ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭತ್ತ: ಉತ್ತಮ ಧಾರಣೆ ನಿರೀಕ್ಷೆಯಲ್ಲಿ ರೈತರು

ಭರದಿಂದ ಸಾಗಿದ ಭತ್ತದ ಕಟಾವು; ಬೆಂಬಲ ಬೆಲೆ ಸಿಗುವ ನಿರೀಕ್ಷೆಯಲ್ಲಿ ಅನ್ನದಾತರು
Last Updated 21 ಏಪ್ರಿಲ್ 2021, 5:38 IST
ಅಕ್ಷರ ಗಾತ್ರ

ಹುಣಸಗಿ: ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಹಿಂಗಾರು ಹಂಗಾಮಿನಲ್ಲಿ ಬೆಳೆಯಲಾಗಿರುವ ಭತ್ತದ ರಾಶಿ ಕಳೆದ ಒಂದು ವಾರದಿಂದ ಭರದಿಂದ ನಡೆದಿದ್ದು, ನಿತ್ಯವೂ ಪ್ರತಿ ಗ್ರಾಮಗಳ ಹೊಲಗದ್ದೆಗಳಲ್ಲಿ ಯಂತ್ರಗಳ ಸದ್ದು ಜೋರಾಗಿದೆ.

ಏಪ್ರಿಲ್ 5 ರವರೆಗೆ ಮುಖ್ಯ ಕಾಲುವೆಗೆ ನೀರು ಹರಿಸಿದ್ದರಿಂದಾಗಿ ಬಹುತೇಕ ಎಲ್ಲ ಬೆಳೆಯು ರೈತರ ಕೈಗೆ ಬಂದಂತಾಗಿದೆ. ಸಮಯಕ್ಕೆ ಸರಿಯಾಗಿ ಹೆಚ್ಚಿನ ಕಟಾವು ಯಂತ್ರಗಳು ಗ್ರಾಮಿಣ ಭಾಗದಲ್ಲಿ ಲಗ್ಗೆ ಇಟ್ಟಿದ್ದರಿಂದಾಗಿ ಕಟಾವು ಯಂತ್ರಗಳ ಅಭಾವ ಇಲ್ಲದಂತಾಗಿ ಕಟಾವಿನ ಬೆಲೆ ಗಗನಕ್ಕೇರದೇ ರೈತರ ಸ್ನೇಹಿಯಾಗಿರುತ್ತದೆ.

ದಾವಣಗೆರೆ, ಗಂಗಾವತಿ ಹಾಗೂ ಆಂಧ್ರ ಭಾಗದಿಂದ ಕಟಾವು ಯಂತ್ರಗಳು ಕೃಷ್ಣಾ ಅಚ್ಚುಕಟ್ಟು ಪ್ರದೇಶಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಬಂದಿದ್ದರಿಂದಾಗಿ ಕಟಾವಿನ ಬೆಲೆ ಇಳಿಕೆಯಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ನಿರೀಕ್ಷಿತ ಪ್ರಮಾಣದಲ್ಲಿ ಕಾಲುವೆಗೆ ನೀರು ಹರಿಸಿದ್ದರಿಂದಾಗಿ ಈ ಬಾರಿ ಬಹುತೇಕ ರೈತರು ಆರ್.ಎನ್.ಆರ್ ಹಾಗೂ ಕಾವೇರಿ ಸೋನಾ ತಳಿಯ ಭತ್ತವನ್ನು ನಾಟಿ ಮಾಡಿಕೊಂಡಿದ್ದರು. ಕ್ರಿಮಿನಾಶಕ ಹಾಗೂ ರಸಗೊಬ್ಬರದ ಹಾಕಿದ್ದರಿಂದಾಗಿ ಖರ್ಚು ಕೂಡಾ ಅಧಿಕವಾಗಿದೆ. ಆದರೆ ಭತ್ತದ ಬೆಳೆ ಅತ್ಯಂತ ಕಡಿಮೆ ಇದ್ದು, ಈ ಬಾರಿ ನಿರಿಕ್ಷಿತ ಬೆಲೆ ದೊರೆತಲ್ಲಿ ರೈತರು ನೆಮ್ಮದಿ ಜೀವನ ನಡಸುವಂತಾಗಲಿದೆ ಎಂದು ಹೇಳುತ್ತಾರೆ ಕಾಮನಟಗಿ ಗ್ರಾಮದ ರೈತ ರಂಗಪ್ಪ ಡಂಗಿ ಹಾಗೂ ವಜ್ಜಲ ಗ್ರಾಮದ ಶಿದ್ರಾಮಪ್ಪ ಗಿಂಡಿ.

ಮುಂಗಾರು ಹಂಗಾಮಿನಲ್ಲಿ ಆರ್.ಎನ್.ಆರ್. ತಳಿಯ ಭತ್ತದ ಧಾರಣಿ ಏರುಗತಿಯಲ್ಲಿದ್ದುದರಿಂದಾಗಿ ಈ ಭಾರಿ ಬಹುತೇಕ ರೈತರು ಹಿಂಗಾರು ಹಂಗಾಮಿನಲ್ಲಿ ಆರ್.ಎನ್.ಆರ್ ತಳಿಯ ಭತ್ತವನ್ನೇ ನಾಟಿ ಮಾಡಿದ್ದರು. ಆದರೆ ಹವಾಮಾನಕ್ಕೆ ಹೊಂದಿಕೊಳ್ಳದೇ ತೆನೆಯಲ್ಲಿ ಅಲ್ಲಲ್ಲಿ ತಾಲ್ (ಜೋಳ್ಳು) ಬರುತ್ತಿದ್ದು ಇಳುವರಿಯಲ್ಲಿ ವ್ಯತ್ಯಾಸ ಕಂಡು ಬರುತ್ತಿದೆ. ಆದರೆ ಪ್ರತಿ ವರ್ಷ ₹100 ಹೆಚು ಇರುತ್ತಿದ್ದ ಧಾರಣೆ ಈ ಬಾರಿ ಕಡಿಮೆ ಇದೆ ಎಂದು ಸತ್ಯನಾರಾಯಣ ರಡ್ಡಿ ಹೇಳಿದರು.

ನಿರಿಕ್ಷಿತ ಪ್ರಮಾಣದಲ್ಲಿ ಬೆಲೆ ಇಲ್ಲದಂತಾಗಿದ್ದು, ರೈತರು ಮತ್ತೆ ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಭತ್ತಕ್ಕೆ ನಿಶ್ಚಿತ ಬೆಲೆ ಸಿಕ್ಕಾಗ ಮಾತ್ರ ರೈತರ ಸಬಲರಾಗಲು ಸಾಧ್ಯ ಎಂದು ಭತ್ತ ಬೆಳೆಗಾರ ನಿಂಗನಗೌಡ ಮಲ್ಲನಗೌಡ ಬಸನಗೌಡ್ರ ತಿಳಿಸಿದರು.

ಸಧ್ಯ 75 ಕೆಜಿ ಭತ್ತಕ್ಕೆ ₹1250 ರಿಂದ 1290 ರ ವರೆಗೆ ಧಾರಣೆ ಇದೆ. ಆದರೆ ರಸಗೊಬ್ಬರ ಮತ್ತು ಕ್ರಿಮಿನಾಶಕ ಬೆಲೆ ಗಗನಕ್ಕೇರಿದೆ. ಇದರಿಂದಾಗಿ ರೈತರು ಈ ಬಾರಿ ಕೂಡಾ ನಷ್ಟದಲ್ಲಿಯೇ ಕಾಲ ಕಳೆಯುವಂತಾಗಿದೆ ಎಂದು ದ್ಯಾಮನಹಾಳ ಗ್ರಾಮದ ರೈತ ಲಕ್ಷ್ಮಿಕಾಂತ ಕುಲಕರ್ಣಿ ಹೇಳಿದರು.

ಕಟಾವು ಯಂತ್ರದ ಬಾಡಿಗೆ ದುಬಾರಿ

ಕೆಂಭಾವಿ: ನಾರಾಯಣಪುರ ಎಡದಂಡೆ ಕಾಲುವೆ ವ್ಯಾಪ್ತಿಯ ಗ್ರಾಮಗಳಲ್ಲಿ ಹಿಂಗಾರು ಹಂಗಾಮಿನ ಭತ್ತದ ಬೆಳೆಯ ಕಟಾವು ಕಾರ್ಯ ಭರದಿಂದ ಸಾಗಿದೆ.

ಕಳೆದ ವರ್ಷ ಮುಂಗಾರು ಹಂಗಾಮಿನಲ್ಲಿ ಅತಿವೃಷ್ಠಿಯಿಂದ ಭತ್ತದ ಬೆಳೆಯ ಇಳುವರಿ ಕುಸಿತವಾಗಿತ್ತು. ಇದಲ್ಲದೇ ಕೊರೊನಾ ಕಾರಣ ವ್ಯಾಪಾರ ವಹಿವಾಟುಗಳಲ್ಲಿ ಅಡತಡೆ ಉಂಟಾಗಿ ರೈತರು ಕಂಗಾಲಾಗಿದ್ದರು. ಆದರೂ ಇದಕ್ಕೆ ಧೃತಿಗೆಡದ ರೈತರು ಹಿಂಗಾರು ಹಂಗಾಮಿನಲ್ಲಿ ಕಾವೇರಿ, ಆರ್.ಎನ್.ಆರ್ ಭತ್ತದ ಬೆಳೆಯನ್ನು ಬೆಳೆದು ಬೆಳೆಗಳು ಕಟಾವಿಗೆ ಬಂದಿದ್ದು, ನೆತ್ತಿ ಸುಡುವ ಬಿಸಿಲನ್ನು ಲೆಕ್ಕಿಸದೇ ಭತ್ತದ ಕಟಾವು ಕಾರ್ಯಕ್ಕೆ ಮುಂದಾಗಿದ್ದಾರೆ.

ಈ ಬಾರಿಯ ಹಿಂಗಾರು ಭತ್ತದ ಬೆಳೆ ಉತ್ತಮವಾಗಿದ್ದು, ಆಯಾ ಭೂಮಿಯ ಫಲವತ್ತತೆ ಮತ್ತು ಭತ್ತದ ಬೆಳೆಯ ಆಧಾರದ ಮೇಲೆ ಎಕರೆಯೊಂದಕ್ಕೆ 40 ರಿಂದ 45 ಚೀಲ ಇಳುವರಿ ನಿರೀಕ್ಷೆಯಲ್ಲಿ ರೈತರಿದ್ದಾರೆ. ರೈತರು ಎಕರೆಯೊಂದಕ್ಕೆ ಸಸಿ ನಾಟಿ, ಟ್ರ್ಯಾಕ್ಟರ್, ಗೊಬ್ಬರ, ಕಳೆ ಕೀಳಲು ಕೂಲಿಯಾಳು, ಕ್ರಿಮಿನಾಸಕ ಸೇರಿ ₹20 ರಿಂದ 25 ಸಾವಿರವರೆಗೂ ಖರ್ಚು ಮಾಡಿದ್ದಾರೆ.

ಖಾಸಗಿ ಭತ್ತ ಕಟಾವು ಯಂತ್ರಗಳ ಮಾಲೀಕರು ಮತ್ತು ಕೆಲವು ಮಧ್ಯವರ್ತಿಗಳು ಪ್ರತಿ ಗಂಟೆಗೆ ₹2400ನಿಂದ ₹2500 ವರೆಗೆ ಬಾಡಿಗೆ ನಿಗದಿಪಡಿಸಿದ್ದು, ಇದು ರೈತರಿಗೆ ಹೆಚ್ಚಿನ ಹೊರೆಯಾಗಲಿದೆ. ಜಿಲ್ಲಾಡಳಿತ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಭತ್ತ ಕಟಾವು ಯಂತ್ರದ ಬಾಡಿಗೆ ಬಗ್ಗೆ ರೈತರು ಮತ್ತು ಮುಖಂಡರೊಂದಿಗೆ ಚರ್ಚಿಸಿ ಗಂಟೆಗೆ ಇಂತಿಷ್ಟು ಎಂದು ನಿಗದಿ ಪಡಿಸಬೇಕು ಎಂಬುದು ರೈತ ಬಿ.ರಂಗಾರಾವು ಅವರ ಆಗ್ರಹವಾಗಿದೆ.

*ಜಿಲ್ಲೆಯಲ್ಲಿ ಭತ್ತದ ಕಟಾವು ಕಾರ್ಯ ಪ್ರಾರಂಭವಾಗಿದ್ದು, ಯಂತ್ರಗಳ ಬಾಡಿಗೆ ದುಬಾರಿ ಕುರಿತು ಆರೋಪಗಳು ಕೇಳಿ ಬರುತ್ತಿವೆ. ಶೀಘ್ರದಲ್ಲೇ ಈ ಕುರಿತು ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು

ದೇವಿಕಾ, ಜಂಟಿ ನಿರ್ದೇಶಕಿ, ಕೃಷಿ ಇಲಾಖೆ, ಯಾದಗಿರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT