆ’ ಎಂದರು.

‘ಕೆಲವೊಂದು ಕಾಮಗಾರಿಗಳು ಮೈಕ್ರೋ-ಮ್ಯಾಕ್ರೋದಲ್ಲಿ ಬರುತ್ತವೆ. ಆದರೆ, ಕಾಮಗಾರಿಯ ಸ್ವರೂಪದ ಮೇಲೆ ಅದನ್ನು ನಿರ್ಧರಿಸಲಾಗುತ್ತದೆ ಎಂದ ಅವರು, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದ ವತಿಯಿಂದ ನಿರ್ವಹಿಸುತ್ತಿರುವ ಕಾಮಗಾರಿಗಳ ಕುರಿತು ಅಪೂರ್ಣ ಮಾಹಿತಿ ನೀಡಿದ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಗ್ರಾಮೀಣ ಪ್ರದೇಶಗಳಲ್ಲಿ ಸಮುದಾಯ ಶೌಚಾಲಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿಯವರಿಂದ ಶೌಚಾಲಯ ನಿರ್ವಹಣೆ ಒಪ್ಪಿಗೆ ಪಡೆದ ನಂತರ ಕಾಮಗಾರಿಯನ್ನು ಕೈಗೊಳ್ಳಬೇಕು ಎಂದು ಅವರು, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಲೋಕೋಪಯೋಗಿ ಇಲಾಖೆ, ನಿರ್ಮಿತಿ ಕೇಂದ್ರ, ಜಿಲ್ಲಾ ನಗರಾಭಿವೃದ್ಧಿ ಕೋಶ, ಸಣ್ಣ ನೀರಾವರಿ, ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆ, ಕಂದಾಯ ಇಲಾಖೆ, ಗ್ರಾಮೀಣ ಕುಡಿಯುವ ನೀರು ಸೇರಿದಂತೆ ಇತರೆ ಇಲಾಖೆಗಳು ಅನುಷ್ಠಾನಗೊಳಿಸುವ ಮಂಡಳಿಯ ಕಾಮಗಾರಿಗಳ ಪ್ರಗತಿ ಕುರಿತು ಪರಿಶೀಲನೆ ನಡೆಯಿತು.

ಸಾಲಿನ ಮೈಕ್ರೋ ಮತ್ತು ಮ್ಯಾಕ್ರೋ ಕಾಮಗಾರಿಗಳವಾರು ಆರ್ಥಿಕ ಮತ್ತು ಭೌತಿಕ ಪ್ರಗತಿ ವರದಿ ಬಗ್ಗೆ ಮಾಹಿತಿ ಪಡೆದ ಅವರು, ವಿಳಂಬವಾದ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಹೊಸ ಕಾಮಗಾರಿಗಳಿಗಾಗಿ ಸಂಬಂಧಿಸಿದಂತೆ, ಕ್ರಿಯಾಯೋಜನೆ ತಯಾರಿಸಿ ತಕ್ಷಣ ಸಲ್ಲಿಸಬೇಕು. ಅವುಗಳಿಗೆ ಕೂಡಲೇ ಅನುಮೋದನೆ ನೀಡಲಾಗುವುದು. ಕಾಮಗಾರಿಗಳನ್ನು ಮುಗಿದ ನಂತರ ಮೂರನೇ ತಂಡದಿಂದ ಪರಿಶೀಲನೆ ಮಾಡಿ, ವರದಿ ಬಂದ ತಕ್ಷಣವೇ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

2014–15 ಮತ್ತು 2015-16ನೇ ಸಾಲಿನ ಕಾಮಗಾರಿಗಳನ್ನು ಬರುವ ಸೆಪ್ಟೆಂಬರ್ ತಿಂಗಳೊಳಗೆ ಪೂರ್ಣಗೊಳಿಸಬೇಕು. 2016-17ನೇ ಸಾಲಿನ ಕಾಮಗಾರಿಗಳನ್ನು ಬರುವ ನವೆಂಬರ್ ತಿಂಗಳೊಳಗೆ ಹಾಗೂ 2017–18ನೇ ಸಾಲಿನ ಕಾಮಗಾರಿಗಳನ್ನು ಡಿಸೆಂಬರ್ ತಿಂಗಳೊಳಗೆ ಪೂರ್ಣಗೊಳಿಸಬೇಕು ಸಂಬಂಧಪಟ್ಟ ಅಧಿಕಾರಿಗಳಿಗೆ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಅಂಗನವಾಡಿ ಕಟ್ಟಡ ಎ.ಎನ್.ಎಂ. ಕ್ವಾಟರ್ಸ್, ಶಾಲೆ ಕಟ್ಟಡ, ಕುಡಿಯುವ ನೀರು, ಚರಂಡಿ, ರಸ್ತೆ ಕಾಮಗಾರಿ ಶೌಚಾಲಯಗಳ ಬಗ್ಗೆ ಸುದೀರ್ಘವಾಗಿ ಸಭೆಯಲ್ಲಿ ಚರ್ಚಿಸಿದರು. ಎಲ್ಲಾ ಇಲಾಖೆಗಳ ಮಾಹಿತಿಯನ್ನು ಪಡೆದು ಕಾಮಗಾರಿಗಳು ಆದಷ್ಟು ಬೇಗನೆ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಅವಿನಾಶ ಮೆನನ್ ರಾಜೇಂದ್ರನ್, ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ ಜಿ.ರಜಪೂತ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ವಸಂತರಾವ್ ವಿ.ಕುಲಕರ್ಣಿ, ಜಂಟಿ ನಿರ್ದೇಶಕ ಬಸವರಾಜ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !