ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಡಗೇರಾ: ಅಳಿವಿನಂಚಲ್ಲಿ ಗುಬ್ಬಚ್ಚಿ, ಗೂಡುಗಳು

ಗಿಡಗಳಲ್ಲಿ, ಮಣ್ಣಿನ ಮನೆಗಳಲ್ಲಿ, ಬಾವಿಗಳಲ್ಲಿ ಗೂಡು ಕಟ್ಟುತ್ತಿದ್ದ ಗುಬ್ಬಚ್ಚಿಗಳು
ವಾಟ್ಕರ್ ನಾಮದೇವ
Published 7 ಜುಲೈ 2024, 7:04 IST
Last Updated 7 ಜುಲೈ 2024, 7:04 IST
ಅಕ್ಷರ ಗಾತ್ರ

ವಡಗೇರಾ: ಜಾಗತೀಕರಣ, ನಗರೀಕರಣ, ಕೀಟನಾಶಕ, ರಾಸಾಯನಿಕ ಗೊಬ್ಬರದ ಬಳಕೆ ಹಾಗೂ ಇನ್ನಿತರ ಮಾನವ ಚಟುವಟಿಕೆಗಳಿಂದಾಗಿ ಗುಬ್ಬಚ್ಚಿಗಳು ಹಾಗೂ ಅವುಗಳ ಗೂಡುಗಳು ಅವನತಿ ಅಂಚಿಗೆ ಸರಿದಿವೆ.

ಈ ಹಿಂದೆ ವಡಗೇರಾ ತಾಲ್ಲೂಕಿನ ವ್ಯಾಪ್ತಿಯ ಗ್ರಾಮಗಳ ಗಿಡಗಳಲ್ಲಿ, ಮಣ್ಣಿನ ಮನೆಗಳಲ್ಲಿ, ಬಾವಿಗಳಲ್ಲಿ ಗುಬ್ಬಚ್ಚಿ ಹಾಗೂ ಗೂಡುಗಳು ಕಣ್ಣಿಗೆ ಗೋಚರಿಸುತಿದ್ದವು. ಹಾಗೆಯೇ ಜಮೀನುಗಳಲ್ಲಿ ತೆನೆಗಳನ್ನು ತಿನ್ನಲು ಗುಂಪು ಗುಂಪಾಗಿ ಗುಬ್ಬಚ್ಚಿಗಳು ಬರುತ್ತಿದ್ದವು. ಆಗ ರೈತರು ತಮ್ಮ‌ ಜಮೀನುಗಳಲ್ಲಿ ಅಂಟಾ (ಮಂಚದ ಆಕಾರ) ನಿರ್ಮಾಣ  ಮಾಡಿ  ಅದರ ಮೇಲೆ ನಿಂತು ಕವಣೆಯಲ್ಲಿ ಸಣ್ಣ ಕಲ್ಲುಗಳನ್ನು ಇಟ್ಟು ಗುಬ್ಬಚ್ಚಿಗಳನ್ನು ಓಡಿಸುತಿದ್ದರು. ಶಿಕ್ಷಕರು ಮಕ್ಕಳನ್ನು ಕರೆದುಕೊಂಡು ವನಮಹೋತ್ಸವಕ್ಕೆ ಹೋದಾಗ ಇಂತಹ ಗೂಡುಗಳ ಬಗ್ಗೆ ಮಕ್ಕಳಿಗೆ ಮಾಹಿತಿ ಕೊಡುತಿದ್ದರು. ಆದರೆ ಪರಿಸರ ನಾಶದ ಪರಿಣಾಮವಾಗಿ ಗುಬ್ಬಚ್ಚಿಗಳ ಸಂಖ್ಯೆ ದಿನೇ ದಿನೆ ಕಡಿಮೆಯಾಗುತ್ತಿದೆ. ಕಾಳುಭಕ್ಷಕ ಪಕ್ಷಿ ಎಂದು ಕರೆಯಲಾಗುವ ಗುಬ್ಬಚ್ಚಿ, ಸಣ್ಣ ಸಣ್ಣ ಕೀಟಗಳನ್ನು ಸಹ ತಿನ್ನುತ್ತದೆ.

ಗುಬ್ಬಿಚ್ಚಿ ಗೂಡು ಕಟ್ಟುವ ಕೌಶಲಕ್ಕೆ ಸಾಟಿ ಇಲ್ಲ: ಗೂಡು ಕಟ್ಟುವ ಪಕ್ಷಿಗಳಲ್ಲಿ ಗುಬ್ಬಚ್ಚಿ ಮೀರಿಸಿದವರಿಲ್ಲ. ಪ್ಯಾಸರ್ ಡೊಮೆಸ್ಟಿಕಸ್ ಎಂದು ಕರೆಯಲಾಗುವ ಗುಬ್ಬಚ್ಚಿ, ಪ್ಯಾಸಿರೆಡೆ ಕುಟುಂಬಕ್ಕೆ ಸೇರಿದ ಪಕ್ಷಿ ಎಂದು ಜೀವಶಾಸ್ತ್ರದಲ್ಲಿ ಗುರುತಿಸಲಾಗಿದೆ. ಒಣಗಿದ ಹುಲ್ಲು, ಕಡ್ಡಿ ಎಳೆದು ತಂದು ದಿನವಿಡೀ ಶ್ರಮವಹಿಸಿ ಗುಬ್ಬಚ್ಚಿಗಳು ಮನೆಯ ಆವರಣದಲ್ಲಿ, ಗಿಡಗಳಲ್ಲಿ ಹಾಗೂ ಬಾವಿಗಳ ಮೂಲೆಗಳಲ್ಲಿ ಗೂಡು ಕಟ್ಟುವ ಪರಿ ಸೋಜಿಗದ ಸಂಗತಿಯಾಗಿದೆ.

ಗೂಡು ನಿರ್ಮಿಸುವುದರಲ್ಲಿ ಹೆಣ್ಣು ಗುಬ್ಬಚ್ಚಿ ಪಾತ್ರ ಪ್ರಮುಖವಾಗಿದೆ. ಗಂಡು ಗುಬ್ಬಚ್ಚಿ ಗೂಡು ಕಟ್ಟಲು ಹೆಣ್ಣು ಗುಬ್ಬಚ್ಚಿಗೆ ಸಹಾಯ ಮಾಡುತ್ತದೆ. ಗೂಡು ಕಟ್ಟುವ ಬಹುತೇಕ ಪಕ್ಷಿಗಳಲ್ಲಿ ಇದು ಸಾಮಾನ್ಯ ವಿಷಯವಾಗಿದೆ. ದೇವರು ಸೃಷ್ಟಿಸದ ನಿಸರ್ಗದ ಅದ್ಭುತ ಸಿವಿಲ್ ಎಂಜಿನೀಯರ್ ಎಂದು ಗುಬ್ಬಚ್ಚಿಯನ್ನು ಕರೆಯಾಗುತ್ತಿದೆ.

ಗುಬ್ಬಚ್ಚಿ ಗೂಡು ಕಟ್ಟುವುದು ಸಂತಾನ ಸಂಭ್ರಮಕ್ಕೆ ಮತ್ತು ಬೆಚ್ಚಗಿನ ಅನುಭವಕ್ಕೆ. ಆದರೆ ಮೊಬೈಲ್ ಟವರ್‌ಗಳಿಂದ ಹೊರಹೊಮ್ಮುವ ತರಂಗಗಳಿಂದ ಗುಬ್ಬಚ್ಚಿ ಮೊಟ್ಟೆಗಳು ನಾಶವಾಗುತ್ತಿವೆ ಎಂದು ಹೇಳಲಾಗುತ್ತಿದೆ. ಗುಬ್ಬಚ್ಚಿ ಗೂಡು ಕಟ್ಟೋ ಸಂಭ್ರಮ, ಉತ್ತಮ ಮುಂಗಾರಿನ ಲಕ್ಷಣ ಕೂಡ ಎಂದು ರೈತರು ಹೇಳುತ್ತಾರೆ.

ಅವನತಿಗೆ ಕಾರಣಗಳು: ಗ್ರಾಮೀಣ ಭಾಗದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಂಡು ಬರುತ್ತಿದ್ದ ಗುಬ್ಬಿಗಳು ಈಗ ನಿಧಾನವಾಗಿ ಕಣ್ಮರೆಯಾಗುತ್ತಿವೆ. ಗುಬ್ಬಿಗಳ ಸಂತತಿ ಕಡಿಮೆಯಾಗಲು ಮೊಬೈಲ್‌ ತರಂಗಗಳು ಕಾರಣ ಎನ್ನುವುದು ಅಲ್ಪಮಟ್ಟಿಗೆ ನಿಜವಾದರೂ ಮಾನವನ ಆಧುನಿಕ ಜೀವನ ಶೈಲಿ ಗುಬ್ಬಿಗಳ ಅವನತಿಗೆ ಕಾರಣವಾಗುತ್ತಿದೆ.

ಮನುಷ್ಯರ ಜತೆ ಅವಿನಾಭಾವ ಒಡನಾಟ ಹೊಂದಿರುವ ಗುಬ್ಬಿಗಳು ಸಾಂಪ್ರದಾಯಿಕ ರೀತಿಯ ಮನೆಗಳಲ್ಲಿ ಗೂಡು ಕಟ್ಟಿಕೊಂಡು, ಕಾಳು, ಕೀಟಗಳನ್ನು ತಿಂದು ಬದುಕುತ್ತಿದ್ದವು. ಯಾವಾಗ ಕಾಂಕ್ರಿಟ್‌ ಮನೆಗಳ ನಿರ್ಮಾಣ, ಕೃಷಿಯಲ್ಲಿ ರಾಸಾಯನಿಕ ಗೊಬ್ಬರಗಳ ಬಳಕೆಯಿಂದಾಗಿ ಗುಬ್ಬಿಗಳ ಕಣ್ಮರೆ ಆರಂಭವಾಗಿದೆ.

ಮನೆಗುಬ್ಬಿ ಜೀವಿತಾವಧಿ ಕೇವಲ 3 ವರ್ಷ. ಈ ಗುಬ್ಬಿಗಳು ಕಣ್ಮರೆಯಾಗಲು ಕಾಂಕ್ರಿಟ್‌ ಮನೆಗಳೇ ಕಾರಣ. ನಗರ ಪ್ರದೇಶಕ್ಕೆ ಸೀಮಿತವಾಗಿದ್ದ ಕಾಂಕ್ರಿಟ್‌ ಮನೆಗಳು ಈಗ ಗ್ರಾಮೀಣ ಭಾಗದಲ್ಲೂ ನಿರ್ಮಾಣವಾಗುತ್ತಿರುವುದರಿಂದ ಮನೆಗಳಲ್ಲಿ ಗೂಡು ಕಟ್ಟಲು ಪ್ರಶಸ್ತ ಜಾಗ ಸಿಗದ ಕಾರಣ ಗುಬ್ಬಿಗಳು ಮನೆಯಿಂದ ದೂರವಾಗಿವೆ.

ಇದರ ಜೊತೆಗೆ ಮೊಬೈಲ್‌ ರೇಡಿಯೇಶನ್‌, ಶಬ್ದಮಾಲಿನ್ಯ, ಮಿತಿಮೀರಿದ ಕೀಟನಾಶಕ ಬಳಕೆಯೂ ಗುಬ್ಬಿ ಸಂತತಿ ಕಡಿಮೆಯಾಗಲು ಪ್ರಮುಖ ಕಾರಣವಾಗಿದೆ. ಗೊಬ್ಬರ, ಕೀಟನಾಶಕ ತಿಂದು ಗುಬ್ಬಚ್ಚಿಗಳು ಸಾಯುತ್ತಿವೆ. ಇದರಿಂದಾಗಿ ಗುಬ್ಬಚ್ಚಿಗಳು ಹಾಗೂ ಅದರ ಗೂಡುಗಳು ಇತಿಹಾಸದ ಪುಟ ಸೇರುವುದರ ಜತೆಗೆ ಮುಂಬರುವ ಜನಾಂಗಕ್ಕೆ ಅದೊಂದು ಕಥೆಯಾಗಿ ಮಾರ್ಪಡುವದರಲ್ಲಿ ಯಾವುದೆ ಅನುಮಾನವಿಲ್ಲ.

ಗುಬ್ಬಚ್ಚಿ ಸಂತತಿ ರಕ್ಷಿಸಬೇಕಾದರೆ ಹೆಚ್ಚಾಗಿ ಅಹಾರ ಧಾನ್ಯಗಳ ಬೆಳೆ ಬೆಳೆಯುವುದರ ಜತೆಗೆ ಸಾವಯವ ಗೊಬ್ಬರದ ಬಳಕೆ ಕಡಿಮೆ ಮಾಡಬೇಕು
ಡಾ.ಜಗದೀಶ ಬೀರನೂರ ಸಹಾಯಕ ಪ್ರಾಧ್ಯಾಪಕ ತೋಟಗಾರಿಕೆ ವಿವಿ ಬಾಗಲಕೋಟ
ಚಿಕ್ಕಮಕ್ಕಳು ಮನೆಯಲ್ಲಿ ಅಳುತ್ತಿರುವಾಗ ಹಾಗೂ ಊಟ ಮಾಡದೆ ಇದ್ದಾಗ ಮಕ್ಕಳಿಗೆ ಗುಬ್ಬಚ್ಚಿಗಳನ್ನು ತೋರಿಸಿ ಊಟ ಮಾಡಿಸುತ್ತಿದ್ದೇವು. ಆದರೆ ಇಂದು ಗುಬ್ಬಚ್ಚಿಗಳು ಎಲ್ಲೂ ಕಾಣುವುದಿಲ್ಲ
ಪ‍್ರಿಯಾಂಕ ಎಸ್. ಹವಾಲ್ದಾರ ಗೃಹಿಣಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT