ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವರ ಗ್ರಾಮವಾಸ್ತವ್ಯಕ್ಕೆ ಭರದ ಸಿದ್ಧತೆ

ದೇವತ್ಕಲ್ ಗ್ರಾಮದಲ್ಲಿ ಏ.17ರಂದು ಸಚಿವ ಆರ್. ಅಶೋಕ ಗ್ರಾಮ ವಾಸ್ತವ್ಯ; ಸರ್ಕಾರಿ ಶಾಲೆಗೆ ‘ಬಣ್ಣ’ದ ಭಾಗ್ಯ
Last Updated 16 ಏಪ್ರಿಲ್ 2021, 5:23 IST
ಅಕ್ಷರ ಗಾತ್ರ

ದೇವತ್ಕಲ್ (ಹುಣಸಗಿ): ಸಮೀಪದ ದೇವತ್ಕಲ್ ಗ್ರಾಮದಲ್ಲಿ ಶನಿವಾರ (ಏ.17) ಕಂದಾಯ ಸಚಿವ ಆರ್.ಆಶೋಕ ಅವರು ಗ್ರಾಮ ವಾಸ್ತವ್ಯ ಮಾಡಲಿದ್ದು ಗ್ರಾಮದಲ್ಲಿ ಸ್ವಚ್ಛತಾ ಕಾರ್ಯ ಭರದಿಂದ ಸಾಗಿದೆ.

ನಿಗದಿಯಂತೆ ಸಚಿವರು ಆಗಮಿಸಿದ ಬಳಿಕ ಪರಿಶಿಷ್ಟ ಪಂಗದ ಕಾಲೊನಿಗೆ ಭೇಟಿ ನೀಡಿ ಅಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದ್ದಾರೆ. ಬಳಿಕ ದೇವಪುರ ಮನಗೂಳಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಸಾರ್ವಜನಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಕೋವಿಡ್ ನಿಯಮಾವಳಿಗಳಂತೆ ಅಗತ್ಯ ತಯಾರಿ ಮಾಡಿಕೊಳ್ಳಲಾಗಿದೆ ಎಂದು ಹುಣಸಗಿ ತಹಶೀಲ್ದಾರ್ ವಿನಯಕುಮಾರ ಪಾಟೀಲ ತಿಳಿಸಿದರು.

ಸಣ್ಣ ಮತ್ತು ಅತೀ ಸಣ್ಣ ರೈತರೇ ಹೆಚ್ಚಾಗಿರುವ ಈ ದೇವತ್ಕಲ್ ಗ್ರಾಮದಲ್ಲಿ ಶೇ 73 ರಷ್ಟು ಸಾಕ್ಷರತೆಯನ್ನು ಹೊಂದಿರುವ 509 ಕುಟುಂಬಗಳಿದ್ದು, 1196 ನೋಂದಾಯಿತ ಜಾಬ್ ಕಾರ್ಡ್ ಹೊಂದಿರುವ ಕಾರ್ಮಿಕರಿದ್ದಾರೆ.

ಗ್ರಾಮದ ಬಹುತೇಕ ವಾರ್ಡ್‌ಗಳಲ್ಲಿ ಸಿಸಿ ರಸ್ತೆ ಮಾಡಲಾಗಿದೆ. ಆದರೆ ಚರಂಡಿ ವ್ಯವಸ್ಥೆ ಇಲ್ಲದ್ದರಿಂದಾಗಿ ನೀರು ರಸ್ತೆಯಲ್ಲಿಯೇ ಹರಿಯುವಂತಾಗಿದೆ. ಗ್ರಾಮದಲ್ಲಿ ಸುಮಾರು 299 ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ ಎಂಬುವುದು ಗ್ರಾಮ ಪಂಚಾಯಿತಿ ಮಾಹಿತಿ. ಆದರೆ ನಿತ್ಯ ಬಳಕೆ ಇಲ್ಲದ್ದರಿಂದಾಗಿಬಹುತೇಕ ಶೌಚಾಲಯಗಳು ಹಾಳಾಗಿವೆ. ಗ್ರಾಮದಲ್ಲಿ ನಮ್ಮ ಮನೆಗೆ ತೆರಳಲು ಸರಿಯಾದ ರಸ್ತೆ ಇಲ್ಲ. ಇದರಿಂದಾಗಿ ಎತ್ತರದ ಪ್ರದೇಶದಲ್ಲಿದ್ದ ಮನೆಗಳಿಗೆ ಪ್ರಯಾಸ ಪಟ್ಟು ಹೋಗುವ ಅನಿವಾರ್ಯತೆ ಇದೆ ಎಂದು ಎಸ್ಸಿ ವಾರ್ಡ್ ನಿವಾಸಿ ಪರಮಣ್ಣ ಹೇಳಿದರು.

ನಾವು ಇದೇ ಗ್ರಾಮದ ನಿವಾಸಿ ಇದ್ದರೂ ಕೂಡಾ ನಮಗೆ ಇಂದಿಗೂ ಪಡಿತರ ಚೀಟಿ ಇಲ್ಲ. ಈ ಕುರಿತು ನಮ್ಮ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಯಾವುದೇ ಅಧಿಕಾರಿಗಳು ಮುಂದಾಗಿಲ್ಲ ಎಂದು ಗ್ರಾಮದ ಬಸವರಾಜ ಬಡಿಗೇರ ಹೇಳಿದರು.

ಸರ್ಕಾರಿ ಪ್ರೌಢಶಾಲೆಯ ಮೈದಾನದಲ್ಲಿ ವಿದ್ಯುತ್ ಸಂಪರ್ಕವಿರುವ ಕೊಳವೆ ಬಾವಿಯ ಮೋಟರ್ ಸ್ಟಾರ್ಟರ್ ಅಳವಡಿಸಲಾಗಿದ್ದು, ಇದನ್ನು ತೆರವುಗೊಳಿಸುವದು ಅಥವಾ ಸುರಕ್ಷತೆಗೆ ಒತ್ತು ನೀಡಬೇಕಿದೆ. ಪಿಯು ಕಾಲೇಜು, ವಿದ್ಯಾರ್ಥಿಗಳ ಹಾಸ್ಟೆಲ್, ಸ್ಮಶಾನ ಭೂಮಿ, ಡಾ. ಬಿ.ಆರ್.ಅಂಬೇಡ್ಕರ್ ಭವನ, ಬೆಳೆಹಾನಿ ಪರಿಹಾರ ಹಾಗೂ ಗ್ರಾಮಕ್ಕೆ ಶುದ್ಧ ಕುಡಿಯುವ ನೀರಿನ ಘಟಕ ಸೇರಿದಂತೆ ಇತರ ಬೇಡಿಕೆಗಳ ಈಡೇರಿಕೆಗಾಗಿ ಈಗಾಗಲೇ ಮನವಿ ಸಲ್ಲಿಸಲಾಗಿದೆ ಎಂದು ಜಿ.ಪಂ. ಮಾಜಿ ಅಧ್ಯಕ್ಷ ಯಲ್ಲಪ್ಪ ಕುರಕುಂದಿ ‘ಪ್ರಜಾವಾಣಿ’ಗೆ ತಿಳಿಸಿದರು.

ಸಿದ್ಧತೆ: ಸಚಿವರ ಆಗಮನದ ಕಾರಣಕ್ಕೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯನ್ನು ಮದುವೆಯ ಮನೆಯಂತೆ ಸಿಂಗರಿಸಲಾಗಿದ್ದು, ಬಹುತೇಕ ಎಲ್ಲ ಕೋಣೆಗಳಿಗೂ ಸುಣ್ಣ ಬಣ್ಣಗಳನ್ನು ಬಳಿಯಲಾಗಿದೆ. ಮಹಾನ್ ನಾಯಕರ ಚಿತ್ರಗಳನ್ನು ಬಿಡಿಸುವುದರ ಜೊತೆಯಲ್ಲಿ ವಿವಿಧ ಉಕ್ತಿಗಳನ್ನು ಸಹ ಬರೆಯಲಾಗುತ್ತಿದೆ. ಕಳೆದ ಒಂದು ವಾರದಿಂದಲೂ ಈ ಕಾರ್ಯ ನಡೆದಿದೆ ಎಂದು ಶಾಲೆಯ ಮುಖ್ಯ ಶಿಕ್ಷಕ ಜ್ಞಾನದೇವ ಹೇಳಿದರು.

ಸುರಪುರ ಮತಕ್ಷೇತ್ರದ 20 ಫಲಾನುಭವಿಗಳಿಗೆ ಮಾಸಾಶನ ಹಾಗೂ 10 ಪಹಣಿ ತಿದ್ದುಪಡಿ, 35 ಭಾಗ್ಯಲಕ್ಷ್ಮಿ ಬಾಂಡ್ ಹಾಗೂ 30 ಜನರಿಗೆ ಆರ್.ಕೆ.ಬಂಢಾರಿ ಫೌಂಡೇಶನ್ ದಿಂದ ಕೃತಕ ಅಂಗಾಂಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ ಎಂದು ಸುರಪುರ ತಹಶೀಲ್ದಾರ್ ಸುಬ್ಬಣ್ಣ ಗುಡಿಬಂಡಿ ಮಾಹಿತಿ ನೀಡಿದರು.

ಸಚಿವರು ವಾಸ್ತವ್ಯ ಮಾಡಲಿರುವ ಶಾಲಾ ಕೋಣೆಗೆ ಹೊಂದಿಕೊಂಡಂತೆ ಹೈಟೆಕ್ ಶೌಚಾಲಯ ಕೂಡಾ ನಿರ್ಮಿಸಲಾಗಿದೆ. ಶಾಲಾ ಆವರಣದಲ್ಲಿ ಅರಣ್ಯ ಇಲಾಖೆಯಿಂದ ಸಸಿ ನೆಡುವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸ್ಥಳದಲ್ಲಿಯೇ ಹಾಜರಿದ್ದ ಹುಣಸಗಿ ಜಿಲ್ಲಾ ಪಂಚಾಯಿತಿ ಸದಸ್ಯ ಬಸವರಾಜಸ್ವಾಮಿ ಸ್ಥಾವರಮಠ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT