ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಖಾಪುರದ ಗ್ರಾಮದಲ್ಲಿ ವಿಷಕಾರಿ ನೀರು ಸೇವನೆ: ಅಸ್ವಸ್ಥರ ಸಂಖ್ಯೆ 17ಕ್ಕೆ ಏರಿಕೆ

Last Updated 11 ಜನವರಿ 2019, 11:33 IST
ಅಕ್ಷರ ಗಾತ್ರ

ಯಾದಗಿರಿ:ವಿಷಕಾರಿ ನೀರು ಸೇವನೆಯಿಂದ ಶಾಖಾಪುರದ ಗ್ರಾಮದಲ್ಲಿ ಶುಕ್ರವಾರ ಮತ್ತೆ ಒಂಭತ್ತು ಮಂದಿ ಅಸ್ವಸ್ಥರಾಗಿದ್ದಾರೆ. ಇದರಿಂದ ಅಸ್ವಸ್ಥರ ಸಂಖ್ಯೆ 17ಕ್ಕೆ ಏರಿದೆ.

ಲಕ್ಷ್ಮೀಬಾಯಿ, ಕಸ್ತೂರಿ ಬಾಯಿ, ಶಾಂತಮ್ಮ, ಬಸಮ್ಮ, ಅಯ್ಯಮ್ಮ, ಸುರೇಶ, ರೇವಣಸಿದ್ದಪ್ಪ, ರಾಯಪ್ಪ, ಸಿದ್ದಪ್ಪ ತಿಪ್ಪಣ್ಣ ದೊರೆ, ಶಶಿಕುಮಾರ್ ಚಾಮಣ್ಣ ಅಸ್ವಸ್ಥರಾಗಿದ್ದು, ಶಹಾಪುರ ತಾಲ್ಲೂಕು ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಅಸ್ವಸ್ಥರ ಆರೋಗ್ಯ ಸ್ಥಿರವಾಗಿದೆ ಎಂಬುದಾಗಿ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆ ತಜ್ಞವೈದ್ಯ ಡಾ. ವೆಂಕಟೇಶ್ ಭೈರಮಡಗಿ ತಿಳಿಸಿದ್ದಾರೆ.

ಶುಕ್ರವಾರ ಶಾಸಕರಾದ ಶರಣಬಸಪ್ಪ ದರ್ಶನಾಪುರ, ನರಸಿಂಹ ನಾಯಕ ಆಸ್ಪತ್ರೆಗೆ ಭೇಟಿ ನೀಡಿ ಅಸ್ವಸ್ಥರ ಆರೋಗ್ಯ ವಿಚಾರಿಸಿದ್ದಾರೆ.

ಜೂಜುಕೋರರ ಕೈವಾಡ ಶಂಕೆ

ಜಿಲ್ಲೆಯ ಹುಣಸಗಿ ತಾಲ್ಲೂಕಿನ ಮುದನೂರಿನ ತೆರೆದ ಬಾವಿಯಲ್ಲಿ ಕ್ರಿಮಿನಾಶಕ ಬೆರೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಬಾವಿ ಬಳಿ ನಿತ್ಯ ಇಸ್ಪೀಟ್ ಆಡುತ್ತಿದ್ದ ಜೂಜುಕೋರರ ಕೈವಾಡ ಇರಬಹುದು ಎಂಬುದಾಗಿ ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.

ಅರಕೇರಾ(ಬೆ) ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಖಾಪುರ ಮತ್ತು ತೆಗ್ಗಳ್ಳಿ ಗ್ರಾಮಗಳಿಗೆ ನೀರು ಪೂರೈಸಲು ಮುದನೂರು ಬಳಿ ಬಾವಿ ತೋಡಲಾಗಿದೆ. ಶಾಖಾಪುರದಿಂದ ಏಳು ಕಿಲೋಮೀಟರ್ ದೂರದಲ್ಲಿ ಈ ಬಾವಿ ಇದೆ. ಬಾವಿಯ ಪಕ್ಕದಲ್ಲೇ ಇರುವ ನೀರು ಶುದ್ಧೀಕರಣ ಘಟಕ ಕೆಟ್ಟುನಿಂತಿದೆ. ಮುದನೂರಿನ ಕೆಲವರು ನಿತ್ಯ ಬಾವಿ ಬಳಿ ಇಸ್ಪೀಟ್ ಆಡುತ್ತಿದ್ದರು. ಅಲ್ಲೇ ಗಲೀಜು ಮಾಡುತ್ತಿದ್ದರು. ಶಾಖಾಪುರದಿಂದ ನೀರು ಪೂರೈಕೆ ಮಾಡಲು ಪಂಪ್‌ ಆಪರೇಟರ್ (ನೀರಗಂಟಿ) ಮೌನೇಶ್ ಜೂಜುಕೋರರಿಗೆ ಬಾವಿ ಬಳಿ ಗಲೀಜು ಮಾಡದಂತೆ ಮನವಿ ಮಾಡಿದ್ದರು. ಆದರೆ, ಜೂಜುಕೋರರು ಮೌನೇಶ ಅವರ ಮನವಿಗೆ ಕಿವಿಗೊಟ್ಟಿರಲಿಲ್ಲ.

ಇದರಿಂದ ಮೌನೇಶ್ ಒಮ್ಮೆ ಜೂಜುಕೋರರ ಮೇಲೆ ಆಕ್ರೋಶ ವ್ಯಕ್ತಪಡಿಸಿ ಬಾವಿ ಬಳಿ ಜೂಜಾಡದಂತೆ ಎಚ್ಚರಿಕೆ ನೀಡಿದ್ದರು. ನಿತ್ಯ ನೀರಿನ ಪಂಪ್‌ಸೆಟ್ ಚಾಲು ಮಾಡುತ್ತಿದ್ದ ಮೌನೇಶ್‌, ವಾಲ್‌ ತಿರುಗಿಸಿ ಅಲ್ಲೇ ಸೋರುವ ನೀರು ಕುಡಿಯುತ್ತಿದ್ದರು. ಅದನ್ನು ಜೂಜುಕೋರರು ಗಮನಿಸಿದ್ದರು. ಮೌನೇಶ ಅವರಿಗೆ ಬುದ್ಧಿಕಲಿಸಲು ಜೂಜುಕೋರರು ನೀರಿಗೆ ವಿಷ ಬೆರೆಸಿರುವ ಸಾಧ್ಯತೆ ಇರಬಹುದೇ? ಎಂಬುದಾಗಿ ಶಾಖಾಪುರದಲ್ಲಿ ಜನರು ಮಾತನಾಡಿಕೊಳ್ಳುತ್ತಿದ್ದಾರೆ.

ಬಾವಿ ಮುದನೂರಿನಲ್ಲಿ ಇದ್ದರೂ, ಅಲ್ಲಿಂದ ನೀರು ಶಾಖಾಪುರ ಮತ್ತು ತೆಗ್ಗಳ್ಳಿ ಗ್ರಾಮಗಳಿಗೆ ಮಾತ್ರ ಪೂರೈಕೆ ಆಗುತ್ತಿದೆ. ಈ ಕಾರಣಕ್ಕೆ ಕಿಡಿಗೇಡಿಗಳು ಕೃತ್ಯ ಎಸಗಿರಬಹುದು? ಎಂಬುದಾಗಿ ಜನರು ಸಂಶಯ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಜೂಜುಕೋರರೇ ನೀರಿಗೆ ಕ್ರಿಮಿನಾಶಕ ಬೆರೆಸಿದ್ದಾರೆ ಎಂಬುದಕ್ಕೆ ಯಾವ ಸಾಕ್ಷ್ಯಾಧಾರಗಳು ಪೊಲೀಸರಿಗೆ ಸಿಕ್ಕಿಲ್ಲ. ಹಾಗಾಗಿ, ಪೊಲೀಸರು ಕೈಗೊಂಡಿರುವ ತನಿಖೆಗೆ ಸವಾಲುಗಳು ಎದುರಾಗಿವೆ.

ಕಿಡಿಗೇಡಿಗಳು ಭತ್ತದ ಬೆಳೆಗೆ ಉಪಯೋಗಿಸುವ ಯುಪಿಎಲ್‌ ಕಂಪೆನಿಯ ‘ನವನ್‌’ ಬ್ಯಾಂಡ್‌ನ ಆಗ್ರೋ ಪಾಸ್‌ಫರಸ್ ರಾಸಾಯನಿಕವನ್ನು ನೀರಿಗೆ ಬೆರೆಸಿ, ವಾಲ್‌ ಬಳಿಯೇ ರಾಸಾಯನಿಕ ಬಾಟಲಿ ಸುಟ್ಟುಹಾಕಿರುವುದು ಪರಿಶೀಲನೆ ಸಂದರ್ಭದಲ್ಲಿ ಪೊಲೀಸರಿಗೆ ದೊರೆತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT