ಕೂಲಿಹಣ ವಿತರಣೆಗೆ ಆಗ್ರಹಿಸಿ ಪ್ರತಿಭಟನೆ

7
ರೆಸಾರ್ಟ್‌ ರಾಜಕೀಯದಲ್ಲಿ ಬರ ಮರೆತ ಜನಪ್ರತಿನಿಧಿಗಳು: ಆರೋಪ

ಕೂಲಿಹಣ ವಿತರಣೆಗೆ ಆಗ್ರಹಿಸಿ ಪ್ರತಿಭಟನೆ

Published:
Updated:
Prajavani

ಯಾದಗಿರಿ: ‘ರಾಜ್ಯದಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಬಿದ್ದಿದೆ. ಪರಿಣಾಮ ಬರ ಆವರಿಸಿದೆ. ಇಂಥಾ ಸಂದರ್ಭದಲ್ಲಿ ಜನರು ಗುಳೆ ಹೋಗುತ್ತಿದ್ದಾರೆ. ಗುಳೆ ತಪ್ಪಿಸಲು ಸರ್ಕಾರ ಮುಂದಾಗಬೇಕು’ ಎಂದು ಆಗ್ರಹಿಸಿ ಸೋಷಲಿಸ್ಟ್‌ ಯೂನಿಟಿ ಸೆಂಟರ್ ಆಫ್ ಇಂಡಿಯಾ(ಕಮ್ಯುನಿಸ್ಟ್್), ರೈತ-ಕೃಷಿಕಾರ್ಮಿಕರ ಸಂಘಟನೆ (ಆರ್‌ಕೆಎಸ್) ಸಂಘಟನೆಗಳು ಜಂಟಿಯಾಗಿ ಬುಧವಾರ ನಗರದಲ್ಲಿ ಬೃಹತ್‌ ಪ್ರತಿಭಟನಾ ರ್‍್ಯಾಲಿ ನಡೆಸಿದವು.

ಎಸ್‌ಯುಸಿಐ(ಸಿ) ಜಿಲ್ಲಾ ಕಾರ್ಯದರ್ಶಿ ಕೆ.ಸೋಮಶೇಖರ್ ಮಾತನಾಡಿ,‘ರಾಜ್ಯದಲ್ಲಿ ತೀವ್ರ ಬರಗಾಲ ಆವರಿಸಿದೆ. ಕೃಷಿ ಕಾರ್ಮಿಕರಿಗೆ ಕೆಲಸ ಇಲ್ಲದಂತಾಗಿದೆ. ಸರ್ಕಾರ ಬರ ಕಾಮಗಾರಿಗಳನ್ನು ಆರಂಭಿಸಿ ಕಾರ್ಮಿಕರಿಗೆ ಕೆಲಸ ಕೊಡುವುದನ್ನು ಮರೆತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಕುಡಿಯುವ ನೀರು, ಜಾನುವಾರುಗಳಿಗೆ ಮೇವಿನ ಅಭಾವ ಉಂಟಾಗಿದೆ. ಇದರಿಂದ ಗ್ರಾಮೀಣ ಜನರು ಸಂಕಷ್ಟಪಡುತ್ತಿದ್ದಾರೆ. ಆದರೆ, ಸರ್ಕಾರ ಬೀಳಿಸಲು ವಿರೋಧ ಪಕ್ಷದವರು; ಕುರ್ಚಿ ರಕ್ಷಿಸಿಕೊಳ್ಳಲು ಆಡಳಿತ ಪಕ್ಷದವರು ಹಗಲು ರಾತ್ರಿ ತಂತ್ರ–ಪ್ರತಿತಂತ್ರ ನಡೆಸುತ್ತಾ ರಾಜ್ಯದ ಜನರ ಹಿತ ಮರೆತಿದ್ದಾರೆ’ ಎಂದು ಆರೋಪಿಸಿದರು.

‘ಕೇಂದ್ರ ಸರ್ಕಾರ ಕೂಡ ರಾಜ್ಯದಲ್ಲಿ ಉಂಟಾಗಿರುವ ಬರ ಪರಿಸ್ಥಿತಿಯನ್ನು ಕಡೆಗಣಿಸಿದೆ. ನೆರೆಯ ಮಹಾರಾಷ್ಟ್ರಕ್ಕೆ ಹೆಚ್ಚುವರಿ ಅನುದಾನ ಒದಗಿಸುವ ಮೂಲಕ ಅಲ್ಲಿನ ಜನರನ್ನು ಓಲೈಸುವ ಕೆಲಸ ಮಾಡಿದೆ. ಅನುದಾನ ವಿಷಯದಲ್ಲೂ ಕೇಂದ್ರ ತಾಳಿರುವ ತಾರತಮ್ಯ ನೀತಿ ಬಗ್ಗೆ ರಾಜ್ಯದ ಜನರು ಯೋಚಿಸುತ್ತಿದ್ದಾರೆ. ದುರಂತ ಎಂದರೆ ರಾಜ್ಯದಲ್ಲಿನ ಸಂಸತ್‌ ಸದಸ್ಯರು ಕೇಂದ್ರ ಸರ್ಕಾರದ ಈ ತಾರತಮ್ಯ ನೀತಿಯನ್ನು ಪ್ರಶ್ನಿಸುವ ಗೋಜಿಗೆ ಹೋಗಿಲ್ಲ’ ಎಂದು ಹರಿಹಾಯ್ದರು.

‘ಜಿಲ್ಲೆಯಲ್ಲೂ ಬರಗಾಲ ಆವರಿಸಿರುವುದರಿಂದ ಕೃಷಿ ನೆಲಕಚ್ಚಿದೆ. ಜನರಿಗೆ ಖಾತ್ರಿ ಯೋಜನೆಯಡಿ ಕೂಲಿ ಮಾಡುವುದು ಇಲ್ಲವೇ ಗುಳೆ ಹೋಗುವ ಎರಡು ದಾರಿಗಳಿವೆ. ಮನೆ, ಜಾನುವಾರು ಬಿಟ್ಟು ಜನರು ಗುಳೆ ಹೋಗಲು ಮನಸ್ಸು ಮಾಡುತ್ತಿಲ್ಲ. ಬದುಕಲು ಕೆಲಸ ಇಲ್ಲ. ಹೀಗಾಗಿ ಜನರು ಉದ್ಯೋಗ ಖಾತ್ರಿ ದಿನಗೂಲಿ ಕೆಲಸ ಬೇಡುತ್ತಿದ್ದಾರೆ’ ಎಂದರು.

‘ಸರ್ಕಾರ ಖಾತ್ರಿ ಯೋಜನೆಯಡಿ ಕೂಲಿ ಕೆಲಸ ಮಾಡಿದ ಜನರಿಗೆ ಕೂಲಿಹಣವನ್ನು ಬಾಕಿ ಇಟ್ಟುಕೊಳ್ಳಬಾರದು. ವರ್ಷಕಾಲ ದಿನಗೂಲಿ ಬಾಕಿ ಇಟ್ಟುಕೊಂಡರೆ ಜನರು ಬದುಕುವುದು ಹೇಗೆ? ಅಂದಿನ ದಿನಗೂಲಿಯನ್ನು ಅಂದೇ ವಿತರಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು’ ಎಂದು ಆಗ್ರಹಿಸಿದರು.

ಆರ್‌ಕೆಎಸ್ ಜಿಲ್ಲಾ ಅಧ್ಯಕ್ಷ ಶರಣಗೌಡ ಗೂಗಲ್ ಮಾತನಾಡಿ,‘ಜಿಲ್ಲೆಯ ಸುರಪುರ ತಾಲ್ಲೂಕಿ ನಗನೂರು ಹಾಗೂ ಖಾನಾಪುರ ಗ್ರಾಮಗಳ ನೂರಾರು ಜನ ಕೂಲಿ ಕಾರ್ಮಿಕರಿಗೆ ಕಳೆದ ಎರಡು ತಿಂಗಳುಗಳ ಕೂಲಿ ಹಣ ಅವರ ಬ್ಯಾಂಕ್ ಖಾತೆಗೆ ಜಮಾ ಆಗಿಲ್ಲ. ಇವೆ ಗ್ರಾಮಗಳ 26 ಜನ ಕಾರ್ಮಿಕರ 28 ದಿನಗಳ ಕೂಲಿ ಹಣವನ್ನು 2015–16ನೇ ಸಾಲಿನಲ್ಲಿನಿಂದ ಈವರೆಗೂ ಬಾಕಿ ಉಳಿಸಿಕೊಳ್ಳಲಾಗಿದೆ. ಗ್ರಾಮ ಪಂಚಾಯಿತಿಯಿಂದ ಜಿಲ್ಲಾ ಪಂಚಾಯಿತಿಯವರೆಗೆ ಎಲ್ಲಾ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಬಾಕಿ ಹಣ ಪಾವತಿ ಆಗಿಲ್ಲ’ ಎಂದು ದೂರಿದರು.

ಬಿ.ಎನ್.ರಾಮಲಿಂಗಪ್ಪ, ಸೈದಪ್ಪ, ಸುಭಾಷ್‌ಚಂದ್ರ, ಖಾಜಾಮೈನುದ್ಧಿನ್, ಜಮಾಲ್‌ಸಾಬ್, ಸಿದ್ದಪ್ಪ, ಗುರಪ್ಪಗೌಡ, ಗುರುನಾಥರಡ್ಡಿ, ಅರ್ಜುನ, ಕರಣಮ್ಮ, ಗೌರಮ್ಮ, ಸಜ್ಜನ, ಶರಣಮ್ಮ, ರಂಜಾನ್‌ಬಿ, ಹಸಿನಾಬೇಗಂ, ದೇವಕ್ಕಮ್ಮ ನೂರಾರು ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !