ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಾನ್ ತಪಸ್ವಿ ಭಗೀರಥ

ವಿವಿಧ ಇಲಾಖೆಗಳ ಸಹಯೋಗದಲ್ಲಿ ಜಯಂತಿ ಆಚರಣೆ; ವಿಶೇಷ ಉಪನ್ಯಾಸ
Last Updated 8 ಮೇ 2022, 15:49 IST
ಅಕ್ಷರ ಗಾತ್ರ

ಯಾದಗಿರಿ: ಭಗೀರಥ ಮಹರ್ಷಿಗಳು ತಮ್ಮ ಕಠೋರ ತಪಸ್ಸಿನ ಮೂಲಕ ಗಂಗಾಮಾತೆಯನ್ನು ಧರೆಗೆ ಕರೆತಂದರು ಎಂದು ಶಾಸಕ ವೆಂಕಟರಡ್ಡಿ ಮುದ್ನಾಳ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಮಹರ್ಷಿ ಭಗೀರಥ ಜಯಂತ್ಯುತ್ಸವ ಸಮಿತಿ ಸಂಯುಕ್ತಾಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮಹರ್ಷಿ ಭಗೀರಥ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.
ಭಗೀರಥ ಮಹಾನ್ ತಪಸ್ವಿಯಾಗಿದ್ದರು. ಅವರಂತೆ ಪ್ರಾಮಾಣಿಕ ಪ್ರಯತ್ನ ಮಾಡಿದಾಗ ಏನಾದರೂ ಸಾಧಿಸಲು ಸಾಧ್ಯವಾಗುತ್ತದೆ. ಭಗೀರಥರ ಆದರ್ಶ, ತತ್ವಗಳನ್ನು ಯುವಕರು ಜೀವನದಲ್ಲಿ ಅಳವಡಿಸಿಕೊಂಡು ಸನ್ಮಾರ್ಗದತ್ತ ಸಾಗಬೇಕು ಎಂದರು

‘ಕಠಿಣವಾದ ಹಾಗೂ ಸುದೀರ್ಘವಾದ ತಪಸ್ಸಿನಿಂದ ದೇವನದಿ ಗಂಗೆಯನ್ನು ಭೂಲೋಕ ಹಾಗೂ ಪಾತಾಳ ಲೋಕಕ್ಕೆ ಕರೆ ತರಲು ಶ್ರಮಿಸಿದ ಭಗೀರಥ ಮಹರ್ಷಿಗಳು, ಎಂಥ ವಿಘ್ನಗಳು ಬಂದರೂ ಎದೆಗುಂದದೆ ಸತತ ಪ್ರಯತ್ನದಿಂದ ತಮ್ಮ ಕಾರ್ಯ ಸಾಧನೆಯಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದರು.

ಭಗೀರಥ ಮಹರ್ಷಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪನಮನ ಸಲ್ಲಿಸಲಾಯಿತು. ನಾಯ್ಕಲ್ ತಾಂಡಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ರಾಘವೇಂದ್ರ ಐಕೂರ ಉಪನ್ಯಾಸ ನೀಡಿದರು.

ಉಪವಿಭಾಗಾಧಿಕಾರಿ ಶಾ ಆಲಂ ಹುಸೇನ್‌, ತಹಶೀಲ್ದಾರ್ ಚನ್ನಮಲ್ಲಪ್ಪ ಘಂಟಿ, ಯೂಡಾ ಅಧ್ಯಕ್ಷ ಬಸವರಾಜ ಚಂಡ್ರಕಿ, ನಗರಸಭೆ ಅಧ್ಯಕ್ಷ ಸುರೇಶ ಅಂಬಿಗೇರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಉತ್ತಾರಾದೇವಿ ಸಿ. ಮಠಪತಿ, ಮಹರ್ಷಿ ಭಗೀರಥ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ, ಸಮುದಾಯದವರು ಇದ್ದರು.

‘ಶಿವನ ಸ್ವರೂಪ ಭಗೀರಥ’

ಸುರಪುರ: ‘ಭಗೀರಥ ಹೆಸರಿನಲ್ಲಿಯೇ ಅದ್ಬುತವಾದ ಶಕ್ತಿ ಇದೆ. ಸಾಕ್ಷಾತ ಶಿವನ ಸ್ವರೂಪವೇ ಭಗೀರಥರು. ತಮ್ಮ ತಪಸ್ಸಿನ ಫಲದಿಂದ ಎಲ್ಲಾ ದಿಕ್ಕುಗಳಲ್ಲಿ ಗಂಗೆಯನ್ನು ಹರಿಸಿ ಜಲಕ್ಷಾಮವನ್ನು ನೀಗಿಸಿದರು. ಅವರ ತತ್ವ ಸಂದೇಶಗಳು ಸರ್ವಕಾಲಿಕ ಶ್ರೇಷ್ಠವಾಗಿವೆ’ ಎಂದು ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ಹೇಳಿದರು.

ತಹಶೀಲ್ದಾರ್ ಕಚೇರಿಯಲ್ಲಿ ಭಾನುವಾರ ತಾಲ್ಲೂಕು ಆಡಳಿತ ಏರ್ಪಡಿಸಿದ್ದ ಭಗೀರಥ ಮಹರ್ಷಿ ಜಯಂತಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಶೈಕ್ಷಣಿಕವಾಗಿ ಹಿಂದುಳಿದಿರುವ ಉಪ್ಪಾರ ಸಮುದಾಯ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ದೊಡ್ಡ ಹುದ್ದೆಗಳನ್ನು ಪಡೆದುಕೊಳ್ಳುವಂತಾಗಬೇಕು’ ಎಂದು ಸಲಹೆ ನೀಡಿದರು.

ಉಪನ್ಯಾಸಕ ರವಿಚಂದ್ರ ಠಾಣಾಗುಂದಿ ಮಾತನಾಡಿ, ‘ಸಮಾಜ ಬಾಂಧವರು ಸಂಘಟಿತರಾಗಬೇಕು. ಸಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿದಿರುವ ಸಮಾಜವನ್ನು ಮೀಸಲಾತಿ ಪಟ್ಟಿಗೆ ಸೇರಿಸಬೇಕು’ ಎಂದು ಒತ್ತಾಯಿಸಿದರು.

ಸಂಸ್ಕೃತ ಪಂಡಿತ ಜನಾರ್ಧನ ಪಾಣಿಭಾತೆ ಭಗೀರಥ ಮಹರ್ಷಿಗಳ ಕುರಿತು ಉಪನ್ಯಾಸ ನೀಡಿದರು.

ನಗರಸಭೆ ಅಧ್ಯಕ್ಷೆ ಸುಜಾತಾ ಜೇವರ್ಗಿ, ಗ್ರೇಡ್ 2 ತಹಶೀಲ್ದಾರ್ ಮಲ್ಲಯ್ಯ ದಂಡು, ಸಮಾಜದ ಅಧ್ಯಕ್ಷ ಭೀಮಣ್ಣ ಚಿಕ್ಕನಳ್ಳಿ ಇದ್ದರು. ಕಂದಾಯ ನಿರೀಕ್ಷಕ ಗುರುಬಸಪ್ಪ ಪಾಟೀಲ ಸ್ವಾಗತಿಸಿದರು. ಹಣಮಂತ ಪೂಜಾರಿ ನಿರೂಪಿಸಿ
ವಂದಿಸಿದರು.

***

‘ಶೈಕ್ಷಣಿಕ ಪ್ರಗತಿ ಸಾಧಿಸಲಿ’

ಹುಣಸಗಿ: ‘ಸೂರ್ಯವಂಶ ಕ್ಷತ್ರಿಯ ಸಮಾಜಕ್ಕೆ ಸೇರಿದ ಉಪ್ಪಾರರು ಇಂದು ಶೈಕ್ಷಣಿಕವಾಗಿ ಮುಂದೆ ಬರಬೇಕಿದೆ’ ಎಂದು ಉಪನ್ಯಾಸಕ ಭೀಮಾಶಂಕರ ಪೂಜಾರಿ ಹೇಳಿದರು.

ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಭಾನುವಾರ ನಡೆದ ಮಹರ್ಷಿ ಭಗೀರಥ ಜಯಂತಿಯಲ್ಲಿ ಉಪನ್ಯಾಸ ನೀಡಿದರು.

ಭಗೀರಥ ಸಮಾಜ ಮುಂದೆ ಬರುವಂತಾಗಲು ಸಂಸ್ಕಾರದ ಜತೆಯಲ್ಲಿ ಶೈಕ್ಷಣಿಕ ಪ್ರಗತಿ ಸಾಧಿಸುವದು ಅಗತ್ಯವಿದೆ. ಸಂವಿಧಾನದ ಮೂಲಕ ನಮಗೆ ನೀಡಿದ ಸೌಲಭ್ಯಗಳನ್ನು ಬಳಸಿಕೊಂಡು ಮುಂದೆ ಬರಬೇಕು ಎಂದು ಸಲಹೆ ನೀಡಿದರು.

ಉಪ ಖಜಾನಾಧಿಕಾರಿ ಸಣ್ಣಕೆಪ್ಪ ಕೊಂಡಿಕಾರ ಮಾತನಾಡಿ, ಸಮಾಜದಲ್ಲಿ ಸೌಹಾರ್ಧತೆಯನ್ನು ತರುವ ನಿಟ್ಟಿನಲ್ಲಿ ಸರ್ಕಾರವು ಶರಣರು, ಸಂತರು, ದಾರ್ಶನಿಕರ ಜಯಂತಿಯನ್ನು ಆಚರಿಸಲು ಸೂಚನೆ ನೀಡಿದೆ. ಆದರೆ ಇಂದು ಕೇವಲ ಆಯಾ ಜಾತಿ ಜನಾಂಗದವರು ಮಾತ್ರ ಜಯಂತಿಯಲ್ಲಿ ಪಾಲ್ಗೊಳ್ಳುವ ಮೂಲಕ ದಾರ್ಶನಿಕರನ್ನು ಒಂದು ಕುಲಕ್ಕೆ ಮಾತ್ರ ಸಿಮಿತ ಮಾಡುತ್ತಿರುವದು ಉತ್ತಮವಲ್ಲ ಎಂದರು.

ತಹಶೀಲ್ದಾರ್ ಅಶೋಕ ಸುರಪುರಕರ್ ಭಗಿರಥ ಮಹರ್ಷಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಗ್ರೇಡ್ - 2 ತಹಶೀಲ್ದಾರ್ ಮಹಾದೇವಪ್ಪಗೌಡ ಬಿರಾದಾರ ಪ್ರಾಸ್ತಾವಿಕ ಮಾತನಾಡಿದರು.

ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಹುಣಸಗಿ ಸಿಪಿಐ ದೌಲತ್.ಎನ್.ಕೆ ರಾಜೇಂದ್ರ, ಕೃಷಿ ಇಲಾಖೆಯ ಅಧಿಕಾರಿ ದೀಪಾ ದೊರೆ, ನಾಗನಗೌಡ ಪಾಟೀಲ, ಚಂದ್ರು ಗೋನಾಳ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT