ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಯು ಪೂರಕ ಪರೀಕ್ಷೆ ಸುಸೂತ್ರವಾಗಿ ನಡೆಸಿ

7ರಿಂದ 19ರವರೆಗೆ ನಡೆಯಲಿರುವ ಪರೀಕ್ಷೆ, ಕೊರೊನಾ ಜಾಗೃತಿ ವಹಿಸಿ: ಎಡಿಸಿ
Last Updated 4 ಸೆಪ್ಟೆಂಬರ್ 2020, 16:29 IST
ಅಕ್ಷರ ಗಾತ್ರ

ಯಾದಗಿರಿ: ದ್ವಿತೀಯ ಪಿಯು ಪೂರಕ ಪರೀಕ್ಷೆಗಳು ಸೆಪ್ಟೆಂಬರ್ 7ರಿಂದ 19ರವರೆಗೆ ಬೆಳಿಗ್ಗೆ 9ರಿಂದ ಮಧ್ಯಾಹ್ನ 2 ಗಂಟೆಯ ವರೆಗೆ 8 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಯಶಸ್ವಿಯಾಗಿ ನಿರ್ವಹಿಸುವಂತೆಹೆಚ್ಚುವರಿಜಿಲ್ಲಾಧಿಕಾರಿ ಪ್ರಕಾಶ ಜಿ. ರಜಪೂತ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ದ್ವಿತೀಯ ಪಿಯು ಪೂರಕ ಪರೀಕ್ಷೆಯ ಪೂರ್ವಸಿದ್ದತಾ ಸಭೆಯಲ್ಲಿ ಅವರುಮಾತನಾಡಿದರು.

ಈ ಬಾರಿ ಕೋವಿಡ್-19 ಸೋಂಕಿನ ಹಿನ್ನೆಲೆಯಲ್ಲಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕಿನ ಲಕ್ಷಣಗಳು ಕಂಡುಬಂದರೆ ಅವರಿಗೆ ಪ್ರತ್ಯೇಕ ಕೊಠಡಿಗಳ ವ್ಯವಸ್ಥೆ ಮಾಡಬೇಕು. ಆದ ಕಾರಣ ಪ್ರತಿಯೊಂದು ಪರೀಕ್ಷಾ ಕೇಂದ್ರಗಳಲ್ಲಿ ಹೆಚ್ಚುವರಿಯಾಗಿ ಎರಡು ಕೊಠಡಿಗಳನ್ನು ಕಾಯ್ದಿರಿಸುವಂತೆ ಹೇಳಿದ ಅವರು ಪರೀಕ್ಷಾ ಕೇಂದ್ರದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯು ಕಡ್ಡಾಯವಾಗಿ ಮಾಸ್ಕ್‌ಧರಿಸುವಂತೆ ನೋಡಿಕೊಳ್ಳಬೇಕು. ಅಲ್ಲದೆ ಸ್ಯಾನಿಟೈಜರ್ ಹಾಗೂ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಮಾಡಿಕೊಳ್ಳುವಂತೆ ಸೂಚಿಸಿದರು.

ಪರೀಕ್ಷಾಕೇಂದ್ರಗಳಲ್ಲಿ ವಿದ್ಯಾರ್ಥಿ, ಸಿಬ್ಬಂದಿಯವರಾಗಲೀ ಮೊಬೈಲ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಮುಖ್ಯ ಅಧೀಕ್ಷಕರು ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಪರೀಕ್ಷಾ ಕೇಂದ್ರಗಳಲ್ಲಿ ವಾಟರ್ ಬಾಯ್‍ಗಳ ನೇಮಕ ರದ್ದುಪಡಿಸಿದ್ದು, ಕುಡಿಯುವ ನೀರಿನ ವ್ಯವಸ್ಥೆಯನ್ನು 2, 3 ಕೊಠಡಿಗಳ ಅಂತರದಲ್ಲಿ ಕೊಠಡಿಯ ಹೊರಗೆ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.

ಪರೀಕ್ಷ ಕಾರ್ಯಗಳಿಗೆ ನೇಮಕಗೊಂಡ ಅಧಿಕಾರಿಗಳು, ಸಿಬ್ಬಂದಿಗಳು ಕರ್ತವ್ಯಕ್ಕೆ ಗೈರು ಹಾಜರಾಗಬಾರದು, ಗೈರು ಹಾಜರಿಯನ್ನು ಗಂಭೀರವಾಗಿ ಪರಿಗಣಿಸಿ ಶಿಸ್ತು ಕ್ರಮದ ಪ್ರಕ್ರಿಯೆಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಪದವಿ ಪೂರ್ವ ಕಾಲೇಜು ಶಿಕ್ಷಣ ಇಲಾಖೆಯ ಉಪನಿರ್ದೇಶಕ ಚಂದ್ರಕಾಂತ ಹಿಳ್ಳಿ, ಯಾದಗಿರಿ ತಹಶೀಲ್ದಾರ್‌ಚನ್ನಮಲ್ಲಪ್ಪ ಘಂಟಿ, ಸುರಪುರ ತಹಶೀಲ್ದಾರ್‌ಸೋಫಿಯಾ ಸುಲ್ತಾನ, ಪ್ರಾದೇಶಿಕ ಸಾರಿಗೆ ಅಧಿಕಾರಿ ವಂಸತ್‌ ಚವ್ಹಾಣ್‌, ಜಿಲ್ಲಾ ಖಜಾನೆ ಅಧಿಕಾರಿ ಮಾಳಿಂಗರಾಯ, ಶಹಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಗೌಡ ಪಾಟೀಲ, ಸಿಪಿಐ ಶರಣಗೌಡ ಸೇರಿದಂತೆ ಪ್ರಾಂಶುಪಾಲರು ಇದ್ದರು.

ಪರೀಕ್ಷಾ ಕೇಂದ್ರದ ಸುತ್ತಲೂ 144 ನಿಷೇಧಾಜ್ಞೆ

ಯಾದಗಿರಿ: ದ್ವಿತೀಯ ಪಿಯು ಪೂರಕ ಪರೀಕ್ಷೆಗಳು ಸುಸೂತ್ರವಾಗಿ ನಡೆಸುವ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರದ 200 ಮೀಟರ್ ವ್ಯಾಪ್ತಿಯಲ್ಲಿ 144 ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ ಆರ್., ಆದೇಶಿಸಿದ್ದಾರೆ.

8 ಪರೀಕ್ಷಾ ಕೇಂದ್ರಗಳಾದ ಯಾದಗಿರಿ ಸರ್ಕಾರಿ ಪಿಯು ಕಾಲೇಜು, ನ್ಯೂ ಕನ್ನಡ ಸಂಯುಕ್ತ ಪಿಯು ಕಾಲೇಜು, ಯಾದಗಿರಿ ಸರ್ಕಾರಿ ಪಿಯು ಕಾಲೇಜು (ಬಾಲಕಿಯರ), ಗುರುಮಠಕಲ್ ತಾಲ್ಲೂಕಿನ ಸರ್ಕಾರಿ ಪಿಯು ಕಾಲೇಜು (ಬಾಲಕರ), ಶಹಾಪುರ ತಾಲ್ಲೂಕಿನ ಸರ್ಕಾರಿ ಪಿಯು ಕಾಲೇಜು, ಶಹಾಪುರ ತಾಲ್ಲೂಕಿನ ಸರ್ಕಾರಿ ಪಿಯು ಕಾಲೇಜು (ಬಾಲಕಿಯರ), ಸುರಪುರ ತಾಲ್ಲೂಕಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಸುರಪುರ ತಾಲ್ಲೂಕಿನ ಪ್ರಭು ಪಿ.ಯು ಕಾಲೇಜು ಪರೀಕ್ಷಾ ಕೇಂದ್ರಗಳ ಸುತ್ತಲೂ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಪರೀಕ್ಷಾ ಕೇಂದ್ರದ ಸುತ್ತಲೂ ಯಾವುದೇ ರೀತಿಯ ಎಸ್‌ಟಿಡಿ, ಮೊಬೈಲ್, ಪೇಜರ್, ಜಿರಾಕ್ಸ್, ಟೈಪಿಂಗ್ ಹಾಗೂ ಪುಸ್ತಕ ಮಳಿಗೆಗಳಿಗೆ ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.

***

ಜಿಲ್ಲೆಯ 8 ಪರೀಕ್ಷಾ ಕೇಂದ್ರಗಳಲ್ಲಿ 3,584 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಿದ್ದು, ಆನ್‍ಲೈನ್ ಮೂಲಕ ಪ್ರವೇಶ ಪತ್ರಗಳನ್ನು ಎಲ್ಲಾ ಕಾಲೇಜುಗಳಿಗೆ ವಿತರಿಸಲಾಗಿದೆ

-ಪ್ರಕಾಶ ಜಿ. ರಜಪೂತ,ಹೆಚ್ಚುವರಿ ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT