ಬುಧವಾರ, ಸೆಪ್ಟೆಂಬರ್ 22, 2021
21 °C

ಮಂಪರು ಪರೀಕ್ಷೆಗೆ ಐವರು ಕೊಲೆ ಆರೋಪಿಗಳ ಪೈಕಿ ಒಬ್ಬನಿಂದ ಮಾತ್ರ ಸಮ್ಮತಿ

ಟಿ.ನಾಗೇಂದ್ರ Updated:

ಅಕ್ಷರ ಗಾತ್ರ : | |

ಶಹಾಪುರ: ತಾಲ್ಲೂಕಿನ ಗೋಗಿ ಠಾಣೆ ವ್ಯಾಪ್ತಿಯ ದರ್ಶನಾಪುರ ಗ್ರಾಮದಲ್ಲಿ ಎಂಟು ತಿಂಗಳ ಹಿಂದಿನ ಯುವಕನ ಕೊಲೆ ಶಂಕೆ ಪ್ರಕರಣದ ನಿಜಾಂಶ ತಿಳಿಯಲು ಗೋಗಿ ಠಾಣೆಯ ತನಿಖಾಧಿಕಾರಿ ಅಯ್ಯಪ್ಪ ಅವರು ವೈಜ್ಞಾನಿಕ ಹಾಗೂ ಪಾಲಿಗ್ರಾಫ್‌ಗೆ (ಮಂಪರು ಪರೀಕ್ಷೆ) ಅವಕಾಶ ನೀಡುವಂತೆ ಕೋರಿ ಜೆಎಂಎಫ್ ನ್ಯಾಯಾಲಯಕ್ಕೆ ಅರ್ಜಿ
ಸಲ್ಲಿಸಿದ್ದಾರೆ.

ವಿಚಾರಣೆ ನಡೆಸಿದ ಜೆಎಂಎಫ್ ಪ್ರಧಾನ ನ್ಯಾಯಾಲಯದ ನ್ಯಾಯಾಧೀಶ ಕಾಡಪ್ಪ ಹುಕ್ಕೇರಿ ಅವರು, ಐವರು ಆರೋಪಿಗಳ ಪೈಕಿ ಒಬ್ಬರಿಗೆ ಮಾತ್ರ ಮಂಪರು ಪರೀಕ್ಷಗೆ ಒಳಪಡಿಸಲು ಒಪ್ಪಿಗೆ ಸೂಚಿಸಿದರು. ನಾಲ್ವರು ಅಪಾದಿತರು ನಿರಾಕರಿಸಿದ್ದರಿಂದ ಅರ್ಜಿಯನ್ನು ತಿರಸ್ಕರಿಸಿದ್ದಾರೆ ಎಂದು ಸರ್ಕಾರಿ ಸಹಾಯಕ ಅಭಿಯೋಜಕ ವಿನಾಯಕ ಕೋಡ್ಲಾ ಅವರು ಮಾಹಿತಿ ನೀಡಿದ್ದಾರೆ.

ಜನವರಿ 20ರಂದು ನಡೆದಿದ್ದ ಮಂಜುನಾಥನ ಕೊಲೆ ಶಂಕೆ ಪ್ರಕರಣದಲ್ಲಿ ಆಪಾದಿತರಿಂದ ತನಿಖೆಯ ವೇಳೆಯಲ್ಲಿ ಪ್ರಕರಣದ ಕೆಲವು ಸತ್ಯಾಂಶ ಹಾಗೂ ಸನ್ನಿವೇಶಗಳನ್ನು ಖಚಿತ ಪಡಿಸಿಕೊಳ್ಳಬೇಕಿದೆ. ಹೆಚ್ಚಿನ ವಿಚಾರಣೆಗೆ ಒಳಪಡಿಸಲು ಸಾಕಷ್ಟು ಪೂರಕ ಕಾರಣಗಳು ಕಂಡು ಬಂದಿರುತ್ತವೆ. ವೈಜ್ಞಾನಿಕ ಹಾಗೂ ಪಾಲಿಗ್ರಾಫಿ ಪರೀಕ್ಷೆ ನಡೆಸಲು ಅವಕಾಶ ನೀಡುವಂತೆ ಅಯ್ಯಪ್ಪ ಅವರು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯಲ್ಲಿ ಕೋರಿದ್ದರು.

ಅದರಂತೆ ಐವರು ಆಪಾದಿತರು ತಮ್ಮ ವಕೀಲರ ಮೂಲಕ ನ್ಯಾಯಾಲಯದ ಮುಂದೆ ಹಾಜರಾದರು. ಅವರಲ್ಲಿ ಅಶೋಕ ಅವರು ಮಂಪರು ಪರೀಕ್ಷೆಗೆ ಒಪ್ಪಿಕೊಂಡಿದ್ದಾರೆ. ಉಳಿದ ನಾಲ್ವರು ಇದಕ್ಕೆ ನಿರಾಕರಿಸಿ ತಕರಾರು ಅರ್ಜಿ ಸಲ್ಲಿಸಿದರು. ನ್ಯಾಯಾಲಯವು ಒಬ್ಬರಿಗೆ ಮಾತ್ರ ಮಂಪರು ಪರೀಕ್ಷೆಗೆ ಸಮ್ಮತಿಸಿದೆ ಎಂದು ಆರೋಪಿ ಪರ ವಕೀಲರು ತಿಳಿಸಿದರು.

***

ಏನಿದು ಪ್ರಕರಣ?

ದರ್ಶನಾಪುರ ಗ್ರಾಮದ ಬಾಲಕರ ವಸತಿನಿಲಯದ ಕಾಂಪೌಂಡ್‌ನಗೇಟ್ ಹತ್ತಿರದ ಮರದಲ್ಲಿ ನೇಣುಹಾಕಿಕೊಂಡ ಸ್ಥಿತಿಯಲ್ಲಿ ಮಂಜುನಾಥ ಶವ ಪತ್ತೆ ಆಗಿತ್ತು. ಈ ಬಗ್ಗೆ ಅನುಮಾನ ವ್ಯಕ್ತಪಡಿಸಿ ಮಂಜುನಾಥ ಅವರ ತಂದೆ ಮಲ್ಲಪ್ಪ ಪೂಜಾರಿ ಜನವರಿ 21ರಂದು ಗೋಗಿ ಠಾಣೆಯಲ್ಲಿ ದೂರು
ಸಲ್ಲಿಸಿದ್ದರು. ಅದರಂತೆ ಯುಡಿಆರ್ ಪ್ರಕರಣ ಎಂದು ದಾಖಲಾಗಿತ್ತು.

ಬಳಿಕ ಜುಲೈ 7ರಂದು ಇದೇ ಠಾಣೆಯಲ್ಲಿ ದರ್ಶನಾಪುರ ಗ್ರಾಮದ ಅಶೋಕ, ಭೀಮರಡ್ಡಿ, ಮಲ್ಲಪ್ಪ, ರಾಯಪ್ಪ ಮತ್ತು ರಾಮಣ್ಣ ಎಂಬುವವರ ಮೇಲೆ ಕೊಲೆ ಆರೋಪದ ದೂರು ದಾಖಲಿಸಿದ್ದರು.

***

ವೈಜ್ಞಾನಿಕ ಮತ್ತು ಮಂಪರು ಪರೀಕ್ಷೆಗೆ ಒಳಪಡಿಸಲು ತನಿಖಾಧಿಕಾರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಐವರ ಆರೋಪಿಗಳ ಪೈಕಿ ಒಬ್ಬರು ಒಪ್ಪಿಕೊಂಡಿದ್ದಾರೆ

ವಿನಾಯಕ ಕೋಡ್ಲಾ, ಎಪಿಪಿ ಶಹಾಪುರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.