ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಪುರ: ಸನಾತನ ಧರ್ಮ ಪುನರುಜ್ಜೀವನಗೊಳಿಸಿದ ಕೇಂದ್ರ

Published 19 ಮೇ 2024, 8:06 IST
Last Updated 19 ಮೇ 2024, 8:06 IST
ಅಕ್ಷರ ಗಾತ್ರ

ಸುರಪುರ: ಸುರಪುರವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು 222 ವರ್ಷಗಳ ಕಾಲ ರಾಜ್ಯಭಾರ ಮಾಡಿದ ಇಲ್ಲಿನ ಗೋಸಲ ಅರಸರು ಪರಧರ್ಮ ಸಹಿಷ್ಣುತೆಯ ಜೊತೆಗೆ ಸನಾತನ ಧರ್ಮಕ್ಕೆ ಹೆಚ್ಚಿನ ಒತ್ತು ನೀಡಿದ್ದರು.

ವಿಜಯನಗರ ಪತನಾನಂತರ ಸನಾತನ ಧರ್ಮ ನೆಲೆಯಿಲ್ಲದೆ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ತತ್ತರಿಸುತ್ತಿತ್ತು. ಎಲ್ಲೆಡೆ ಆಕ್ರಮಿಸಿದ್ದ ಇತರ ಧರ್ಮೀಯ ರಾಜರು ಹಿಂದೂ ಧರ್ಮದ ಪತನಕ್ಕೆ ನಾಂದಿ ಹಾಡಿದ್ದರು. ಅಂತಹ ಸಂದಿಗ್ಧ ಸಂದರ್ಭದಲ್ಲಿ 17ನೇ ಶತಮಾನದ ಉತ್ತರಾರ್ಧದಲ್ಲಿ ಸ್ಥಾಪನೆಯಾದ ನಗರದ ಲಕ್ಷ್ಮೀ ನರಸಿಂಹ ದೇಗುಲ ಪ್ರಮುಖ ವೇದಾಧ್ಯಾಯನ ಕೇಂದ್ರವಾಗಿತ್ತು. ಅಸಂಖ್ಯ ವಿಪ್ರೋತ್ತಮರು ಇಲ್ಲಿ ಅಧ್ಯಯನ ಮಾಡಿ ಧರ್ಮದ ಉಳಿವಿಗೆ ಶ್ರಮಿಸಿದರು.

ಹಿನ್ನೆಲೆ: ಇಲ್ಲಿ ವಾಸವಾಗಿದ್ದ ನರಸಿಂಹಾಚಾರ್ಯ ಎಂಬ ಕುಶಿಕ ಗೋತ್ರೋತ್ಪನ್ನ ಬ್ರಾಹ್ಮಣನು ನಿತ್ಯವೂ ಪ್ರಾತಃಕಾಲದಲ್ಲಿ ಭಗವಂತನ ಪೂಜಾ ಕೈಂಕರ್ಯಗಳನ್ನು ಮಾಡಿ ಸಾಯಾಹ್ನದಲ್ಲಿ ಭಜನೆ ಮಾಡಿ ಪರಮಾತ್ಮನ ಸೇವೆಯಲ್ಲಿ ಆಸಕ್ತರಾಗಿದ್ದರು. ಒಮ್ಮೆ ತಮಗೆ ಬಿದ್ದ ಸ್ವಪ್ನದಂತೆ ದೇವರ ಮನೆಯ ಶುಭ ಸ್ಥಾನದಲ್ಲಿ ಖನನ ಮಾಡತೊಡಗಿದ. ನಾಲ್ಕು ಸಾಲಿಗ್ರಾಮಗಳನ್ನು ಮತ್ತು ಶಿಲಾರೂಪಿ, ಶಂಖಚಕ್ರಧಾರಿ, ಸ್ವಸ್ತಿಕಾಸನದಲ್ಲಿ ಕುಳಿತು ಹಿರಣ್ಯಕಶಪು ವಿನ ಹೊಟ್ಟೆ ಸೀಳುವ ಪ್ರತಿಮೆಯನ್ನು ನೋಡಿದನು. ಆಗ ಮೂರ್ತಿ ಪ್ರತಿಷ್ಠಾಪನೆ ಯಾಗಿ ನಿತ್ಯ ಪೂಜೆ ನಡೆಯಲಿ, ಸನಾತನ ಧರ್ಮದ ಸಂರಕ್ಷಣೆಗೆ ವೇದಾಧ್ಯಾಯನ ಕೇಂದ್ರ ಸ್ಥಾಪನೆಯಾಗಲಿ ಎಂಬ ದೇವವಾಣಿಯಾಯಿತು.

ಆ ಸಮಯದಲ್ಲಿ ಅರಸನಾಗಿದ್ದ ರಾಜಾ ಪೀತಾಂಬರ ಬಹಿರಿ ಪಿಡ್ಡನಾಯಕ (1687-1727) ಆಗಮಿಸಿ ದೇವರ ದರ್ಶನ ಪಡೆದನು. ಸುವರ್ಣ, ರಜತ, ಗೋವು, ಭೂಮಿ, ವಸ್ತ್ರ ಇತ್ಯಾದಿ ದಾನಗಳನ್ನು ನೀಡಿ ಭಗವಂತನ ವಾಣಿಯಂತೆ ಕ್ರಿ.ಶ. 1703ರಲ್ಲಿ ನರಸಿಂಹಾಚಾರ್ಯರ ಸಲಹೆ ಮತ್ತು ವೈದಿಕತ್ವದಲ್ಲಿ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನ ಮತ್ತು ವೇದಾಧ್ಯಾಯನ ಕೇಂದ್ರ ನಿರ್ಮಿಸಿದ ಎಂಬ ಐತಿಹ್ಯವಿದೆ.

ಆಕರ್ಷಕ ದೇಗುಲ: ಕಲ್ಲಿನ ಸಲಗಗಳ ಮೇಲೆ ನಿರ್ಮಿಸಿರುವ ಸುಂದರ ಸ್ತಂಭಗಳು, ಸಾಕಷ್ಟು ಗಾಳಿ, ಬೆಳಕು ಆಡುವ ವಿಶಾಲವಾದ ನವರಂಗ, ಭಕ್ತಿಯನ್ನು ಉಕ್ಕಿಸುವ ಗರ್ಭಗುಡಿ, ಮೋಹಕ ಲಕ್ಷ್ಮೀ ನರಸಿಂಹ ಉದ್ಭವಮೂರ್ತಿ, ಸುಂದರವಾದ ಪ್ರಾಕಾರಗಳು ದೇವಸ್ಥಾನದ ಸೌಂದರ್ಯವನ್ನು ಇಮ್ಮಡಿಗೊಳಿಸಿವೆ.

ಆಕರ್ಷಕ ಗೋಪುರ, ಪಾಕಶಾಲೆ, ಯಜ್ಞಶಾಲೆ, ಭೋಜನಗೃಹ, ಪುಷ್ಕರಣಿ, ಅನನ್ಯ ಶಿಲ್ಪಕಲೆಯ ಕಟ್ಟಡ, ಬಹುಕಾಲದ ಅಶ್ವಥನಾರಾಯಣ ವೃಕ್ಷ ದೇಗುಲದ ಮೆರಗು ಹೆಚ್ಚಿಸಿವೆ. ಇಂದಿಗೂ ದೇಗುಲ ಸುಸ್ಥಿತಿಯಲ್ಲಿದ್ದು ಅಂದಿನ ಕಾಲದ ಗುಣಮಟ್ಟದ ಕಾಮಗಾರಿಗೆ ಸಾಕ್ಷಿಯಾಗಿ ನಿಂತಿದೆ.

ಆಗಿನ ಹೈದರಾಬಾದ್‌ ಪ್ರಾಂತ ಮತ್ತು ನೆರೆ ಪ್ರಾಂತಗಳಿಂದಲೂ ಪಂಡಿತರು, ವೇದಿಗಳು, ಪುರೋಹಿತರು, ವಿದ್ಯಾಭ್ಯಾಸಿಗಳು ದೇಗುಲದಲ್ಲಿ ಆಶ್ರಯ ಪಡೆದುಕೊಂಡಿದ್ದರು. ದಾಸಶ್ರೇಷ್ಠ ಆನಂದದಾಸರು ಸೇರಿದಂತೆ ಇಲ್ಲಿ ಪ್ರಸಿದ್ಧ ಪಂಡಿತರು ವಿದ್ಯಾಭ್ಯಾಸ ಮಾಡಿದ್ದು ಗಮನಾರ್ಹ. ಕಳೆದ ಮೂರು ಶತಮಾನಗಳಿಂದ ಪ್ರತಿ ವರ್ಷ ವೈಶಾಖ ಮಾಸದಲ್ಲಿ ನರಸಿಂಹ ಜಯಂತಿ ಆಚರಿಸುತ್ತಾ ಬರಲಾಗುತ್ತಿದೆ. ಜಯಂತಿ ಅಂಗವಾಗಿ 9 ದಿನಗಳ ಕಾಲ ವಾಹನೋತ್ಸವ ಇತರ ಪೂಜಾ ಕೈಂಕರ್ಯಗಳು ನಡೆಯುತ್ತವೆ.

ಕಾರ್ಯಕ್ರಮಗಳು: ಸೋಮವಾರ (ಮೇ 20) ಬ್ರಾಹ್ಮಣ ಸುವಾಸಿನಿಯರಿಗೆ ಅನ್ನಸಂತರ್ಪಣೆ. ಮಂಗಳವಾರ (ಮೇ 21) ನರಸಿಂಹ ಜಯಂತಿ, 23ರಂದು ರಥೋತ್ಸವ ನಡೆಯಲಿದೆ. 24ರಂದು ಅವಭೃತ ಸ್ನಾನದೊಂದಿಗೆ ಕಾರ್ಯಕ್ರಮ ಸಂಪನ್ನಗೊಳ್ಳುತ್ತದೆ.

ತಲೆತಲಾಂತರದಿಂದ ನಮ್ಮ ಮನೆತನದವರು ನರಸಿಂಹಸ್ವಾಮಿಯ ಸೇವಾ ಕೈಂಕರ್ಯ ನಡೆಸುತ್ತಾ ಬಂದಿದ್ದಾರೆ. ಭಕ್ತಿಯಿಂದ ಸೇವೆ ಸಲ್ಲಿಸುವ ನಮಗೂ ಮತ್ತು ಭಕ್ತರಿಗೂ ಸ್ವಾಮಿ ಒಳ್ಳೆಯದನ್ನು ಮಾಡಿದ್ದಾನೆ
–ಬಿ.ಆರ್. ಜಾಗೀರದಾರ, ಅರ್ಚಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT