ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಸಭೆ ಉಪಚುನಾವಣೆ: ಸುರಪುರ ಕೋಟೆಗೆ ‘ನಾಯಕರಾರು’?

ವಿಧಾನಸಭೆ ಉಪಚುನಾವಣೆ: ರಂಗೇರಿದ ಕಣ, ಬಿರುಸಿನ ಪ್ರಚಾರ
Published 29 ಏಪ್ರಿಲ್ 2024, 7:23 IST
Last Updated 29 ಏಪ್ರಿಲ್ 2024, 7:23 IST
ಅಕ್ಷರ ಗಾತ್ರ

ಸುರಪುರ: ಶಾಸಕ ರಾಜಾ ವೆಂಕಟಪ್ಪನಾಯಕ ನಿಧನದಿಂದ ತೆರವಾಗಿರುವ ಸುರಪುರ ಕ್ಷೇತ್ರ ವಿಧಾನಸಭೆ ಉಪ ಚುನಾವಣೆಯ ಕಣ ರಂಗೇರಿದೆ.

ಕ್ಷೇತ್ರ ಸುರಪುರ ತಾಲ್ಲೂಕು (ಕೆಂಭಾವಿ ಹೋಬಳಿಯ ಕೆಲ ಹಳ್ಳಿಗಳು ಶಹಾಪುರ ಕ್ಷೇತ್ರಕ್ಕೆ ಒಳಪಡುತ್ತವೆ) ಮತ್ತು ಹುಣಸಗಿ ತಾಲ್ಲೂಕು ವಿಸ್ತಾರ ವ್ಯಾಪ್ತಿ ಹೊಂದಿದೆ.

2004ರ ಚುನಾವಣೆಯಿಂದ ಈವರೆಗೆ ರಾಜಾ ವೆಂಕಟಪ್ಪನಾಯಕ ಮತ್ತು ನರಸಿಂಹನಾಯಕ(ರಾಜೂಗೌಡ) ಅವರ ಮಧ್ಯೆ ನೇರ ಪೈಪೋಟಿಯಿತ್ತು. ಸದ್ಯ ಕಣದಲ್ಲಿ ಅವರ ಪುತ್ರ ರಾಜಾ ವೇಣುಗೋಪಾಲ ನಾಯಕ ಇದ್ದಾರೆ.

ಕಣದಲ್ಲಿ ಒಟ್ಟು 6 ಜನ ಇದ್ದು, ನಾಲ್ವರು ಪಕ್ಷೇತರರು. ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆಯೇ ನೇರ ಹಣಾಹಣಿ ಏರ್ಪಟ್ಟಿದೆ. 2018ರ ಚುನಾವಣೆಯಲ್ಲಿ ರಾಜೂಗೌಡ 22,568 ಮತಗಳಿಂದ ರಾಜಾ ವೆಂಕಟಪ್ಪನಾಯಕ ಅವರನ್ನು ಮಣಿಸಿದ್ದರು.

2023ರ ಚುನಾವಣೆಯಲ್ಲಿ ರಾಜಾ ವೆಂಕಟಪ್ಪನಾಯಕ 25,223 ಮತಗಳ ಅಂತರದಿಂದ ರಾಜೂಗೌಡ ಅವರನ್ನು ಸೋಲಿಸಿ, ಮುಯ್ಯಿ ತೀರಿಸಿಕೊಂಡಿದ್ದರು. ಈಗ ರಾಜೂಗೌಡ ಅವರು ಗೆಲ್ಲುವ ನಿಟ್ಟಿನಲ್ಲಿ ಬಿರುಸಿನ ಪ್ರಚಾರ ನಡೆಸಿದ್ದಾರೆ.

ಈಗಾಗಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸುರಪುರದಲ್ಲಿ, ಬಸನಗೌಡ ಪಾಟೀಲ ಯತ್ನಾಳ ಹುಣಸಗಿಯಲ್ಲಿ ರೋಡ್ ಶೋ ನಡೆಸಿದ್ದಾರೆ. ತಾಂಡಾ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿದ್ದ ಮಾಜಿ ಶಾಸಕ ಪಿ. ರಾಜೀವ ಹಲವು ದಿನ ಕ್ಷೇತ್ರದ ಎಲ್ಲ ತಾಂಡಾಗಳಲ್ಲಿ ಸುತ್ತಾಡಿ ಮತ ಕೋಯ್ಲು ನಡೆಸಿದರು. ಬಿಜೆಪಿ ರಾಜ್ಯ ಸಮಿತಿ ಅಧ್ಯಕ್ಷ ವಿಜಯೇಂದ್ರ ಒಂದು ಇಡೀ ದಿನ ಕ್ಷೇತ್ರದಲ್ಲೆ ಇರುವ ಬಗ್ಗೆ ಭರವಸೆ ನೀಡಿದ್ದಾರೆ ಎಂದು ಪಕ್ಷ ತಿಳಿಸಿದೆ.

ತಮ್ಮ ತಂದೆ ರಾಜಾ ವೆಂಕಟಪ್ಪನಾಯಕ ಅವರ ಜನಪ್ರಿಯತೆಯ ಜತೆಗೆ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು, ಪಕ್ಷದ ಕಾಯಂ ಮತಗಳನ್ನು ನೆಚ್ಚಿಕೊಂಡಿರುವ ರಾಜಾ ವೇಣುಗೋಪಾಲ ನಾಯಕ ಅವರು ಮತಬೇಟೆಗೆ ಹಗಲಿರುಳು ಶ್ರಮಿಸುತ್ತಿದ್ದಾರೆ.

ಮೇ 1ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ದೇವತಕಲ್‍ನಲ್ಲಿ ಬಹಿರಂಗ ಸಭೆ ನಡೆಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರು, ರಾಜಾ ವೇಣುಗೋಪಾಲ ನಾಯಕ ಅವರ ಗೆಲುವಿಗೆ ಟೊಂಕಕಟ್ಟಿ ನಿಂತಿದ್ದಾರೆ.

ನಿರ್ಣಾಯಕವಾಗಿರುವ ಕುರುಬ ಸಮಾಜದ ಮತಗಳನ್ನು ಸೆಳೆಯಲು ಕಾಂಗ್ರೆಸ್ ಮುಖಂಡರು ಹಳದಿ ಶಾಲುಗಳನ್ನು ಹಾಕಿಕೊಂಡು ಪ್ರಚಾರ ಮಾಡುತ್ತಿದ್ದಾರೆ. ಕೆಪಿಸಿಸಿ ರಾಜ್ಯ ಸಮಿತಿ ಕಾರ್ಯದರ್ಶಿ ವೀಣಾ ಹಿರೇಮಠ ಅವರು ಲಂಬಾಣಿ ದಿರಿಸು ಧರಿಸಿ, ಆ ಜನಾಂಗದ ಮತ ಸೆಳೆಯಲು ಯತ್ನಿಸುತ್ತಿದ್ದಾರೆ.

ಜಿ.ಪಂ ಮಾಜಿ ಸದಸ್ಯರಾಗಿದ್ದ ಮರಿಲಿಂಗಪ್ಪನಾಯಕ ಕರ್ನಾಳ, ದೊಡ್ಡದೇಸಾಯಿ, ಎಪಿಎಂಸಿ ಮಾಜಿ ಅಧ್ಯಕ್ಷ ದುರ್ಗಪ್ಪ ಗೋಗಿಕರ, ಮುಖಂಡ ರಂಗನಗೌಡ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದು ಪ್ರಚಾರ ನಡೆಸಿದ್ದಾರೆ.

ಅನುಕಂಪದ ಅಸ್ತ್ರ!

ಕಾಂಗ್ರೆಸ್ ಮುಖಂಡರು, ‘ತಂದೆ ತೀರಿದ ಮಕ್ಕಳು ಇದ್ದವರ ಕೈಯಲ್ಲಿ’ ಎಂದು ಭಾಷಣ ಮಾಡುತ್ತ ಅನುಕಂಪದ ಮತಗಳನ್ನು ಸೆಳೆಯಲು ಯತ್ನಿಸುತ್ತಿದ್ದಾರೆ.

‘ತಂದೆ ಬಿಟ್ಟು ಹೋದ ಕೆಲಸಗಳನ್ನು ಮುಂದುವರಿಸುತ್ತೇನೆ. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯ ಕನಸು ನನಸು ಮಾಡುತ್ತೇನೆ’ ಎಂದು ಕಾಂಗ್ರೆಸ್ ಅಭ್ಯರ್ಥಿ ಮತ ಯಾಚಿಸುತ್ತಿದ್ದಾರೆ.

ಬಿಜೆಪಿಯ ಪ್ರತ್ಯಾಸ್ತ್ರ:

ಕಾಂಗ್ರೆಸ್ ಅಭ್ಯರ್ಥಿಗೆ ತಂದೆ ಮಾತ್ರ ತೀರಿಕೊಂಡಿದ್ದಾರೆ. ಬಿಜೆಪಿ ಅಭ್ಯರ್ಥಿಗೆ ತಂದೆ–ತಾಯಿ ಇಬ್ಬರೂ ಇಲ್ಲ. ಕ್ಷೇತ್ರದ ಮತದಾರರೇ ಅವರಿಗೆ ತಂದೆ–ತಾಯಿ ಎಂದು ಬಿಜೆಪಿ ಮುಖಂಡರು ಪ್ರತ್ಯಾಸ್ತ್ರ ಬಿಡುತ್ತಿದ್ದಾರೆ.

‘ಮೂರು ಬಾರಿ ಶಾಸಕನಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದೇನೆ. ಸುರಪುರದ ಜಟಿಲ ಸಮಸ್ಯೆಯಾಗಿದ್ದ ಕುಡಿಯುವ ನೀರಿಗೆ ಶಾಶ್ವತ ಪರಿಹಾರ ಒದಗಿಸಿದ್ದೇನೆ. ರೈತರಿಗೆ ಎರಡು ಬೆಳೆಗೆ ನೀರು ಬಿಡಿಸುತ್ತೇನೆ’ ಎಂದು ರಾಜೂಗೌಡ ಮತ ಕೇಳುತ್ತಿದ್ದಾರೆ.

ಮೋದಿ ಅಲೆ, ರಾಜ್ಯದ ಆಡಳಿತ ವಿರೋಧಿ ಅಲೆಯನ್ನು ಬಿಜೆಪಿ ನೆಚ್ಚಿಕೊಂಡಿದೆ. ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ, ಗ್ಯಾರಂಟಿ ಯೋಜನೆಗಳು, ರಾಜಾ ವೆಂಕಟಪ್ಪನಾಯಕ ಅವರ ಜನಪ್ರಿಯತೆ ತಮ್ಮ ಗೆಲುವಿಗೆ ಕಾರಣವಾಗಬಹುದು ಎಂದು ಕಾಂಗ್ರೆಸ್‌ನ ವಿಶ್ವಾಸ ಹೆಚ್ಚಿಸಿದೆ.

ಸುರಪುರ ತಾಲ್ಲೂಕಿನ ಕೊನೆ ಭಾಗದ ರೈತರಿಗೆ ತಲುಪದ ನೀರು
ಸುರಪುರ ತಾಲ್ಲೂಕಿನ ಕೊನೆ ಭಾಗದ ರೈತರಿಗೆ ತಲುಪದ ನೀರು

ಅಭ್ಯರ್ಥಿಗಳ ಬಲಾಬಲ

ಬಿಜೆಪಿ ಅಭ್ಯರ್ಥಿ ರಾಜೂಗೌಡ
 • ರಾಜಕೀಯ ಅನುಭವ ಕ್ಷೇತ್ರದ ಸಮಸ್ಯೆಗಳ ಅರಿವು.

 • ಕೋಡೇಕಲ್ ನಿವಾಸಿ ಆಗಿದ್ದು ಹಳ್ಳಿಗಳ ಮೇಲೆ ಹಿಡಿತ.

 • ಸರ್ಕಾರದ ಗ್ಯಾರಂಟಿ ಯೋಜನೆಗಳ ಜನಪ್ರಿಯತೆಯ ಆತಂಕ .

 • ಅನುಕಂಪ ಕಾಂಗ್ರೆಸ್‍ಗೆ ವರವಾಗಬಹುದು ಎಂಬ ಭೀತಿ.

 • ಹಲವು ಮುಖಂಡರ ಪಕ್ಷಾಂತರ ಸಮಸ್ಯೆ

ರಾಜೂಗೌಡ(ಬಿಜೆಪಿ)

ರಾಜೂಗೌಡ(ಬಿಜೆಪಿ)

ಕಾಂಗ್ರೆಸ್ ಅಭ್ಯರ್ಥಿ ರಾಜಾ ವೇಣುಗೋಪಾಲ
 • ಮುಖ್ಯಮಂತ್ರಿ ಆದಿಯಾಗಿ ರಾಜ್ಯ ಸರ್ಕಾರದ ಬೆಂಬಲ.

 • ಸಚಿವ ದರ್ಶನಾಪುರ ಉಸ್ತುವಾರಿ ಹೊತ್ತಿರುವುದು.

 • ಅನುಕಂಪ ಮತಗಳಾಗಿ ಪರಿವರ್ತನೆಯಾಗುತ್ತವೆ ಎಂಬ ನಂಬಿಕೆ.

 • ಗ್ಯಾರಂಟಿ ಯೋಜನೆಗಳ ಪ್ರಚಾರ.

 • ರಾಜಕೀಯ ಅನುಭವದ ಕೊರತೆ.

 • ಕುಟುಂಬದ ಹಿರಿಯರೆಲ್ಲರೂ ತೀರಿಕೊಂಡಿದ್ದು ಅವರ ಬೆಂಬಲ ಇಲ್ಲದಿರುವುದು

 • ಎದುರಾಳಿ ಸಮಬಲದವರಾಗಿರುವುದರಿಂದ ಮತದಾರರ ಒಳಸುಳಿವು ಸಿಗದಿರುವುದು ಕ್ಷೇತ್ರದ ಸಮಸ್ಯೆಗಳು

 • ಕಾಲುವೆ ಕೊನೆ ಭಾಗಕ್ಕೆ ನೀರು ಮುಟ್ಟದಿರುವುದು.

 • ಕೈಗಾರಿಕೆಗಳು ಇಲ್ಲದೆ ಕಾರ್ಮಿಕರ ಗುಳೆ ಸಮಸ್ಯೆ.

 • ಹುಣಸಗಿ ತಾಲ್ಲೂಕಿನಲ್ಲಿ ಬಹುತೇಕ ಕಚೇರಿಗಳಿಲ್ಲ

ರಾಜಾ ವೇಣುಗೋಪಾಲನಾಯಕ(ಕಾಂಗ್ರೆಸ್)
ರಾಜಾ ವೇಣುಗೋಪಾಲನಾಯಕ(ಕಾಂಗ್ರೆಸ್)

2023ರ ಚುನಾವಣೆ ಮತದಾನದ ಪ್ರಮಾಣ 75.16%

ಒಟ್ಟು ಮತದಾರರ ಸಂಖ್ಯೆ;2,83,083

ಪುರುಷರು;1,42,532

ಮಹಿಳೆಯರು;1,40,523

ಲಿಂಗತ್ವ ಅಲ್ಪಸಂಖ್ಯಾತರು;28

ಮತಗಟ್ಟೆಗಳು;317

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT