ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಟ್ಟಿಗಳಾಗಿರುವ ಗ್ರಾ.ಪಂ. ಕೇಂದ್ರಗಳು!

ಪಿಡಿಒಗಳಿಗೆ ಗ್ರಾಮ ಪಂಚಾಯಿತಿಗಳ ಹೆಚ್ಚುವರಿ ಪ್ರಭಾರ ಹೊಣೆ
Last Updated 1 ಡಿಸೆಂಬರ್ 2018, 19:45 IST
ಅಕ್ಷರ ಗಾತ್ರ

ಯಾದಗಿರಿ: ಪಿಡಿಒಗಳಿಗೆ ಜಿಲ್ಲಾಡಳಿತ ನಾಲ್ಕೈದು ಗ್ರಾಮ ಪಂಚಾಯಿತಿಗಳ ಹೆಚ್ಚುವರಿ ಪ್ರಭಾರ ಹೊಣೆ ವಹಿಸಿರುವುದರಿಂದ ಜಿಲ್ಲೆಯಲ್ಲಿನ ಹಲವು ಗ್ರಾಮ ಪಂಚಾಯಿತಿ ಕೇಂದ್ರಗಳು ಕದ ಮುಚ್ಚಿವೆ! ಪರಿಣಾಮವಾಗಿ ಈ ಕೇಂದ್ರಗಳನ್ನು ಊರ ಜನರು ದನಗಳನ್ನು ಕಟ್ಟುವ ಕೊಟ್ಟಿಗೆಯಾಗಿಸಿಕೊಂಡಿದ್ದಾರೆ. ಇದಕ್ಕೆ ನೂತನ ತಾಲ್ಲೂಕು ಕೇಂದ್ರ ‘ವಡಗೇರಾ’ ಗ್ರಾಮ ಪಂಚಾಯಿತಿ ನಿದರ್ಶನವಾಗಿದೆ.

ಪಿಡಿಒಗಳು ಕಾಯಂ ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಮ ಪಂಚಾಯಿತಿಯ ಜತೆಗೆ ಸನಿಹದ ಮತ್ತೊಂದು ಗ್ರಾಮ ಪಂಚಾಯಿತಿಯ ಪ್ರಭಾರ ಹೊಣೆ ಮಾತ್ರ ನೀಡಬೇಕು. ಪ್ರಭಾರ ಕೂಡ ದೀರ್ಘಾವಧಿ ಇರಕೂಡದು ಎಂಬುದಾಗಿ ಸರ್ಕಾರ ತನ್ನ ಆದೇಶದಲ್ಲಿ ಸ್ಪಷ್ಟವಾಗಿ ಸೂಚಿಸಿದೆ. ಆದರೂ, ಜಿಲ್ಲಾಡಳಿತ ಸರ್ಕಾರದ ಆದೇಶ ಉಲ್ಲಂಘಿಸಿ ಪಿಡಿಒಗಳಿಗೆ ದೀರ್ಘಾವಧಿಗೆ ಪ್ರಭಾರ ಹೊಣೆ ಹೊರೆಸುತ್ತಾ ಬಂದಿದೆ.

ಪರಿಣಾಮವಾಗಿ ಒಂದೂ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿಯನ್ನು ಸಮರ್ಪಕವಾಗಿ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂಬುದು ಪಿಡಿಒಗಳ ಅಳಲಾಗಿದೆ. ಇದರಿಂದಾಗಿ ಹಣಕಾಸು ವರ್ಷಾಂತ್ಯ ತಲುಪಿದರೂ ಗ್ರಾಮ ಪಂಚಾಯಿತಿಗಳಲ್ಲಿ ಅಭಿವೃದ್ಧಿ ಕಾಮಗಾರಿಗಳ ಕ್ರಿಯಾ ಯೋಜನೆಗಳು ರೂಪುಗೊಳ್ಳುತ್ತಿಲ್ಲ. ಸರ್ಕಾರ ನೇರವಾಗಿ ನೀಡುವ 14ನೇ ಹಣಕಾಸು ಯೋಜನೆಯ ಅನುದಾನ ಕೂಡ ಜಿಲ್ಲೆಯ 123 ಗ್ರಾಮ ಪಂಚಾಯಿತಿಗಳಲ್ಲಿ ಪೂರ್ಣ ಬಳಕೆಯಾಗಿಲ್ಲ ಎಂಬುದಾಗಿ ಗ್ರಾಮ ಪಂಚಾಯಿತಿ ಸದಸ್ಯರು ಹೇಳುತ್ತಾರೆ.

ಜಿಲ್ಲೆಯಲ್ಲಿ ಈಗ ಬರ ಕಾಲುಚಾಚಿದೆ. ಬರ ಪರಿಹಾರ ನಿರ್ವಹಣೆಯನ್ನು ತಾಲ್ಲೂಕು ಆಡಳಿತ ನೋಡಿಕೊಂಡರೂ, ತಳಮಟ್ಟದಲ್ಲಿ ಗ್ರಾಮ ಪಂಚಾಯಿತಿಗಳು ಸಕ್ರಿಯವಾಗಿರಬೇಕು ಎಂಬುದಾಗಿ ಸರ್ಕಾರ ಆದೇಶಿಸಿದೆ. ಆದರೆ, ಹಲವು ಗ್ರಾಮ ಪಂಚಾಯಿತಿಗಳ ಪ್ರಭಾರ ಹೊಣೆ ಹೊತ್ತ ಪಿಡಿಒಗಳು ಸರ್ಕಾರದ ಈ ಆದೇಶದಿಂದಾಗಿ ಮತ್ತಷ್ಟೂ ಇಕ್ಕಟ್ಟಿಗೆ ಸಿಲುಕಿದ್ದಾರೆ.

‘ಪ್ರಭಾರ ಹೊಣೆ ಹೊತ್ತ ಪಿಡಿಒಗಳು ಕೇಂದ್ರ ಸ್ಥಾನಗಳಲ್ಲಿ ಇರುವುದಿಲ್ಲ. ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಗ್ರಾಮಸ್ಥರಿಗೆ ಸಿಗುವುದಿಲ್ಲ. ಸಿಕ್ಕರೂ, ಮತ್ತ್ಯಾವುದೋ ಗ್ರಾಮ ಪಂಚಾಯಿತಿಯಲ್ಲಿ ಕರ್ತವ್ಯದ ಮೇಲೆ ಇರುವುದಾಗಿ ಹೇಳುತ್ತಾರೆ. ಹಿರಿಯ ಅಧಿಕಾರಿಗಳಿಗೂ ಇದೇ ಉತ್ತರ ನೀಡುತ್ತಾರೆ. ಗ್ರಾಮಸ್ಥರ, ಮುಖಂಡರ ಮೊಬೈಲ್‌ ಕರೆಗಳನ್ನೂ ಸ್ವೀಕರಿಸುವುದಿಲ್ಲ. ಹಿರಿಯ ಅಧಿಕಾರಿಗಳಿಗೆ ದೂರು ನೀಡಿದರೆ ಪ್ರಭಾರ ಹೊರೆಯ ನೆಪ ಮುಂದೆ ಮಾಡಿ ಬಚಾವ್‌ ಅಗುತ್ತಾರೆ’ ಎಂಬುದಾಗಿ ವಡಗೇರಾದ ರೈತ ಮುಖಂಡ ನಿಂಗಣ್ಣ ಜಡಿ ಹೇಳುತ್ತಾರೆ.

‘ಬೆಳಿಗ್ಗೆ ಗ್ರಾಮ ಪಂಚಾಯಿತಿ ಕಚೇರಿ ಕಟ್ಟಡದಲ್ಲಿನ ಕಸ ಗುಡಿಸುತ್ತಾರೆ. ನಂತರ ಛಾವಣಿ ಏರಿ ರಾಷ್ಟ್ರಧ್ವಜ ಆರೋಹಣ ಮಾಡುತ್ತಾರೆ. ಅಲ್ಲಿಗೆ ಗ್ರಾಮ ಪಂಚಾಯಿತಿ ಕರ್ತವ್ಯದ ಅವಧಿ ಮುಗಿಯಿತು. ಸಂಜೆ ರಾಷ್ಟ್ರಧ್ವಜ ಅವರೋಹಣ ಮಾಡುತ್ತಾರೆ. ಹಾಗಾಗಿ, ಊರಿನ ಜನರು ಗ್ರಾಮ ಪಂಚಾಯಿತಿ ಆವರಣಗಳಲ್ಲಿಯೇ ದನಕರುಗಳನ್ನು ಕಟ್ಟಿ ಹಾಕುತ್ತಾರೆ’ ಎಂಬುದಾಗಿ ಗ್ರಾಮಸ್ಥರು ಹೇಳುತ್ತಾರೆ.

‘ಗ್ರಾಮ ಪಂಚಾಯಿತಿಗಳತ್ತ ಅಧ್ಯಕ್ಷರು, ಸದಸ್ಯರು ಕಣ್ಣು ಹಾಯಿಸುವುದಿಲ್ಲ. ಶಾಸಕರು ಇತ್ತ ಹೆಜ್ಜೆಯೂ ಹಾಕುವುದಿಲ್ಲ’ ಎಂದು ವಡಗೇರಾ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸಿದ್ದಣ್ಣ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT