ಯಾದಗಿರಿ: ಸಂಭ್ರಮದ ದೀಪಾವಳಿ ಹಬ್ಬ ಆಚರಣೆ

ಯಾದಗಿರಿ: ಬೆಳಕಿನ ಹಬ್ಬ ದೀಪಾವಳಿಯನ್ನು ಜಿಲ್ಲಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು.
ಸಿಹಿಊಟ, ವಿವಿಧ ಭಕ್ಷ್ಯಗಳನ್ನು ತಯಾರಿಸಿ ನೆರಹೊರೆಯವನ್ನು ಆಹ್ವಾನಿಸಿ ಎಲ್ಲರೂ ಸೇರಿ ಹಬ್ಬವನ್ನು ಆಚರಿಸಿದರು.
ಅಂಗಡಿ ಮುಂಗಟ್ಟು ಇದ್ದವರು ಲಕ್ಷ್ಮಿ ಪೂಜೆ ಮಾಡಿ ಬಂಧು ಬಳಗದವರನ್ನು ಪೂಜೆಗೆ ಆಹ್ವಾನಿಸಿ ಪ್ರಸಾದ ವಿತರಿಸಿದರು.
ಮಕ್ಕಳಿಂದ ಪಟಾಕಿ ಸದ್ದು: ದೀಪಾವಳಿ ಹಬ್ಬ ಇನ್ನೂ ಒಂದು ವಾರ ಇರುವಾಗಲೇ ಚಿಣ್ಣರು ಸುರಸುರ ಬತ್ತಿ ಸೇರಿದಂತೆ ಕಡಿಮೆ ಶಬ್ಧ ಮಾಡುವ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದರು. ನಗರದ ಪ್ರದೇಶದ ಖಾಲಿ ಜಾಗಗಳಲ್ಲಿ ಚಿಣ್ಣರು ಪಟಾಕಿ ಸಿಡಿಸಿ ಸಂತೋಷ ಪಟ್ಟರು. ಹಳ್ಳಿಗಳಲ್ಲಿ ಬಯಲು ಪ್ರದೇಶ, ಮನೆ ಆವರಣದಲ್ಲಿ ಪಟಾಕಿ ಶಬ್ಧ ಕೇಳಿ ಬರುತ್ತಿತ್ತು. ಮಧ್ಯರಾತ್ರಿಯಾದರೂ ಪಟಾಕಿ ಸದ್ದು ಕೇಳಿ ಬರುತ್ತಿತ್ತು.
ಮಹಿಳೆಯರು, ಹೆಣ್ಣುಮಕ್ಕಳು ಸುರಸುರ ಬತ್ತಿ, ಭೂ ಚಕ್ರ ಬಾಣ ಹಚ್ಚಿ ಬೆಳಕಿನಲ್ಲಿ ಸಂತೋಷ ಪಟ್ಟರು. ಕೆಲವರ ಮನೆಗಳಲ್ಲಿ ಆಕಾಶ ಬುಟ್ಟಿ ದೀಪಗಳನ್ನು ತೂಗು ಹಾಕಲಾಗಿತ್ತು.
ಹಲಗೆ ಸದ್ದಿಗೆ ಬಂಜಾರ ಬೆಡಗಿಯರ ನೃತ್ಯ: ಜಿಲ್ಲೆಯ ವಿವಿಧ ತಾಂಡಾಗಳಲ್ಲಿ ದೀಪಾವಳಿ ಹಬ್ಬವನ್ನು ವಿಶೇಷವಾಗಿ ತಾಂಡಾಗಳಲ್ಲಿ ಹಲಗೆ ಸದ್ದಿಗೆ ನೃತ್ಯ ಮಾಡುವ ಮೂಲಕ ಬಂಜಾರ ಬೆಡಗಿಯರು ಗಮನ ಸೆಳೆದರು.
ಕೆಂಪು, ಹಸಿರು, ಗುಲಾಬಿ, ಬಿಳಿ, ಕಪ್ಪು ಸೇರಿದಂತೆ ವಿವಿಧ ಬಣ್ಣದ ಉಡುಗೆ ಧರಿಸಿದ ಅವಿವಾಹಿತ ಯುವತಿಯರು ಕಾಡಿಗೆ ತೆರಳಿ ವಿವಿಧ ಹೂ ಸಂಗ್ರಹಿಸಿ ಹಿರಿಯ ಸಮಾಧಿಗೆ ನಮಿಸಿದರು.
‘ಬಾಪು ತೋನ ಮೇರಾ, ವರ್ಷದಾಡೇರ ಕೋರ್ ದವಾಳಿ, ಯಾಡಿ ತೋನ ಮೇರಾ, ಭೀಯಾ ತೋನ ಮೇರಾ’ ಎಂದು ದೇವರ ನಾಮಸ್ಮರಣೆಯೊಂದಿಗೆ ಅಪ್ಪ-ಅಮ್ಮ, ಅಣ್ಣ–ತಮ್ಮ, ಗುರು–ಹಿರಿಯರ ಗುಣಗಾನ ಮಾಡಿ, ಅವರಿಗೆ ನಮಸ್ಕಾರ ಸಲ್ಲಿಸುವ ಬಂಜಾರ ಸಮುದಾಯದ ತಾಂಡಾಗಳಲ್ಲಿ ಕಂಡು ಬಂದಿತು.
ದೀಪಾವಳಿ ಹಬ್ಬದ ಅಮಾವಾಸ್ಯೆಯ ಸಂಜೆ ಮೇರಾ ಮಾಡುವಾಗ ಕೇಳಿ ಬಂತು.ಬಲಿ ಪಾಡ್ಯಮಿಯಂದು ಲಂಬಾಣಿ ತಾಂಡಾದ ಅವಿವಾಹಿತ ಹೆಣ್ಣುಮಕ್ಕಳು ತಾಂಡಾದ ಕತ್ತಲೆ ಒಡಿಸಿ ಬೆಳಕು ರುಣಿಸುವಂತೆ ಪ್ರಾರ್ಥನೆ ಸಲ್ಲಿಸಿದರು. ನಂತರ ದೀಪಾವಳಿ ದಿನ ಆ ವರ್ಷದಲ್ಲಿ ಆಗಲಿದವರನ್ನು ನೆನೆದು ಅವರು ಆತ್ಮಕ್ಕೆ ಶಾಂತಿ ಕೋರಿದರು. ಸಾವು ಸಂಭವಿಸಿದ ಮನೆಗಳಿಗೆ ಹೋಗಿ ಕುಟುಂಬಸ್ಥರಿಗೆ ಸಂತ್ವಾನ ಹೇಳಿದರು.
ದೀಪಾವಳಿ ಬಂಜಾರರಿಗೆ ಪವಿತ್ರ ಹಬ್ಬ. ಈ ಸಮುದಾಯವರು ದೂರದ ಊರುಗಳಿಗೆ ವಲಸೆ ಹೋಗಿದ್ದರೂ ಹಬ್ಬದ ನೆನದಲ್ಲಿ ತಮ್ಮ ಕಷ್ಟಗಳನ್ನು ಮರೆತು ಕುಟುಂಬ ಹಾಗೂ ತಾಂಡಾದ ಜನರೊಂದಿಗೆ ಕೂಡಿ ಕೊಂಡು ಹಬ್ಬ ಆಚರಿಸಿದರು.
ಶಹಾಪುರ ತಾಲ್ಲೂಕಿನ ಹೋತಪೇಟ ಗ್ರಾಮಕ್ಕೆ ಹೊಂದಿಕೊಂಡ ನಾಲ್ಕು ತಾಂಡಾಗಳಲ್ಲಿ ದೀಪಾವಳಿ ಸಂಭ್ರಮ ಮನೆ ಮಾಡಿತ್ತು. ದಿಬ್ಬ ತಾಂಡಾ, ನಡುವಿನ ತಾಂಡಾ, ಕೆಳಗಿನ ತಾಂಡಾ ಮತ್ತು ಮುಂದಿನ ತಾಂಡಾಗಳಲ್ಲಿ ಹಬ್ಬವನ್ನು ಸಡಗರದಿಂದ ಆಚರಣೆ ಮಾಡಲಾಯಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.