ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಜಿಲ್ಲೆಯಲ್ಲಿ 4,687 ಬೂಸ್ಟರ್‌ ಡೋಸ್‌ ಫಲಾನುಭವಿಗಳು

ವೈದ್ಯಕೀಯ ಸಿಬ್ಬಂದಿ, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಹಿರಿಯ ನಾಗಕರಿಕರಿಗೆ ಮೂರನೇ ಡೋಸ್‌
Last Updated 11 ಜನವರಿ 2022, 15:42 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ ಸೋಮವಾರ (ಜನವರಿ 10) ದಿಂದ ಬೂಸ್ಟರ್‌ ಡೋಸ್‌ ಅಥವಾ ಮೂರನೇ ಲಸಿಕೆ ನೀಡುವ ಪ್ರಕ್ರಿಯೆ ಆರಂಭವಾಗಿದ್ದು, ಮುಂಚೂಣಿ ಕಾರ್ಯಕರ್ತರು ಮತ್ತು 60 ವರ್ಷ ಮೇಲ್ಪಟ್ಟರಿಗೆ ಮಾತ್ರ ನೀಡಲಾಗುತ್ತಿದೆ.

ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ಮುಂಚೂಣಿ ಮತ್ತು ಆರೋಗ್ಯ ಕಾರ್ಯಕರ್ತರಿಗೆ ಮೂರನೇ ಡೋಸ್ ಲಸಿಕೆ ನೀಡಲಾಗುತ್ತದೆ. ಆರೋಗ್ಯ ಕಾರ್ಯಕರ್ತರು, ಆಶಾಕಾರ್ಯಕರ್ತೆಯರು, 60 ವರ್ಷ ಮೇಲ್ಟಟ್ಟವರ ಸಂಖ್ಯೆ 4,687 ಇದ್ದು, ಅವರಿಗೆ ಮೊದಲ ಆದ್ಯತೆಯಾಗಿ ಚುಚ್ಚುಮದ್ದು ಹಾಕಲಾಗುತ್ತಿದೆ.

ಸೋಮವಾರ ಮುಂಚೂಣಿ ವಾರಿಯರ್ಸ್‌ 14, ಆರೋಗ್ಯ ವಾರಿಯರ್ಸ್‌, 416, ಹಿರಿಯ ನಾಗರಿಕರು 18 ಮಂದಿ ಸೇರಿ 448 ಜನರಿಗೆ ಲಸಿಕೆ ನೀಡಲಾಗಿದೆ. ಇದು ಮುಂದಿನ ದಿನಗಳಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ. ಈ ಮೂಲಕ ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕೆ ಸರ್ಕಾರ ಶ್ರಮಿಸುತ್ತಿದೆ.

ಈ ಮುಂಚೆ ಕೋವಿಡ್ ಲಸಿಕೆ ಪಡೆಯಲು ನೋಂದಣಿ ಮಾಡಿಕೊಳ್ಳಬೇಕಿತ್ತು. ಆದರೆ, ಮೂರನೇ ಲಸಿಕೆಗಾಗಿ ಯಾವುದೇ ರೀತಿಯ ನೋಂದಣಿ ಅಗತ್ಯವಿಲ್ಲ. ಅರ್ಹರು ನೇರವಾಗಿ ಅಥವಾ ಯಾವುದೇ ಲಸಿಕಾ ಕೇಂದ್ರಕ್ಕೆ ತೆರಳಿ ಲಸಿಕೆ ಪಡೆಯಬಹುದು. ಇದು ಕೂಡ ಕೋವಿಡ್ ಲಸಿಕೆಯ ಎರಡನೇ ಡೋಸ್ ಪಡೆದ 9 ತಿಂಗಳ ನಂತರವಷ್ಟೇ ಬೂಸ್ಟರ್ ಡೋಸ್ ಪಡೆಯಲು ಅರ್ಹರಾಗಿದ್ದಾರೆ.

ಎಲ್ಲಿ ಲಸಿಕೆ ನೀಡಲಾಗುತ್ತಿದೆ?:
ಜಿಲ್ಲೆಯಲ್ಲಿ ಈಗಾಗಲೇ ಕೋವಿಡ್‌ ಮೊದಲ, ಎರಡು ಹಂತಗಳಲ್ಲಿ ನೀಡಿರುವ ಲಸಿಕಾ ಸ್ಥಳಗಳಲ್ಲೇ ಮೂರನೇ ಡೋಸ್‌ ಲಸಿಕೆ ನೀಡಲಾಗುತ್ತಿದೆ. ಜಿಲ್ಲೆಯ ವಿವಿಧ ಲಸಿಕಾ ಕೇಂದ್ರಗಳಲ್ಲಿ ಬೂಸ್ಟರ್‌ ಡೋಸ್‌ ಪಡೆಯಬಹುದಾಗಿದೆ.

ಆರೋಗ್ಯ ಮತ್ತು ಮುಂಚೂಣಿಯ ಕಾರ್ಯಕರ್ತರು ಮಾತ್ರವಲ್ಲದೇ, ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಇತರ ದೀರ್ಘಕಾಲದ ಕಾಯಿಲೆಗಳಂಥ ಅಸ್ವಸ್ಥತೆ ಹೊಂದಿರುವ 60 ವರ್ಷಕ್ಕಿಂತ ಮೇಲ್ಪಟ್ಟವರು ತಮ್ಮ ವೈದ್ಯರ ಸಲಹೆಯ ಮೇರೆಗೆ ‘ಮುನ್ನೆಚ್ಚರಿಕೆ ಡೋಸ್’ ಅನ್ನು ಪಡೆಬಯಹುದಾಗಿದೆ.

ಈ ಹಿಂದೆ ಮೊದಲ, ಎರಡನೇ ಡೋಸ್ ಯಾವ ಲಸಿಕೆ ಪಡೆಯಲಾಗಿದೆಯೋ ಅದೇ ಲಸಿಕೆ ಪಡೆಯಬೇಕು. ಕೋವಿಶೀಲ್ಡ್, ಕೋವ್ಯಾಕ್ಸಿನ್ 2 ಡೋಸ್ ಲಸಿಕೆ ಪಡೆದವರು, ಬೂಸ್ಟರ್ ಡೋಸ್ ಅವುಗಳನ್ನೇ ಪಡೆಯಬೇಕು.

ಸೋಂಕಿನ ತೀವ್ರತೆ ಕುಗ್ಗಿಸುತ್ತದೆ:
ಬೂಸ್ಟರ್‌ ಡೋಸ್‌ ಕೋವಿಡ್‌ ಸೋಂಕಿನ ತೀವ್ರ ಕಡಿಮೆ ಮಾಡುತ್ತಿದ್ದು, ಅರ್ಹರೆಲ್ಲರೂ ಪಡೆಯುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಕೋವಿಡ್‌ ಎರಡು ಡೋಸ್‌ ಪಡೆದಿದ್ದರೂ 60 ವರ್ಷಕ್ಕಿಂತ ಮೇಲ್ಪಟ್ಟವರು ಬೂಸ್ಟರ್‌ ಡೋಸ್‌ ಪಡೆಯುವುದರಿಂದ ಕೊರೊನಾ ಸೋಂಕಿನ ತೀವ್ರತೆಯನ್ನು ಕುಗ್ಗಿಸುತ್ತದೆ. ಹೀಗಾಗಿ ಜಿಲ್ಲೆಯ ಜನರು ಶೀಘ್ರ ಪಡೆದುಕೊಳ್ಳಲು ತಿಳಿಸುತ್ತಾರೆ.

ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಮಂಗಳವಾರ ಎಸ್‌ಪಿ, ಡಿಎಸ್‌ಪಿ, ಡಿಎಆರ್‌ ಸೇರಿದಂತೆ ಒಟ್ಟು 68 ಜನ ಅಧಿಕಾರಿ ಮತ್ತುಸಿಬ್ಬಂದಿ ಬೂಸ್ಟರ್ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ.

ಶೇಕಡವಾರು ಶತಕದ ಸಮೀಪ ಮೊದಲ ಡೋಸ್‌:
ಜಿಲ್ಲೆಯಲ್ಲಿ ಕಳೆದ ವರ್ಷ ಜನವರಿ ತಿಂಗಳಿಂದ ನೀಡುತ್ತಿರುವ ಕೋವಿಡ್‌ ಲಸಿಕೆ ಮೊದಲ ಡೋಸ್‌ ಶೇಕಡವಾರು ಶತಕದ ಸಮೀಪಕ್ಕೆ ಬಂದಿದೆ.

ಮೊದಲ ಡೋಸ್‌ ಶೇ 98ರಷ್ಟಾಗಿದ್ದರೆ, ಎರಡನೇ ಡೋಸ್‌ ಶೇ 73ರಷ್ಟಾಗಿದೆ. 8,39,356 ಮಂದಿಯಲ್ಲಿ 8,19,136 ಜನರು ಮೊದಲ ಡೋಸ್‌ ಲಸಿಕೆ ಪಡೆದಿದ್ದರೆ, 6,14,222 ಜನರು ಪಡೆದಿದ್ದಾರೆ.

ಈಗಲೂ ಲಸಿಕೆ ಪಡೆಯಲು ಜನರು ಮುಂದಾಗದಿರುವುದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ನುಂಗಲಾರದ ಬಿಸಿತುಪ್ಪವಾಗಿದೆ. ಮೇಲಾಧಿಕಾರಿಗಳು ನೀಡಿದ ಗುರಿ ತಲುಪದಿದ್ದರೆ ಶಿಕ್ಷೆ ಅನುಭವಿಸಬೇಕಾಗುತ್ತದೆ. ಹೀಗಾಗಿ ಲಸಿಕೆ ಹೆಚ್ಚು ಮಾಡಲು ಆರೋಗ್ಯ ಇಲಾಖೆ ಸಿಬ್ಬಂದಿ ತೀವ್ರ ಕಸರತ್ತು ನಡೆಸುತ್ತಿದ್ದಾರೆ.

ಬೂಸ್ಟರ್‌ ಡೋಸ್‌ ಪಡೆಯುವವರ ಸಂಖ್ಯೆ
ಡೋಸ್‌; ಗುರಿ;ಸಾಧನೆ
ಮುಂಚೂಣಿ ಯೋಧರು;1,105;14
ಆರೋಗ್ಯ ಯೋಧರು;417;416
ಹಿರಿಯ ನಾಗರಿಕರು;3,165;18
ಒಟ್ಟು:4,687;448

ಲಸಿಕಾಕರಣ ಇದು ನಿರಂತರ ಪ್ರತಿಕ್ರಿಯೆಯಾಗಿದೆ. ಸೋಮವಾರದಿಂದ ಬೂಸ್ಟರ್‌ ಡೋಸ್‌ ನೀಡಿಕೆ ಆರಂಭವಾಗಿದೆ. 60 ವರ್ಷ ಮೇಲ್ಪಟ್ಟವರು ಎರಡು ಡೋಸ್‌ ಪಡೆದು 9 ತಿಂಗಳ ನಂತರ ಚುಚ್ಚುಮದ್ದು ಪಡೆಯಬಹುದು.
ಡಾ.ಇಂದುಮತಿ ಕಾಮಶೆಟ್ಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ

60 ವರ್ಷ ಮೇಲ್ಟವರು ಬೂಸ್ಟರ್‌ ಡೋಸ್‌ ತೆಗೆದುಕೊಳ್ಳುವುದು ಉತ್ತಮ. ಕೋವಿಡ್‌ ಲಸಿಕೆ ಪಡೆದವರಿಗೆಯಾವುದೇ ಅಡ್ಡ‍ಪರಿಣಾಮಗಳಾಗಿಲ್ಲ. ಸುರಕ್ಷತೆ ದೃಷ್ಟಿಯಿಂದ ಮೂರನೇ ಚುಚ್ಚುಮದ್ದು ಹಾಕಿಸಿಕೊಳ್ಳಿ.
ವೀರಬಸವಂತರಡ್ಡಿ ಮುದ್ನಾಳ, ಮಾಜಿ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT