ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇರ ಬಸ್‌ ಸೌಲಭ್ಯವಿಲ್ಲದ ‘ವಡಗೇರಾ’

Published 8 ಅಕ್ಟೋಬರ್ 2023, 6:32 IST
Last Updated 8 ಅಕ್ಟೋಬರ್ 2023, 6:32 IST
ಅಕ್ಷರ ಗಾತ್ರ

ಯಾದಗಿರಿ : ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಜೂನ್‌ 11ರಿಂದ ‘ಶಕ್ತಿ’ ಯೋಜನೆಯಡಿ ಉಚಿತ ಸೌಲಭ್ಯ ಕಲ್ಪಿಸಿದ್ದು, ಜಿಲ್ಲೆಯ ವಡಗೇರಾ ತಾಲ್ಲೂಕಿಗೆ ನೇರ ಬಸ್‌ಗಳಿಲ್ಲದೆ ಮಹಿಳೆಯರು ಪರದಾಡುತ್ತಿದ್ದಾರೆ.

ಉಚಿತ ಬಸ್‌ ಪ್ರಯಾಣ ಆರಂಭವಾದ ನಂತರ ಹೆಚ್ಚಿನ ಸಂಖ್ಯೆಯ ಮಹಿಳೆಯರು ರಾಜ್ಯದಲ್ಲಿರುವ ಪುಣ್ಯಕ್ಷೇತ್ರಗಳ ದರ್ಶನಕ್ಕೆ ತೆರಳುತ್ತಿದ್ದಾರೆ. ಆದರೆ, ವಡಗೇರಾ ತಾಲ್ಲೂಕಿನ ಮಹಿಳೆಯರು ನೇರ ಬಸ್‌ ಸೌಲಭ್ಯ ಇಲ್ಲದ ಕಾರಣ ವಂಚಿತಗೊಂಡಿದ್ದಾರೆ.

ಶಹಾಪುರ ತಾಲ್ಲೂಕಿನಿಂದ ಬೇರ್ಪಡಿಸಿ ವಡಗೇರಾವನ್ನು ತಾಲ್ಲೂಕು ಕೇಂದ್ರವನ್ನಾಗಿ ರಚಿಸಲಾಗಿದೆ. ಆದರೆ, ತಾಲ್ಲೂಕಿಗೆ ತಕ್ಕಂತೆ ಜನಪ್ರತಿನಿಧಿಗಳು, ಅಧಿಕಾರಿಗಳು ಸೌಲಭ್ಯ ಕಲ್ಪಿಸಿಲ್ಲ. ಜಿಲ್ಲೆಯ ಬೇರೆ ಬೇರೆ ತಾಲ್ಲೂಕುಗಳಿಂದ ಪುಣ್ಯಕ್ಷೇತ್ರಗಳ ದರ್ಶನಕ್ಕಾಗಿ ಹೊಸ ಬಸ್‌ಗಳ ವ್ಯವಸ್ಥೆ ಮಾಡಿದ್ದಾರೆ. ಆದರೆ, ವಡಗೇರಾ ತಾಲ್ಲೂಕಿನಿಂದ ಹೊಸ ಬಸ್‌ಗಳ ಸೌಲಭ್ಯ ಕಲ್ಪಿಸಿಲ್ಲ. ಈ ಭಾಗದ ಜನಪ್ರತಿನಿಧಿಗಳ ಮತ್ತು ಸಾರಿಗೆ ಸಂಸ್ಥೆಯ ಅಧಿಕಾರಿಗಳ ಇಚ್ಛಾಶಕ್ತಿ ಕೊರತೆ ಕಾರಣ ಎಂದು ಸ್ಥಳೀಯರು ದೂರುತ್ತಾರೆ.

‘ವಡಗೇರಾ ತಾಲ್ಲೂಕಿನಿಂದ ಧರ್ಮಸ್ಥಳ, ಮೈಸೂರು, ಘತ್ತರಗಿ, ಬಸವಕಲ್ಯಾಣ, ಹುಬ್ಬಳ್ಳಿ-ಧಾರವಾಡ, ಸವದತ್ತಿ, ಹೊಸಪೇಟೆ, ವಿಜಯಪುರ, ವಿಜಯನಗರ, ಗಂಗಾವತಿ ಹೀಗೆ ಇನ್ನೂ ವಿವಿಧ ಕಡೆಗಳಿಗೆ ನೇರ ಹೊಸ ಸೌಲಭ್ಯ ಒದಗಿಸಬೇಕು’ ಎಂಬುದು ವಡಗೇರಾ ತಾಲ್ಲೂಕಿನ ಮಹಿಳಾ ಪ್ರಯಾಣಿಕರ ಆಗ್ರಹವಾಗಿದೆ.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ರಾಯಚೂರು ವಿಭಾಗದಿಂದ ದೇವದುರ್ಗ ಡಿಪೋದಿಂದ ಈಗಾಗಲೇ ದೇವದುರ್ಗ-ಗೂಗಲ್ ಗ್ರಾಮದ (ಬ್ರೀಜ್) ವರೆಗೆ ಅನೇಕ ಬಸ್‌ಗಳು ಸಂಚರಿಸುತ್ತಿವೆ. ಯಾದಗಿರಿ ಜಿಲ್ಲೆಯ ವಡಗೇರಾ ತಾಲ್ಲೂಕಿನವರೆಗೆ ಸಂಚರಿಸಿದರೆ ಈ ಭಾಗದ ಪ್ರಯಾಣಿಕರಿಗೆ ಬಹಳ ಅನುಕೂಲವಾಗಲಿದೆ. ಇದರಿಂದ ರಾಯಚೂರು ಮತ್ತು ಯಾದಗಿರಿ ಎರಡು ಜಿಲ್ಲೆಗಳ ಸಂಪರ್ಕಕ್ಕೆ ಅನುಕೂಲವಾಗಲಿದೆ ಎಂಬುದು ವಡಗೇರಾ ತಾಲ್ಲೂಕಿನ ವಿವಿಧ ಗ್ರಾಮಗಳ ಪ್ರಯಾಣಿಕರ ಒತ್ತಾಯವಾಗಿದೆ.

ದೇವದುರ್ಗದಿಂದ ಸನ್ನತಿ ಕ್ಷೇತ್ರಕ್ಕೆ ನೂತನ ಬಸ್ ಆರಂಭಿಸಬೇಕು. ಈ ಬಸ್ ಗೂಗಲ್ ಬ್ರೀಜ್, ವಡಗೇರಾ, ಯಾದಗಿರಿ, ನಾಯ್ಕಲ್, ಇಬ್ರಾಹಿಂಪುರ, ಹುರಸುಗುಂಡಗಿ ಮೂಲಕ ಸನ್ನತಿ ಕ್ಷೇತ್ರಕ್ಕೆ ತೆರಳಿದರೆ ಮಾರ್ಗ ಮಧ್ಯೆ ಬರುವ ಪ್ರಯಾಣಿಕರಿಗೆ ಮತ್ತು ಭಕ್ತರಿಗೆ ಬಹಳ ಅನುಕೂಲವಾಗಲಿದೆ.

ಕೂಡಲೇ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ದೂರದ ಕ್ಷೇತ್ರಗಳಿಗೆ ಬಸ್‌ ವ್ಯವಸ್ಥೆ ಮಾಡಬೇಕು ಎಂದು ವಡಗೇರಾ ಭಾಗದ ಮಹಿಳೆ ಪ್ರಯಾಣಿಕರು ಆಗ್ರಹಿಸಿದ್ದಾರೆ. ಹೊಸ ಬಸ್‌ಗಳು ಆರಂಭಿಸುವುದರಿಂದ ಪುರುಷರೂ ಸಂಚರಿಸುತ್ತಾರೆ, ಸಾರಿಗೆ ಸಂಸ್ಥೆಗೆ ಆದಾಯ ಬರುವುದಲ್ಲದೆ ಪ್ರಯಾಣಿಕರಿಗೂ ಅನುಕೂಲವಾಗುತ್ತದೆ ಎಂದರು.

ಹೆಸರಿಗೆ ಮಾತ್ರ ಹೊಸ ತಾಲ್ಲೂಕು

ಹೊಸ ತಾಲ್ಲೂಕುಗಳಾದ ಗುರುಮಠಕಲ್ ಹುಣಸಗಿ ಪುರಸಭೆ ಹೊಂದಿರುವ ಕೆಂಭಾವಿಯಿಂದ ದೂರದ ನಗರಗಳಿಗೆ ಬಸ್ ಸಂಚಾರ ಸೌಲಭ್ಯ ಕಲ್ಪಿಸಿದ್ದಾರೆ. ಆದರೆ ವಡಗೇರಾ ತಾಲ್ಲೂಕಿನಿಂದ ದೂರದ ನಗರಗಳಿಗೆ ಹೊಸದಾಗಿ ಬಸ್ ಓಡಿಸಲು ಅಧಿಕಾರಿಗಳು ಮನಸ್ಸು ಮಾಡುತ್ತಿಲ್ಲ. ವಡಗೇರಾ ಹೆಸರಿಗೆ ಮಾತ್ರ ತಾಲ್ಲೂಕಾಗಿದೆ ಎಂದು ಸ್ಥಳೀಯರು ಬೇಸರಿಸುತ್ತಾರೆ.

ಯಾರು ಏನಂತಾರೆ?

ಈಗಾಗಲೇ ಯಾದಗಿರಿಯಿಂದ ವಡಗೇರಾಕ್ಕೆ ಮೂರು ಬಸ್‌ಗಳು ಸಂಚರಿಸುತ್ತವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಬಸ್‌ಗಳು ಚಾಲನೆಗೊಳ್ಳಲಿವೆ. ಡಿಪೋ ಇಲ್ಲದ ಕಾರಣ ಬೇರೆ ಜಿಲ್ಲಾ ಕೇಂದ್ರಗಳಿಗೆ ಬಸ್‌ ಓಡಿಸಲು ಆಗುತ್ತಿಲ್ಲ – ಮಲ್ಲಿಕಾರ್ಜುನ ಹಿರೇಮಠ, ಸಂಚಲನಾಧಿಕಾರಿ ಕೆಕೆಆರ್‌ಟಿಸಿ

ವಡಗೇರಾ ತಾಲ್ಲೂಕು ಕೇಂದ್ರವಾಗಿ ಸುಸಜ್ಜಿತ ಬಸ್‌ ನಿಲ್ದಾಣ ಸೌಲಭ್ಯವಿಲ್ಲ. ಹೀಗಾಗಿ ಕಲಬುರಗಿ ಇನ್ನಿತರ ಕಡೆಯಿಂದ ಬರಲು ಜನರು ಪರದಾಡುತ್ತಿದ್ದಾರೆ. ಮಹಿಳೆಯರು ತೊಂದರೆ ಪಡುತ್ತಿದ್ದಾರೆ– ಚಂದ್ರಕಲಾ ಬಾಗೂರು ರೈತ ಮಹಿಳೆ ವಡಗೇರಾ

ವಡಗೇರಾ ತಾಲ್ಲೂಕು ಕೇಂದ್ರವಾದರೂ ಬಸ್‌ಗಳು ತಾಲ್ಲೂಕಿಗೆ ತಕ್ಕಂತೆ ಓಡಾಟ ನಡೆಸುತ್ತಿಲ್ಲ. ಧಾರ್ಮಿಕ ಕ್ಷೇತ್ರಗಳಿಗೆ ತೆರಳಲು ಕೂಡಲೇ ನೇರ ಬಸ್‌ಗಳನ್ನು ಆರಂಭಿಸಬೇಕು– ಲಕ್ಷ್ಮೀಬಾಯಿ ನಾಯ್ಕಲ್‌, ಗೃಹಿಣಿ

ಮಹಿಳೆಯರು ಪುಣ್ಯಕ್ಷೇತ್ರಗಳಿಗೆ ತೆರಳಬೇಕಾದರೆ ದೂರದ ಶಹಾಪುರ ಸುರಪುರ ಯಾದಗಿರಿಗೆ ತೆರಳಿ ಬಸ್ ಹತ್ತುವ ಪರಿಸ್ಥಿತಿ ಇದೆ. ಕೂಡಲೇ ವಡಗೇರಾ ತಾಲ್ಲೂಕಿನಿಂದ ಬಸ್‌ಗಳನ್ನು ಓಡಿಸಿ – ಶರಣಮ್ಮ ಉಳ್ಳೆಸುಗೂರು ಗೃಹಿಣಿ

ಯಾದಗಿರಿ ನಗರದ ಕೇಂದ್ರ ಬಸ್‌ ನಿಲ್ದಾಣ ಚಿತ್ರ
ಯಾದಗಿರಿ ನಗರದ ಕೇಂದ್ರ ಬಸ್‌ ನಿಲ್ದಾಣ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT