ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಎಸ್ಸೆಸ್ಸೆಲ್ಸಿ ಪರೀಕ್ಷೆಗೆ 17,749 ವಿದ್ಯಾರ್ಥಿಗಳು ನೋಂದಣಿ

Last Updated 19 ಜುಲೈ 2021, 4:10 IST
ಅಕ್ಷರ ಗಾತ್ರ

ಯಾದಗಿರಿ: ಇವತ್ತು ಹಾಗೂ ಜುಲೈ 22 ರಂದು ನಡೆಯಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ 17,749 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದು, ಪರೀಕ್ಷಾ ಕೇಂದ್ರಕ್ಕೆ ಧಾವಿಸುತ್ತಿದ್ದಾರೆ.

ನಗರದ ಜೂನಿಯರ್ ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳು ಪರೀಕ್ಷಾ ಕೊಠಡಿ ಸಂಖ್ಯೆ ಪರಿಶೀಲಿಸಿಕೊಳ್ಳುತ್ತಿದ್ದಾರೆ. ಆಶಾ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಥರ್ಮಲ್ ಸ್ಕ್ಯಾನಿಂಗ್ ಮಾಡುತ್ತಿದ್ದಾರೆ. ಅಂತರ ಕಾಪಾಡಿಕೊಳ್ಳಲು ಶಿಕ್ಷಕರು ಸೂಚಿಸುತ್ತಿದ್ದಾರೆ.

ಪರೀಕ್ಷಾ ಕೇಂದ್ರಕ್ಕೆ ನೇಮಿಸಿದ ಸಿಬ್ಬಂದಿ ಅಂತಿಮ ಸಿದ್ಧತೆಯಲ್ಲಿ ತೊಡಗಿದ್ದಾರೆ.

ಕೋವಿಡ್ ಸುರಕ್ಷತಾ ಕ್ರಮಗಳ ಪಾಲನೆ ಹಾಗೂ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಜಿಲ್ಲೆಯಲ್ಲಿ 92 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ಪ್ರತಿಯೊಂದು ಪರೀಕ್ಷಾ ಬ್ಲಾಕ್ ನಲ್ಲಿ 12 ವಿದ್ಯಾರ್ಥಿಗಳನ್ನು ಪರಸ್ಪರ 6 ಅಡಿ ಅಂತರದೊಂದಿಗೆ ಆಸನ ವ್ಯವಸ್ಥೆ ಮಾಡಲಾಗಿದೆ.

122 ಸರ್ಕಾರಿ ಪ್ರೌಢ ಶಾಲೆ, 16 ಸರಕಾರಿ ವಸತಿ ಪ್ರೌಢ ಶಾಲೆ, 17 ಅನುದಾನಿತ ಹಾಗೂ 76 ಖಾಸಗಿ ಪ್ರೌಢ ಶಾಲೆಗಳು ಸೇರಿ ಒಟ್ಟು 231 ಶಾಲೆಗಳಿಂದ 14,060 ವಿದ್ಯಾರ್ಥಿಗಳು ಮತ್ತು 812 ಖಾಸಗಿ ಅಭ್ಯರ್ಥಿಗಳು, 2549 ಪುನಾರವರ್ತಿತ ಅಭ್ಯರ್ಥಿಗಳು, 327 ಖಾಸಗಿ ಪುನಾರವರ್ತಿತ ಅಭ್ಯರ್ಥಿಗಳು ಸೇರಿ 17,749 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ನಗರ ಪ್ರದೇಶಗಳಲ್ಲಿ 51 ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 41 ಸೇರಿ ಒಟ್ಟು 92 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷಾ ಕಾರ್ಯಕ್ಕೆ 2,400 ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ.

ಬೆಳಿಗ್ಗೆ 9 ಗಂಟೆಗೆ ಹಾಜರಿರಲು ಸೂಚನೆ:

ಜುಲೈ 19ರ ಸೋಮವಾರ ಕೋರ್ ವಿಷಯಗಳಾದ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಹಾಗೂ ಸಂಗೀತ ವಿಷಯಗಳ ಪರೀಕ್ಷೆಗಳು, ಜುಲೈ 22 ರಂದು ಭಾಷಾ ವಿಷಯಗಳ ಪರೀಕ್ಷೆಗಳು ನಡೆಯಲಿದೆ. ಪರೀಕ್ಷೆಗಳು ಬೆಳಿಗ್ಗೆ 10-30 ರಿಂದ ಮಧ್ಯಾಹ್ನ 1-30 ರ ವರೆಗೆ ನಡೆಯಲಿವೆ. ಆರೋಗ್ಯ ತಪಾಸಣೆ, ನೂಕು ನುಗ್ಗಲು ತಡೆಯುವ ಉದ್ದೇಶದಿಂದ ಬೆಳಿಗ್ಗೆ 9 ಗಂಟೆಗೆ ಪರೀಕ್ಷಾ ಕೇಂದ್ರಕ್ಕೆ ಬರಲು ಸೂಚಿಸಲಾಗಿದೆ.

ವಿವಿಧ ರೋಗಗಳ ಲಕ್ಷಣವಿರುವ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಪ್ರತಿ ಪರೀಕ್ಷಾ ಕೇಂದ್ರದಲ್ಲಿ 2 ಹೆಚ್ಚುವರಿ ಕೊಠಡಿಗಳನ್ನು ಸಿದ್ದಪಡಿಸಲಾಗಿದೆ. ಕೋವಿಡ್ ದೃಢವಾಗಿರುವ ವಿದ್ಯಾರ್ಥಿಗಳಿಗಾಗಿ ಪ್ರತಿ ತಾಲ್ಲೂಕಿನಲ್ಲಿ ಒಂದು ಪರೀಕ್ಷಾ ಕೇಂದ್ರ ಸಿದ್ಧಗೊಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT