ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಸುರಕ್ಷೆ ಅರಿವು ಕಾರ್ಯಕ್ರಮ

‘ಪ್ರಜಾವಾಣಿ ವರದಿ’ ಪರಿಣಾಮ, ಜಿಲ್ಲೆಯ ದೈಹಿಕ ಶಿಕ್ಷಣ ಶಿಕ್ಷಕರಿಗೆ ತರಬೇತಿ
Last Updated 10 ಡಿಸೆಂಬರ್ 2019, 16:08 IST
ಅಕ್ಷರ ಗಾತ್ರ

ಯಾದಗಿರಿ: ‘ಪಾಠ ಆಲಿಸಲು ಜೀವ ಭಯದಲ್ಲೇ ಪಯಣ’ ಶೀರ್ಷಿಕೆಯಡಿ ಸೋಮವಾರ ಪ್ರಕಟವಾದ ವರದಿ ಪರಿಣಾಮ ಬೀರಿದೆ. ಜಿಲ್ಲಾಡಳಿತ ಮಕ್ಕಳ ಸುರಕ್ಷತೆ ಬಗ್ಗೆ ಅರಿವು ಮೂಡಿಸಲು ಮಂಗಳವಾರ ಕಾರ್ಯಕ್ರಮ ಹಮ್ಮಿಕೊಂಡಿತ್ತು.

ನಗರದ ಸರ್ಕಾರಿ ಕನ್ಯಾ ಪ್ರೌಢ ಶಾಲೆಯಲ್ಲಿ ಜಿಲ್ಲೆಯ ದೈಹಿಕ ಶಿಕ್ಷಣ ಶಿಕ್ಷಕರಿಗೆ ಶಾಲಾ ಮಕ್ಕಳ ಸುರಕ್ಷತೆಗಾಗಿ ರಸ್ತೆ ಸುರಕ್ಷಾ ಅರಿವು ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್‌, ‘ದೈಹಿಕ ಶಿಕ್ಷಣ ಶಿಕ್ಷಕರು ಮಕ್ಕಳ ಸುರಕ್ಷತೆ ಬಗ್ಗೆ ಗಮನಹರಿಸಿ ಆಟೊ ಚಾಲಕರಿಗೆ ಮೊದಲು ಎಚ್ಚರಿಕೆ ಕೊಡಿ. ನಂತರ ಅವರ ಬಗ್ಗೆ ಪೊಲೀಸ್ ಇಲಾಖೆಗೆ ಮಾಹಿತಿ’ ನೀಡಿ ಎಂದು ತಿಳಿಸಿದರು.

‘ದೈಹಿಕ ಶಿಕ್ಷಣ ಶಿಕ್ಷಕರು ಶಾಲೆಯಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಾರೆ. ಹೀಗಾಗಿ ಈ ಜವಾಬ್ದಾರಿ ನಿಮಗೆ ನೀಡಲಾಗಿದೆ’ ಎಂದು ತಿಳಿಸಿದರು.

‘ದೈಹಿಕ ಶಿಕ್ಷಣ ಶಿಕ್ಷಕರನ್ನು ‘ಸುರಕ್ಷತಾ ಅಧಿಕಾರಿ'ಯನ್ನಾಗಿ ನೇಮಿಸಲಾಗಿದೆ. ಇನ್ನೂ ಆಟೊಗಳಲ್ಲಿ ನಿಗದಿಗಿಂತ ಹೆಚ್ಚಿನ ಮಕ್ಕಳನ್ನು ಆಟೊದಲ್ಲಿ ಕರೆದುಕೊಂಡು ಬಂದರೆ ತಿಳಿವಳಿಕೆ ಮೂಡಿಸಿ’ ಎಂದು ಸಲಹೆ ನೀಡಿದರು.

ಡಿವೈಎಸ್‌ಪಿ ಯು. ಶರಣಪ್ಪ ಮಾತನಾಡಿ, ‘ಕಾನೂನು ಪರಿಪಾಲನೆ ಎಲ್ಲರೂ ಮಾಡಬೇಕು. ನಿಗದಿಗಿಂತ ಹೆಚ್ಚಿನ ಮಕ್ಕಳನ್ನು ಆಟೊದಲ್ಲಿ ಕರೆದೊಯ್ಯುವಂತಿಲ್ಲ. ಇಂಥದ್ದು ಕಂಡು ಬಂದರೆ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬಹುದು. ದಂಡ ಹಾಕುವುದಕ್ಕಿಂತ ಅವರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ’ ಎಂದರು.

‘ಶಾಲಾ ಸುರಕ್ಷತೆ ಬಗ್ಗೆ ಈಗಾಗಲೇ ಹೈಕೋರ್ಟ್‌ನಲ್ಲಿ ಮೊಕದ್ದಮೆ ದಾಖಲಾಗಿದೆ. ಪಾಲಕರು, ಶಿಕ್ಷಕರು ತಮ್ಮ ಮಕ್ಕಳಿಗೆ ರಸ್ತೆ ಸುರಕ್ಷತೆ ಕುರಿತು ಮಾಹಿತಿ ನೀಡಬೇಕು’ ಎಂದು ಹೇಳಿದರು.

ಸಾರಿಗೆ ಇಲಾಖೆ ಅಧಿಕಾರಿ ವಸಂತ ಚವ್ಹಾಣ್‌ ಮಾತನಾಡಿ, ‘ಪ್ರತಿ ಎರಡು ತಿಂಗಳಿಗೊಮ್ಮೆ ರಸ್ತೆ ಸುರಕ್ಷತೆ ಬಗ್ಗೆ ಸಭೆ ನಡೆಯುತ್ತದೆ. ಶಾಲಾ ಮಕ್ಕಳನ್ನು ಕರೆದೊಯ್ಯುವ ಆಟೊ ಚಾಲಕರಿಗೆ ಡಿಡಿಪಿಐ ಮೂಲಕ ಮಾರ್ಗಸೂಚಿ ಕೊಡಲಾಗಿದೆ. 14 ವರ್ಷಕ್ಕಿಂತ ಕಡಿಮೆ ವಯಸ್ಸಿನ 5 ಮಕ್ಕಳನ್ನು ಮಾತ್ರ ಆಟೊದಲ್ಲಿ ಕರೆದೊಯ್ಯಲು ಅವಕಾಶವಿದೆ. ಇದಕ್ಕಿಂತ ಹೆಚ್ಚು ಕರೆದುಕೊಂಡು ಹೋದರೆ ಮೊಕದ್ದಮೆ ಹಾಕಲಾಗುವುದು’ ಎಂದು ಎಚ್ಚರಿಸಿದರು.

‘ಮೊದಲು ಆಟೊದವರಿಗೆ ಎಚ್ಚರಿಕೆ ಕೊಟ್ಟು ನಂತರ ಚಾಲನಾ ಪರವಾನಗಿ ರದ್ದು ಪಡಿಸುತ್ತೇವೆ. ಇನ್ನು ಮುಂದೆ ಜಿಲ್ಲೆಯಲ್ಲಿಯೂ ಇಂಥ ಕ್ರಮ ಜಾರಿಗೆ ತರಲಾಗುವುದು. ಮಕ್ಕಳಿಗೆ ಅಪಘಾತಗಳಾದರೆ ದೈಹಿಕ ನ್ಯೂನತೆ ಕಂಡು ಬರುತ್ತಿದೆ. ಇದರಿಂದ ಮಕ್ಕಳ ಮಾನಸಿಕವಾಗಿ ಕುಗ್ಗುತ್ತಾರೆ. ಇದರಿಂದ ಮಕ್ಕಳು ಶೈಕ್ಷಣಿಕವಾಗಿ ಹಿಂದೆ ಉಳಿಯುವಂತಾಗುತ್ತದೆ. ಹೀಗಾಗಿ ದೈಹಿಕ ಶಿಕ್ಷಣ ಶಿಕ್ಷಕರು ಹೆಚ್ಚಿನ ನಿಗಾವಹಿಸಿ’ ಎಂದರು.

ಸಿಪಿಐ ಶರಣಗೌಡ ಎಂ.ಎನ್‌., ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ವಿಶ್ವನಾಥ ಕಡ್ಡಿ, ತಾಲ್ಲೂಕು ದೈಹಿಕ ಶಿಕ್ಷಣ ಅಧಿಕಾರಿ ಮನೋಹರ ವಡಗೇರಾಸೇರಿದಂತೆ ಜಿಲ್ಲೆಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರು ಪಾಲ್ಗೊಂಡಿದ್ದರು.

ಜಿಲ್ಲೆಯಲ್ಲಿ 3000 ಸಾವಿರ ಆಟೊಗಳಿವೆ. ಯಾದಗಿರಿ ನಗರದಲ್ಲಿ 200 ಆಟೊಗಳು ಓಡಾಡುತ್ತಿವೆ. 12 ಆಟೊ ಚಾಲಕರ ಡಿಎಲ್‌ ಅಮಾನತು ಮಾಡಲಾಗಿದೆ. 25 ಆಟೊ ವಶಪಡಿಸಿಕೊಂಡು ನಂತರ ಬಿಡುಗಡೆ ಮಾಡಲಾಗಿದೆ.
ವಸಂತ ಚವ್ಹಾಣ್‌, ಸಾರಿಗೆ ಇಲಾಖೆ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT