ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಕನ್ನಡ ಸಾಹಿತ್ಯ ಪರಿಷತ್‌ಗೆ ಸಿದ್ದಪ್ಪ ಹೊಟ್ಟಿ ಅವಿರೋಧ ಆಯ್ಕೆ

ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ; ಜಿಲ್ಲೆಯಲ್ಲಿ ಶೇ 35.91ರಷ್ಟು ಮತದಾನ
Last Updated 21 ನವೆಂಬರ್ 2021, 16:29 IST
ಅಕ್ಷರ ಗಾತ್ರ

ಯಾದಗಿರಿ: ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕಕ್ಕೆ ಸಿದ್ದಪ್ಪ ಹೊಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದರಿಂದ ಸತತ ಮೂರನೇ ಬಾರಿಗೆ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

ಭಾನುವಾರ ತಾಲ್ಲೂಕು ಕೇಂದ್ರಗಳಲ್ಲಿ ನಡೆದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಮಾತ್ರ ಕಸಾಪ ಸದಸ್ಯರು ಮತದಾನ ಮಾಡಿದರು. ಜಿಲ್ಲಾ ಘಟಕಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದರಿಂದ ಸದಸ್ಯರು ಒಂದೇ ಮತವನ್ನು ಹಾಕಿದರು.

ರಾಜ್ಯದಲ್ಲಿ ಮೊದಲ ಅವಿರೋಧ ಆಯ್ಕೆ: ರಾಜ್ಯದಲ್ಲೇ ಮೊದಲ ಬಾರಿಗೆ ಸಿದ್ದಪ್ಪ ಹೊಟ್ಟಿ ಅವರು ಅವಿರೋಧ ಆಯ್ಕೆಯಾಗಿದ್ದರಿಂದ ಭಾನುವಾರ ರಾಜ್ಯ ಘಟಕಕ್ಕೆ ಮಾತ್ರ ಸದಸ್ಯರು ತಮ್ಮ ಹಕ್ಕು ಚಲಾಯಿಸಿದರು. ಮತದಾನ ಮಾಡಿದ ನಂತರ ಭಾವಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು.

ಶಾಸಕರಿಂದ ಮತದಾನ: ಸ್ಥಳೀಯ ಶಾಸಕ ವೆಂಕಟರೆಡ್ಡಿ ಮುದ್ನಾಳ ಅವರು ಕಸಾಪ ರಾಜ್ಯ ಘಟಕಕ್ಕೆ ತಮ್ಮ ಹಕ್ಕು ಚಲಾಯಿಸಿದರು.ಹಲವರು ಪತ್ನಿ ಸಮೇತರಾಗಿ ಬಂದು ಮತಚಲಾಯಿಸಿದರು.

ಪಟಾಕಿ ಸಿಡಿಸಿ ಸಂಭ್ರಮ: ಜಿಲ್ಲಾ ಕಸಾಪ ಘಟಕಕ್ಕೆ ಮೂರನೇ ಬಾರಿ ಆಯ್ಕೆಯಾದ ಸಿದ್ದಪ್ಪ ಹೊಟ್ಟಿ ಅವರಿಗೆ ಜಿಲ್ಲಾ ಚುನಾವಣಾಧಿಕಾರಿಯೂ ಆದ ತಹಶೀಲ್ದಾರ್‌ ಚನ್ನಮಲ್ಲಪ್ಪ ಘಂಟಿ ಪ್ರಮಾಣ ಪತ್ರ ವಿತರಿಸಿದರು. ಅವಿರೋಧ ಆಯ್ಕೆ ಘೋಷಣೆಯಾಗುತ್ತಿದ್ದಂತೆ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಜಿಲ್ಲೆಯಲ್ಲಿ 4,787 ಕಸಾಪ ಸದಸ್ಯರಿದ್ದು, 1,719 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಇದರಲ್ಲಿ 1,489 ಪುರುಷ ಮತದಾರರು, 230 ಮಹಿಳಾ ಮತದಾರರು ಮತ ಚಲಾಯಿಸಿದ್ದಾರೆ.

ಬೆಳಿಗ್ಗೆ 8 ಗಂಟೆಯಿಂದ ಆರಂಭವಾದ ಮತದಾನ ಸಂಜೆ 4 ಗಂಟೆಗೆ ಮುಕ್ತಾಯವಾಯಿತು. ಬೆಳಿಗ್ಗೆ 8ರಿಂದ 10 ಗಂಟೆ ಅವಧಿಯಲ್ಲಿ ಯಾದಗಿರಿ, ಹುಣಸಗಿ ತಾಲ್ಲೂಕಿನಲ್ಲಿ ಬಿರುಸಿನಿಂದ ಮತದಾನ ನಡೆದಿದೆ. ಶಹಾಪುರ, ಸುರಪುರ, ವಡಗೇರಾ, ಗುರುಮಠಕಲ್‌ ತಾಲ್ಲೂಕುಗಳಲ್ಲಿ ನಿಧಾನಗತಿಯಲ್ಲಿ ಮತ ಚಲಾವಣೆಯಾಗಿದೆ.

ಬೆಳಿಗ್ಗೆ 8ರಿಂದ 10 ಗಂಟೆಯವರೆಗೆ ಜಿಲ್ಲೆಯಲ್ಲಿ 178 ಪುರುಷರು, 23 ಮಹಿಳಾ ಸದಸ್ಯರು ಮತ ಚಲಾಯಿಸಿದ್ದಾರೆ. ಬೆಳಿಗ್ಗೆ 8ರಿಂದ ಮಧ್ಯಾಹ್ನ 12 ಗಂಟೆ ವರೆಗೆ 676 ಪುರುಷರು, 87 ಮಹಿಳೆಯರು ಮತದಾನ ಮಾಡಿದ್ದಾರೆ. ಬೆಳಿಗ್ಗೆ 8ರಿಂದ ಮಧ್ಯಾಹ್ನ 2 ಗಂಟೆ ವರೆಗೆ 1,147 ಪುರುಷರು, 154 ಮಹಿಳೆಯರು, ಬೆಳಿಗ್ಗೆ 8ರಿಂದ ಸಂಜೆ 4 ಗಂಟೆ ವರೆಗೆ 1,489 ಪುರುಷರು, 230 ಮಹಿಳೆಯರು ತಮ್ಮ ಹಕ್ಕು ಚಲಾಯಿಸಿದ್ದಾರೆ.

ಯಾದಗಿರಿ ತಾಲ್ಲೂಕಿನಲ್ಲಿ ಮೂರು ಮತಗಟ್ಟೆ, ಉಳಿದ ಐದು ತಾಲ್ಲೂಕುಗಳಲ್ಲಿ ತಲಾ ಒಂದೊಂದು ಮತಕೇಂದ್ರ ಸ್ಥಾಪನೆ ಮಾಡಲಾಗಿತ್ತು.

ಯಾದಗಿರಿ ತಾಲ್ಲೂಕಿನಲ್ಲಿ 2,310 ಮತದಾರರಲ್ಲಿ 878 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಶಹಾಪುರ ತಾಲ್ಲೂಕಿನಲ್ಲಿ 1,081 ಮತದಾರರಿದ್ದರೆ, ಅದರಲ್ಲಿ 281 ಸದಸ್ಯರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಸುರಪುರ ತಾಲ್ಲೂಕಿನಲ್ಲಿ 717ರಲ್ಲಿ 234, ಗುರುಮಠಕಲ್‌ ತಾಲ್ಲೂಕಿನಲ್ಲಿ 227ರಲ್ಲಿ 62, ವಡಗೇರಾ ತಾಲ್ಲೂಕಿನಲ್ಲಿ 113ರಲ್ಲಿ 28, ಹುಣಸಗಿ ತಾಲ್ಲೂಕಿನಲ್ಲಿ 339 ಮತದಾರರಲ್ಲಿ 236 ಮತದಾನ ಮಾಡಿದ್ದಾರೆ.

ತಾಲ್ಲೂಕುವಾರು ಮತದಾನ ವಿವರ

ಯಾದಗಿರಿ ತಾಲ್ಲೂಕಿನ ಮತಗಟ್ಟೆ 26/1–1ರಲ್ಲಿ ಶೇ 37.80, 26/1–2ರಲ್ಲಿ ಶೇ 38.23, 26/1–1ಅ ರಲ್ಲಿ ಶೇ 38.07, ಶಹಾಪುರ ತಾಲ್ಲೂಕಿನಲ್ಲಿ ಶೇ 25.99, ಸುರಪುರ ತಾಲ್ಲೂಕಿನಲ್ಲಿ ಶೇ 32.64, ಗುರುಮಠಕಲ್‌ ತಾಲ್ಲೂಕಿನಲ್ಲಿ ಶೇ 27.31, ವಡಗೇರಾ ತಾಲ್ಲೂಕಿನಲ್ಲಿ ಶೇ 24.78, ಹುಣಸಗಿ ತಾಲ್ಲೂಕಿನಲ್ಲಿ ಶೇ 69.62 ಸೇರಿದಂತೆ ಜಿಲ್ಲೆಯಲ್ಲಿ ಶೇ 35.91ರಷ್ಟು ಮತದಾನವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT