ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಗುಂಡಿ ಬಿದ್ದ ರಸ್ತೆಯಲ್ಲಿ ವಿದ್ಯಾರ್ಥಿನಿಯರ ಪರದಾಟ

ಅವೈಜ್ಞಾನಿಕ ಕಾಲುವೆ ಕಾಮಗಾರಿ: ರಸ್ತೆಯುದ್ದಕ್ಕೂ ಗುಂಡಿಗಳ ಹಾವಳಿ
Last Updated 17 ಅಕ್ಟೋಬರ್ 2019, 5:46 IST
ಅಕ್ಷರ ಗಾತ್ರ

ಯಾದಗಿರಿ: ನಗರದ ಚಿತ್ತಾಪುರ ರಸ್ತೆಯಲ್ಲಿರುವ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ ತೆರಳುವ ರಸ್ತೆ ಹದಗೆಟ್ಟಿದ್ದು, ವಿದ್ಯಾರ್ಥಿನಿಯರು ಕಾಲೇಜಿಗೆ ತೆರಳಲು ಪರಡಾಡುತ್ತಿದ್ದಾರೆ.

ಕಾಲೇಜಿಗೆ ತೆರಳುವ ಮಾರ್ಗದಲ್ಲಿ ಮೊಣಕಾಲು ಉದ್ದದ ಗುಂಡಿಗಳಿವೆ. ರಸ್ತೆಯಲ್ಲೆ ಚರಂಡಿ ನೀರು ಸಂಗ್ರಹವಾಗುತ್ತಿದ್ದು ದುರ್ನಾತ ಬೀರುತ್ತಿದೆ. ಆದರೂ ಇದೇ ಮಾರ್ಗದಲ್ಲಿ ವಿದ್ಯಾರ್ಥಿನಿಯರು ಸಂಚಾರ ಮಾಡುವ ಸ್ಥಿತಿ ನಿರ್ಮಾಣವಾಗಿದೆ.

ಕಾಲೇಜಿನಲ್ಲಿ ಯಾವುದಾದರೂ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡರೆ ಜಿಲ್ಲಾಮಟ್ಟದ ಅಧಿಕಾರಿಗಳು, ಶಾಸಕರು ಇದೇ ಮಾರ್ಗದಲ್ಲಿಯೇ ಸಂಚರಿಸುತ್ತಾರೆ. ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರೂ ಇಲ್ಲಿಯವರೆಗೆ ಯಾವುದೇ ಕಾಮಗಾರಿ ಆರಂಭವಾಗಿಲ್ಲ.

ಪತ್ರ ಬರೆದರೂ ಕ್ಯಾರೆ ಇಲ್ಲ:ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷರು, ಶಾಸಕರು, ತಾಲ್ಲೂಕು ಪಂಚಾಯಿತಿ ಇಒ, ನಗರಸಭೆ ಪೌರಾಯುಕ್ತರು, ತಹಶೀಲ್ದಾರ್‌ ಕಚೇರಿಗೆ ಅಕ್ಟೋಬರ್‌ 5ರಂದು ಕಾಲೇಜಿನ ಪ್ರಭಾರಿ ಪ್ರಾಂಶುಪಾಲರು ರಸ್ತೆ ದುರಸ್ತಿ ಮಾಡಲು ಪತ್ರ ಬರೆದಿದ್ದರೂ ಯಾವುದೇ ಉತ್ತರವೂ ಬಂದಿಲ್ಲ. ದುರಸ್ತಿಯೂ ಆಗಿಲ್ಲ. ಇದರಿಂದ ಇಲ್ಲಿ ತೊಂದರೆ ಅನುಭವಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.

400 ವಿದ್ಯಾರ್ಥಿನಿಯರು: ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ 400 ವಿದ್ಯಾರ್ಥಿನಿಯರು ಹಾಗೂ 17 ಸಿಬ್ಬಂದಿ ವರ್ಗ ಇದೇ ಮಾರ್ಗದಲ್ಲಿ ಬರಬೇಕು. ಇಲ್ಲದಿದ್ದರೆ ಸುತ್ತು ಬಳಸಿ ಬರಬೇಕು.

ಕಾಲೇಜು ಪಕ್ಕದಲ್ಲಿಯೇ ಗ್ಯಾಸ್‌ ಗೋದಾಮು: ಮಹಿಳಾ ಕಾಲೇಜು ಮುಂಭಾಗದಲ್ಲಿಯೇ ಎಚ್.ಪಿ. ಗ್ಯಾಸ್‌ನ ಗೋದಾಮು ಇದೆ. ಇದು ಎಷ್ಟು ಸುರಕ್ಷಿತ ಎನ್ನುವುದು ಪ್ರಶ್ನೆಯಾಗಿದೆ. ಗ್ಯಾಸ್‌ನ ಲಾರಿಗಳಿಂದಲೂ ರಸ್ತೆ ದುರಸ್ತಿ ಮಾಡಲಾರದಷ್ಟು ಹದಗೆಟ್ಟಿದೆ. ಗುಂಡಿಮಯ ರಸ್ತೆಯಲ್ಲಿ ವಾಹನಗಳು ಸಂಚರಿಸಲು ಹರಸಾಹಸ ಪಡಬೇಕು. ಆ ಪ್ರದೇಶದಲ್ಲಿ ಕೆಲ ಮನೆಗಳು ನಿರ್ಮಾಣವಾಗಿದ್ದು, ಅಲ್ಲಿಗೆ ತೆರಳಲು ಇದೇ ಮಾರ್ಗವಾಗಿದೆ. ಈ ಬಗ್ಗೆ ನಗರಸಭೆಗೆ ಮಾಹಿತಿ ನೀಡಿದರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಲ್ಲಿಯ ನಿವಾಸಿಗಳು ಆರೋಪಿಸಿದರು.

ಅವೈಜ್ಞಾನಿಕ ಕಾಲುವೆ ನಿರ್ಮಾಣ: ಕಾಲೇಜು ಮುಂಭಾಗದಲ್ಲಿ ಅವೈಜ್ಞಾನಿಕವಾಗಿ ಕಾಲುವೆ ನಿರ್ಮಾಣ ಮಾಡಿದ್ದೆ ಇದಕ್ಕೆಲ್ಲ ಕಾರಣವಾಗಿದೆ. ಚರಂಡಿ ನೀರನ್ನು ರಸ್ತೆಗೆ ತಿರುಗಿಸಿದ್ದರಿಂದ ಇಷ್ಟೆಲ್ಲ ಅನಾಹುತಗಳಿಗೆ ಕಾರಣವಾಗಿದೆ. ಚಿತ್ತಾಪುರ ರಸ್ತೆಯ ಚರಂಡಿಗೆ ನೀರು ಬಿಡುವುದು ಬಿಟ್ಟು ಅವೈಜ್ಞಾನಿಕವಾಗಿ ಮಧ್ಯದಲ್ಲಿಯೇ ಬಿಟ್ಟಿದ್ದರಿಂದ ನೀರು ನಿಂತು ಗಬ್ಬೆದ್ದು ನಾರುತ್ತಿದೆ.

‘ಮಳೆಗಾಲದಲ್ಲಿ ಕಾಲೇಜಿಗೆ ಬರಲು ತುಂಬಾ ತೊಂದರೆಯಾಗುತ್ತದೆ. 500 ಮೀಟರ್ ರಸ್ತೆ ಗುಂಡಿಗಳಿಂದ ತುಂಬಿದ್ದು, ನಡೆಯಲು ಕೂಡ ಸಮಸ್ಯೆಯಾಗುತ್ತದೆ. ಹೀಗಾಗಿ ಈ ಮಾರ್ಗವನ್ನು ಬಿಟ್ಟು ಸುತ್ತು ಹಾಕಿಕೊಂಡು ಬರಬೇಕಿದೆ. ವಿದ್ಯಾರ್ಥಿನಿಯರ ಕಾಲೇಜು ಆಗಿದ್ದರಿಂದ ನಿರ್ಲಕ್ಷ್ಯ ಮಾಡಲಾಗುತ್ತಿದೆ’ ಎಂದು ಕಾಲೇಜು ವಿದ್ಯಾರ್ಥಿನಿಯರು ಆರೋಪಿಸಿದರು.

ಗುಂಡಿಯಲ್ಲಿ ಬಿದ್ದ ಜನರು: ರಸ್ತೆಗೆ ತೆರಳುವ ಮಾರ್ಗದಲ್ಲಿ ಹಲವಾರು ಜನರು ಬಿದ್ದು ಗಾಯಗೊಂಡಿದ್ದಾರೆ. ಬೈಕ್‌ ಸವಾರರು ಗುಂಡಿ ಬಿದ್ದ ರಸ್ತೆಯಲ್ಲಿ ವಿಧಿ ಇಲ್ಲದೆ ವಾಹನ ಚಲಾಯಿಸಿಕೊಂಡು ಹೋಗಬೇಕು.ಆದರೂ ಸಂಬಂಧಿಸಿದ ಅಧಿಕಾರಿಗಳು ರಸ್ತೆ ದುರಸ್ತಿಗೆ ಕ್ರಮ ಕೈಗೊಂಡಿಲ್ಲ ಎಂದು ನಗರ ನಿವಾಸಿ ಮಸೂದ್‌ ಅಹ್ಮದ್‌ ಆರೋಪಿಸುತ್ತಾರೆ.

***

‌ಕಾಲೇಜಿನ ರಸ್ತೆ ದುರಸ್ತಿ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದ್ದು, ಇನ್ನೂ ಯಾವುದೇ ಉತ್ತರ ಬಂದಿಲ್ಲ. ಈ ಬಗ್ಗೆ ಶಾಸಕರು ಕೂಡ ಭರವಸೆ ನೀಡಿದ್ದಾರೆ. ಆದರೂ ಇನ್ನು ರಸ್ತೆ ಮಾತ್ರ ದುರಸ್ತಿಯಾಗಿಲ್ಲ.
ಡಾ.ಶ್ರೀನಿವಾಸ, ಪ್ರಭಾರಿ ಪ್ರಾಂಶುಪಾಲ

***

ರಸ್ತೆ ಸರಿಯಿಲ್ಲ. ಮಳೆ ಮತ್ತು ಕೊಳಚೆ ನೀರು ನಿಂತು ಗಬ್ಬು ನಾರುತ್ತಿದೆ. ಹೀಗಾಗಿ ಈ ಮಾರ್ಗ ಬಿಟ್ಟು ಸುತ್ತಬಳಸಿ ಕಾಲೇಜಿಗೆ ಬರುತ್ತಿದ್ದೇವೆ.
ಸಮೀರಾ ಶೇಕ್‌, ವಿದ್ಯಾರ್ಥಿನಿ

***

ಕಾಲೇಜಿಗೆ ತೆರಳುವ ಮಾರ್ಗದಲ್ಲಿ ಗುಂಡಿ ಬಿದ್ದು, ರಸ್ತೆ ಹಾಳಾಗಿದೆ. ಶೀಘ್ರ ಸಂಬಂಧಿಸಿದವರು ರಸ್ತೆ ದುರಸ್ತಿ ಕಾಮಗಾರಿ ಕೈಗೊಳ್ಳಬೇಕು. ವಿದ್ಯಾರ್ಥಿನಿಯರಿಗೆ ಅನುಕೂಲ ಮಾಡಿಕೊಡಬೇಕು.
ಸಂಗೀತಾ, ವಿದ್ಯಾರ್ಥಿನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT