ಶುಕ್ರವಾರ, ಸೆಪ್ಟೆಂಬರ್ 24, 2021
27 °C
ಯಾದಗಿರಿಯಿಂದ 13 ಕಿ.ಮೀ ದೂರ, ವಾರಾಂತ್ಯದಲ್ಲಿ ಜನಜಂಗುಳಿ

ಯಾದಗಿರಿ–ಹತ್ತಿಕುಣಿ ಜಲಾಶಯದತ್ತ ಪ್ರವಾಸಿಗರ ದಂಡು

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ನಗರದಿಂದ ಕೇವಲ 13 ಕಿ.ಮೀ ದೂರದಲ್ಲಿರುವ ಹತ್ತಿಕುಣಿ ಜಲಾಶಯಕ್ಕೆ ಪ್ರವಾಸಿಗರು ಒಂದು ದಿನದ ಪಿಕ್‌ನಿಕ್‌ಗೆ ಕುಟುಂಬ ಸಮೇತ ಭೇಟಿ ತೆರಳಿ ಆನಂದಿಸುತ್ತಿದ್ದಾರೆ.

ಯಾದಗಿರಿ ತಾಲ್ಲೂಕಿನ ಹತ್ತಿಕುಣಿ ಗ್ರಾಮದಲ್ಲಿ ಹೊರವಲಯದಲ್ಲಿ ಇರುವ ಈ ಜಲಾಶಯವು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಯಾದಗಿರಿ–ಸೇಡಂ ಮಾರ್ಗದಲ್ಲಿ ಸಾಗಿದರೆ ಜಲಾಶಯ ಸಿಗುತ್ತದೆ. ಹಸಿರು ಬೆಟ್ಟಗಳ ಮಧ್ಯೆ ಇರುವ ಹತ್ತಿಕುಣಿ ಜಲಾಶಯ ಭರ್ತಿಯಾಗಿದ್ದು, ರೈತರು ಸಂತಸಗೊಂಡಿದ್ದಾರೆ.

ಈ ಜಲಾಶಯದ ಮೂಲಕ ಹತ್ತಿಕುಣಿ, ಯಡ್ಡಳ್ಳಿ, ಬಂದಳ್ಳಿ, ಹೊನಗೇರಾ, ಕಟಗಿಶಹಾಪುರ, ದಸರಾಬಾದ್ ಗ್ರಾಮಗಳ ಒಟ್ಟು 5,300 ಎಕರೆ ಜಮೀನು ನೀರಾವರಿ ಕ್ಷೇತ್ರವಾಗುತ್ತದೆ.  0.352 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿದೆ.

‘ಪ್ರತಿವರ್ಷ ಆಗಸ್ಟ್, ಸೆಪ್ಟೆಂಬರ್ ತಿಂಗಳಲ್ಲಿ ಜಲಾಶಯ ಭರ್ತಿಯಾಗುತ್ತಿತ್ತು. ಆದರೆ, ಈ ವರ್ಷ ಜುಲೈನಲ್ಲಿಯೇ ಭರ್ತಿಯಾಗಿದೆ. ಇದರಿಂದ ರೈತರು ಮುಂಗಾರು ಹಾಗೂ ಹಿಂಗಾರು ಬೆಳೆ ಬೆಳೆಯಲು ಸಹಾಯಕವಾಗಲಿದೆ’ ರೈತರು ಸಂತಸ ವ್ಯಕ್ತಪಡಿಸುತ್ತಾರೆ.

ಕುಟುಂಬ ಸಮೇತ ಬರುವ ಪ್ರವಾಸಿಗರು: ಜಿಲ್ಲೆಯಲ್ಲಿ ಮುಂಗಾರು ಮಳೆ ಉತ್ತಮವಾಗಿದ್ದು, ಹತ್ತಿಕುಣಿ ಜಲಾಶಯದ ಸುತ್ತಮುತ್ತಲಿನ ಪ್ರದೇಶದಲ್ಲಿ ಹಚ್ಚ ಹಸಿರಿನಿಂದ ಕೂಡಿದೆ. ಇದು ಪ್ರವಾಸಿಗರಿಗೆ ಹೇಳಿ ಮಾಡಿಸಿದ ಸ್ಥಳವಾಗಿದೆ.

ಕುಟುಂಬ ಸಮೇತವಾಗಿ ಇಲ್ಲಿಗೆ ಬರುವ ಪ್ರವಾಸಿಗರೂ ಬುತ್ತಿ ಕಟ್ಟಿಕೊಂಡು ಹಚ್ಚ ಹರಿಸಿನ ಪರಿಸರದಲ್ಲಿ ವಿರಮಿಸುವುದು ಕಂಡು ಬರುತ್ತದೆ.

ವಾರಾಂತ್ಯದಲ್ಲಿ ಜನಜಂಗುಳಿ: ರಜಾ ದಿನ ಸೇರಿದಂತೆ ವಾರಾಂತ್ಯದಲ್ಲಿ ಜಲಾಶಯದ ಬಳಿ ಜನಜಂಗುಳಿ ಸೇರುತ್ತದೆ. ಕೆಲವರು ಬೆಳಿಗ್ಗೆಯಿಂದ ಬಂದು ಮಧ್ಯಾಹ್ನಕ್ಕೆ ತೆರಳಿದರೆ ಮತ್ತೆ ಕೆಲವರು ಮಧ್ಯಾಹ್ನ ಬಂದು ಸಂಜೆಗೆ ತೆರಳುತ್ತಾರೆ. ಜಲಾಶಯದ ಬಳಿ ಫೋಟೊ ತೆಗೆಸಿಕೊಂಡು ಸಂಭ್ರಮಿಸುವುದು ಕಂಡು ಬರುತ್ತದೆ.

ಚಿಕ್ಕ ಉದ್ಯಾನ ನಿರ್ಮಾಣ: ಪ್ರವಾಸಿ ಮಂದಿರದ ಮುಂಭಾಗದಲ್ಲಿ ಗುರುಮಠಕಲ್ ಮತಕ್ಷೇತ್ರದ ಶಾಸಕ ನಾಗನಗೌಡ ಕಂದಕೂರು ಅವರು ಪ್ರವಾಸೋದ್ಯಮ ಇಲಾಖೆಯಿಂದ ₹1 ಕೋಟಿ ರೂಪಾಯಿ ವೆಚ್ಚದಲ್ಲಿ ಚಿಕ್ಕ ಉದ್ಯಾನವನ, ಮಕ್ಕಳು ಆಟವಾಡಲು ಸೂಕ್ತ ವಾತಾವರಣ ನಿರ್ಮಾಣ ಮಾಡಿದ್ದಾರೆ. ಸಣ್ಣ ಬಯಲು ರಂಗಮಂದಿರ ಇದ್ದು, ಸಣ್ಣಪುಟ್ಟ ಕಾರ್ಯಕ್ರಮ ಮಾಡಿಕೊಳ್ಳಲು ಸೂಕ್ತ ಜಾಗವಿದೆ.

ಮುರಿದು ಬಿದ್ದ ಫೈಬರ್‌ ಗೊಂಬೆಗಳು: ಉದ್ಯಾನವನದಲ್ಲಿ ಅಲಂಕಾರಕ್ಕಾಗಿ ತಂದಿರುವ ಫೈಬರ್‌ ಗೊಂಬೆಗಳು ಮುರಿದು ಬಿದ್ದಿವೆ. ಕುಡಿಯುವ ನೀರಿನ ವ್ಯವಸ್ಥೆ ಇಲ್ಲ.  ಭದ್ರತಾ ಸಿಬ್ಬಂದಿಯೂ ಇಲ್ಲಿಲ್ಲ. 

 ***

ಮಾರ್ಗದರ್ಶಕ ಫಲಕಗಳಿಲ್ಲ

ಜನರನ್ನು ಆಕರ್ಷಿಸುವ ಹುತ್ತಿಕುಣಿ ಜಲಾಶಯಕ್ಕೆ ತೆರಳಲು ಯಾವುದೇ ಮಾರ್ಗದರ್ಶಕ ಫಲಕಗಳಿಲ್ಲ. ಇದರಿಂದ ಬೇರೆ ಜಿಲ್ಲೆಯವರಿಗೆ ಈ ಭಾಗದಲ್ಲಿರುವ ಪ್ರವಾಸಿ ತಾಣಗಳ ಬಗ್ಗೆ ಮಾಹಿತಿಯೇ ಸಿಗುವುದಿಲ್ಲ.

‘ಜಿಲ್ಲಾ ಕೇಂದ್ರದಲ್ಲಿ ಹೊಸ ಮತ್ತು ಹಳೆ ಬಸ್‌ ನಿಲ್ದಾಣಗಳಿದ್ದು, ಕನಿಷ್ಠ ಪ್ರವಾಸಿ ತಾಣದ ಬಗ್ಗೆ ಫಲಕಗಳೇ ಇಲ್ಲ. ಇದರಿಂದ ಇದು ಜಿಲ್ಲೆಗೆ ಮಾತ್ರ ಸಿಮೀತಗೊಂಡಿದೆ. ಬೇರೆ ಜಿಲ್ಲೆಯವರು ಬಂದಾಗ ಪ್ರವಾಸಿ ತಾಣಗಳ ಫಲಕಗಳು ಇದ್ದರೆ ಆಸಕ್ತರು ತೆರಳಬಹುದಾಗಿದೆ’ ಎಂದು ಪ್ರವಾಸಿಗ ನವೀನಕುಮಾರ ಎಸ್‌.ಹೇಳುತ್ತಾರೆ.

‘ನಗರದ ವಿವಿಧ ಕಡೆ ಹತ್ತಿಕುಣಿ ಜಲಾಶಯಕ್ಕೆ ತೆರಳುವ ಮಾರ್ಗದರ್ಶಕ ಬೋರ್ಡ್‌ಗಳನ್ನು ಅಳವಡಿಸಿ ಪ್ರವಾಸೋದ್ಯಮ ಇಲಾಖೆ ಮತ್ತಷ್ಟು ಪ್ರವಾಸಿಗರನ್ನು ಆಕರ್ಷಿಸಬೇಕು’ ಎನ್ನುತ್ತಾರೆ ಅವರು.

***

ಯಾದಗಿರಿ ಜಿಲ್ಲೆಯಲ್ಲಿರುವ ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸಿ ಮತ್ತಷ್ಟು ಪ್ರವಾಸಿಗರು ಬರುವಂತೆ ಮಾಡಬೇಕು. ಸೂಕ್ತ ನಾಮಫಲಕಗಳನ್ನು ಅಳವಡಿಸಬೇಕು
ನವೀನಕುಮಾರ ಎಸ್‌., ಪ್ರವಾಸಿಗ

***

ಜಿಲ್ಲಾಡಳಿತ ಜಲಾಶಯದ ಬಳಿ ಬೋಟ್ ವಿಹಾರ ಸೌಕರ್ಯ ಕಲ್ಪಿಸಿದರೆ ಹೆಚ್ಚಿನ ಆದಾಯ ಬರುತ್ತದೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದು ಅಗತ್ಯ
ವಿಜಯಶಂಕರ ಹಳಿಮನಿ, ಪ್ರವಾಸಿಗ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು