ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವನ ಆರಾಧನೆಯಲ್ಲಿ ಜನರ ಶ್ರದ್ಧಾಭಕ್ತಿ

ನಗರದ ವಿವಿಧ ದೇಗುಲಗಳಲ್ಲಿ ವಿಶೇಷ ಪೂಜೆ; ಝಗಮಗಿಸಿದ ಶಿವಾಲಯಗಳು
Last Updated 4 ಮಾರ್ಚ್ 2019, 14:36 IST
ಅಕ್ಷರ ಗಾತ್ರ

ಯಾದಗಿರಿ: ಮಹಾಶಿವರಾತ್ರಿ ಆಚರಣೆ ಹಿನ್ನೆಲೆಯಲ್ಲಿ ನಗರದ ವಿವಿಧ ದೇಗುಲಗಳಲ್ಲಿನ ದೇವರ ಮೂರ್ತಿಗಳಿಗೆ ಸೋಮವಾರ ವಿಶೇಷ ಪೂಜೆ, ಅಭಿಷೇಕ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ನಗರದಲ್ಲಿ ಶಿವಾಲಯಗಳು ಸೇರಿದಂತೆ ಮಠ-ಮಂದಿರಗಳಲ್ಲೂ ಶಿವರಾ ಆಚರಣೆ ಸಾಗಿತ್ತು. ಅಪಾರ ಭಕ್ತರು ಬೆಳಿಗ್ಗೆ ಶ್ರದ್ಧಾ ಭಕ್ತಿಯಿಂದ ವಿಶೆಷ ಪೂಜೆ, ವಿವಿಧ ಧಾರ್ಮಿಕ ಆಚರಣೆ ನಡೆಸಿದರು. ಅಮೃತೇಶ್ವರಿ ದೇವಸ್ಥಾನದಲ್ಲಿ ಹಾಗೂ ಗಂಜ್‌ನ ಆತ್ಮ ಲಿಂಗೇಶ್ವರ ದೇಗುಲದಲ್ಲಿ ಭಕ್ತರು ವಿಶೇಷ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು.

ಸಂಜೆ ಕೆಲವು ಶಿವಾಲಯಗಳಲ್ಲಿ ಭಕ್ತ ಸಮೂಹ ಶಿವನ ಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಿ ಕಾಯಿ, ಕರ್ಪೂರ ಅರ್ಪಿಸಿ ಶಿವನನ್ನು ಆರಾಧಿಸಿದರು. ಮಕ್ಕಳು, ಮಹಿಳೆಯರು, ವೃದ್ಧರು ದೇವಾಲಯದಲ್ಲಿ ಶಿವ ಲಿಂಗಕ್ಕೆ ನೈವೇದ್ಯ ಸಲ್ಲಿಸಿ ಭಕ್ತಿ ಮೆರೆದರು.

ಖರೀದಿ ಜೋರು:ಮಹಾಶಿವರಾತ್ರಿ ಅಂಗವಾಗಿ ಜನರು ನಗರದ ಗಾಂಧಿವೃತ್ತ, ಸುಭಾಷ್‌ ವೃತ್ತ, ಶಾಸ್ತ್ರಿ ವೃತ್ತ, ಸ್ಟೇಷನ್‌ ಬಜಾರ ಮಾರುಕಟ್ಟೆಗಳಲ್ಲಿ ಜನರು ಭರ್ಜರಿ ಖರೀದಿ ನಡೆಸಿದರು. ಕಬ್ಬು, ಕಾಯಿ, ಹಣ್ಣು, ಹೂ, ತರಕಾಯಿ, ಹೊಸಬಟ್ಟೆ ಖರೀದಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ದಾಸಬಾಳ ಮಠ:
ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ವೀರೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಲಕ್ಷಜಪಯಜ್ಞ ಮತ್ತು ಸಾಮೂಹಿಕ ಲಿಂಗಪೂಜೆ ಕಾರ್ಯಕ್ರಮ ಜರುಗಿತು.

‘ಯಾವುದೇ ಆಕಾರವಿಲ್ಲದ ಆ ಶಿವ ಒಂದು ಲಿಂಗರೂಪಿಯಾಗಿ ಜಗತ್ತಿನಾದ್ಯಂತ ಮಹಾ ಶಿವರಾತ್ರಿಯ ದಿನದಂದು ಸರ್ವಧರ್ಮಿಯರಿಗೂ ಪ್ರಿಯನಾಗಿ ಪೂಜೆಗೊಳಪಡುತ್ತಾನೆ. ಮಹಾ ಶಿವರಾತ್ರಿ ಹಬ್ಬ ಸರ್ವಧರ್ಮಿಯರಿಗೂ ಶ್ರೇಷ್ಠವಾಗಿದೆ. ಕಾರಣ ಪ್ರತಿಯೊಬ್ಬರೂ ಶಿವನಾಮಸ್ಮರಣೆ ಮಾಡಿರಿ. ಇರುವ ಕಷ್ಟಗಳೆಲ್ಲವೂ ದೂರವಾಗುತ್ತವೆ’ ಎಂದು ವೀರೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು.

‘ಮಹಾಶಿವರಾತ್ರಿ ದಿನದಂದು ಲಿಂಗ ಪೂಜೆ ಹಾಗೂ ರಾತ್ರಿ ಜಾಗರಣೆ ನಡೆಯುವುದು ಸಾಂಪ್ರದಾಯ. ಆ ದಿನದಂದು ಚೆನ್ನಾಗಿ ತಿಂದು ಉಪವಾಸ ಮಾಡಿದ್ದಾಗಿ ಸುಳ್ಳು ಹೇಳುವುದು, ರಾತ್ರಿ ಶಿವನ ಧ್ಯಾನ ಮಾಡದೆ ಸಿನಿಮಾ ವೀಕ್ಷಿಸುವುದರಿಂದ ಶಿವ ಒಲಿಯುವುದಿಲ್ಲ. ಶಿವನ ಪೂಜೆಯಲ್ಲಿ ಶ್ರದ್ಧಾಭಕ್ತಿ ಇಡಬೇಕು’ ಎಂದು ಸಲಹೆ ನೀಡಿದರು.

ಪೂಜಾ ಕಾರ್ಯಕ್ರಮದಲ್ಲಿ ನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಅನೇಕ ಭಕ್ತರು ಭಾಗವಹಿಸಿದ್ದರು.

ಹತ್ತಿಕುಣಿ: ರಾಮಲಿಂಗೇಶ್ವರ ಜಾತ್ರೆ
ಹತ್ತಿಕುಣಿ ಗ್ರಾಮದಲ್ಲಿರುವ ಐತಿಹಾಸಿಕ ರಾಮಲಿಂಗೇಶ್ವರ ಜಾತ್ರೆ ಸೋಮವಾರ ಮಹಾಶಿವರಾತ್ರಿ ದಿನದಂದು ಅದ್ಧೂರಿಯಾಗಿ ಜರುಗಿತು.

ಬೆಳಿಗ್ಗೆ ದೇವಸ್ಥಾನದಲ್ಲಿ ಸೇರಿದ ಸಹಸ್ರಾರು ಭಕ್ತರು ಹಾಗೂ ಮುತೈದೆ ಹೆಣ್ಣು ಮಕ್ಕಳು ಕಳಸದೊಂದಿಗೆ ವಿವಿಧ ಸಂಗೀತ ವಾದ್ಯ ಮೇಳಗಳೊಂದಿಗೆ ದೇವರ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಇಟ್ಟುಕೊಂಡು ಗಂಗಾ ಸ್ನಾನಕ್ಕೆ ತೆರಳಿದರು. ಅಲ್ಲಿಂದ ಮೆರವಣಿಗೆ ಮೂಲಕ ಪಲ್ಲಕ್ಕಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಧ್ಯಾಹ್ನ ಮೂರ್ತಿಯನ್ನು ದೇವಸ್ಥಾನದ ಮೂಲ ಸ್ಥಳದಲ್ಲಿ ಮರು ಸ್ಥಾಪಿಸಲಾಯಿತು.

ಗ್ರಾಮದ ಹಿರಿಯ ಸ್ವಾಮೀಜಿ ವೀರಯ್ಯಸ್ವಾಮಿ ಹಿರೇಮಠ ನೇತೃತ್ವದಲ್ಲಿ ಶಿವಲಿಂಗಕ್ಕೆ ರುದ್ರಾಭಿಷೇಕ, ವಿಶೇಷ ಪೂಜೆ ಕೈಂಕರ್ಯಗಳು ಜರುಗಿದವು. ರಾತ್ರಿ ದೇವಸ್ಥಾನದಲ್ಲಿ ಪ್ರವಚನಕಾರರಾದ ಮಾತಾ ಪ್ರಭುಶ್ರೀ ಅವರಿಂದ ಶಿವನ ಮಹಿಮೆ ಕುರಿತು ಪ್ರವಚನ ನೀಡಿದರು. ನಂತರ ಗ್ರಾಮದ ವಿವಿಧ ಭಜನಾ ತಂಡಗಳಿಂದ ಶಿವಕೀರ್ತನೆ ನಡೆಯಿತು.

ಶರಣಪ್ಪ ಸಾಹುಕಾರ, ಅಮೃತರೆಡ್ಡಿ ಪಾಟೀಲ್, ಭೀಮರೆಡ್ಡಿ ರಾಂಪೂರಳ್ಳಿ, ರವಿ ಮಾಲಿಪಾಟೀಲ್, ದೇವಿಂದ್ರಪ್ಪಗೌಡ, ಬಸವರಾಜ ಕೋಡ್ಲಾ, ರಾಮರೆಡ್ಡಿ ಕೌಳೂರ, ಯಂಕಾರೆಡ್ಡಿ ಜಟ್ಟೂರ್, ಶಾಂತರೆಡ್ಡಿ ಬೂದಿ, ಭೀಮರೆಡ್ಡಿ ಕೌಳೂರ್, ಸುರೇಶ ಸಿಂಪಿಗೇರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT