ಸರಕು ವಾಹನಗಳಲ್ಲಿ ಜನರ ಸಾಗಣೆ ಅಪರಾಧ: ನ್ಯಾ.ರಾಚಪ್ಪ ಕೆ.ತಾಳಿಕೋಟಿ ಎಚ್ಚರಿಕೆ

ಮಂಗಳವಾರ, ಜೂನ್ 18, 2019
28 °C
ಕಾನೂನು ಅರಿವು-ನೆರವು ಕಾರ್ಯಕ್ರಮ

ಸರಕು ವಾಹನಗಳಲ್ಲಿ ಜನರ ಸಾಗಣೆ ಅಪರಾಧ: ನ್ಯಾ.ರಾಚಪ್ಪ ಕೆ.ತಾಳಿಕೋಟಿ ಎಚ್ಚರಿಕೆ

Published:
Updated:
Prajavani

ಯಾದಗಿರಿ: ಸರಕು ಸಾಗಣೆ ವಾಹನಗಳಲ್ಲಿ ಶಾಲಾ ಮಕ್ಕಳು, ಕೂಲಿ ಕಾರ್ಮಿಕರು ಹಾಗೂ ಇನ್ನಿತರೆ ಪ್ರಯಾಣಿಕರನ್ನು ಮೋಟಾರು ವಾಹನ ಕಾಯ್ದೆ ಮತ್ತು ನಿಯಮ ಉಲ್ಲಂಘಿಸಿ ಸುರಕ್ಷಿತವಲ್ಲದ ರೀತಿಯಲ್ಲಿ ಕರೆದುಕೊಂಡು ಹೋಗುವುದು ಅಪರಾಧ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ರಾಚಪ್ಪ ಕೆ.ತಾಳಿಕೋಟಿ ಹೇಳಿದರು.

ನಗರದ ಆರ್‌ಟಿಒ ಕಚೇರಿ ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಾರಿಗೆ ಇಲಾಖೆ, ಪೊಲೀಸ್ ಇಲಾಖೆ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಕಚೇರಿ, ಶಿಕ್ಷಣ ಇಲಾಖೆ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಜಿಲ್ಲಾ ವಕೀಲರ ಸಂಘ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ‘ಸರಕು ಸಾಗಣೆ ವಾಹನಗಳಲ್ಲಿ ಜನರು, ಮಕ್ಕಳು, ಕೂಲಿ ಕಾರ್ಮಿಕರನ್ನು ಸಾಗಿಸುವುದು ಕಾನೂನು ಬಾಹಿರ’ ಎಂಬುದರ ಕುರಿತು ಶನಿವಾರ ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಾಹನ ಚಾಲಕರು ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿದಾಗ ಪ್ರತಿದಿನ ಹೆಚ್ಚುತ್ತಿರುವ ರಸ್ತೆ ಅಪಘಾತಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ಕೆಲಸ ನಿರ್ವಹಿಸುವಾಗ ವೃತ್ತಿಪರವಾಗಿರಬೇಕು. ಪಾಪ-ಪುಣ್ಯ ಎಂದು ಸರಕು ವಾಹನಗಳಲ್ಲಿ ಜನರನ್ನು ಹತ್ತಿಸಿಕೊಂಡಾಗ ದುರಾದೃಷ್ಟಾವಶಾತ್ ಅಪಘಾತ ಸಂಭವಿಸಿದರೆ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಅಪಘಾತಕ್ಕೀಡಾದವರಿಗೆ ಇನ್ಸೂರೆನ್ಸ್ ಅನ್ವಯವಾಗುವುದಿಲ್ಲ. ಮಾಲೀಕ ಪರಿಹಾರ ನೀಡಲು ಶಕ್ತನಾಗಿರದಿದ್ದಲ್ಲಿ ಜೈಲು ಸೇರುತ್ತಾನೆ. ಆದರೆ, ಅಪಘಾತಕ್ಕೀಡಾದ ವ್ಯಕ್ತಿಯ ಕುಟುಂಬದವರು ಬೀದಿ ಪಾಲಾಗಬೇಕಾಗುತ್ತದೆ ಎಂದು ತಿಳಿಸಿದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಕಾಶ ಅರ್ಜುನ ಬನಸೊಡೆ ಮಾತನಾಡಿ, ಪ್ರತಿದಿನ ಹೆಚ್ಚುತ್ತಿರುವ ವಾಹನಗಳ ಸಂಚಾರದಿಂದ ಸಂಭವಿಸುತ್ತಿರುವ ರಸ್ತೆ ಅಪಘಾತಗಳನ್ನು ನಿಯಂತ್ರಿಸಲು ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡುವುದು ಅಗತ್ಯವಾಗಿದೆ. ಮೋಟಾರು ವಾಹನ ಕಾಯ್ದೆ ಮತ್ತು ನಿಯಮಗಳನ್ನು ಯಾರೂ ಉಲ್ಲಂಘಿಸಬಾರದು ಎಂದು ಸಲಹೆ ನೀಡಿದರು.

ಪ್ರಾದೇಶಿಕ ಸಾರಿಗೆ ಅಧಿಕಾರಿ ವಸಂತ ಚವ್ಹಾಣ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ತಂಡದಿಂದ ವೈಜ್ಞಾನಿಕವಾಗಿ ತನಿಖೆ ಕೈಗೊಂಡು ಜಿಲ್ಲೆಯಲ್ಲಿ 65 ಅಪಘಾತ ವಲಯ (ಬ್ಲ್ಯಾಕ್‍ಸ್ಪಾಟ್)ಗಳನ್ನು ಗುರುತಿಸಲಾಗಿದೆ. ಆ ಸ್ಥಳಗಳಲ್ಲಿ ಅಪಘಾತಗಳನ್ನು ತಡೆಗಟ್ಟಲು ಸೂಚನಾ ಫಲಕ ಅಳವಡಿಕೆ, ರಸ್ತೆ ಸುಧಾರಣೆ ಸೇರಿದಂತೆ ಮುಂತಾದ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಮುಖ್ಯವಾಗಿ ಚಾಲಕರು ಸುರಕ್ಷಿತವಾಗಿ ವಾಹನ ಚಲಾಯಿಸುವುದು ಅವಶ್ಯವಾಗಿದೆ ಎಂದು ಹೇಳಿದರು.

ಅಧಿಕ ಭಾರ ಅಥವಾ ಹೆಚ್ಚು ಪ್ರಯಾಣಿಕರನ್ನು ಕೊಂಡೊಯ್ಯಬಾರದು. ರಸ್ತೆ ಬದಿಯ ಸೂಚನಾ ಫಲಕಗಳನ್ನು ಗಮನಿಸಿ ವಾಹನ ಚಲಾಯಿಸಬೇಕು. ಮದ್ಯಪಾನ ಮಾಡಿ ಅಥವಾ ಮೊಬೈಲ್ ಬಳಕೆ ಮಾಡುತ್ತಾ ವಾಹನ ಚಲಾಯಿಸಬಾರದು. ಅಪ್ರಾಪ್ತ ವಯಸ್ಕರು ವಾಹನ ಚಾಲನೆ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಪೊಲೀಸ್ ಇಲಾಖೆ ಸಹಯೋಗದಲ್ಲಿ ಎಫ್‍ಐಆರ್ ದಾಖಲಿಸಲಾಗುತ್ತಿದೆ. ಆರ್‌ಸಿ ಪರವಾನಗಿ ಮತ್ತು ಚಾಲನಾ ಪರವಾನಗಿ ರದ್ದತಿಗೂ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಡಿವೈಎಸ್‍ಪಿ ಯು.ಶರಣಪ್ಪ ಮಾತನಾಡಿ, ಮನುಷ್ಯರನ್ನು ಕರೆದುಕೊಂಡು ಹೋಗುವ ವಾಹನಗಳಲ್ಲಿ ಮನುಷ್ಯರನ್ನು ಮಾತ್ರ ಕರೆದುಕೊಂಡು ಹೋಗಬೇಕು. ಅದೇ ರೀತಿ ಸರಕು ಸಾಗಣೆಯಲ್ಲಿಯೂ ಅನುಸರಿಸಬೇಕು. ಇಲ್ಲವಾದಲ್ಲಿ ದಂಡ ತೆರುವ ಜೊತೆಗೆ ಶಿಕ್ಷೆ ಅನುಭವಿಸಬೇಕಾಗುತ್ತದೆ. ಸರಕು ವಾಹನಗಳಲ್ಲಿ 4 ಜನರನ್ನು ಹತ್ತಿಸಿಕೊಂಡರೆ ₹4 ಸಾವಿರ ವರೆಗೆ ದಂಡ ವಿಧಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಬಾಲ ಕಾರ್ಮಿಕ ಇಲಾಖೆ ಯೋಜನಾ ನಿರ್ದೇಶಕ ರಘುವೀರ್‌ ಸಿಂಗ್ ಠಾಕೂರ್ ಮಾತನಾಡಿ, ಹತ್ತಿ, ಭತ್ತ, ಹೆಸರು ಮುಂತಾದ ಕೃಷಿ ಕಾರ್ಯಗಳಿಗಾಗಿ ಕಾರ್ಮಿಕರನ್ನು ಟಂಟಂ, ಟ್ರ್ಯಾಕ್ಟರ್ ಸೇರಿದಂತೆ ಸುರಕ್ಷಿತವಲ್ಲದ ವಾಹನಗಳಲ್ಲಿ ಕೊಂಡೊಯ್ಯುವುದು ಕಳವಳಕಾರಿ ಸಂಗತಿಯಾಗಿದೆ. ಈ ಬಗ್ಗೆ ಕಾರ್ಮಿಕ ಇಲಾಖೆಯು ವಿವಿಧ ಇಲಾಖೆಗಳ ಜೊತೆಗೂಡಿ ದಾಳಿ ನಡೆಸುವ ಜೊತೆಗೆ ಜಾಗೃತಿ ಮೂಡಿಸುತ್ತಿದೆ. ವಾಹನ ಚಾಲಕರ ಮತ್ತು ಕಾರ್ಮಿಕರ ಸಂಘಟನೆಗಳು ತಮ್ಮ ಕಾರ್ಮಿಕರ ಹಿತರಕ್ಷಣೆಗಾಗಿ ಸಂಚಾರ ನಿಯಮಗಳ ಬಗ್ಗೆ ತಿಳಿವಳಿಕೆ ನೀಡಬೇಕು ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿ ವಕೀಲ ಬಿ.ಜಿ.ಪಾಟೀಲ್ ಉಪನ್ಯಾಸ ನೀಡಿದರು. ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ಸಂಚಾಲನಾ ಅಧಿಕಾರಿ ಮಹಿಪಾಲ ಬೇಗಾರ, ಕಾರ್ಮಿಕ ಇಲಾಖೆಯ ಯಾದಗಿರಿ ವೃತ್ತ ನಿರೀಕ್ಷಕ ಶಿವಶಂಕರ ಬಿ.ತಳವಾರ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಶ್ರೀನಿವಾಸರಾವ್ ಕುಲಕರ್ಣಿ, ಪ್ರಾದೇಶಿಕ ಸಾರಿಗೆ ಇಲಾಖೆ ಇನ್‍ಸ್ಪೆಕ್ಟರ್ ವೆಂಕಟಪ್ಪ, ಗಿರಿನಾಡು ಟ್ಯಾಕ್ಸಿ ಕಾರ್ ಚಾಲಕರ ಸಂಘದ ಅಧ್ಯಕ್ಷ ಮಲ್ಲನಗೌಡ, ಶಂಕರನಾಗ ಅಭಿಮಾನಿಗಳ ಹಾಗೂ ಆಟೊ ಚಾಲಕರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ (ಸಾಂಗ್ಲಿಯಾನ), ಸರ್ ಎಂ.ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ದೇವಜಿ ಜಾಧವ್, ಜಿಲ್ಲಾ ಮೆಕ್ಯಾನಿಕ್ ಸೇವಾ ಸಂಘದ ಅಧ್ಯಕ್ಷ ಪ್ರಕಾಶ್ ಚವ್ಹಾಣ, ಇಮ್ರಾನ್ ಖಾಜಿ ಡೈಮಂಡ್ ಇದ್ದರು. ಕಾರ್ಯಕ್ರಮದಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ, ವಾಹನ ಚಾಲಕರು, ಸಾರ್ವಜನಿಕರು ಪಾಲ್ಗೊಂಡಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !