ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನದಲ್ಲಿ ಎಲ್ಲರ ಆಶೋತ್ತರ ಈಡೇರಿಕೆ: ಸಚಿವ ರಾಜಶೇಖರ ಬಿ.ಪಾಟೀಲ್

ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ
Last Updated 26 ಜನವರಿ 2019, 13:11 IST
ಅಕ್ಷರ ಗಾತ್ರ

ಯಾದಗಿರಿ: ‘ಭಾರತ ದೇಶ ವಿಭಿನ್ನ ಭಾಷೆ, ಧರ್ಮ, ಜಾತಿ ಮತ್ತು ಸಂಸ್ಕೃತಿಯ ನೆಲೆಯಾಗಿದ್ದು, ಜನರ ಆಶೋತ್ತರಗಳು ಕೂಡ ವಿಭಿನ್ನವಾಗಿವೆ. ಎಲ್ಲಾ ವರ್ಗಗಳ ಜನರ ಆಶೋತ್ತರಗಳ ಈಡೇರಿಕೆಗೆ ನಮ್ಮ ಸಂವಿಧಾನ ಅವಕಾಶ ಮಾಡಿಕೊಟ್ಟಿದೆ’ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ರಾಜಶೇಖರ ಬಿ.ಪಾಟೀಲ್ ಹೇಳಿದರು.

ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಜಿಲ್ಲಾಡಳಿತ ಹಮ್ಮಿಕೊಂಡಿದ್ದ 70ನೇ ಗಣರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

‘ಸರ್ವರಿಗೂ ಸಮಾನತೆ ಕಲ್ಪಿಸಿದ ಸಂವಿಧಾನವನ್ನು ಕೊಡುಗೆಯಾಗಿ ನೀಡಿರುವ ಡಾ.ಅಂಬೇಡ್ಕರ್ ಆದಿಯಾಗಿ ಎಲ್ಲಾ ಮುತ್ಸದ್ಧಿ ತಜ್ಞರ ಆಶಯಗಳು ವಿಫಲಗೊಳ್ಳಲು ಬಿಡದೆ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಪರಿಕಲ್ಪನೆಗಳನ್ನು ಪೂರ್ಣ ಪ್ರಮಾಣದಲ್ಲಿ ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಸರ್ವರೂ ಸನ್ನದ್ಧರಾಗಿ ಶ್ರಮಿಸಬೇಕಾಗಿದೆ’ ಎಂದರು.

‘ನೂತನ ಜಿಲ್ಲೆಯಾದ ಯಾದಗಿರಿಯಲ್ಲಿ ಉತ್ತಮ ಅಭಿವೃದ್ಧಿಯ ಕಾರ್ಯಗಳು ನಡೆದಿವೆ. ವಸತಿ, ರಸ್ತೆ, ಚರಂಡಿ, ಕುಡಿಯುವ ನೀರು, ವಿದ್ಯುದ್ದೀಪ, ಶಾಲಾ ಕಟ್ಟಡ ಹೀಗೆ ಮುಂತಾದವುಗಳ ನಿರ್ಮಾಣದಿಂದ ಜಿಲ್ಲೆ ಪ್ರಗತಿ ಪಥದಲ್ಲಿ ಸಾಗಿದೆ’ ಎಂದು ಹೇಳಿದರು.

‘ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಶೂನ್ಯ ಬಡ್ಡಿದರದಲ್ಲಿ ಅಲ್ಪಾವಧಿ ಬೆಳೆ ಸಾಲ ವಿತರಿಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ವಸತಿ ಯೋಜನೆಯಡಿ ಶೇ100 ರಷ್ಟು ಸಾಧನೆ ಮಾಡಿ ಮನೆಗಳ ನಿರ್ಮಾಣದಲ್ಲಿ ಜಿಲ್ಲೆ ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ. ಜಿಲ್ಲೆಯ ಜನರು ಶೌಚಾಲಯಗಳನ್ನು ಬಳಕೆ ಮಾಡಬೇಕು’ ಎಂದು ಕೋರಿದರು.

‘ಜಿಲ್ಲೆಯಲ್ಲಿ ಮಳೆ ಅಭಾವ ಪರಿಸ್ಥಿತಿ ಇರುವುದರಿಂದ ಕುಡಿಯುವ ನೀರಿನ ಸಮಸ್ಯೆ ಅಲ್ಲಲ್ಲಿ ತಲೆದೂರಿದೆ. ಸರ್ಕಾರವು ಅಗತ್ಯ ಅನುದಾನವನ್ನು ಒದಗಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳು ತ್ವರಿತಗತಿಯಲ್ಲಿ ಪರಿಹಾರವನ್ನು ಒದಗಿಸುತ್ತಿದ್ದಾರೆ. ಈಗಾಗಲೇ ಸುರಪುರ ಮತ್ತು ಶಹಾಪುರ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ’ ಎಂದು ಹೇಳಿದರು.

‘ರಾಜ್ಯ ಸರ್ಕಾರದ ನಗರ ವಸತಿ ಯೋಜನೆಗಳ ಪ್ರಗತಿ ರಾಜ್ಯದಲ್ಲಿ ಜಿಲ್ಲೆ 6ನೇ ಸ್ಥಾನದಲ್ಲಿದೆ. ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಜಿಲ್ಲೆಯ ಮೂಲಭೂತ ಸೌಕರ್ಯ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಹಲವು ಕಾಮಗಾರಿಗಳು ಪ್ರಗತಿಯಲ್ಲಿವೆ’ ಎಂದು ಮಾಹಿತಿ ನೀಡಿದರು.

‘ಶಹಾಪುರ ತಾಲ್ಲೂಕಿನ ಮುಡಬೂಳ ಗ್ರಾಮದಲ್ಲಿ ಮತ್ತು ಶಹಾಪುರ ಪಟ್ಟಣದ ಹಳೆ ಸಗರದಲ್ಲಿ ಅಲೆಮಾರಿ ಜನಾಂಗದ ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡಲು ಪ್ರತಿ ಗ್ರಾಮಕ್ಕೆ ಎರಡು ಎಕರೆಯಂತೆ ಒಟ್ಟು 4 ಎಕರೆ ಜಮೀನನ್ನು ಮಂಜೂರು ಮಾಡಲಾಗಿದೆ. ಸುರಪುರ ತಾಲ್ಲೂಕಿನ 60 ಗೊಲ್ಲ ಅಲೆಮಾರಿ ಫಲಾನುಭವಿಗಳನ್ನು ಮತ್ತು ದೇವರಾಜ ಅರಸು ವಸತಿ ಯೋಜನೆಯಡಿಯಲ್ಲಿ 593 ಫಲಾನುಭವಿಗಳನ್ನು ಆಯ್ಕೆ ಮಾಡಿ ಮನೆಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದರು.

‘393 ನ್ಯಾಯಬೆಲೆ ಅಂಗಡಿಗಳಲ್ಲಿ ಪಾಸ್ ಶಾಪ್, ಉಳಿದ ನ್ಯಾಯಬೆಲೆ ಅಂಗಡಿಗಳಿಗೆ ನಾನ್ ಪಾಸ್ ಶಾಪ್‌ಗಳಲ್ಲಿ ಚೆಕ್ ಲಿಸ್ಟ್ ಮೂಲಕ ಆಹಾರಧಾನ್ಯ ವಿತರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಅಕ್ರಮ ಪಡಿತರ ದುರುಪಯೋಗ ತಡೆಗಟ್ಟಲು ಪಡಿತರ ಚೀಟಿದಾರರಿಗೆ ಆಧಾರ್ ಜೋಡಣೆ ಮಾಡುವ ಪ್ರಗತಿಯಲ್ಲಿದೆ’ ಎಂದು ವಿವರಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರಾಜಶೇಖರಗೌಡ ಪಾಟೀಲ್ ವಜ್ಜಲ್, ಶಾಸಕರಾದ ವೆಂಕಟರಡ್ಡಿಗೌಡ ಮುದ್ನಾಳ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಗಿರಿಜಮ್ಮ ಸದಾಶಿವಪ್ಪ, ಜಿಲ್ಲಾಧಿಕಾರಿಎಂ.ಕೂರ್ಮಾ ರಾವ್, ಸಿಇಒ ಕಾರ್ಯನಿರ್ವಾಹಕ ಅಧಿಕಾರಿ ಕವಿತಾ ಎಸ್.ಮನ್ನಿಕೇರಿ, ಎಸ್‌ಪಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಇದ್ದರು.


ವಿವಿಧ ಸಾಧಕರಿಗೆ ಸನ್ಮಾನ

ಯಾದಗಿರಿ: ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ನಡೆದ 70ನೇ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 6 ಜನ ಸಾಧಕರನ್ನು ಜಿಲ್ಲಾ ಉಸ್ತುವಾರಿ ಸಚಿವ ರಾಜಶೇಖರ ಬಿ.ಪಾಟೀಲ್ ಸನ್ಮಾನಿಸಿದರು.

ಬಸಣ್ಣ ಕಂಚಿಗಾರ ಕೊಡೇಕಲ್ (ಶಿಲ್ಪಕಲೆ), ಚಂದಪ್ಪ ಗೋಗಿಪೇಟ (ಕ್ಲಾರಿಯೋನೆಟ್), ಮಹಾಂತೇಶ ವಜ್ಜಲ್ (ಕ್ರೀಡೆ), ವಿ.ಎನ್.ವೆಂಕಟೇಶ ಯಾದಗಿರಿ (ಸಾಹಿತ್ಯ), ಬಸಣ್ಣ ಗುರಿಕಾರ ಕಕ್ಕೇರಾ (ಹಿಂದೂಸ್ತಾನಿ ಸಂಗೀತ), ನೀಲಕಂಠ ಎಸ್.ಪರಡ್ಡಿ ಗಾಜರಕೋಟ (ಕ್ರೀಡೆ) ಅವರನ್ನು ಸನ್ಮಾನಿಸಲಾಯಿತು.

ಸರ್ವೋತ್ತಮ ಸೇವಾ ಪ್ರಶಸ್ತಿ:
ಅತ್ಯುನ್ನತ ಸೇವೆ, ಸಾಧನೆಗೈದ 6 ಜನ ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ ಹಾಗೂ ₹10 ಸಾವಿರ ನಗದು ಪುರಸ್ಕಾರ ನೀಡಲಾಯಿತು.

ಜವಳಿ ಮತ್ತು ಕೈಮಗ್ಗ ಇಲಾಖೆಯ ಸಹಾಯಕ ನಿರ್ದೇಶಕ ಅಜಿತ್ ನಾಯಕ, ವರ್ಕನಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಜಯಲಕ್ಷ್ಮೀ, ಕೃಷಿ ಅಧಿಕಾರಿ ರವಿಕುಮಾರ್, ಗ್ರಾಮ ಲೆಕ್ಕಿಗ ದೊಡ್ಡ ಬಸವರಾಜ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ರವೀಂದ್ರ, ತಾಲ್ಲೂಕು ಪಂಚಾಯಿತಿ ವಾಹನ ಚಾಲಕ ಅಯೂಬ್ ಖಾನ್ ಅವರು ಸರ್ವೋತ್ತಮ ಸೇವಾ ಪ್ರಶಸ್ತಿಗೆ ಭಾಜನರಾದರು. ಉಪ ವಿಭಾಗಾಧಿಕಾರಿ ಕಚೇರಿಯ ಚನ್ನಬಸ್ಸಯ್ಯ ಸ್ವಾಮಿ ಹಿರೇಮಠ ಅವರಿಗೆ ವಿಶೇಷ ಸೇವಾ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಬೆಳ್ಳಿ ಪದಕ ಪ್ರದಾನ:
ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಐದು ವರ್ಷ ಸತತವಾಗಿ ಯಾವುದೇ ಅಪಘಾತ ರಹಿತ ಹಾಗೂ ಅಪರಾಧ ರಹಿತ ಚಾಲಕರಿಗೆ ಬೆಳ್ಳಿ ಪದಕ ವಿತರಣೆ ಮಾಡಲಾಯಿತು. ಚನ್ನಪ್ಪ, ಮುತ್ತಪ್ಪ, ಲಿಂಗಯ್ಯ, ಮಲ್ಲಣ್ಣ, ಸಾಯಬಣ್ಣ, ಕಾಶಿನಾಥ, ರಂಗಪ್ಪಾ, ಪರ್ವತರೆಡ್ಡಿ, ಚಂದ್ರಪ್ಪ, ಆನಂದ, ಶಹಾಹುಸೇನ, ಈಶ್ವರಪ್ಪ, ಅಶಫಕ್ ಅಹ್ಮದ್ ಅವರು ಬೆಳ್ಳಿ ಪದಕ ಪಡೆದರು.

ಗಮನ ಸೆಳೆದ ಸಾಂಸ್ಕೃತಿಕ ಕಾರ್ಯಕ್ರಮ

ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ನಡೆದ ೭೦ನೇ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ವಿವಿಧ ಶಾಲೆಗಳ ಮಕ್ಕಳು ಪ್ರದರ್ಶಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.

ಏರೋಬಿಕ್ಸ್ ಡ್ಯಾನ್ಸ್ ಪ್ರದರ್ಶಿಸಿದ ಯಾದಗಿರಿಯ ಸಾರ್ವಜನಿಕ ಹಿರಿಯ ಪ್ರಾಥಮಿಕ ಶಾಲೆಯು ಪ್ರಥಮ ಸ್ಥಾನ ಪಡೆಯಿತು. ಬಾ ಬಾಲೆ ಶಾಲೆಗೆ ಲೇಝಿಮ್ ಪ್ರದರ್ಶಿಸಿದ ಯಾದಗಿರಿ ಸ್ಟೇಷನ್ ಏರಿಯಾ ಮಹಾತ್ಮಗಾಂಧಿ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳ ತಂಡ ದ್ವಿತೀಯ ಬಹುಮಾನ ಪಡೆಯಿತು. ಜೈ ಹೋ ಹಾಡಿಗೆ ನೃತ್ಯ ಮಾಡಿದ ಡಿ.ಡಿ.ಯು ಆಂಗ್ಲ ಮಾಧ್ಯಮ ಪ್ರೌಢಶಾಲೆ ಮಕ್ಕಳು ತೃತೀಯ ಸ್ಥಾನ ಪಡೆದರು. ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ಮಕ್ಕಳು ಮಾ ತುಜೇ ಸಲಾಂ ಹಾಡಿಗೆ ನೃತ್ಯ ಮಾಡಿದರು.

ಸ್ತಬ್ಧ ಚಿತ್ರಗಳ ಆಕರ್ಷಣೆ:
ಅರಣ್ಯ ಇಲಾಖೆಯಿಂದ ಯಾದಗಿರಿ ನಗರದ ಗಿಡ-ಮರಗಳ ಬಗ್ಗೆ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಪಂಚಾಯತ್ ರಾಜ್ ಇಂಜನೀಯರಿಂಗ್ ವಿಭಾಗ, ನಗರಸಭೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಸ್ತಬ್ಧಚಿತ್ರಗಳ ಆಕರ್ಷಕ ಮೆರವಣಿಗೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT