ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ರಸಗೊಬ್ಬರ ಕೊರತೆ, ಕೃತಕ ಅಭಾವ ಸೃಷ್ಟಿ

ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಡಿಎಪಿ, ಯೂರಿಯಾಗೆ ಬೇಡಿಕ, ಹೆಚ್ಚಿನ ಬೆಲೆಗೆ ಮಾರಾಟ
Last Updated 29 ಆಗಸ್ಟ್ 2021, 19:30 IST
ಅಕ್ಷರ ಗಾತ್ರ

ಯಾದಗಿರಿ: ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಬಹು ಬೇಡಿಕೆಯಾದ ಡಿ-ಅಮೋನಿಯಂ ಫಾಸ್ಫೇಟ್ (ಡಿಎಪಿ), ಯೂರಿಯಾ ಕೊರತೆಯಾಗಿದೆ. ಇದನ್ನೇ ನೆಪ ಮಾಡಿಕೊಂಡಿರುವ ಕೆಲ ರಸಗೊಬ್ಬರ ಅಂಗಡಿಗಳ ಮಾಲೀಕರು ಕೃತಕ ಅಭಾವ ಸೃಷ್ಟಿಸುತ್ತಿದ್ದಾರೆ.

ಕೆಲ ಅಂಗಡಿಗಳಲ್ಲಿ ದಾಸ್ತಾನು ಇಲ್ಲ ಎಂದು ಹೇಳಿ ತಮಗೆ ಬೇಕಾದವರಿಗೆ ಮಾರುತ್ತಿದ್ದಾರೆ ಎಂಬ ದೂರು ಇದೆ. ರಸಗೊಬ್ಬರ ಕೃತಕ ಅಭಾವ ಸೃಷ್ಟಿಸಿದ ಆರೋಪದ ಮೇಲೆ ಶಹಾಪುರ ತಾಲ್ಲೂಕಿನ ರಸ್ತಾಪುರ ಗ್ರಾಮದ ಅಂಗಡಿಯೊಂದರ ಪರವಾನಗಿ ರದ್ದಾಗಿದೆ. 3 ರಿಂದ 4 ವರ್ಷಗಳಲ್ಲಿ ಇಂಥ ಘಟನೆಗಳು ಅಲ್ಲಲ್ಲಿ ನಡೆದಿವೆ.

‘ಮುಂಗಾರು ಆರಂಭದಲ್ಲೇ ರಸಗೊಬ್ಬರ ಕೃತಕ ಅಭಾವ ಸೃಷ್ಟಿಸಿದರೆ, ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ. ಆದರೆ, ಪರಿಸ್ಥಿತಿಯಲ್ಲಿ ಹೆಚ್ಚೇನೂ ಬದಲಾವಣೆಯಾಗಿಲ್ಲ.

ಹೆಚ್ಚಿನ ಹಣಕ್ಕೆ ಮಾರಾಟ: ಡಿಎಪಿ ₹1,200ಕ್ಕಿಂತ ಹೆಚ್ಚು ಮಾರಬಾರದು. ಇದಕ್ಕಿಂತ ಬೇರೆ ರಸಗೊಬ್ಬರಕ್ಕೆ ಹೆಚ್ಚಿನ ದರ ಇರುವ ಕಾರಣ ಬಹುತೇಕ ರೈತರು ಡಿಎಪಿಗಾಗಿ ಬೇಡಿಕೆ ಇಡುತ್ತಾರೆ. ಇದನ್ನೇ ಕೆಲವರು ಬಂಡವಾಳ ಮಾಡಿಕೊಳ್ಳುತ್ತಾರೆ.

‘ಶಹಾಪುರ, ಸುರಪುರ ಮತ್ತು ಹುಣಸಗಿ ತಾಲ್ಲೂಕುಗಳಲ್ಲಿ ಭತ್ತ ಹೆಚ್ಚು ಬೆಳೆಯಲಾಗುತ್ತದೆ. ಉತ್ತಮ ಮಳೆಯಾದಾಗ, ಡಿಎಪಿ ಗೊಬ್ಬರ ಬೇಕು. ಆದರೆ, ಕೆಲವರು ಕೃತಕ ಅಭಾವ ಸೃಷ್ಟಿಸಿ ದಾಸ್ತಾನು ಇಲ್ಲ ಎನ್ನುತ್ತಾರೆ. ನಂತರ ಹೆಚ್ಚಿನ ಹಣದ ಆಸೆಗಾಗಿ ಕೃತಕ ಅಭಾವ ಸೃಷ್ಟಿಸುತ್ತಾರೆ. ಇದರಿಂದ ಡಿಎಪಿ ಕೊರತೆಯಾಗುತ್ತದೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಕಾಳಸಂತೆಯಲ್ಲಿ ಮಾರಾಟ: ‘ಜಿಲ್ಲೆಯಲ್ಲಿ ರಸಗೊಬ್ಬರ ಅವಶ್ಯ ಇರುವ ಕಡೆ ಸಿಗದಂತೆ ಮಾಡಿ, ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ಬೆಲೆಗೆ ಮಾರಾವುದು ಗುಟ್ಟಾಗಿ ಉಳಿದಿಲ್ಲ. ಶೇ 50ರಷ್ಟು ರಸಗೊಬ್ಬರ ಕಾಳ ಸಂತೆಯಲ್ಲಿ ಮಾರಲಾಗುತ್ತಿದೆ’ ಎಂದು ಜನಪ್ರತಿನಿಧಿಗಳೇ ದೂರುತ್ತಾರೆ.

‘ಕೆಲ ರಸಗೊಬ್ಬರ ಅಂಗಡಿಗಳವರು ನಕಲಿ ರಸೀದಿಗಳನ್ನು ನೀಡುತ್ತಾರೆ. ರಸಗೊಬ್ಬರ ಮಾರಾಟ ಮಾಡಿದರೂ ಅದು ಲೆಕ್ಕಕ್ಕೆ ಸಿಗದಂತೆ ಮಾಡುತ್ತಾರೆ. ಇದರಿಂದ ಪೂರೈಕೆ ಆಗಿದ್ದರೂ ರೈತರಿಗೆ ಸಿಗುವುದಿಲ್ಲ. ಇದರಿಂದ ಅಭಾವವಾಗುತ್ತದೆ’ ಎಂದು ರೈತ ಚನ್ನಬಸಪ್ಪ ಹೇಳುತ್ತಾರೆ.

***

ನಿರ್ಮಾಣವಾಗದ ರೇಕ್‌ ಪಾಯಿಂಟ್‌

ಯಾದಗಿರಿ ಜಿಲ್ಲೆಯಾಗಿ 11 ವರ್ಷ ಕಳೆದರೂ ರಸಗೊಬ್ಬರ ಸಂಗ್ರಹಿಸುವ ರೇಕ್‌ ಪಾಯಿಂಟ್‌ ನಿರ್ಮಾಣವಾಗಿಲ್ಲ. ನೆರೆಯ ಜಿಲ್ಲೆಗಳನ್ನೇ ಅವಲಂಬಿಸಬೇಕಿದೆ.

ಜಿಲ್ಲೆಯ ಸದ್ಯ ಇರುವ ರೇಕ್ ಪಾಯಿಂಟ್ 1,300ರಿಂದ 1,500 ಮೆಟ್ರಿಕ್ ಟನ್ ಸಾಮರ್ಥ್ಯ ಹೊಂದಿದೆ. ರಸಗೊಬ್ಬರ ಪೂರ್ಣ ರೇಕ್ ಇಳಿಸಲು ಸ್ಥಳವಿಲ್ಲ. ಇದರಿಂದ ರಾಯಚೂರು ಅಥವಾ ಕಲಬುರ್ಗಿಯಲ್ಲಿ ಅನ್‍ಲೋಡ್ ಮಾಡಿ ಜಿಲ್ಲೆಗೆ ಸರಬರಾಜು ಮಾಡಲಾಗುತ್ತಿದೆ. ಅನಗತ್ಯ ಸಾರಿಗೆ ಖರ್ಚು ಮಾತ್ರವಲ್ಲ ಸಮಯದ ವಿಳಂಬವೂ ಆಗುತ್ತದೆ.

‘ಜನಾಶೀರ್ವಾದ ಯಾತ್ರೆ ಕೈಗೊಂಡು ಕೇಂದ್ರ ಸಚಿವ ಭಗವಂತ ಖೂಬಾ ಅವರು ಬಂದಾಗ, ಜಿಲ್ಲೆಯ ಬೇಡಿಕೆ ಈಡೇರಿಸುವಂತೆ ಮನವಿ ಮಾಡಿದ್ದೇನೆ. ಅದಕ್ಕೆ ಅವರು ಸ್ಪಂದಿಸಿದ್ದಾರೆ. ಈ ಬಗ್ಗೆ ಕೃಷಿ ಇಲಾಖೆ ಅಧಿಕಾರಿಗಳು ಸೂಕ್ತ ಜಾಗ, ಸಂಬಂಧಿತ ಮಾಹಿತಿ ನೀಡುವಂತೆ ಸೂಚಿಸಿದ್ದೇನೆ’ ಎನ್ನುತ್ತಾರೆ ಶಾಸಕ ವೆಂಕಟರೆಡ್ಡಿ ಮುದ್ನಾಳ.
***
ಅಂಕಿ ಅಂಶ
ರಸಗೊಬ್ಬರ ಬೇಡಿಕೆ; ಕೊರತೆ (ಮೆ.ಟನ್‌ಗಳಲ್ಲಿ)
ಡಿಎಪಿ; 24,559;2,837
ಯೂರಿಯಾ;40,076;13,668
ಕಾಂಪ್ಲೆಕ್ಸ್‌;48,677;4,101
ಎಂಒಪಿ;3,023;266
(ಆಗಸ್ಟ್‌ 26ರ ವರೆಗೆ)
ಆಧಾರ: ಕೃಷಿ ಇಲಾಖೆ
***
ರಸಗೊಬ್ಬರ ಇಲ್ಲದೆ ರೈತರ ಪರದಾಟ

ಸುರಪುರ: ಸುರಪುರ ಮತ್ತು ಹುಣಸಗಿ ತಾಲ್ಲೂಕಿನ ಶೇ 40ರಷ್ಟು ಪ್ರದೇಶದಲ್ಲಿ ಭತ್ತ ಬೆಳೆಯುವುದರಿಂದ ರಸಗೊಬ್ಬರದ ಬಳಕೆ ಹೆಚ್ಚಾಗಿದೆ. ಒಂದು ಬೆಳೆಗೆ 3 ರಿಂದ 4 ಸಲ ಗೊಬ್ಬರ ಹಾಕುತ್ತಾರೆ.

ಸಮರ್ಪಕ ಗೊಬ್ಬರ ದೊರೆಯದೆ ರೈತರು ಆತಂಕದಲ್ಲಿದ್ದಾರೆ. ಡಿಎಪಿ ಗೊಬ್ಬರದ ಬೇಡಿಕೆ ತುಂಬಾ ಇದೆ. ಕೆಲವರು ಈಗಾಗಲೇ ಒಂದು ಬಾರಿ ಗೊಬ್ಬರ ಹಾಕಿದ್ದು, ಎರಡನೇ ಬಾರಿ ಹಾಕಲು ಲಭ್ಯವಾಗುತ್ತಿಲ್ಲ.

ಕೆಲ ಶ್ರೀಮಂತ ರೈತರು ಒಮ್ಮೆಲೆ ಮೂರು ಬಾರಿಗೆ ಗೊಬ್ಬರ ಹಾಕಲು ಬೇಕಾಗುವಷ್ಟು ದಾಸ್ತಾನು ಮಾಡಿಕೊಂಡಿದ್ದಾರೆ. ಸಣ್ಣ, ಬಡ ರೈತರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ.

ಎರಡು ಮೂರು ದಿನಗಳಲ್ಲಿ ಭತ್ತಕ್ಕೆ ಗೊಬ್ಬರ ನೀಡದಿದ್ದರೆ, ಬಾಡುವ ಆತಂಕ ಎದುರಾಗಿದೆ. ಯೂರಿಯಾ ಮತ್ತು ಕಾಂಪ್ಲೆಕ್ಸ್ ಗೊಬ್ಬರದ ಅಭಾವ ಇಲ್ಲ. ಆದರೆ, ಮುಖ್ಯವಾಗಿ ಡಿಎಪಿ ಅವಶ್ಯವಿರುವುದರಿಂದ ರೈತರು ಅಂಗಡಿಗಳಿಗೆ ಎಡತಾಕುತ್ತಿದ್ದಾರೆ.

‘ತಾಲ್ಲೂಕಿಗೆ ಬೇಕಾದಷ್ಟು ಗೊಬ್ಬರವನ್ನು ಅಧಿಕಾರಿಗಳು ತರಿಸುತ್ತಿಲ್ಲ. ವರ್ತಕರು ಸಾಕಷ್ಟು ದಾಸ್ತಾನು ಮಾಡಿ ಕೃತಕ ಗೊಬ್ಬರ ಅಭಾವ ಸೃಷ್ಟಿಸಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಕ್ರಮ ತೆಗೆದುಕೊಳ್ಳುತ್ತಿಲ್ಲ’ ಎಂದು ರೈತ ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಬಸವರಾಜಪ್ಪಗೌಡ ಮಾಲಿಪಾಟೀಲ ಆರೋಪಿಸುತ್ತಾರೆ.

****
ರಸಗೊಬ್ಬರಕ್ಕೆ ಹೆಚ್ಚಿದ ಬೇಡಿಕೆ

ಶಹಾಪುರ: ‘ಕೃಷ್ಣಾ ಅಚ್ಚುಕಟ್ಟು ಪ್ರದೇಶದ ನೀರಾವರಿ ವ್ಯಾಪ್ತಿಯ ಜಮೀನುಗಳಲ್ಲಿ ಬಿತ್ತನೆ ಮಾಡಿದ ಹತ್ತಿ, ತೊಗರಿ, ಮೆಣಸಿನಕಾಯಿ, ಭತ್ತ ಬೆಳೆಗೆ ಏಕ ಕಾಲಕ್ಕೆ ಡಿಎಪಿ ಹಾಗೂ ಯೂರಿಯಾ ರಸಗೊಬ್ಬರವನ್ನು ಹಾಕುತ್ತಿರುವುದರಿಂದ ಹೆಚ್ಚಿನ ಪ್ರಮಾಣ ಬೇಡಿಕೆ ಉಂಟಾಗುತ್ತದೆ. ಇದನ್ನೇ ಬಂಡವಾಳ ಮಾಡಿಕೊಂಡ ಮಳಿಗೆಯ ಮಾಲೀಕರು ರಸಗೊಬ್ಬರದ ಕೃತಕ ಅಭಾವ ಸೃಷ್ಟಿ ಮಾಡಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಾರೆ’ ಎಂಬುದು ರೈತರ ಆರೋಪ.

‘ಬೆಳೆ ಪದ್ಧತಿ ಉಲ್ಲಂಘನೆ ಮಾಡಿ ನಿಷೇಧಿತ ಬೆಳೆ ಭತ್ತಕ್ಕೆ ರೈತರು ನಿಗದಿಪಡಿಸಿದಕ್ಕಿಂತ ಮೂರು ಪಟ್ಟು ರಸಗೊಬ್ಬರ ಉಪಯೋಗಿಸುತ್ತಾರೆ. ಇದರಿಂದ ಡಿಎಪಿ ಹಾಗೂ ಯೂರಿಯಾ ಬೇಡಿಕೆ ಹೆಚ್ಚಾಗುತ್ತದೆ. ಅತ್ಯಧಿಕ ರಸಗೊಬ್ಬರ ಬಳಕೆಯಿಂದ ಭೂಮಿಯ ಫಲವತ್ತತೆ ಹಾಳಾಗುತ್ತದೆ’ ಎಂದು ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯದ ಕೃಷಿ ವಿಜ್ಞಾನಿಯೊಬ್ಬರು ಹೇಳುತ್ತಾರೆ.

***

ಜಿಲ್ಲೆಯಲ್ಲಿ ರೇಕ್ ಪಾಯಿಂಟ್‌ ನಿರ್ಮಾಣಕ್ಕೆ ಕೇಂದ್ರ ರಸಗೊಬ್ಬರ ಸಚಿವರಿಗೆ ಈಗಾಗಲೇ ಮನವಿ ಪತ್ರ ಸಲ್ಲಿಸಲಾಗಿದೆ. ಇದರಿಂದ ಜಿಲ್ಲೆಯ ರೈತರಿಗೆ ಅನುಕೂಲವಾಗುತ್ತದೆ.

-ವೆಂಕಟರೆಡ್ಡಿ ಮುದ್ನಾಳ, ಯಾದಗಿರಿ ಶಾಸಕ

***

ರಸಗೊಬ್ಬರ ಕೃತಕ ಅಭಾವ ಸೃಷ್ಟಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ರೈತರು ಡಿಎಪಿ ಜತೆಗೆ ಕಾಂಪ್ಲೆಕ್ಸ್‌ ಹಾಕಬೇಕು. ಆಗ ಸಮಾನ ಪೋಷಕಾಂಶ ಸಿಗುತ್ತದೆ

-ಎಸ್‌.ಎಸ್‌.ಅಭೀದ್, ಜಂಟಿ ಕೃಷಿ ನಿರ್ದೇಶಕ

***

ಡಿಎಪಿಗಾಗಿ ರೈತರು ಅಂಗಡಿಗೆ ಬಂದು ಹೋಗುತ್ತಿದ್ದಾರೆ. ಇಂದು, ನಾಳೆ ಬರುತ್ತದೆ ಎಂದು ಹೇಳುತ್ತೇವೆ. ಮಳೆಯಾಗಿದ್ದರಿಂದ ಡಿಎಪಿಗೆ ಹೆಚ್ಚಿನ ಬೇಡಿಕೆ ಬಂದಿದೆ

-ವೀರನಗೌಡ, ರಸಗೊಬ್ಬರ ಅಂಗಡಿ ಮಾಲೀಕ

***

ಸದ್ಯ ಬೇಕಾಗುವಷ್ಟು ರಸಗೊಬ್ಬರ ಮಾರಾಟಗಾರರಲ್ಲಿ ದಾಸ್ತಾನು ಇದೆ. ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತಿದ್ದೇವೆ

-ಡಾ. ಭೀಮರಾಯ ಹವಾಲ್ದಾರ್, ಕೃಷಿ ಅಧಿಕಾರಿ, ಸುರಪುರ

***

ಡಿಎಪಿ ಸಿಗುತ್ತಿಲ್ಲ. ಮೊದಲೇ ಪ್ರವಾಹ ಬಂದ ಸಾಕಷ್ಟು ನಷ್ಟ ಸಂಭವಿಸಿದೆ. ಈಗ ಗೊಬ್ಬರ ಅಭಾವ ರೈತರ ಜೀವ ಹಿಂಡುತ್ತಿದೆ. ಇನ್ನೆರಡು ದಿನದಲ್ಲಿ ಗೊಬ್ಬರ ಸಿಗದಿದ್ದರೆ ಭತ್ತ ಹಾಳಾಗುತ್ತದೆ

-ನಿಂಗಪ್ಪ ಸಕ್ರಿ, ರೈತ ಸುರಪುರ

***

ರೈತರು ಬೆಳೆಗೆ ನಿಗದಿಪಡಿಸಿದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಗೊಬ್ಬರ ಹಾಕುತ್ತಿದ್ದಾರೆ. ಅಲ್ಲದೆ ಎಲ್ಲಾ ಬೆಳೆಗೆ ಏಕಕಾಲದಲ್ಲಿ ಗೊಬ್ಬರ ನೀಡುತ್ತಿರುವುದರಿಂದ ಬೇಡಿಕೆ ಜಾಸ್ತಿಯಾಗಿದೆ

-ಸುನಿಲಕುಮಾರ, ಸಹಾಯಕ ಕೃಷಿ ನಿರ್ದೇಶಕ ಶಹಾಪುರ

***

ಪೂರಕ ಮಾಹಿತಿ: ಅಶೋಕ ಸಾಲವಾಡಗಿ, ಟಿ.ನಾಗೇಂದ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT