ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂ ಬಿಡದ ತೊಗರಿ; ಆತಂಕದಲ್ಲಿ ಬೆಳೆಗಾರರು

ಜಿಲ್ಲೆಯಲ್ಲಿ 26, 662 ಎಕರೆಯಲ್ಲಿ ಗುರಿ ಮೀರಿ ತೊಗರಿ ಬಿತ್ತನೆ; ಹೊಲಗಳತ್ತ ತಿರುಗಿ ನೋಡದ ರೈತರು
Last Updated 26 ಅಕ್ಟೋಬರ್ 2018, 14:35 IST
ಅಕ್ಷರ ಗಾತ್ರ

ಯಾದಗಿರಿ:ಮಳೆ ಕೊರತೆ ಪರಿಣಾಮ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಬಿತ್ತನೆಯಾಗಿರುವ ತೊಗರಿ ಹೂ ಬಿಟ್ಟಿಲ್ಲ. ಪರಿಣಾಮ ಬೆಳೆಗಾರರು ಆತಂಕದಲ್ಲಿ ಮುಳುಗುವಂತಾಗಿದೆ.

ಮುಂಗಾರು ಹಂಗಾಮಿನಲ್ಲಿ ಒಟ್ಟು50 ಸಾವಿರ ಎಕರೆ ಖುಷ್ಕಿ ಭೂಮಿಯಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಮಳೆ ಅಭಾವ ಮತ್ತು ತೇವಾಂಶ ಕೊರತೆ ಹಿನ್ನೆಲೆಯಲ್ಲೂ ಅಂತಿಮವಾಗಿ ಜಿಲ್ಲೆಯಲ್ಲಿ 58,400 ಎಕರೆಯಷ್ಟೂ ಗುರಿಮೀರಿ ರೈತರು ತೊಗರಿ ಬಿತ್ತನೆ ನಡೆಸಿದ್ದರು.

ನೀರಾವರಿ ಪ್ರದೇಶಗಳಲ್ಲಿ 8,400 ಎಕರೆ ಬಿತ್ತನೆ ಗುರಿ ಇತ್ತು. ಆದರೆ, ಕೇವಲ 500 ಎಕರೆಯಲ್ಲಿ ಮಾತ್ರ ತೊಗರಿ ಬಿತ್ತನೆ ನಡೆದಿದೆ. ಒಟ್ಟಾರೆ 26,162 ಎಕರೆ ತೊಗರಿ ಬಿತ್ತನೆ ಗುರಿಯಲ್ಲಿ 26,662 ಎಕರೆಯಲ್ಲಿ ಗುರಿ ಮೀರಿ ರೈತರು ತೊಗರಿ ಬಿತ್ತಿದ್ದರು. ಅದರಲ್ಲಿ ಖುಷ್ಕಿ ರೈತರು ಹೆಚ್ಚಾಗಿ ತೊಗರಿಯನ್ನೇ ಅವಲಂಬಿಸಿದ್ದರು. ಆದರೆ, ಈ ಬಾರಿ ಚಳಿಗಾಲ ಅಡಿ ಇಟ್ಟರೂ ತೊಗರಿ ಹೂ ಕಾದಿಲ್ಲ. ಕಳೆದ ಇದೇ ತಿಂಗಳಿನಲ್ಲಿ ಹಸಿರು ಹೊಲಗಳೆಲ್ಲ ಹೊಂಬಣ್ಣ ಹೊತ್ತು ಕಂಗೊಳಿಸಿದ್ದವು. ಭರಪೂರ ತೊಗರಿ ಇಳುವರಿ ಕೂಡ ಸಿಕ್ಕಿತ್ತು. ಆದರೆ, ಪ್ರಸಕ್ತ ವರ್ಷದಲ್ಲಿ ತೊಗರಿ ಹೊಲಗಳೆಲ್ಲ ಹಸಿರು ಬಾಡಿದ ಗಿಡಗಳಿಂದ ಬಿಕೋ ಎನ್ನುತ್ತಿವೆ. ಇದರಿಂದಾಗಿ ರೈತರು ಹೊಲಗಳತ್ತ ತಿರುಗಿಯೂ ನೋಡುತ್ತಿಲ್ಲ.

ಯಾದಗಿರಿ ತಾಲ್ಲೂಕಿನಲ್ಲಿ ಹೆಚ್ಚು ಬಿತ್ತನೆ: ಶುಷ್ಕ ತಾಲ್ಲೂಕು ಎಂದೇ ಖ್ಯಾತಿ ಪಡೆದ ಯಾದಗಿರಿಯಲ್ಲಿ ಈ ಬಾರಿ ತೊಗರಿ ಹೆಚ್ಚು ಬಿತ್ತನೆಯಾಗಿದೆ. ಶಹಾಪುರ ತಾಲ್ಲೂಕಿನಲ್ಲಿ 19, 300 ಬಿತ್ತನೆ ಗುರಿ ಇದ್ದರೆ, ಕೇವಲ 8,100 ಎಕರೆಯಲ್ಲಿ ತೊಗರಿ ಬಿತ್ತನೆಯಾಗಿದೆ. ಸುರಪುರ ತಾಲ್ಲೂಕಿನಲ್ಲಿ 17,150 ಎಕರೆಯಲ್ಲಿ ಅಂತಿಮವಾಗಿ 9 ಸಾವಿರ ಎಕರೆಯಲ್ಲಿ ಬಿತ್ತನೆಯಾಗಿದೆ. ಯಾದಗಿರಿ ತಾಲ್ಲೂಕಿನಲ್ಲಿ 21,950 ಎಕರೆಯಲ್ಲಿ ಗುರಿಯಲ್ಲಿ ಅಂತಿಮವಾಗಿ 9,562 ಎಕರೆಯಲ್ಲಿ ಬಿತ್ತನೆಯಾಗಿದೆ.

‘ತೊಗರಿ ಈ ಬಾರಿ ರೈತರನ್ನು ಕೈಬಿಟ್ಟಿದೆ. ಸಾಲ ಮಾಡಿ ಕೃಷಿ ಮಾಡಿದ್ದ ಒಣಭೂಮಿಯ ರೈತರು ಸಾಲದಲ್ಲಿಯೇ ಬದುಕು ಸವೆಸುವಂತಾಗಿದೆ. ಈ ಸಂದರ್ಭದಲ್ಲಿ ಕನಿಷ್ಠ ಇಬ್ಬನಿಯಾದರೂ ಸುರಿದಿದ್ದರೆ ತೇವಾಂಶಕ್ಕೆ ತೊಗರಿ ಹೂಬಿಡುತ್ತಿತ್ತು. ಆದರೆ, ಚಳಿಗಾಲದಲ್ಲೂ ಉಂಟಾಗಿರುವ ಶುಷ್ಕ ವಾತಾವರಣ ತೊಗರಿ ಬಾಡಲು ಕಾರಣವಾಗಿದೆ’ ಎಂದು ಮುದ್ನಾಳ ದೊಡ್ಡ ತಾಂಡಾದ ರಾಜು ರಾಥೋಡ ಕೈಕೊಟ್ಟ ತೊಗರಿ ಕುರಿತು ಬೇಸರ ವ್ಯಕ್ತಪಡಿಸಿದರು.

ಇಳುವರಿ ಸಂಪೂರ್ಣ ಕುಸಿತ: ಜಿಲ್ಲೆಯಲ್ಲಿ ತೊಗರಿ ಇಳುವರಿ ಸಂಪೂರ್ಣ ಕುಸಿದಿದ್ದು, ರೈತರ ಜತೆಗೆ ಕೃಷಿ ಉತ್ಪನ್ನ ಮಾರುಕಟ್ಟೆ ಮಳಿಗೆ ವ್ಯಾಪಾರಿಗಳೂ ಕೂಡ ಕೈಕೈ ಹಿಸುಕಿಕೊಳ್ಳುವಂತಾಗಿದೆ.

ಮಳೆ ಕೊರತೆ: ಜೂನ್‌ ತಿಂಗಳಿನಲ್ಲಿ ಆರಂಭಗೊಂಡ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ 111 ಮಿಲಿ ಮೀಟರ್ ವಾಡಿಕೆ ಮಳೆಯಲ್ಲಿ 104 ಮಿಲಿ ಮೀಟರ್ ಮಳೆಯಾಗಿತ್ತು. ಕೇವಲ 3ರಷ್ಟು ಮಳೆ ಕೊರತೆ ಆಗಿತ್ತು. ಇದರಿಂದಾಗಿ ರೈತರು ಖುಷಿಯಿಂದ ತೊಗರಿ ಬಿತ್ತನೆ ನಡೆಸಿದ್ದರು.

ಆದರೆ, ಜುಲೈ ತಿಂಗಳಲ್ಲಿ ಜಿಲ್ಲೆಯಲ್ಲಿ 148 ಮಿಲಿ ಮೀಟರ್ ಮಳೆಯಾಗಬೇಕಿತ್ತು. ಆದರೆ, ಮಳೆ ಸುರಿದಿದ್ದು ಮಾತ್ರ ಕೇವಲ 56 ಮಿಲಿ ಮೀಟರ್‌. ಶೇ 62ರಷ್ಟು ಮಳೆ ಕೊರತೆ ಉಂಟಾಗಿ ಬರದ ಛಾಯೆ ಕಾಣಿಸತೊಡಗಿತು. ಆಗಸ್ಟ್‌ನಲ್ಲಿ 42 ಮಿಲಿ ಮೀಟರ್ ಮಳೆಯಾಗಬೇಕಿತ್ತು. ಆದರೆ, ಆಗಲೂ ಕೇವಲ 14 ಮಿಲಿ ಮೀಟರ್ ಮಳೆ ಮಾತ್ರ ಬಿದ್ದಿದೆ. ಅಲ್ಲಿಂದ ಇಲ್ಲಿವರೆಗೂ ಮಳೆ ಕಣ್ಣಾಮುಚ್ಚಾಲೆ ಆಡುತ್ತಲೇ ಶುಷ್ಕ ವಾತಾವರಣ ನಿರ್ಮಾಣಗೊಂಡಿದೆ ಎಂಬುದಾಗಿ ಕೃಷಿ ಇಲಾಖೆ ಜಿಲ್ಲೆಯ ಬರ ಪರಿಸ್ಥಿತಿ ಬಗ್ಗೆ ಸರ್ಕಾರಕ್ಕೆ ವರದಿ ನೀಡಿದೆ.


ಬೆಳೆಹಾನಿ ಎಷ್ಟು? ಮಾಹಿತಿ ನೀಡಿ

ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ತೃಣ ಧಾನ್ಯ, ದ್ವಿದಳ ಧಾನ್ಯ, ಎಣ್ಣೆಕಾಳು, ವಾಣಿಜ್ಯ ಬಳೆ ಸೇರಿ ಒಟ್ಟು 2,69,242 ಎಕರೆ ಬಿತ್ತನೆ ಗುರಿಯಲ್ಲಿ 2,30, 003 ಎಕರೆಯಲ್ಲಿ ಬಿತ್ತನೆ ನಡೆದಿದೆ. ಶೇ 92.85ರಷ್ಟು ಬಿತ್ತನೆಯಾಗಿದೆ. ಆದರೆ, ಬರದಿಂದಾಗಿ ಈ ಬೆಳೆಗಳು ಒಣಗಿವೆ. ಆದರೆ, ರೈತರಿಗೆ ಆಗಿರುವ ಬೆಳೆಹಾನಿ ಎಷ್ಟು? ಎಂಬುದರ ಬಗ್ಗೆ ಜಿಲ್ಲಾಧಿಕಾರಿ ಮಾಹಿತಿ ನೀಡಬೇಕು ಎಂದು ರಾಜ್ಯ ಹಸಿರು ಸೇನೆ ಸಂಚಾಲಕ ಮಲ್ಲಿಕಾರ್ಜುನ ಸತ್ಯಂಪೇಟೆ ಆಗ್ರಹಿಸಿದ್ದಾರೆ.

ಬರ ಪರಿಸ್ಥಿತಿಯನ್ನು ಜಿಲ್ಲಾಡಳಿತ ಇಲಾಖೆಗಳಿಗೆ ವಹಿಸಿ ಹವಾನಿಯಂತ್ರಿತ ಕೋಣೆಯಲ್ಲಿ ಕುಳಿತಿದ್ದಾರೆ. ಬರ ಕಾಮಗಾರಿಗಳಿಗೆ ಸರ್ಕಾರ ಜಿಲ್ಲೆಗೆ ಎಷ್ಟು ಅನುದಾನ ನೀಡಿದೆ? ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT