ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಡರು ಸಾಂವಿಧಾನಿಕ ಎಸ್‌ಟಿ ಫಲಾನುಭವಿಗಳಲ್ಲ

ಬೇಡ ಉಪಜಾತಿಗಳಿಂದ ಎಸ್‌ಟಿ ನಕಲಿ ಜಾತಿಪ್ರಮಾಣ ಪತ್ರ: ಆರೋಪ
Last Updated 21 ಅಕ್ಟೋಬರ್ 2018, 15:24 IST
ಅಕ್ಷರ ಗಾತ್ರ

ಯಾದಗಿರಿ: ರಾಜ್ಯದಲ್ಲಿ ಎಸ್‌ಟಿ ಪ್ರಮಾಣಪತ್ರ ಪಡೆಯುತ್ತಿರುವ ವಾಲ್ಮೀಕಿ ಜನರು ನಿಜವಾದ ಫಲಾನುಭವಿಗಳಲ್ಲ. ಸಾಂವಿಧಾನಿಕ ದಾಖಲೆ ಪ್ರಕಾರ ಅವರು ಹಿಂದುಳಿದ ವರ್ಗಕ್ಕೆ ಸೇರಿದ್ದಾರೆ. ‘ನಾಯ್ಕಡ್’ ಜನರು ಮಾತ್ರ ಎಸ್‌ಟಿ ಪ್ರಮಾಣಪತ್ರ ಪಡೆಯುವ ಹಕ್ಕು ಹೊಂದಿದ್ದಾರೆ. ಅವರ ಹೆಸರಲ್ಲಿ ಬೇಡರು ಹಾಗೂ ಹಲವು ಉಪಜಾತಿಗಳು ಎಸ್‌ಟಿ ನಕಲಿ ಪ್ರಮಾಣಪತ್ರ ಪಡೆಯುತ್ತಿವೆ ಎಂದು ಕುರುಬ, ಕಾಡುಬರುಬ, ಗೊಂಡ ಮತ್ತು ಟೋಕ್ರೆ ಕೋಲಿ ಮತ್ತು ಕಬ್ಬಲಿಗ ಸಂಯುಕ್ತ ಹೋರಾಟ ಸಮಿತಿಯ ಮುಖಂಡ ಮಹಾಂತೇಶ್ ಕೌಲಗಿ ಆರೋಪಿಸಿದರು.

ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,‘ಚಂದ್ರಶೇಖರ್‌ ಅವರು ಸಿಎಂ ಆಗಿದ್ದ ಅವಧಿಯಲ್ಲಿ ಸುಗ್ರೀವಾಜ್ಞೆ ಮೂಲಕ ವಾಲ್ಮೀಕಿ ಜನರು ಎಸ್‌ಟಿ ಫಲಾನುಭವಿಗಳೆಂದು ಘೋಷಿಸಲಾಗಿದೆಯೇ ಹೊರತು, ಅವರು ಸಾಂವಿಧಾನಿಕ ಮೂಲ ಫಲಾನುಭವಿಗಳಲ್ಲ’ ಎಂದರು.

‘ರಾಷ್ಟ್ರೀಯ ಹಿಂದುಳಿದ ಆಯೋಗದ ಮಾಹಿತಿ ಪ್ರಕಾರ ಬೆಂಡರ್‌, ಬೇರಾಡ, ನಾಯಕ ಮಕ್ಕಳು, ಪಾಳೇಗಾರ, ಬೋಯಾ, ವಾಲ್ಮೀಕಿ ಮಕ್ಕಳು, ನ್ಯಾಸನಾಯಕ, ಅರಸ ನಾಯಕ, ಬ್ಯಾಡ ಉಪಜಾತಿಗಳು ಈಗ ಎಸ್‌ಟಿ ಪ್ರಮಾಣಪತ್ರ ಪಡೆಯುತ್ತಿವೆ. ಆದರೆ, ಈ ಎಲ್ಲ ಜಾತಿಗಳು ಒಬಿಸಿ ಪಟ್ಟಿಯಲ್ಲಿಯೇ ಇವೆ. ಇದನ್ನು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳ ಆದೇಶಪತ್ರಗಳಲ್ಲಿ ಇವೆ. ಈ ಉಪಜಾತಿಗಳು ಮೂಲ ಎಸ್‌ಟಿ ಪಟ್ಟಿಯಲ್ಲಿ ಇಲ್ಲ. ಒಂದು ವೇಳೆ ದಾಖಲೆಗಳಿದ್ದರೆ ವಾಲ್ಮೀಕಿ ಸಮಾಜದವರು ಹಾಜರುಪಡಿಸಲಿ’ ಎಂದು ಸವಾಲು ಹಾಕಿದರು.

‘ಸ್ವಾತಂತ್ರ್ಯ ಪೂರ್ವ ಹಾಗೂ ನಂತರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಡೆಸಿರುವ ಕುಲಶಾಸ್ತ್ರ ಅಧ್ಯಯನದ ಪ್ರಕಾರ ರಾಜ್ಯದಲ್ಲಿ ಗೊಂಡ, ಕಾಡುಕುರುಬ, ಜೇನು ಕುರುಬ, ಟೋಕ್ರೆ ಕೋಲಿ ಕಬ್ಬಲಿಗ ಸೇರಿದಂತೆ ಹಲವು ಉಪಜಾತಿಗಳಿಗೆ ಎಸ್‌ಟಿ ಜಾತಿಪ್ರಮಾಣ ಪತ್ರ ನೀಡುವಂತೆ ಅಧಿಕೃತ ಆದೇಶ ಇದೆ. ಅದರಂತೆ ಅಧಿಕಾರಿಗಳು ವಿತರಿಸುತ್ತಿದ್ದಾರೆ. ಇದನ್ನು ಅರಿಯದೇ ವಾಲ್ಮೀಕಿ ಸ್ವಾಮೀಜಿ ಸಮಾಜದ ಮುಖಂಡ ಮಾತಿಗೆ ಕಿವಿಗೊಟ್ಟು ಅನ್ಯ ಜಾತಿಗಳನ್ನು ಅಲ್ಲಗಳೆಯುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೋಲಿ ಕಬ್ಬಲಿಗ ಸಂಘದ ರಾಜ್ಯಘಟಕದ ಗೌರವ ಅಧ್ಯಕ್ಷ ತಿಪ್ಪಣ್ಣಪ್ಪ ಕಮಕನೂರ ಮಾತನಾಡಿ,‘ ಸಾಂವಿಧಾನಿಕ ಹಕ್ಕು ಪಡೆದಿರುವವನ್ನೇ ನಕಲಿ ಎಂದು ಸೃಷ್ಟಿಸಲು ವಾಲ್ಮೀಕಿ ಮುಖಂಡರು ಹೊರಟಿದ್ದಾರೆ. ಸರ್ಕಾರದ ಮಟ್ಟದಲ್ಲಿ ವಾಲ್ಮೀಕಿ ಸಮಾಜದ ಪ್ರಭಾವಿ ಸಚಿವ, ಶಾಸಕರೂ ಕೂಡ ಗೊಂಡ, ಕಾಡುಕುರುಬ, ಜೇನು ಕುರುಬ, ಟೋಕ್ರೆ ಕೋಲಿ, ಕಬ್ಬಲಿಗರಿಗೆ ಸಿಗಬೇಕಾದ ಸೌಲಭ್ಯಗಳನ್ನು ಕಸಿದುಕೊಳ್ಳುತ್ತಿದ್ದಾರೆ. ಇದನ್ನು ವಿರೋಧಿಸಿ ಕುರುಬ– ಕೋಲಿ ಸಮಾಜದಿಂದ ಅ. 29ರಂದು ಕಲಬುರ್ಗಿಯಲ್ಲಿ ಬೃಹತ್‌ ಹೋರಾಟ ಹಮ್ಮಿಕೊಳ್ಳಲಾಗಿದೆ’ ಎಂದು ಹೇಳಿದರು.

ಮುಖಂಡರಾದ ದೇವೀಂದ್ರಪ್ಪ ಮರತೂರ, ತಿಪ್ಪಣ್ಣ ಬಳಬಟ್ಟಿ ಗುಂಡಗರ್ತಿ, ಉಮೇಶ್‌ ಮುದ್ನಾಳ, ಶರಣಪ್ಪ ತಳವಾರ, ರೇವಣಸಿದ್ದಪ್ಪ ಸಾತನೂರ, ಬೈಲಪ್ಪ ಬೆಲೋಗಿ, ಮಲ್ಲಿಕಾರ್ಜುನ ಪೂಜಾರಿ, ಸಿದ್ದಣ್ಣಗೌಡ ವಡಗೇರಿ, ಜಗನ್ನಾಥ ಜಮಾದಾರ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT