ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಯ ಈಡಿಗ ನಿಗಮ ಮಂಡಳಿ ಸ್ಥಾಪಿಸಲು ಪ್ರಣವಾನಂದ ಸ್ವಾಮೀಜಿ ಒತ್ತಾಯ

Last Updated 7 ಡಿಸೆಂಬರ್ 2021, 5:02 IST
ಅಕ್ಷರ ಗಾತ್ರ

ಯಾದಗಿರಿ: ’ರಾಜ್ಯದ ಮೂರೂ ಪಕ್ಷಗಳಲ್ಲಿ ಆರ್ಯ ಈಡಿಗ ಸಮಾಜದ ಶಾಸಕರಿದ್ದಾರೆ. ಆದರೆ, ಇವರು ಆರ್ಯ ಈಡಿಗ ನಿಗಮ ಮಂಡಳಿ ಸ್ಥಾಪನೆಗೆ ವಿಫಲರಾಗಿದ್ದಾರೆ. ಸರ್ಕಾರ ನಮ್ಮ ಮಾತು ಕೇಳದಿದ್ದರೆ ಸಮಾಜದ ಶಕ್ತಿ ತೋರಿಸಬೇಕಾಗುತ್ತದೆ‘ ಎಂದು ಆರ್ಯ ಈಡಿಗ ರಾಷ್ಟ್ರೀಯ ಮಹಾಮಂಡಳಿಯ ರಾಷ್ಟ್ರೀಯ ಅಧ್ಯಕ್ಷ ಪ್ರಣವಾನಂದ ಸ್ವಾಮೀಜಿ ಎಚ್ಚರಿಕೆ ನೀಡಿದರು.

’ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಪಕ್ಷದಲ್ಲಿ ಶಾಸಕ, ಸಚಿವರಿದ್ದರೂ ಸಮುದಾಯಕ್ಕೆ ಉಪಯೋಗವಾಗುತ್ತಿಲ್ಲ. ಅಲ್ಲದೇ ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ ಅವರಿಗೆ ಸಚಿವ ಸ್ಥಾನ ನೀಡುತ್ತೇವೆ ಎಂದು ಬೀದಿಯಲ್ಲಿ ನಿಲ್ಲಿಸಿದ್ದಾರೆ. 60ರಿಂದ 70 ಲಕ್ಷ ಜನಸಂಖ್ಯೆ ಇರುವ ನಾವು ಮುಂದಿನ ದಿನಗಳಲ್ಲಿ ನಮ್ಮ ತಾಕತ್ತು ತೋರಿಸುತ್ತೇವೆ‘ ಎಂದು ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.

2022ರ ಜನವರಿ 18ರಂದು ರಾಜ್ಯಮಟ್ಟದ ಆರ್ಯ ಈಡಿಗ ಸಮುದಾಯದ ಸಭೆಯನ್ನು ಯಾದಗಿರಿಯ ಸಪ್ತಪದಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ. 2023ರಲ್ಲಿ ನಮ್ಮ ಸಮುದಾಯದ ವ್ಯಕ್ತಿ ಮುಖ್ಯಮಂತ್ರಿ ಆಗುತ್ತಾರೆ. ಬಿಜೆಪಿ ಸರ್ಕಾರದ ಸಿಎಂಗಳು ವಚನಭ್ರಷ್ಟರಾಗಿದ್ದಾರೆ ಎಂದು ಆರೋಪಿಸಿದರು.

’ಆಗಿನ ಸರ್ಕಾರ ಹೆಂಡ, ಸಾರಾಯಿ ನಿಷೇಧ ಮಾಡಿತು. ಆದರೆ, ಪರ್ಯಾಯ ಉದ್ಯೋಗ ಕೊಡುತ್ತೇವೆ ಎಂದು ಇಲ್ಲಿಯತನಕ ಪಿಂಚಣಿ, ಪರ್ಯಾಯ ಕೆಲಸ ಕೊಟ್ಟಿಲ್ಲ. ಇದರಿಂದ ಸಮುದಾಯವು ಶೈಕ್ಷಣಿಕ, ಆರ್ಥಿಕವಾಗಿ ಹಿಂದುಳಿದೆ. ಅಲ್ಲದೇ ಈಗ ರಾಜಕೀಯವಾಗಿಯೂ ಶಾಸಕರು ಕಡಿಮೆಯಾಗಿದ್ದಾರೆ. ಸಮುದಾಯವನ್ನು ಸಂಘಟಿಸುವ ಕೆಲಸ ಮಾಡುತ್ತೇವೆ‘ ಎಂದರು.

ಆರ್ಯ ಈಡಿಗ ಸಮಾಜವನ್ನು ಮುಗಿಸುವ ಹುನ್ನಾರ ನಡೆದಿದೆ. ಮಾಲಿಕಯ್ಯ ಗುತ್ತೆದಾರ ಅವರನ್ನು ತಕ್ಷಣ ಎಂಎಲ್ಸಿ ಮಾಡಿ ಸಚಿವರನ್ನಾಗಿ ಮಾಡಬೇಕು. ನಿಗಮ ಮಂಡಳಿ ಸ್ಥಾಪನೆ ಮಾಡಿ ₹500 ಕೋಟಿ ಮೀಸಲೀಡಬೇಕು ಎಂದು ಆಗ್ರಹಿಸಿದರು.

ಜಿಲ್ಲೆಯಲ್ಲಿ ನಮ್ಮ ಸಮುದಾಯವರು ಮತಾಂತರವಾಗುತ್ತಿದ್ದಾರೆ. ಇದು ಆಗಬಾರದು. ಕುಲದ್ರೋಹ ಮಾಡಿದಂತೆ ಆಗುತ್ತದೆ. ಬ್ರಹ್ಮರ್ಷಿ ನಾರಾಯಣ ಗುರುಗಳ 108 ಅಡಿ ಎತ್ತರದ ಪುತ್ಥಳಿಯನ್ನು ಗಂಗಾವತಿ, ಶಿಗ್ಗಾವಿ, ಆನೇಕಲ್‌ ಬಳಿ ಸ್ಥಾಪಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದರು.

ಶಿವಮೊಗ್ಗದಲ್ಲಿ ನಿರ್ಮಾಣ ಹಂತದಲ್ಲಿರುವ ವಿಮಾನ ನಿಲ್ದಾಣಕ್ಕೆ ಮಾಜಿ ಸಿ ಎಂ ದಿವಂಗತ ಬಂಗಾರಪ್ಪ ಹೆಸರು ಇಡಬೇಕು. ಸಿಂಗದೂರು ಚೌಡೇಶ್ವರಿ ದೇವಿ ದೇವಸ್ಥಾನದ ಅರ್ಚಕರಿಗೆ ನೀಡಿದ ನೋಟಿಸ್‌ ವಾಪಸ್‌ ಪಡೆಯಬೇಕು. ವಿಶ್ವವಿದ್ಯಾಲಯಗಳಲ್ಲಿ ನಾರಾಯಣ ಗುರುಗಳ ಅಧ್ಯಯನ ಪೀಠ ಆರಂಭಿಸಬೇಕು ಎಂದು ಆಗ್ರಹಿಸಿದರು.

ಸತೀಶ ಈಡಿಗ, ವೆಂಕಟೇಶ, ನಾಗರಾಜಗೌಡ ಮಾನಸಗಲ್‌, ಮಹೇಂದ್ರಗೌಡ ಅಳ್ಳಳ್ಳಿ, ಮಹೇಂದ್ರಕುಮಾರ ಅನಪುರ, ಮಲ್ಲಯ್ಯ ಗುಂಡಗುರ್ತಿ, ಹುನುಮಯ್ಯ ಕಲಾಲ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT