ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ ಜಿಲ್ಲೆಯಲ್ಲಿ ಪುನರುತ್ಥಾನ ಹಬ್ಬದ ಸಂಭ್ರಮ

ಸುರ್ಯೋದಯ ಆರಾಧನೆ ಕೂಟ, ಪರಸ್ಪರ ಶುಭಾಶಯ ವಿನಿಮಯ
Last Updated 4 ಏಪ್ರಿಲ್ 2021, 16:46 IST
ಅಕ್ಷರ ಗಾತ್ರ

ಯಾದಗಿರಿ: ಪುನರುತ್ಥಾನ (ಈಸ್ಟರ್‌) ಹಬ್ಬದ ಅಂಗವಾಗಿ ಭಾನುವಾರ ವಿವಿಧ ಚರ್ಚ್‌ಗಳಲ್ಲಿ ವಿಶೇಷ ಆರಾಧನಾ ಕೂಟ ನಡೆಯಿತು.

ಭಾನುವಾರ ಬೆಳಿಗ್ಗೆ 5 ಗಂಟೆಗೆ ಚರ್ಚ್‌ಗಳಲ್ಲಿ ಸುರ್ಯೋದಯ ಆರಾಧನೆ ಕೂಟ ನಡೆಯಿತು. ಯೇಸು ಎದ್ದಿದ್ದಾನೆ. ಹೌದು ಯೇಸು ಎದ್ದಿದ್ದಾನೆ. ಎಲ್ಲಿಂದ ಎದ್ದಿದ್ದಾನೆ? ಸಮಾಧಿಯೊಳಗಿಂದ ಎದ್ದಿದ್ದಾನೆ ಎಂದು ಜಯಘೋಷ ಮಾಡಿದರು.

ಗುಡ್‌ ಫ್ರೈಡೇ ನಂತರ ಭಾನುವಾರ ಯೇಸು ಕ್ರಿಸ್ತನು ಸಮಾಧಿಯಿಂದ ಎದ್ದಿರುವ ದ್ಯೋತಕವಾಗಿ ಸಣ್ಣ ಗವಿಯನ್ನು ಸೃಷ್ಟಿಸಲಾಗಿತ್ತು. ಗವಿಯೊಳಗಿಂದ ಯೇಸು ಎದ್ದು ಬಂದಂತೆ ಪ್ರತಿಕೃತಿ ರಚನೆ ಮಾಡಲಾಗಿತ್ತು. ಸಮಾಧಿ ಖಾಲಿ ಇರುವಂತೆ ಸೃಷ್ಟಿಸಲಾಗಿತ್ತು. ಈ ಮೂಲಕ ಕ್ರೈಸ್ತರು ಕ್ರಿಸ್ತನು ಎದ್ದು ಬಂದಿದ್ದಾನೆಂದು ಸಂಭ್ರಮಿಸಿದರು. ನಂತರ ಕೆಲವೆಡೆ ಪಟಾಕಿ ಸಿಡಿಸಿ ಸಂಭ್ರಮ ವ್ಯಕ್ತಪಡಿಸಿದರು.

ಕೇಂದ್ರ ಮೆಥೋಡಿಸ್ಟ್‌ ಚರ್ಚ್‌, ತಾತಾ ಸಿಮೆಂಡ್ಸ್‌ ಸ್ಮಾರಕ ಮೆಥೋಡಿಸ್ಟ್‌, ಅಂಬೇಡ್ಕರ್‌ ನಗರ ಮೆಥೋಡಿಸ್ಟ್‌ ಚರ್ಚ್‌ ಸೇರಿದಂತೆ ನಗರದ ವಿವಿಧ ಚರ್ಚ್‌ಗಳಲ್ಲಿ ಈಸ್ಟರ್‌ ಹಬ್ಬದ ಸಂಭ್ರಮ ಎಲ್ಲೆಡೆ ಕಂಡು ಬಂತು.

ಬೆಳಿಗ್ಗೆ 9.30ಕ್ಕೆ ಆರಾಧನಾ ಕೂಟ ನಿಗದಿಯಾಗಿತ್ತು. ಚಿಣ್ಣರು ಹೊಸ ಬಟ್ಟೆಗಳನ್ನು ತೊಟ್ಟು ಸಂಭ್ರಮಿಸಿದರು. ಚರ್ಚ್‌ಗಳಲ್ಲಿ ಸೇರಿದ ಕ್ರೈಸ್ತರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

ಕ್ರೈಸ್ತರ ಮನೆಗಳಲ್ಲಿ ಸಿಹಿಯೂಟ, ವಿಶೇಷ ಖಾದ್ಯಗಳನ್ನು ತಯಾರು ಮಾಡಲಾಗಿತ್ತು. ಬಂಧು ಬಾಂಧವರನ್ನು ಆಹ್ವಾನಿಸಿ ಉಣಬಡಿಸಿದರು.

ಕ್ರಿಸ್ತನಂತೆ ಬಾಳಲು ಕರೆ: ವಿವಿಧ ಚರ್ಚ್‌ಗಳಲ್ಲಿ ವಿಶೇಷ ಬೋಧನೆ ನೀಡಿದ ಸಭಾಪಾಲಕರು, ಯೇಸು ಕ್ರಿಸ್ತನು ಪಾಪಿಗಳಿಗಾಗಿ ಸತ್ತು ಮೂರನೇ ದಿನದಲ್ಲಿ ಎದ್ದು ಬಂದನು. ಹೀಗಾಗಿ ಈ ದಿನವನ್ನು ಪುನರುತ್ಥಾನ (ಈಸ್ಟರ್‌) ಹಬ್ಬವನ್ನಾಗಿ ಆಚರಣೆ ಮಾಡಲಾಗುತ್ತಿದೆ. ಕ್ರಿಸ್ತನು ಭೂಲೋಕದಲ್ಲಿ ಬಾಳಿದಂತೆ ಪಾಪ ರಹಿತವಾಗಿ ನೀವೂ ಬಾಳಬೇಕು ಎಂದು ಕರೆ ನೀಡಿದರು.

ಕೇಂದ್ರ ಮೆಥೋಡಿಸ್ಟ್‌ ಜಿಲ್ಲಾ ಮೇಲ್ವಿಚಾರಕ ರೆವೆರೆಂಡ್‌ ಸತ್ಯಮಿತ್ರ ಮಾತನಾಡಿ, ‘ಯೇಸು ಕ್ರಿಸ್ತನು ಸಮಾಧಿಯೊಳಗಿಂದ ಮೂರನೇ ದಿನದಲ್ಲಿ ಎದ್ದು ಬಂದನು. ಆದರಂತೆ ಎಲ್ಲ ವಿಶ್ವಾಸಿಗಳು ಪಾಪಗಳಿಂದ ದೂರವಿದ್ದು, ಪಾಪಕ್ಕೆ ದೂರವಾಗಿ ಎದ್ದು ಹೋಗಬೇಕು’ ಎಂದು ಹೇಳಿದರು.

ಕೇಂದ್ರ ಮೆಥೋಡಿಸ್ಟ್‌ ಚರ್ಚ್‌ನಲ್ಲಿ ಬೆಂಗಳೂರಿನ ರೆವೆರೆಂಡ್‌ ಎಲಿಯಾಸ್ ವಿಜಯ, ತಾತಾ ಸಿಮಂಡ್ಸ್‌ ಮೆಮೊರಿಯಲ್‌ ಮೆಥೋಡಿಸ್ಟ್‌ ಚರ್ಚ್‌ನಲ್ಲಿ ಪ್ಯಾಸನ್ ವೀಕ್ ಪ್ರಸಂಗಿ ಮೋಹನ್ ಹೋನಿಕೇರಿ ವಿಶೇಷ ಬೋಧನೆ ನೀಡಿದರು.

ಕೇಂದ್ರ ಮೆಥೋಡಿಸ್ಟ್‌ ಚರ್ಚ್‌ನ ಸಹಾಯಕ ಸಭಾಪಾಲಕ ರೆವೆರೆಂಡ್‌ ಯೇಸುನಾಥ ನಂಬಿ, ವೈ.ಎಸ್.ಸಾಮ್ಯು ವೇಲ್, ಬಿ.ಟಿ.ಸೈಮನ್, ಡಾ.ರೆಡ್‌ಸನ್, ಸುನೀಲ್ ರೆಡ್‌ಸನ್, ಬಿ.ಸಾಮ್ಯುವೇಲ್, ರಾಜು ದೊಡ್ಡಮನಿ, ಉದಯಕುಮಾರ ದೊಡ್ಡ ಮನಿ, ದೇವದಾಸ್, ಸುಮಿತ್ರಾ, ಎಸ್.ಕೆ.ವಿಜಯಕುಮಾರ್, ಪ್ರಸಾದ ಮಿತ್ರಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT