ಶನಿವಾರ, ಜೂನ್ 12, 2021
24 °C

ಕುರಿಗಾಹಿ ರಕ್ಷಣೆ: ಎನ್‌ಡಿಆರ್‌ಎಫ್ ತಂಡಕ್ಕೆ ಶ್ಲಾಘನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಕೃಷ್ಣಾ ನದಿ ನೀರಿನ ಹೆಚ್ಚಳದಿಂದಾಗಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ನಾರಾಯಣಪುರ ಬಳಿಯ ನಡುಗಡ್ಡೆಯಲ್ಲಿ ಸಿಲುಕಿಕೊಂಡಿದ್ದ ಕುರಿಗಾಹಿ ಟೋಪಣ್ಣ ಅವರನ್ನು ಎನ್‌ಡಿಆರ್‌ಎಫ್ ತಂಡದ ಸಹಕಾರದಿಂದ ರಕ್ಷಿಸಲಾಗಿದ್ದು, ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. 

ಶನಿವಾರ ಕೃಷ್ಣಾ ನದಿಗೆ 2.20 ಲಕ್ಷ ಕ್ಯುಸೆಕ್‌ ನೀರು ಹರಿಸಲಾಗುತ್ತಿತ್ತು. ಸುರಪುರ ಶಾಸಕ ರಾಜೂಗೌಡ ಅವರ ಮನವಿ ಮೇರೆಗೆ ನದಿ ನೀರಿನ ಹೊರ ಹರವನ್ನು ಕಡಿಮೆ ಮಾಡಲಾಯಿತು. ಆ ನಂತರ ಕಾರ್ಯಾಚರಣೆ ಆರಂಭಿಸಿದ 16 ಜನರಿರುವ ಎನ್‌ಡಿಆರ್‌ಎಫ್ ತಂಡ ಎರಡು ಬೋಟ್‌ಗಳಲ್ಲಿ ಕುರಿಗಾಯಿ ಇರುವಲ್ಲಿಗೆ ತೆರಳಿತು. ಆದರೆ, ಟೋಪಣ್ಣ ಕುರಿಗಳನ್ನು ಬಿಟ್ಟು ಬರಲು ಒಪ್ಪಲಿಲ್ಲ. ಎನ್‌ಡಿಆರ್‌ಎಫ್ ತಂಡದವರು ಮನವೊಲಿಸಿ ಕುರಿಗಳನ್ನು ನೀರಿನ ಹರಿವು ಕಡಿಮೆಯಾದ ನಂತರ ಕರೆತಂದರೆ ಆಯಿತು. ನೀವೂ ಬನ್ನಿ ಎಂದು ಹೇಳಿದರೂ ಮೊದಲಿಗೆ ಒಪ್ಪಲಿಲ್ಲ. ಆನಂತರ ಕುರಿಗಾಯಿ ಜೊತೆಗೆ ನಾಯಿಯನ್ನು ಬೋಟ್‌ನಲ್ಲಿ ಜೊತೆಗೆ ಕರೆ ತಂದರು. ಈ ಕಡೆಯ ದಡ ಸೇರುತ್ತಲೆ ಎನ್‌ಡಿಆರ್‌ಎಫ್ ತಂಡಕ್ಕೆ ಶಾಸಕ ರಾಜೂಗೌಡ ಶಾಲು ಹೊದಿಸಿ ಸನ್ಮಾನಿದರು. ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. 

ಈ ಕುರಿತು ಟೋಪಣ್ಣ ಅವರ ತಮ್ಮ ಹೇಮಂತ ರಾಥೋಡ್‌ ಮಾತನಾಡಿ, ‘ಮೊದಲಿಗೆ ನಮ್ಮ ಅಣ್ಣ ಕುರಿಗಳನ್ನು ಬಿಟ್ಟು ಬರಲು ಒಪ್ಪಿರಲಿಲ್ಲ. ಎನ್‌ಡಿಆರ್‌ಎಫ್ ತಂಡದವರು ಹೇಗೋ ಮನವೊಲಿಸಿ ಕರೆ ತಂದಿದ್ದಾರೆ. ಒಂದು ಕುರಿಯನ್ನು ಜೊತೆಗೆ ತೆಗೆದುಕೊಂಡು ಹೋಗಲು ತಿಳಿಸಿದ್ದರು. ಇನ್ನು ಎರಡು ನಾಯಿಗಳು ಅಲ್ಲಿವೆ. ನಮ್ಮವು 150 ಕುರಿಗಳಿದ್ದು, 11 ಟಗರುಗಳಿವೆ. 3 ಕುರಿಮರಿ ಇವೆ. ಅಣ್ಣ ಕುರಿಗಳ ಬಗ್ಗೆಯೇ ಚಿಂತಿಸುತ್ತಿದ್ದಾರೆ. ನೀರಿನ ಹರಿವು ಕಡಿಮೆಯಾದ ನಂತರ ಕುರಿಗಳನ್ನು ಕರೆ ತರುತ್ತೇವೆ’ ಎಂದು ಪ್ರತಿಕ್ರಿಯಿಸಿದರು. 

ಕುರಿಗಾಹಿ ಟೋಪಣ್ಣ ನಡುಗಡ್ಡೆಯಲ್ಲಿ ಸಿಲುಕಿರುವುದು ದ್ರೋಣ್‌ ಕ್ಯಾಮರಾ ಮೂಲಕ ಪತ್ತೆಯಾಗಿತ್ತು. ಅವರನ್ನು ರಕ್ಷಿಸಲು ಶನಿವಾರ ತಾಲ್ಲೂಕು ಆಡಳಿತದಿಂದ ಸಾಕಷ್ಟು ಯತ್ನಿಸಲಾಗುತ್ತಿತ್ತು. ರಾತ್ರಿಯಾದ ಹಿನ್ನೆಲೆಯಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು. ಆಗಸ್ಟ್ 9ರಂದು ಹೈದರಾಬಾದ್‌ನಿಂದ ಆಗಮಿಸಿದ ಎನ್‌ಡಿಆರ್‌ಎಫ್ ತಂಡದವರು ಸತತ 4 ಗಂಟೆ ಕಾರ್ಯಾಚರಣೆ ನಡೆಸಿ ನಡುಗಡ್ಡೆಯಲ್ಲಿ ಸಿಲುಕಿದ್ದ ಟೋಪಣ್ಣ ಅವರನ್ನು ಸುರಕ್ಷಿತವಾಗಿ ಕರೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ಈ ಕಾರ್ಯಕ್ಕೆ ಜಿಲ್ಲಾಧಿಕಾರಿ ಕೂರ್ಮಾರಾವ್ ಅವರು ಅಭಿನಂದಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.