ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಿ: ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ

ಅಗತ್ಯ ಮಾಹಿತಿ ನೀಡಿ ಸಹಕರಿಸಲು ರಾಜಕೀಯ ಪಕ್ಷಗಳಿಗೆ ಕೋರಿಕೆ
Last Updated 1 ಡಿಸೆಂಬರ್ 2020, 4:04 IST
ಅಕ್ಷರ ಗಾತ್ರ

ಯಾದಗಿರಿ: ಅರ್ಹತಾ ಮತದಾರರ ಹೆಸರನ್ನು ಪಟ್ಟಿಗೆ ಸೇರಿಸಲು ಮತ್ತು ಅನರ್ಹತೆ ಹೊಂದಿದ ಮತದಾರರ ಪಟ್ಟಿಯಿಂದ ಕೈ ಬಿಡಲು ಮಟ್ಟಗಟ್ಟೆ ಮಟ್ಟದ ಅಧಿಕಾರಿ (ಬಿಎಲ್‌ಒ) ಗಳು ಅಗತ್ಯ ಕ್ರಮ ವಹಿಸಲಿದ್ದು, ರಾಜಕೀಯ ಪಕ್ಷಗಳು ಅಗತ್ಯ ಮಾಹಿತಿ ನೀಡಿ ಸಹಕರಿಸುವಂತೆ ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ ಆರ್‌. ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಕರಡು ಮತದಾರರ ಪಟ್ಟಿ ಪರಿಷ್ಕರಣೆ ಹಿನ್ನೆಲೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಮಾತನಾಡಿದರು.

ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಕರಡು ಮತದಾರರ ಪಟ್ಟಿಯನ್ನು ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ಹಾಗೂ ತಹಶೀಲ್ದಾರರ ಕಚೇರಿಗಳಲ್ಲಿ ಮತ್ತು ಜಿಲ್ಲೆಯ ಎಲ್ಲಾ ಬಿಎಲ್‌ಒ ಕಚೇರಿಗಳಲ್ಲಿ ಕೂಡ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ ಎಂದು ತಿಳಿಸಿದರು.

ಮೃತಪಟ್ಟವರು, ಬಾಡಿಗೆ ಮನೆಯಿಂದ ಬಿಟ್ಟು ಹೋದವರು, ಎರಡು ಕಡೆ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿ ಕೊಂಡಿರುವವರು, ಮುಂತಾದವರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಬೇಕಾಗಿದೆ. 2021ರ ಜನವರಿ 1ಕ್ಕೆ 18 ವರ್ಷ ಪೂರೈಸುವವರು ಹೆಸರು ನೋಂದಾಯಿಸಿಕೊಳ್ಳಲು ಅವಕಾಶವಿದೆ ಎಂದು ಹೇಳಿದರು.

ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಸಭೆಯಲ್ಲಿ ಇದ್ದರು.

***

ಕರಡು ಮತದಾರರ ಪಟ್ಟಿ ಪ್ರಕಟ

ಯಾದಗಿರಿ: ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಸುರಪುರ, ಶಹಾಪುರ, ಯಾದಗಿರಿ ಹಾಗೂ ಗುರುಮಠಕಲ್ ವಿಧಾನಸಭಾ ಕ್ಷೇತ್ರಗಳ ಕರಡು ಮತದಾರರ ಪಟ್ಟಿಯನ್ನು ನವೆಂಬರ್ 18ರಂದು ಜಿಲ್ಲಾಧಿಕಾರಿ ಕಚೇರಿ, ಉಪ ವಿಭಾಗಾಧಿಕಾರಿ ಕಚೇರಿ ಹಾಗೂ ಯಾದಗಿರಿ, ಶಹಾಪುರ, ಸುರಪುರ ತಹಶೀಲ್ದಾರರ ಕಚೇರಿಗಳಲ್ಲಿ ಹಾಗೂ ಜಿಲ್ಲೆಯ ಎಲ್ಲಾ ಮತಗಟ್ಟೆ ಮಟ್ಟದ ಅಧಿಕಾರಿಗಳ ಕಚೇರಿಗಳಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ.

ಅದರೊಂದಿಗೆ ಕರಡು ಮತದಾರರ ಪಟ್ಟಿಯನ್ನು (http://ceokarnataka.kar.nic.in) ಹಾಗೂ ಜಿಲ್ಲೆಯ (yadgir.nic.in) ಅಂತರ್ಜಾಲದಲ್ಲಿಯೂ ಪರಿಶೀಲಿಸಬಹುದಾಗಿದೆ.

ಕರಡು ಮತದಾರರ ಪಟ್ಟಿಯಲ್ಲಿ ಸಾರ್ವಜನಿಕರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಪ್ರಕಟವಾದ ಬಗ್ಗೆ ಪರಿಶೀಲಿಸಿಕೊಳ್ಳಬೇಕು. ಒಂದು ವೇಳೆ ಅರ್ಹತಾ ದಿನಾಂಕಕ್ಕೆ ಸಂಬಂಧಿಸಿದಂತೆ ಯುವಕರು/ಯುವತಿಯರು ಅಥವಾ ಸಾರ್ವಜನಿಕರು ಹೊಸದಾಗಿ ಹೆಸರು ಸೇರ್ಪಡೆಗಾಗಿ ನಮೂನೆ-6ರಲ್ಲಿ ಅರ್ಜಿ ಸಲ್ಲಿಸಬೇಕು. ಮತದಾರರ ಪಟ್ಟಿಯಲ್ಲಿ ಹೆಸರಿದ್ದು ಅವರುಗಳು ಸ್ಥಳಾಂತರ ಹೊಂದಿದ್ದಲ್ಲಿ/ಮೃತ ಹೊಂದಿದ್ದಲ್ಲಿ/ಹೆಸರು ಪುನರಾವರ್ತನೆಯಾಗಿದ್ದಲ್ಲಿ ಅವರುಗಳ ಹೆಸರನ್ನು ತೆಗೆದು ಹಾಕಲು ನಮೂನೆ-7ರಲ್ಲಿ, ಹೆಸರು ಇತ್ಯಾದಿ ತಿದ್ದುಪಡಿ ಬಯಸಿದ್ದಲ್ಲಿ ನಮೂನೆ-8ರಲ್ಲಿ ಮತ್ತು ಹೆಸರು ವರ್ಗಾವಣೆ ಮಾಡಬೇಕಾದಲ್ಲಿ ನಮೂನೆ-8ಎ ರಲ್ಲಿ ಸೂಕ್ತ ದಾಖಲೆಯೊಂದಿಗೆ ಅರ್ಜಿಗಳನ್ನು ಸಂಬಂಧಪಟ್ಟ ಮತಗಟ್ಟೆ ಮಟ್ಟ ಅಧಿಕಾರಿ (ಬಿಎಲ್‌ಒ)ರವರಿಗೆ ದಿನಾಂಕ ಡಿಸೆಂಬರ್ 17ರ ವರೆಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ.

ಈ ಅವಧಿಯಲ್ಲಿ ಸ್ವೀಕರಿಸಿದ ಹಕ್ಕು ಮತ್ತು ಆಕ್ಷೇಪಣೆಯ ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ 2021ರ ಜನವರಿ 7ರಂದು ಕಾಲೋಚಿತಗೊಳಿಸಲಾಗುವುದು. ನಂತರ ಪುರವಣಿ ಪಟ್ಟಿಯನ್ನು 2021ರ ಜನವರಿ14ರಂದು ತಯಾರಿಸಿ ಅಂತಿಮ ಮತದಾರರ ಪಟ್ಟಿಯನ್ನು 2021ರ ಜನವರಿ 18 ರಂದು ಪ್ರಕಟಿಸಲಾಗುವುದು.

ವಿಶೇಷ ನೋಂದಣಿ ಕಾರ್ಯಕ್ರಮ:

ಡಿಸೆಂಬರ್ 6 (ಭಾನುವಾರ) ಮತ್ತು ಡಿಸೆಂಬರ್ 13 (ಭಾನುವಾರ)ಗಳಂದು ಎಲ್ಲಾ ಮತಗಟ್ಟೆ ಕೇಂದ್ರಗಳಲ್ಲಿ ವಿಶೇಷ ನೋಂದಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಕರಡು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗದೇ ಇರುವ ಅರ್ಹ ನಾಗರಿಕರು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗಾಗಿ ನಮೂನೆ-6 ರಲ್ಲಿ ಸಂಬಂಧ ಪಟ್ಟ ಬಿಎಲ್‌ಒ ರವರಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಕೋರಲಾಗಿದೆ.

ಹೊಸದಾಗಿ ನೋಂದಣಿಯಾದ ಯುವ ಮತದಾರರು ದಿನಾಂಕ 2021ರ ಜನವರಿ 25ರಂದು ನಡೆಯುವ ರಾಷ್ಟ್ರೀಯ ಮತದಾರರ ದಿನಾಚರಣೆಯ ದಿನದಂದು ಭಾವಚಿತ್ರವಿರುವ ಗುರುತಿನ ಚೀಟಿ (ಎಪಿಕ್ ಕಾರ್ಡ್‌) ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ ಆರ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

***

ಬೂತ್ ಮಟ್ಟದ ಅಧಿಕಾರಿಗಳಿಂದ ಅಥವಾ ಮತದಾರರ ಹೆಸರು ನೋಂದಣಾಧಿಕಾರಿಗಳ ಕಚೇರಿಯಲ್ಲಿ ಅರ್ಜಿ ಪಡೆದು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಿಕೊಳ್ಳಬಹುದು

- ಡಾ. ರಾಗಪ್ರಿಯಾ ಆರ್‌., ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT