ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಮಡಿಕೆ ತಯಾರಿಸಲು ಸೌರಶಕ್ತಿ ಆಧಾರಿತ ‘ತಿಗರಿ’

ನಶಿಸುತ್ತಿರುವ ಗುಡಿ ಕೈಗಾರಿಕೆಗಳಿಗೆ ಹೊಸ ಆಶಾಕಿರಣ
Last Updated 20 ಜುಲೈ 2021, 19:30 IST
ಅಕ್ಷರ ಗಾತ್ರ

ಸುರಪುರ: ಬೆಂಗಳೂರಿನ ಸೆಲ್ಕೊ ಸೋಲಾರ್ ಲೈಟ್ ಸಂಸ್ಥೆ ಮಣ್ಣಿನ ಮಡಿಕೆ ತಯಾರಿಸಲು ಅವಶ್ಯವಿರುವ ‘ತಿಗರಿ’ಯನ್ನು ಆವಿಷ್ಕರಿಸಿದೆ. ಸೌರಶಕ್ತಿ ಆಧರಿಸಿ ಚಾಲನೆಯಾಗುವ ಈ ತಿಗರಿ ಕುಂಬಾರರಿಗೆ ವರದಾನವಾಗಿದೆ. ಇದರಿಂದ ನಶಿಸಿಹೋಗುತ್ತಿದ್ದ ಕುಂಬಾರಿಕೆ ಗುಡಿ ಕೈಗಾರಿಕೆಗೆ ಹೊಸ ಆಶಾಕಿರಣ ಮೂಡಿದೆ.

ಕುಂಬಾರರು ಕಟ್ಟಿಗೆ ಇಲ್ಲವೇ ಕಬ್ಬಿಣದ ತಿಗರಿಯನ್ನು ಬಳಸುತ್ತಿದ್ದರು. ಸಮೀಪದ ಹೈದರಾಬಾದ್‍ನಿಂದ ₹ 5 ರಿಂದ ₹ 6 ಸಾವಿರ ಬೆಲೆಯ ತಿಗರಿ ತರುತ್ತಿದ್ದರು. ಈ ತಿಗರಿ 6 ಅಡಿ ವೃತ್ತಾಕಾರದ ವ್ಯಾಪ್ತಿ ಹೊಂದಿರುತ್ತದೆ. ನೆಲದ ಮೇಲೆ ಈ ತಿಗರಿಯನ್ನು ಇಡಲಾಗುತ್ತದೆ. ಕೈಯಿಂದ ಇಲ್ಲವೇ ಕೋಲಿನಿಂದ ತಿಗರಿಯನ್ನು ತಿರುಗಿಸಬೇಕು. ಕಲಿಸಿದ ಮಣ್ಣನ್ನು ತಿಗರಿಯ ಮೇಲೆ ಇರಿಸಿ ತಮಗೆ ಬೇಕಾಗುವ ಆಕಾರದಲ್ಲಿ ಮಡಿಕೆ, ಬಿಂದಿಗೆ, ಗುಳ್ಳಿ, ಹಣತೆ, ಹೂಜಿ ಇತರ ಸಾಮಾನುಗಳನ್ನು ತಯಾರಿಸುತ್ತಾರೆ.

ಈ ಕೆಲಸಕ್ಕೆ ಸಾಕಷ್ಟು ಶ್ರಮ ವ್ಯಯವಾಗುತ್ತದೆ. ತಿಗರಿಯ ವ್ಯಾಪ್ತಿ 6 ಅಡಿ ಇರುವುದರಿಂದ ಮೈ ಬಗ್ಗಿಸಬೇಕು. ತಿಗರಿಯ ವೇಗ ಒಂದೆ ಸಮನೆ ಇರುವುದಿಲ್ಲ. ಮೇಲಿಂದ ಮೇಲೆ ತಿಗರಿಯನ್ನು ಕೈಯಿಂದ ತಿರುಗಿಸಬೇಕು. ಹೀಗಾಗಿ ಕುಂಬಾರರು ಬಹುಬೇಗ ಅಯಾಸಗೊಳ್ಳುತ್ತಿದ್ದರು.

ಸೌರಶಕ್ತಿ ಆಧಾರಿತ ತಿಗರಿ ಕುಂಬಾರರಿಗೆ ಸುಲಭದಲ್ಲಿ ಕೆಲಸ ಮಾಡುವಂತೆ ರೂಪಿಸಲಾಗಿದೆ. ಕೇವಲ 1 ಅಡಿ ವೃತ್ತ ವ್ಯಾಪ್ತಿ ಹೊಂದಿದೆ. ಕಡಿಮೆ ಭಾರವಿರುವುದರಿಂದ ಟೇಬಲ್ ಮೇಲೆ ಇಡಬಹುದು. ಕುರ್ಚಿ ಹಾಕಿಕೊಂಡು ಕೆಲಸ ಮಾಡಲು ಸಾಧ್ಯವಾಗುವುದರಿಂದ ಹೆಚ್ಚಿನ ಶ್ರಮ ಬೇಕಾಗುವುದಿಲ್ಲ.

ವೇಗವನ್ನು ಹೆಚ್ಚು ಮತ್ತು ಕಡಿಮೆ ಮಾಡಲು ಗುಂಡಿ ನೀಡಲಾಗಿದೆ. ಕಲಿಸಿದ ಮಣ್ಣನ್ನು ತಿಗರಿಯ ಮೇಲೆ ಇಡಲು ಕುಂಬಾರರು ತಮಗೆ ಬೇಕಾದ ಆಕಾರದಲ್ಲಿ ಮಣ್ಣನ್ನು ರೂಪಿಸಲು ಸುಲಭವಾಗುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ಸೌರಶಕ್ತಿಯಿಂದ ಚಾಲನೆಯಾಗುವುದರಿಂದ ವಿದ್ಯುತ್ ಅವಘಡದ ಭಯ ಇಲ್ಲ.

ತಿಗರಿಗೆ ಎರಡು ಬ್ಯಾಟರಿ ನೀಡಲಾಗಿದೆ. ಸೌರಶಕ್ತಿ ಪ್ಲೇಟ್‍ಗಳನ್ನು ಸೂರ್ಯನ ದಿಕ್ಕಿಗೆ ಜೋಡಿಸಬೇಕು. ದಿನದ 24 ಗಂಟೆಯೂ ಕೆಲಸ ಮಾಡಬಹುದು. ನಿರ್ವಹಣೆ ವೆಚ್ಚ ಇಲ್ಲ. ಒಮ್ಮೆ ಖರೀದಿಸಿದರೆ ಬಹುಕಾಲ ಬಾಳಿಕೆ ಬರುತ್ತದೆ.

ರಂಗಂಪೇಟೆಯ ಬಸವರಾಜ ಅಯ್ಯಪ್ಪ ಕುಂಬಾರ ತಲೆತಲಾಂತರದಿಂದ ಈ ವೃತ್ತಿ ಮಾಡುತ್ತಿದ್ದಾರೆ. ದಿನಕ್ಕೆ 200 ಮಡಿಕೆ ತಯಾರಿಸುತ್ತಾರೆ. ಬೇಸಿಗೆ ಸೇರಿ 6 ತಿಂಗಳು ಮಾತ್ರ ಮಡಿಕೆ ತಯಾರಿಸುತ್ತಾರೆ.

‘ಈ ತಿಗರಿಯಲ್ಲಿ ಕಟ್ಟಿಗೆ ತಿಗರಿಯಂತೆ ಮಣ್ಣು ಸುಲಭವಾಗಿ ಮೇಲೆ ಬರುವುದಿಲ್ಲ. ಭಾರ ಹಾಕಿದರೆ ನಿಲ್ಲುತ್ತದೆ. ಸುಲಭವಾಗಿ ಚಾಲನೆ ಮಾಡಬಹುದಾಗಿದೆ. ಇನ್ನು ನಮಗೆ ಈ ತಿಗರಿಯ ಮೇಲೆ ಕೆಲಸ ಮಾಡಲು ಪರಿಣತಿ ಇಲ್ಲ. ಮುಂದೆ ಸುಲಭವಾಗಬಹುದು’ ಎನ್ನುತ್ತಾರೆ ಬಸವರಾಜ.

‘ಇಂದಿನ ಆಧುನಿಕ ಯುಗದಲ್ಲಿ ಜನರು ಪರಿಸರ ಸ್ನೇಹಿ ಮಣ್ಣಿನ ಮಡಿಕೆಗಳನ್ನು ಖರೀದಿಸುತ್ತಿಲ್ಲ. ಹೀಗಾಗಿ ವ್ಯಾಪಾರ ಮೊದಲಿನಂತೆ ಇಲ್ಲ. ನಮಗೆ ಬೇರೆ ಉದ್ಯೋಗ ಬರುವುದಿಲ್ಲ. ಹೀಗಾಗಿ ಇದೇ ವೃತ್ತಿಯಲ್ಲಿ ಮುಂದುವರಿದಿದ್ದೇವೆ’ ಎನ್ನುತ್ತಾರೆ ಬಸವರಾಜ.

‘ನಮ್ಮ ಸಮಾಜದ ಅನೇಕರು ಈಗ ಕುಂಬಾರಿಕೆ ಮಾಡಲು ಒಲವು ತೋರುತ್ತಿಲ್ಲ. ಸರ್ಕಾರ ಈ ಬಗ್ಗೆ ಚಿಂತನೆ ಮಾಡುವ ಅಗತ್ಯವಿದೆ. ಈ ಅನನ್ಯ ಗುಡಿ ಕೈಗಾರಿಕೆ ಉಳಿಸಿ ಬೆಳೆಸಲು ಯೋಜನೆ ರೂಪಿಸಬೇಕು’ ಎಂದು ಬಸವರಾಜ ಒತ್ತಾಯಿಸುತ್ತಾರೆ.

ತಿಗರಿ ಉಚಿತವಾಗಿ ನೀಡಿದ ಕಂಪನಿ: ಸೌರಶಕ್ತಿ ಆಧಾರಿತ ಈ ತಿಗರಿಯ ಬೆಲೆ ₹ 78 ಸಾವಿರ. ರಂಗಂಪೇಟೆಯಲ್ಲಿ ಕುಂಬಾರಿಕೆ ಹೆಚ್ಚಾಗಿ ಕಂಡುಬರುತ್ತದೆ. 10 ರಿಂದ 15 ಕುಟುಂಬಗಳು ಈ ವೃತ್ತಿ ಮಾಡುತ್ತಿವೆ. ಕುಂಬಾರಿಕೆಯನ್ನು ಪ್ರೋತ್ಸಾಹಿಸಲು ಕಂಪನಿಯು ಬಸವರಾಜ ಎಂಬುವವರಿಗೆ ಈ ತಿಗರಿಯನ್ನು ಉಚಿತವಾಗಿ ಪೂರೈಸಿದೆ. ಜೊತೆಗೆ ಅಗತ್ಯ ತರಬೇತಿಯನ್ನೂ ನೀಡಿದೆ.

***
ಪ್ರಾಯೋಗಿಕವಾಗಿ ಸೌರಶಕ್ತಿ ತಿಗರಿಯನ್ನು ಈ ಭಾಗದಲ್ಲಿ ಬಸವರಾಜ ಎಂಬುವವರನ್ನು ಆಯ್ಕೆ ಮಾಡಿ ಉಚಿತವಾಗಿ ನೀಡಲಾಗಿದೆ. ಸರ್ಕಾರ ಕುಂಬಾರಿಕೆ ಉಳಿಸಲು ಈ ತಿಗರಿಗೆ ಸಬ್ಸಿಡಿ ನೀಡಬೇಕು.
-ಗುರುರಾಜ ಕುಲಕರ್ಣಿ, ವ್ಯವಸ್ಥಾಪಕ, ಕಲಬುರ್ಗಿ ಶಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT