ಶುಕ್ರವಾರ, ಮಾರ್ಚ್ 24, 2023
22 °C
ಜಿಲ್ಲೆಗೆ 29ನೇ ಸ್ಥಾನ, ಫಲ ನೀಡಿದ ಅಧಿಕಾರಿಗಳ ಶ್ರಮ

ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಕಲ್ಯಾಣ ಕರ್ನಾಟಕದಲ್ಲೇ ಯಾದಗಿರಿ ಟಾಪ್‌

ಬಿ.ಜಿ. ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಎಸ್ಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಇದರಲ್ಲಿ ಯಾದಗಿರಿ ಜಿಲ್ಲೆ ಕಲ್ಯಾಣ ಕರ್ನಾಟಕದಲ್ಲೇ ಟಾಪ್‌ ಸ್ಥಾನವನ್ನು ಅಲಂಕರಿಸಿದೆ.

ಯಾದಗಿರಿ ಜಿಲ್ಲೆಗೆ ಕಳೆದ ಕೆಲ ವರ್ಷಗಳಲ್ಲಿ ಕೊನೆ ಸ್ಥಾನವೇ ಗಟ್ಟಿಯಾಗಿತ್ತು. ಆದರೆ, ಈ ಬಾರಿ 29ನೇ ಸ್ಥಾನ ಪಡೆಯುವ ಮೂಲಕ ಸಾಧನೆ ಮಾಡಿದೆ.

ರಾಜ್ಯದಲ್ಲಿ 34 ಶೈಕ್ಷಣಿಕ ಜಿಲ್ಲೆಗಳಿದ್ದು, ಇದರಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಯಾದಗಿರಿ ಜಿಲ್ಲೆಯೂ ಮೇಲ್ಪಂಕ್ತಿಯಲ್ಲಿದೆ. ಇದು ಶಿಕ್ಷಣ ಅಧಿಕಾರಿಗಳಲ್ಲಿ ಮತ್ತಷ್ಟು ಹುಮ್ಮಸ್ಸು ತರಿಸಿದೆ.

ಗ್ರೇಡ್‌ ಆಧಾರದಲ್ಲಿ ಸ್ಥಾನ: ಯಾದಗಿರಿ ಜಿಲ್ಲೆಗೆ 29ನೇ ಸ್ಥಾನ, 30ನೇ ಸ್ಥಾನ ಕಲಬುರ್ಗಿ, 31ನೇ ಸ್ಥಾನ ಕೊಪ್ಪಳ, 32ನೇ ಸ್ಥಾನ ರಾಯಚೂರು, 33ನೇ ಸ್ಥಾನ ಬೀದರ್‌, 34ನೇ ಸ್ಥಾನ ಬಳ್ಳಾರಿ ಸ್ಥಾನ ಪಡೆದಿದೆ.

ಜಿಲ್ಲೆಯ ಗ್ರಾಮಾಂತರ ಭಾಗದಲ್ಲಿ 9,508, ನಗರ ಪ್ರದೇಶದಲ್ಲಿ 4,423 ರೆಗ್ಯುಲರ್‌ ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿದ್ದು, ಎಲ್ಲರೂ ಉತ್ತೀರ್ಣರಾಗಿದ್ದಾರೆ.

ಮಾಧ್ಯಮವಾರು ವಿದ್ಯಾರ್ಥಿಗಳ ವಿವರ: ಕನ್ನಡ ಮಾಧ್ಯಮದಲ್ಲಿ 5,845 ಬಾಲಕರು, 4,835 ಬಾಲಕಿಯರು, ಆಂಗ್ಲ ಮಾಧ್ಯಮದಲ್ಲಿ 1,416 ಬಾಲಕರು, 1,122 ಬಾಲಕಿಯರು, ಉರ್ದು ಮಾಧ್ಯಮದಲ್ಲಿ 214 ಬಾಲಕರು, 495 ಬಾಲಕಿಯರು ಪರೀಕ್ಷೆಗೆ ಹಾಜರಾಗಿದ್ದು, ಎಲ್ಲರೂ ಪಾಸಾಗಿದ್ದಾರೆ.

ಖಾಸಗಿ ಅಭ್ಯರ್ಥಿಗಳ ವಿವರ: ಈ ಬಾರಿ ಖಾಸಗಿ ಅಭ್ಯರ್ಥಿಗಳು ಒಂದೇ ಬಾರಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಪೂರ್ಣಗೊಳಿಸಿದ್ದಾರೆ. ಬಾಲಕರು 595, ಬಾಲಕಿಯರು 203 ಸೇರಿದಂತೆ 798 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ.

ಶೇ 80ಕ್ಕಿಂತ ಹೆಚ್ಚು ಅಂಕ ಶಾಲೆಗಳು: ಜಿಲ್ಲೆಯಲ್ಲಿ 122 ಸರ್ಕಾರಿ ಪ್ರೌಢಶಾಲೆ, 16 ಸರ್ಕಾರಿ ವಸತಿ ಪ್ರೌಢಶಾಲೆ, 17 ಅನುದಾನಿತ ಹಾಗೂ 76 ಖಾಸಗಿ ಪ್ರೌಢ ಶಾಲೆಗಳು ಸೇರಿ ಒಟ್ಟು 231 ಶಾಲೆಗಳಿವೆ.

ಈ ಶಾಲೆಗಳಲ್ಲಿ ವಿದ್ಯಾರ್ಥಿಗಳು ಶೇ 80ಕ್ಕಿಂತ ಹೆಚ್ಚು ಗ್ರೇಡ್‌ ಪಡೆದ ವಿದ್ಯಾರ್ಥಿಗಳು ಹೆಚ್ಚಾಗಿದ್ದಾರೆ. 138 ಸರ್ಕಾರಿ ಶಾಲೆ, ಅನುದಾನ ಸಹಿತ ಶಾಲೆ 11, ಅನುದಾನ ರಹಿತ 82 ಶಾಲೆಗಳು ಶೇ 80ಕ್ಕಿಂತ ಹೆಚ್ಚಿನ ಪ್ರತಿಶತ ಸಾಧಿಸಿವೆ.

ತಾಲ್ಲೂಕುವಾರ ವಿದ್ಯಾರ್ಥಿಗಳ ವಿವರ: ಶಹಾಪುರ ತಾಲ್ಲೂಕಿನಲ್ಲಿ 2,180 ಬಾಲಕರು, 1,878 ಬಾಲಕಿಯರು ಸೇರಿದಂತೆ 4,058 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಸುರಪುರ ತಾಲ್ಲೂಕಿನಲ್ಲಿ 2,238 ಬಾಲಕರು, 1,904 ಬಾಲಕಿಯರು ಸೇರಿದಂತೆ 4,142 ವಿದ್ಯಾರ್ಥಿಗಳು ಪಾಸಾಗಿದ್ದಾರೆ.
ಯಾದಗಿರಿ ತಾಲ್ಲೂಕಿನಲ್ಲಿ 2,661 ಬಾಲಕರು, 2,291 ಬಾಲಕಿಯರು ಸೇರಿದಂತೆ 4,952 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಎ+ ಗ್ರೇಡ್‌ನಲ್ಲಿ 589, ಎ ಗ್ರೇಡ್‌ 3,520, ಬಿ ಗ್ರೇಡ್‌ 7,820, ಸಿ ಗ್ರೇಡ್‌ನಲ್ಲಿ 2002 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಬಿ ಗ್ರೇಡ್‌ನಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಅಂಕಗಳನ್ನು ಪಡೆದಿದ್ದಾರೆ.

‘ಕಳೆದ ಮೂರು ವರ್ಷಗಳಿಂದ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಉತ್ತಮ ತರಬೇತಿ ನೀಡಲಾಗುತ್ತಿದ್ದು, ಈ ಬಾರಿ ಕಲ್ಯಾಣ ಕರ್ನಾಟಕದಲ್ಲಿ ಜಿಲ್ಲೆ ಉತ್ತಮ ಸ್ಥಾನ ಪಡೆಯುವಂತೆ ಆಗಿದೆ. ಶಿಕ್ಷಕರಿಗೂ ವೆಬಿನಾರ್‌ ಮೂಲಕ ತರಬೇತಿ ನೀಡಲಾಗಿದೆ. ಅಲ್ಲದೇ ಪಠ್ಯಕ್ರಮವನ್ನು ವಿಮರ್ಶೆ ಮಾಡಿ ಬೋಧಿಸಲಾಗಿದೆ. ಪ್ರತಿಯೊಂದು ಘಟಕಕ್ಕೂ ಪರೀಕ್ಷೆ ಮಾಡಿದ್ದು, ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗಿದೆ’ ಎನ್ನುತ್ತಾರೆ ಜಿಲ್ಲಾ ಎಸ್ಸೆಸ್ಸೆಲ್ಸಿ ನೋಡಲ್‌ ಅಧಿಕಾರಿ ಡಾ. ಮಲ್ಲಪ್ಪ ಕೆ ಯರಗೋಳ ಹೇಳುತ್ತಾರೆ.

 ***

ಜಿಲ್ಲೆಯಲ್ಲಿ ಎರಡು ಬಾರಿ ವಿದ್ಯಾರ್ಥಿಗಳಿಗೆ ಅಣಕು ಪರೀಕ್ಷೆ ಮಾಡಿ ತರಬೇತಿ ನೀಡಲಾಗಿತ್ತು. ಶೇ 60–70ರಷ್ಟು ಆನ್‌ಲೈನ್‌ ತರಗತಿ, ವಿದ್ಯಾಗಮ ನಮ್ಮಲ್ಲಿ ಚೆನ್ನಾಗಿ ಆಗಿದೆ

- ಡಾ. ಮಲ್ಲಪ್ಪ ಕೆ ಯರಗೋಳ, ಜಿಲ್ಲಾ ಎಸ್ಸೆಸ್ಸೆಲ್ಸಿ ನೋಡಲ್‌ ಅಧಿಕಾರಿ

***

625ಕ್ಕೆ 623 (ಶೇ 99.68) ಅಂಕಗಳನ್ನು ಪಡೆದಿದ್ದು, ಖುಷಿಯಾಗಿದೆ. ಶಾಲಾ ಶಿಕ್ಷಕರು ಅಣಕು ಪರೀಕ್ಷೆ ಮಾಡಿ ನಮಗೆ ತರಬೇತಿ ನೀಡಿದ್ದರಿಂದ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಲು ಸಾಧ್ಯವಾಗಿದೆ

- ಜಗತ್‌ ಸರಡಗಿ, ಜಿಲ್ಲೆಯ ಟಾಪ್‌ ವಿದ್ಯಾರ್ಥಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು