ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಡಿಸಿ ಕಚೇರಿವರೆಗೆ ಮೆರವಣಿಗೆ: ಹಾಸ್ಟೆಲ್ ಕಾರ್ಮಿಕರನ್ನು ಕಾಯಂಗೊಳಿಸಿ

Last Updated 1 ಫೆಬ್ರುವರಿ 2023, 5:26 IST
ಅಕ್ಷರ ಗಾತ್ರ

ಯಾದಗಿರಿ: ಹೊರಗುತ್ತಿಗೆ ಪದ್ಧತಿ ರದ್ದುಗೊಳಿಸಿ ಹಾಸ್ಟೆಲ್ ಕಾರ್ಮಿಕರನ್ನು ಕಾಯಂಗೊಳಿಸಲು ಹಾಗೂ ಶಾಸನಬದ್ಧ ಸೌಲಭ್ಯಗಳ ಜಾರಿಗಾಗಿ ಒತ್ತಾಯಿಸಿ ಎಐಯುಟಿಯುಸಿ ಸಂಯೋಜಿತ ರಾಜ್ಯ ಸಂಯುಕ್ತ ವಸತಿನಿಲಯ ಕಾರ್ಮಿಕರ ಸಂಘ ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಹಳೆ ಪ್ರವಾಸಿ ಮಂದಿರದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ನಂತರ ಜಿಲ್ಲಾಧಿಕಾರಿ ಕಚೇರಿ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ವಸತಿನಿಲಯ, ವಸತಿಶಾಲೆ, ಕಾಲೇ ಜು, ಆಶ್ರಮಶಾಲೆಗಳಲ್ಲಿ ಹಲವಾರು ವರ್ಷಗಳಿಂದ ಸೇವೆಸಲ್ಲಿಸುತ್ತಿರುವ ಡಿ ಗ್ರೂಪ್‌ನ ಅಡುಗೆಯವರು, ಅಡುಗೆ ಸಹಾಯಕರು, ಕಾವಲುಗಾರರನ್ನು ಕಾಯಂಗೊಳಿಸಬೇಕು ಎಂದು ಒತ್ತಾಯಿಸಿದರು.

ರಾಮಲಿಂಗಪ್ಪ ಬಿ.ಎನ್‌., ಮಾತನಾಡಿ, ‘ಹಾಸ್ಟೆಲ್‌ಗಳಲ್ಲಿ ವಿವಿಧ ವಯೋಮಾನದ ಲಕ್ಷಾಂತರ ಮಕ್ಕಳ ಉತ್ತಮ ವಿದ್ಯಾಭ್ಯಾಸಕ್ಕೆ ಪೂರಕವಾಗಿ, ಮಕ್ಕಳಿಗೆ ಊಟ, ವಸತಿ, ಸುರಕ್ಷತೆ ಸಹಿತ ಅವರಿಗೆ ಕಳೆದ 20 ಕ್ಕೂ ಅಧಿಕ ವರ್ಷಗಳಿಂದ ಹಾಸ್ಟೆಲ್ ಹೊರಗುತ್ತಿಗೆ ಕಾರ್ಮಿಕರು ಕನಿಷ್ಠ ಕೂಲಿ ಆಧಾರದ ಮೇಲೆಯೇ ಮಹತ್ವದ ಸೇವೆ ಒದಗಿಸುತ್ತಾ ಬಂದಿದ್ದಾರೆ. ಇವರಲ್ಲಿ ಬಹುಪಾಲು ಕಾರ್ಮಿಕರು ಮಹಿಳೆಯರೇ ಇದ್ದಾರೆ’ ಎಂದರು.

ಸರ್ಕಾರದ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಇದೇ ಹುದ್ದೆಯ ಕಾಯಂ ನೌಕರಿ ಕೊಡುವಷ್ಟು ವೇತನ ಸಹಿತ ಇತರ ಸೌಕರ್ಯಗಳನ್ನು ಹೊರಗುತ್ತಿಗೆ ಕಾರ್ಮಿಕರಿಗೆ ಕೊಡುತ್ತಿಲ್ಲ. ಇನ್ನೊಂದೆಡೆ ದಿನದಿಂದ ದಿನಕ್ಕೆ ಅಗತ್ಯವಸ್ತುಗಳ ಬೆಲೆ ಏರಿಕೆ ಸರ್ವೆಸಾಮಾನ್ಯವಾಗಿದೆ. ಎಲ್‌ಪಿಜಿ ಗ್ಯಾಸ್, ಪೆಟ್ರೋಲ್, ಅಡುಗೆ ಎಣ್ಣೆ, ಮಕ್ಕಳ ಶಿಕ್ಷಣ, ಮನೆ ಬಾಡಿಗೆ, ಆರೋಗ್ಯ ವೆಚ್ಚಗಳನ್ನು ನಿಭಾಯಿಸಲು ಕಾರ್ಮಿಕರಿಗೆ ಸಾಧ್ಯವಾಗುತ್ತಿಲ್ಲ ಎಂದರು.

25 ವರ್ಷಗಳಿಂದ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಈ ಕಾರ್ಮಿಕರಿಗೆ ಸೇವಾ ಭದ್ರತೆ, ಪಿಂಚಣಿ ಇಲ್ಲ. ಸರ್ಕಾರದ ಯಾವ ಸೌಲಭ್ಯಗಳು ಸಿಗುತ್ತಿಲ್ಲ. ಆದ್ದರಿಂದ ಆಧುನಿಕ ಜೀತಪದ್ದತಿಯಂತಿರುವ ಈ ಹೊರಗುತ್ತಿಗೆ ಪದ್ಧತಿಯನ್ನು ಕೈ ಬಿಟ್ಟು, ಎಲ್ಲಾ ಹೊರಗುತ್ತಿಗೆ ಹಾಸ್ಟೆಲ್ ಕಾರ್ಮಿಕರನ್ನು ಕಾಯಂ ಮಾಡಬೇಕೆಂಬುದು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಸಂಘದ ಜಿಲ್ಲಾಧ್ಯಕ್ಷ ಶರಣಪ್ಪ ಜಿ ತೆಳಿಗೇರಿಕರ್ ಮಾತನಾಡಿ, ‘ಕಾರ್ಮಿಕ ಇಲಾಖೆಯು ಕಡ್ಡಾಯಗೊಳಿಸಿರುವ ಕನಿಷ್ಠ ವೇತನ, ಕಾನೂನು ಬದ್ಧ ವಾರದ ರಜೆ, ರಾಷ್ಟ್ರೀಯ ಹಬ್ಬಗಳ ರಜೆಗಳು, ಇಪಿಎಫ್, ಇಎಸ್‌ಐ ಸೌಲಭ್ಯಗಳು ಕಾರ್ಮಿಕರಿಗೆ ಸಿಗುವಂತಾಗಬೇಕು. ಈ ಬಗ್ಗೆ ಇತ್ತಿಚೆಗೆ ಸರ್ಕಾರ ಆದೇಶ ಹೊರಡಿಸಿದ್ದು, ಕಾರ್ಮಿಕರ ಸತತ ಹೋರಾಟಕ್ಕೆ ಸಿಕ್ಕ ಜಯವಾಗಿದೆ. ಇಷ್ಟು ವರ್ಷ ದುಡಿದ ನಮ್ಮನ್ನು ಕಾಯಂಗೊಳಿಸಬೇಕು
ಎಂದರು.

ಈ ಸಂದರ್ಭದಲ್ಲಿ ಶ್ರೀಕಾಂತ ಚಿಕ್ಕಮೇಟಿ, ಸಿದ್ದಪ್ಪ, ಭಾಗಪ್ಪ, ನರಸಪ್ಪ, ಕುಶ, ಶ್ಯಾಮಪ್ಪ, ನಾರಾಯಣ, ಅಂಜನ್, ಜಗದೇವಿ, ಮರಳಮ್ಮ, ಸುಮಂಗಲಾ, ಬನ್ನಮ್ಮ, ಪದ್ಮಾ, ಲಕ್ಷ್ಮೀ, ಪಾರ್ವತಿ, ನಾಗಮ್ಮ, ಸರಿತಾ, ಗೌರಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT