ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಂಕ್ರಾಂತಿ ರೈತರಿಗೆ ಉತ್ತಮ ಬೆಳೆ ತರಲಿ’

sankranthi
Last Updated 16 ಜನವರಿ 2023, 6:13 IST
ಅಕ್ಷರ ಗಾತ್ರ

ಯಾದಗಿರಿ: ರೈತ ಬಿತ್ತಿ ಬೆಳೆದ ಫಸಲನ್ನು ರಾಶಿ ಮಾಡಿಕೊಳ್ಳುವ ಸಂದರ್ಭದಲ್ಲಿ ಬರುವ ಸಂಕ್ರಾಂತಿ ರೈತರಿಗೆ ಉತ್ತಮ ಬೆಳೆಯನ್ನು ತರಲಿ ಎಂದು ಅಬ್ಬೆತುಮಕೂರಿನ ಪೀಠಾಧಪತಿ ಗಂಗಾಧರ ಸ್ವಾಮೀಜಿ ನುಡಿದರು.

ಶ್ರೀಮಠದ ವತಿಯಿಂದ ತಾಲ್ಲೂಕಿನ ಅಬ್ಬೆತುಮಕೂರಿನ ಸೀಮಾಂತರದ ಭೀಮಾ ನದಿಯ ತಟದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಹೊಳಿ ಜಾತ್ರೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ನೂತನ ವರ್ಷದ ಮೊದಲ ಹಬ್ಬವಾಗಿರುವ ಸಂಕ್ರಾಂತಿ ರೈತರ ಬದುಕಿಗೆ ಸಮೃದ್ಧಿ ತರುವ ಹಬ್ಬವಾಗಿದೆ. ಈ ಹಬ್ಬ ಅನ್ನದಾತ ರೈತ ಸಮುದಾಯಕ್ಕೆ ಹಿಗ್ಗನ್ನು ತರಲಿ ಎಂದು ಶುಭ ಹಾರೈಸಿದರು.

ಶ್ರೀಗಳು ಅಪಾರ ಭಕ್ತ ವೃಂದದೊಂದಿಗೆ, ಅಬ್ಬೆತುಮಕೂರಿನ ಮಠದಿಂದ ಭೀಮಾನದಿಯ ವರೆಗೆ ಮೆರವಣಿಗೆಯೊಂದಿಗೆ ತೆರಳಿದರು. ಅಲ್ಲಿ ಶ್ರೀಗಳು ಹೂವಿನಿಂದ ಅಲಂಕೃತವಾದ ತೆಪ್ಪದಲ್ಲಿ ಭೀಮಾನದಿಯ ಮಧ್ಯಭಾಗಕ್ಕೆ ತೆರಳಿ ಪುಣ್ಯ ಸ್ನಾನ ಮಾಡಿಗಂಗಾದೇವಿಗೆ ವಿಶೇಷ ಪೂಜೆ ನೆರವೇರಿಸಿದರು.

ಪುನಃ ಶ್ರೀಗಳು ತೆಪ್ಪದಲ್ಲಿ ನದಿಯ ಮಧ್ಯಭಾಗದಿಂದ ದಡಕ್ಕೆ ಆಗಮಿಸಿದರು. ಆಗ ಅಲ್ಲಿ ನೆರೆದಿದ್ದ ಸಹಸ್ರಾರು ಭಕ್ತರು ಶ್ರೀಗಳ ಪಾದದಿಂದ ನದಿಯ ನೀರನ್ನು ಪ್ರೋಕ್ಷಿಸಿಕೊಂಡರು. ನಂತರ ಭಕ್ತರು ಶ್ರೀಗಳ ಪಾದಪೂಜೆ ನೆರವೇರಿಸಿದರು.

ನಂತರ ಹೊಳಿ ಜಾತ್ರೆಗೆ ಆಗಮಿಸಿದ ಎಲ್ಲ ಭಕ್ತರು ಬಿಳಿ ಜೋಳದ ರೊಟ್ಟಿ, ಸಜ್ಜೆ ರೊಟ್ಟಿ, ಶೇಂಗಾ ಹೋಳಿಗೆ, ಕರಿಗಡಬು, ಪುಂಡಿಪಲ್ಯ, ಹಿಂಡಿಪಲ್ಯ, ಎಣ್ಣೆ ಬದನೆಕಾಯಿ, ಶೇಂಗಾ ಹಿಂಡಿ, ಬಜ್ಜಿ, ಭರ್ತಾ, ಚಿತ್ರಾನ್ನ ಹೀಗೆ ವಿವಿಧ ಬಗೆಯ ಸಂಕ್ರಾಂತಿಯ ಭಕ್ಷ್ಯ ಭೋಜನವನ್ನು ಸವಿದರು.

ಈ ಬಾರಿ ಹೊಳಿ ಜಾತ್ರೆಯಲ್ಲಿ ವಿವಿಧ ಫಳಾರಗಳ ಮತ್ತು ಮಕ್ಕಳ ಆಟಿಕೆಗಳ ಅಂಗಡಿಗಳು ಹಾಕಿದ್ದರಿಂದ ಆಗಮಿಸಿದ ಜನತೆ ಭರ್ಜರಿಯಾಗಿ ವ್ಯಾಪಾರ ಮಾಡಿದರು. ಜಾತ್ರೆಯಲ್ಲಿ ಯರಗೋಳದ ಭೀಮಜ್ಯೋತಿ ಕಲಾ ತಂಡದವರು ನಡೆಸಿಕೊಟ್ಟ ಜನಪದ ಗೀತೆಗಳ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು.

ಚೆನ್ನಪ್ಪಗೌಡ ಮೋಸಂಬಿ, ನರಸನಗೌಡ ರಾಯಚೂರು, ಡಾ. ಸುಭಾಶ್ಚಂದ್ರ ಕೌಲಗಿ, ವಿಶ್ವನಾಥ ಸಿರಿವಾರ ಸೇರಿದಂತೆ ಅಬ್ಬೆತುಮಕೂರು ಮತ್ತು ಸುತ್ತಮುತ್ತಲಿನ ಹಳ್ಳಿಗಳು ಅಲ್ಲದೆ ಶಹಾಪುರ, ಸುರಪುರ, ಗುರುಮಠಕಲ್, ಸೇಡಂ, ಚಿತ್ತಾಪುರ, ವಿಜಯಪುರ, ಸಿಂದಗಿ, ದಾವಣಗೇರ, ಸಿಂಧನೂರು, ಮಾನವಿ, ರಾಯಚೂರು ಸೇರಿದಂತೆ ಆಂಧ್ರ, ಮಹಾರಾಷ್ಟ್ರದಿಂದಲೂ ಅನೇಕ ಭಕ್ತರು ಆಗಮಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT