ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಹಾಪುರ ನಗರಸಭೆ: ನನಸಾಗುವುದೇ ಹೊಸ ಕಟ್ಟಡದ ಕನಸು?

ಅಗತ್ಯ ಸೌಲಭ್ಯವಿಲ್ಲದೆ ಸಿಬ್ಬಂದಿ ಪರದಾಟ
Published 10 ಅಕ್ಟೋಬರ್ 2023, 6:07 IST
Last Updated 10 ಅಕ್ಟೋಬರ್ 2023, 6:07 IST
ಅಕ್ಷರ ಗಾತ್ರ

ಶಹಾಪುರ: ನಗರಸಭೆಯ ಈಗಿರುವ ಕಟ್ಟಡ ಅತ್ಯಂತ ಕಿರಿದಾಗಿದ್ದು ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಸಾಕಷ್ಟು ತೊಂದರೆ ಎದುರಿಸುವಂತೆ ಆಗಿದೆ.

ನಗರದ ಜನತೆಗೆ ವಸತಿ, ನಿವೇಶನ ಹಾಗೂ ಅಗತ್ಯ ಸೌಲಭ್ಯಗಳನ್ನು ಒದಗಿಸುವ ನಗರಸಭೆಯು ಸ್ವತಃ ಕಟ್ಟಡದ ಸಮಸ್ಯೆಗೆ ಏದುಸಿರು ಬಿಡುವಂತಾಗಿದೆ. ಹೊಸ ನಗರಸಭೆಯ ಕಟ್ಟಡ ನಿರ್ಮಿಸಲು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ  ಅವರು  ಮುಂದಾಗಬೇಕು ಎಂದು ನಗರದ ಜನತೆ ಮನವಿಯಾಗಿದೆ.

‘1957ರಲ್ಲಿ ಪುರಸಭೆ ಸ್ಥಾಪನೆಗೊಂಡಿತು. ಅಲ್ಲದೆ 1993 ಹಾಗೂ 1994ರಲ್ಲಿ ಚಂದ್ರಶೇಖರ ಆರಬೋಳ ಅವರು ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ರಾಜ್ಯದಲ್ಲಿಯೇ ಅತ್ಯುತ್ತಮ ಪುರಸಭೆ ಎಂಬ ಎರಡು ಬಾರಿ ಪ್ರಶಸ್ತಿಯ ಗರಿ ಮುಡಿಗೇರಿಸಿಕೊಂಡಿದೆ. ಆದರೆ ನಗರಸಭೆ ಬೇಕಾದ ಅಗತ್ಯ ಸೌಲಭ್ಯಗಳನ್ನು ಒದಗಿಸುವಲ್ಲಿ ಮಾತ್ರ ಸೋತು ಹೋಗಿದೆ. ಈಗ ಎರಡು ಮಹಡಿಯ ಕಟ್ಟವಿದ್ದರೂ ಸಮರ್ಪಕವಾದ ಕೋಣೆಗಳು ಇಲ್ಲ. ಒಂದೇ ಗೂಡಿನಲ್ಲಿ ಸಿಬ್ಬಂದಿ ಕೆಲಸ ನಿರ್ವಹಿಸುವ ಅನಿವಾರ್ಯತೆಎದುರಿಸುವಂತೆ ಆಗಿದೆ’ ಎನ್ನುತ್ತಾರೆ ಉಮೇಶ ಮೂಡಬೂಳ.

‘ಪುರಸಭೆಯಿಂದ 2015ರಲ್ಲಿ ನಗರಸಭೆಯಾಗಿ ಮೇಲ್ದರ್ಜೆಗೇರಿತು. ನಗಸರಭೆಯಾದ ಬಳಿಕ ಅನುದಾನ ಹೆಚ್ಚಳದ ಜತೆಗೆ ಸಿಬ್ಬಂದಿಯೂ ಹೆಚ್ಚಾದರು. ಆದರೆ ಹಳೆ ಕಟ್ಟಡದಲ್ಲಿ ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದಾರೆ. ನಗರಸಭೆಯ ವ್ಯಾಪ್ತಿಯಲ್ಲಿ 31 ವಾರ್ಡ್‌ಗಳು ಬರುತ್ತವೆ. ಅದರಲ್ಲಿ ಕಂದಾಯ ಶಾಖೆ, ಆರೋಗ್ಯ, ಆಡಳಿತ ಶಾಖೆ, ಆಶ್ರಯ, ಕಾಮಗಾರಿ ಶಾಖೆ, ದಾಖಲಾತಿ ಸೇರಿದಂತೆ ಸುಮಾರು 12ಕ್ಕೂ ಹೆಚ್ಚು ಶಾಖೆ ಬರುತ್ತವೆ. 100ಕ್ಕೂ ಹೆಚ್ಚು ಸಿಬ್ಬಂದಿ ಇದ್ದಾರೆ. ಅಲ್ಲದೆ ಅಧ್ಯಕ್ಷ, ಉಪಾಧ್ಯಕ್ಷರ ಕೋಣೆ, ಮಿಟಿಂಗ್ ಸಭಾಂಗಣ, ಪೌರಾಯುಕ್ತರ ಕೋಣೆ ಎಲ್ಲವು ಪ್ರತ್ಯೇಕವಾಗಿ ಬೇಕು. ನಗರಸಭೆಯ ವಾಹನಗಳ ನಿಲುಗಡೆಗೆ ಪ್ರತ್ಯೇಕ ಜಾಗ ಅಗತ್ಯವಿದೆ. ಆದರೆ ಈಗಿರುವ ಕೋಣೆ ಯಾತಕ್ಕೂ ಸಾಲುತ್ತಿಲ್ಲ’ ಎನ್ನುತ್ತಾರೆ ನಗರಸಭೆ ಸಿಬ್ಬಂದಿ ಒಬ್ಬರು.

ಈಗಿರುವ ಹಳೆ ತಹಶೀಲ್ದಾರ್ ಕಚೇರಿಯ ಕಟ್ಟಡ ಒಡೆದು ಹಾಕಿದ್ದಾರೆ. ಮೊದಲ ಮಹಡಿ ಕಟ್ಟಡ ನಿರ್ಮಾಣಕ್ಕೆ ₹1 ಕೋಟಿ ಅನುದಾನ ಲಭ್ಯವಿದೆ. ವಿಶಾಲವಾದ ಸಾಕಷ್ಟು ಜಾಗವಿದೆ. ಕಟ್ಟಡದ ಮುಂದೆ ವಾಹನ ನಿಲುಗಡೆಗೆ ಜಾಗವು ಲಭ್ಯವಿದೆ. ಇನ್ನಷ್ಟು ಅನುದಾನವನ್ನು ಹಾಕಿ ಎರಡು ಮಹಡಿಯ ಸುಸಜ್ಜಿತ ಕಟ್ಟಡ ನಿರ್ಮಿಸಿದರೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಪ್ರತ್ಯೇಕವಾದ ಕೋಣೆ ನಿರ್ಮಿಸಿ ವಿವಿಧ ಶಾಖೆಗಳನ್ನು ಗಣಕೀಕರಣಗೊಳಿಸಿದರೆ ಆಡಳಿತದಲ್ಲಿ ಹೊಸ ಪಾರದರ್ಶಕ ತರಲು ಸಾಧ್ಯ. ಅಕ್ರಮ ಹಾಗೂ ವಂಚನೆಗೆ ತೆರೆ ಬೀಳಲಿದೆ ಎನ್ನುತ್ತಾರೆ ಜನ.

ಈಗಿನ ಕಟ್ಟಡ ಕಿರಿದಾಗಿದೆ ಮತ್ತು ಸಭಾಂಗಣವು ದೊಡ್ಡದು ಬೇಕು. ಅನುದಾನದ ಲಭ್ಯತೆಯ ಮೇಲೆ ಹೊಸದಾಗಿ ಕಟ್ಟಡ ನಿರ್ಮಿಸುವ ಚಿಂತನೆ ಇದೆ.
–ಶರಣಬಸಪ್ಪ ದರ್ಶನಾಪುರ, ಜಿಲ್ಲಾ ಉಸ್ತುವಾರಿ ಸಚಿವ
ನಗರಸಭೆಯ ಕಟ್ಟಡವನ್ನು ಅನ್ಯ ಇಲಾಖೆಗೆ ವರ್ಗಾಯಿಸಿ ಹಳೆ ತಹಶೀಲ್ದಾರ್ ಕಟ್ಟಡದಲ್ಲಿ ಹೊಸದಾಗಿ ಸುಸಜ್ಜಿತ ಕಟ್ಟಡ ನಿರ್ಮಿಸಿದರೆ ಸಮಸ್ಯೆಗೆ ಶಾಶ್ವತ ಮುಕ್ತಿ ನೀಡಿದಂತೆ ಆಗುತ್ತದೆ.
–ಯಲ್ಲಯ್ಯ ನಾಯಕ, ವನದುರ್ಗ ಬಿಜೆಪಿ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT