ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಧಾನಕರ ಪ್ರಾತಿನಿಧ್ಯ ಸಿಕ್ಕಿಲ್ಲ

Last Updated 26 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ರಾಜಕೀಯ ಕ್ಷೇತ್ರದಲ್ಲಿ ಆದ ಅನುಭವಗಳು, ಮಹಿಳೆಯರಿಗಿರುವ ಸವಾಲುಗಳು, ಸ್ತ್ರೀ ಸಬಲೀಕರಣ, ಮೀಸಲಾತಿ ಮೊದಲಾದ ವಿಷಯಗಳ ಬಗ್ಗೆ ಲಕ್ಷ್ಮಿ ಹೆಬ್ಬಾಳಕರ ‘ಪ್ರಜಾವಾಣಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ್ದಾರೆ.

l  ಈ ಚುನಾವಣೆಯ ಟಿಕೆಟ್‌ ಹಂಚಿಕೆಯಲ್ಲಿ ಮಹಿಳೆಯರಿಗೆ ನಿರೀಕ್ಷಿಸಿದಷ್ಟು ಪ್ರಾತಿನಿಧ್ಯ ಸಿಕ್ಕಿದೆಯೇ?

ಸಮಾಧಾನಕರ ಎನಿಸುವಷ್ಟು ಪ್ರಾತಿನಿಧ್ಯ ದೊರೆತಿಲ್ಲ. ಇವರು ಗೆಲ್ಲಬಲ್ಲರೇ, ಕ್ಷೇತ್ರದಲ್ಲಿ ಮುಖಂಡರು, ಮತದಾರರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆಯೇ ಎನ್ನುವುದನ್ನು ವಿಶ್ಲೇಷಿಸಿ ಟಿಕೆಟ್‌ ಹಂಚಿಕೆ ಮಾಡಲಾಗುತ್ತದೆ. ಜಾತಿಯನ್ನು ಮುಖ್ಯವಾಗಿ ಪರಿಗಣಿಸಲಾಗುತ್ತದೆ ಎನ್ನುವುದೂ ಕಟುಸತ್ಯ. ಇದರಿಂದ ಮಹಿಳೆಯರಿಗೆ ಆದ್ಯತೆ ಸಿಗುತ್ತಿಲ್ಲ.

ಹಾಗೆ ನೋಡಿದರೆ, ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ರಾಜಕೀಯ ಕ್ಷೇತ್ರಕ್ಕೆ ಬರುವ ಮಹಿಳೆಯರ ಸಂಖ್ಯೆಯೂ ಕಡಿಮೆಯೇ ಇದೆ. ಕಾಂಗ್ರೆಸ್‌ನಿಂದ 15 ಮಹಿಳೆಯರಿಗೆ ಟಿಕೆಟ್‌ ಕೊಟ್ಟಿದ್ದೀವಿ. ಬೇಟಿ ಬಚಾವೋ, ಬೇಟಿ ಪಡಾವೋ ಎಂದು ಘೋಷಣೆ ಮೊಳಗಿಸುವ ಬಿಜೆಪಿಯವರು ಎಷ್ಟು ಮಂದಿಗೆ ಕೊಟ್ಟಿದ್ದಾರೆ? ತೆನೆ ಹೊತ್ತ ಮಹಿಳೆಯನ್ನೇ ತಮ್ಮ ಪಕ್ಷದ ಚಿಹ್ನೆ ಮಾಡಿಕೊಂಡಿರುವ ಜೆಡಿಎಸ್‌ನವರು ಮಹಿಳೆಯರಿಗೇಕೆ ಹೆಚ್ಚಿನ ಪ್ರಾತಿನಿಧ್ಯ ನೀಡಿಲ್ಲ? ಮಹಿಳಾ ಸಮಾನತೆ ಎನ್ನುವುದು ಘೋಷಣೆಗೆ ಸೀಮಿತವಾದರೆ ಪ್ರಯೋಜನವಿಲ್ಲ. ಅದು ಅನುಷ್ಠಾನಕ್ಕೆ ಬರಬೇಕು. ಮಹಿಳೆ ರಾಜಕೀಯವಾಗಿ ಬೆಳೆಯಲು ಕಾಂಗ್ರೆಸ್‌ನಷ್ಟು ಅವಕಾಶ ಇತರ ಪಕ್ಷಗಳಲ್ಲಿ ಇಲ್ಲ.

l ಹಾಗಾದರೆ, ಶಾಸನಸಭೆಗಳಲ್ಲಿ ಶೇ 33ರಷ್ಟು ಸ್ಥಾನಗಳನ್ನು ಮೀಸಲಿಡುವುದು ಅಗತ್ಯವಿದೆಯಲ್ಲವೇ?

ಮಹಿಳೆಯರಿಗೆ ಮೀಸಲಾತಿ ಬೇಕು ನಿಜ. ಆದರೆ, ಅಷ್ಟೊಂದು ಸಂಖ್ಯೆಯಲ್ಲಿ ರಾಜಕೀಯಕ್ಕೆ ಬರುವುದಕ್ಕೆ ಸಾಮಾನ್ಯ ಮಹಿಳೆಯರನ್ನು ನಾವು ಸಿದ್ಧಗೊಳಿಸಿದ್ದೇವೆಯೇ, ಪೂರಕವಾದ ವಾತಾವರಣ ಇದೆಯೇ, ರಾಜಕೀಯವಾಗಿ ಅವರನ್ನು ಶಿಕ್ಷಿತರನ್ನಾಗಿ ಮತ್ತು ಪ್ರಜ್ಞಾವಂತರನ್ನಾಗಿ ಮಾಡಿದ್ದೇವೆಯೇ ಎನ್ನುವುದನ್ನೂ ಮುಖ್ಯವಾಗಿ ಪರಿಗಣಿಸಬೇಕಾಗುತ್ತದೆ. ಏಕೆಂದರೆ, ಪ್ರಭಾವಿ ರಾಜಕಾರಣಿಯ ಪತ್ನಿಯೋ, ತಾಯಿಯೋ, ಸಹೋದರಿಯೋ ಮೀಸಲಾತಿಯ ಲಾಭ ಪಡೆದುಕೊಳ್ಳುತ್ತಾರೆ. ಅವರ ಹೆಸರಿನಲ್ಲಿ ಪುರುಷರೇ ಆಡಳಿತ ನಡೆಸುತ್ತಾರೆ.

ಇದರಿಂದ ಅರ್ಹರಿಗೆ ಪ್ರಯೋಜನ ಆಗುವುದಿಲ್ಲ. ನಿಜವಾದ ಮಹಿಳಾ ಸಮಾನತೆ ಸಾಕಾರವಾಗುವುದಿಲ್ಲ. ಹೀಗಾಗಿ, ರಾಜಕಾರಣದಲ್ಲಿ ಸ್ವಂತ ಬಲದ ಮೇಲೆ ಹೋರಾಟ ನಡೆಸಿ, ಪುರುಷರಿಗೆ ಸಮರ್ಥ ಪೈಪೋಟಿ ನೀಡುವಂತೆ ಮಹಿಳೆಯರನ್ನು ಸಜ್ಜುಗೊಳಿಸಬೇಕು. ದಿಟ್ಟ ಮಹಿಳೆಯರ ಸಂಖ್ಯೆ ಕಡಿಮೆ ಇದೆ. ಪುರುಷ ಪ್ರಧಾನ ಮನಸ್ಥಿತಿಯಿಂದ ಹೊರಬಂದು, ಮಹಿಳಾ ನಾಯಕತ್ವದ ಮೇಲೆ ವಿಶ್ವಾಸ ಇಡುವಂತಹ ವಾತಾವರಣ ನಿರ್ಮಾಣವಾದರೆ ಮಹಿಳೆ ಮುಂದೆ ಬರಬಲ್ಲಳು.

l ರಾಜಕೀಯ ಪ್ರವೇಶಿಸಬೇಕು ಎನ್ನುವ ಯುವತಿಯರು, ಮಹಿಳೆಯರಿಗೆ ನಿಮ್ಮ ಸಲಹೆ ಏನು?

ನಮ್ಮ ರಾಜಕೀಯ ವ್ಯವಸ್ಥೆಯ ಬಗ್ಗೆ ತಿಳಿದುಕೊಳ್ಳಬೇಕು. ಸಾಮಾಜಿಕ ಹೋರಾಟಗಳಲ್ಲಿ ಪಾಲ್ಗೊಂಡು ಗುರುತಿಸಿಕೊಳ್ಳಬೇಕು. ಛಲದಿಂದ ಮುನ್ನುಗ್ಗ
ಬೇಕು. ಟೀಕೆಗಳಿಗೆ ಜಗ್ಗದೇ ಗುರಿಯತ್ತ ಗಮನ ಇಡಬೇಕು. ಪುರುಷರೂ ಬೆಂಬಲ ನೀಡುವಂತಹ ವರ್ಚಸ್ಸನ್ನು ಬೆಳೆಸಿಕೊಳ್ಳಬೇಕು.

l ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಮಾನ್ಯತೆ ನೀಡುವಂತೆ ಶಿಫಾರಸು ಮಾಡಿರುವುದರಿಂದ, ಈ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಅನುಕೂಲವಾಗಲಿದೆಯೇ?

ಯಾವ ಕಾರಣಕ್ಕಾಗಿ ಈ ಹೋರಾಟ ನಡೆಯಿತು, ಸ್ವತಂತ್ರ ಧರ್ಮದ ಮಾನ್ಯತೆ ದೊರೆಯುವುದರಿಂದ ಆಗುವ ಪ್ರಯೋಜನವೇನು ಎನ್ನುವುದು ಸಮಾಜದವರಿಗೆ ಗೊತ್ತಾಗಿದೆ. ವೀರಶೈವರ ಬಗ್ಗೆ ನಮಗೆ ದ್ವೇಷವಿಲ್ಲ. ಲಿಂಗಾಯತರಲ್ಲೂ ಬಡವರಿದ್ದಾರೆ. ಅವರಿಗೆ ಸೌಲಭ್ಯಗಳು ದೊರೆಯುವಂತಾಗಬೇಕು, ಮುಖ್ಯವಾಹಿನಿಗೆ ಬರಬೇಕು ಎನ್ನುವುದು ನಮ್ಮ ಉದ್ದೇಶ. ಈ ವಿಷಯ ಮುಂದಿಟ್ಟುಕೊಂಡು ರಾಜಕಾರಣ ಮಾಡುವ ಸ್ವಾರ್ಥ ನಮ್ಮ ಪಕ್ಷದವರಿಗೆ ಇಲ್ಲ. ಲಿಂಗಾಯತ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಕ್ಷೇತ್ರದಲ್ಲಿ ಸಹಜವಾಗಿಯೇ ಕಾಂಗ್ರೆಸ್‌ಗೆ ಅನುಕೂಲವಾಗಲಿದೆ. ಮತ ಗಳಿಕೆ ಪ್ರಮಾಣ ಹೆಚ್ಚಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT