ಮಂಗಳವಾರ, ಜೂನ್ 28, 2022
25 °C

ಯಾದಗಿರಿ | ಸಂಸತ್ತಿನಲ್ಲಿ ಸುರಪುರದ ಕೀರ್ತಿ ಹೆಚ್ಚಿಸಿದ್ದ ರಾಜಾ ರಂಗಪ್ಪ ನಾಯಕ

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: 18 ತಿಂಗಳ ಸಂಸದರಾಗಿದ್ದ ರಾಜಾ ರಂಗಪ್ಪ ನಾಯಕ ಅವರು ಅನಾರೋಗ್ಯದಿಂದ ಭಾನುವಾರ ತಡರಾತ್ರಿ ನಿಧನರಾಗಿದ್ದು, ಸಂಸದರಾಗಿದ್ದಾಗ ಸಂಸತ್ತಿನಲ್ಲಿ ಸುರಪುರ ಕೀರ್ತಿ ಹೆಚ್ಚಿಸಿದ್ದರು.

ಮೇ 24, 1959 ರಾಜಾ ರಂಗಪ್ಪ ನಾಯಕ ಜನಿಸಿದ್ದರು. ಬಹುತೇಕ ಶಿಕ್ಷಣವನ್ನು ಹೈದರಾಬಾದ್‌ನಲ್ಲಿ ಪೂರೈಸಿದ್ದರು. ಹಿಂದಿ ಮತ್ತು ಉರ್ದು ಭಾಷೆಯಲ್ಲಿ ಹಿಡಿತ ಸಾಧಿಸಿದ್ದರು.  1987 ರಲ್ಲಿ ಮೊದಲ ಬಾರಿಗೆ ರಾಜಕೀಯ ಪ್ರವೇಶ ಮಾಡಿದ್ದರು. 1996ರಲ್ಲಿ 11ನೇ ಲೋಕಸಭೆಗೆ ಅಂದಿನ ಜನತಾದಳ ಪಕ್ಷದಿಂದ ಆಯ್ಕೆಯಾಗಿದ್ದರು.

ಮಂಡಲ ಪ್ರಧಾನರಾಗಿ ರಾಜಕೀಯ ಪ್ರವೇಶಿಸಿದ ಅವರು ಹಂತಹಂತವಾಗಿ ರಾಜಕೀಯ ಮೆಟ್ಟಿಲುಗಳನ್ನು ಏರಿದ್ದರು. 1987ರಿಂದ 1992ರ ವರೆಗೆ ಸ್ಥಳೀಯ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದರು. ದೇವೇಗೌಡರಿಗೆ ಆಪ್ತರಾಗಿದ್ದರಿಂದ ಅಂದಿನ ಜನತಾ ದಳದಲ್ಲಿ ಲೋಕಸಭೆಗೆ ಸ್ಪರ್ಧಿಸಿದ್ದರು.

1996ರಲ್ಲಿ ರಾಯಚೂರು ಲೋಕಸಭಾ ಕ್ಷೇತ್ರದಿಂದ ಜನತಾ ದಳದಿಂದ ಸ್ಪರ್ಧಿಸಿ ಸಂಸತ್ತಿನ ಮೆಟ್ಟಿಲು ಹತ್ತಿದ್ದರು. ಇದಾದ ನಂತರ ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಆದರೆ, ಈ ಚುನಾವಣೆಯಲ್ಲಿ ಪರಾಭವಗೊಂಡರು. ಹಳ್ಳಿಯಿಂದ ದಿಲ್ಲಿಯ ತನಕ ಅಧಿಕಾರ ಅನುಭವಿಸಿದ್ದಾರೆ.

ಸುರಪುರದ ರಾಜಕಾರಣದಲ್ಲಿ ತಮ್ಮದೇ ಆದ ಅಸ್ತಿತ್ವವನ್ನು ಹೊಂದಿದ್ದರು. ಅಣ್ಣ ರಾಜಾ ವೆಂಕಟಪ್ಪ ನಾಯಕರ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸುತ್ತಿದ್ದರು.

ಹಲವಾರು ವರ್ಷ ರಾಜಕೀಯದಿಂದ ದೂರ ಉಳಿದಿದ್ದರಿಂದ ರಾಜಕೀಯ ವನವಾಸ ಅನುಭವಿಸಿದ್ದರು. ಕೆಲ ವರ್ಷಗಳ ಹಿಂದೆ ಪತ್ನಿ ತೀರಿಕೊಂಡಿದ್ದರು. ಇದು ಅವರನ್ನು ಬಹಳ ಚಿಂತೆಗೆ ದೂಡಿತ್ತು. ಅವರ ನೆನಪಿನಲ್ಲೇ ಕಾಲ ಕಳೆಯುತ್ತಿದ್ದರು.

ರಾಯಚೂರು ಕ್ಷೇತ್ರದಿಂದ ಆಯ್ಕೆಯಾದ ನಂತರ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದರು.

ಇವರ ತಂದೆ ದಿವಂಗತ ರಾಜಾ ಕುಮಾರನಾಯಕ ಮೂರು ಬಾರಿ ಸುರಪುರದ ಶಾಸಕರಾಗಿದ್ದರು. ಹಿರಿಯ ಸಹೋದರ ರಾಜಾ ವೆಂಕಟಪ್ಪನಾಯಕ ಅವರೂ ಮೂರು ಬಾರಿ ಶಾಸಕರಾಗಿದ್ದರು. ಕಿರಿಯ ಸಹೋದರ ರಾಜಾ ಮೌನೇಶ್ವರ ನಾಯಕ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾಗಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು