ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗನವಾಡಿಗಳಲ್ಲಿ ಚಿಣ್ಣರ ಚಿಲಿಪಿಲಿ

ಚಿಣ್ಣರಿಗೆ ಆರತಿ ಬೆಳಗಿ ಸ್ವಾಗತಿಸಿದ ಶಿಕ್ಷಕರು; ಮತ್ತೆ ಮರುಕಳಿಸಿದ ಸಂಭ್ರಮ
Last Updated 9 ನವೆಂಬರ್ 2021, 4:45 IST
ಅಕ್ಷರ ಗಾತ್ರ

ಯಾದಗಿರಿ: ಕೋವಿಡ್‌–19 ಕಾರಣದಿಂದ ಕಳೆದ ಒಂದೂವರೆ ವರ್ಷ ಬಂದ್‌ ಆಗಿದ್ದ ಅಂಗನವಾಡಿ ಮತ್ತು ಪೂರ್ವ ಪ್ರಾಥಮಿಕ ಶಾಲೆಗಳು ಸೋಮವಾರದಿಂದ ಆರಂಭವಾಯಿತು.

ಭಾನುವಾರವೇ ಅಂಗನವಾಡಿ, ಎಲ್‌ಕೆಜಿ, ಯುಕೆಜಿ ಶಾಲೆಗಳನ್ನು ಸ್ವಚ್ಛತೆ ಮಾಡಲಾಗಿತ್ತು. ರಂಗೋಲಿ ಬಿಡಿಸಿ ಮಕ್ಕಳನ್ನು ಅಕ್ಕರೆಯಿಂದ ಶಿಕ್ಷಕ ವರ್ಗ ಆಹ್ವಾನಿಸಿತು. ಶಾಲೆಗೆ ಸ್ವಾಗತ ಎನ್ನುವ ಫಲಕ ಅಳವಡಿಸಿದ್ದರು.

ಬೈಕ್‌, ಆಟೊಗಳಲ್ಲಿ ತಮ್ಮ ಪೋಷಕರೊಂದಿಗೆ ಬಂದ ಚಿಣ್ಣರಿಗೆ ಪುಷ್ಪಾರ್ಚನೆ ಮಾಡಲಾಯಿತು. ಕೆಲವರು ತಮ್ಮ ಮಕ್ಕಳನ್ನು ಶಾಲೆಯಲ್ಲಿ ಬಿಟ್ಟ ನಂತರ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.

ಆರತಿ ಬೆಳಗಿ ಬೆಳಗಿ ಸ್ವಾಗತ: ಬಹುತೇಕ ಶಾಲೆಗಳಲ್ಲಿ ಮಕ್ಕಳನ್ನು ಆರತಿ ಬೆಳಗಿ ಸ್ವಾಗತಿಸಲಾಯಿತು.

ನಗರದ ಶಾಂತಿ ಸದನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳನ್ನು ಬರ ಮಾಡಿಕೊಳ್ಳಲು ವಿಶೇಷವಾಗಿ ಶಾಲೆಯನ್ನು ಅಲಂಕಾರ ಮಾಡಲಾಗಿತ್ತು. ಹೂಗಳಿಂದ ಶೃಂಗರಿಸಲಾಗಿತ್ತು.

ನಗರದ ಕೋಟಗೇರ ವಾಡ ಎಸ್‌ಡಿ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಕುಂಕುಮ ತಿಲಕ ಇಟ್ಟು ಹೂ ಗುಚ್ಛ ಕೊಟ್ಟು ಆರತಿ ಬೆಳಗಿ ವಿಶೇಷವಾಗಿ ಸ್ವಾಗತ ಮಾಡಿಕೊಳ್ಳಲಾಯಿತು.

ಎಸ್‌ಡಿ ಸಂಸ್ಥೆ ಅಧ್ಯಕ್ಷ ದುರ್ಗಪ್ಪ ಪೂಜಾರಿ, ಶಿಕ್ಷಕರಾದ ಗೀತಾ, ಲೋಕೇಶ್ವರಿ ಶಾಂತರಾಜು, ಆದರ್ಶ ಇದ್ದರು.

ಮಾಸ್ಕ್‌ ಧರಿಸಿ ಬಂದ ಚಿಣ್ಣರು: ಕೊರೊನಾ ಕಾರಣ ಚಿಣ್ಣರು ಬಣ್ಣ ಬಣ್ಣದ ಮಾಸ್ಕ್‌ ಧರಿಸಿ ಗಮನ ಸೆಳೆದರು. ಶಿಕ್ಷಕರು ಮಾಸ್ಕ್‌ ಧರಿಸಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು.

ವಡಗೇರಾ ತಾಲ್ಲೂಕಿನ ನಾಯ್ಕಲ್ ಗ್ರಾಮದ ಡಾ.ಬಾಬು ಜಗಜೀವನರಾಂ ವೃತ್ತದಲ್ಲಿರುವ ವಾರ್ಡ್ ಸಂಖ್ಯೆ 1 ರ ಬಳಿಯ ಅಂಗನವಾಡಿ ಕೇಂದ್ರ 4 ಅನ್ನು ತಳಿರು ತೋರಣ, ತೆಂಗಿನ ಗರಿ, ಹೂವಿನ ಅಲಂಕಾರ ಮಾಡಿ ಅಂಗನವಾಡಿ ಕೇಂದ್ರವನ್ನು ಸಿಂಗಾರ ಮಾಡಲಾಗಿತ್ತು.

ಗ್ರಾಪಂ ಸದಸ್ಯೆ ನಿಂಗಮ್ಮ ಬಸವರಾಜ್ ಮೈತ್ರೆ ಅವರು ಅಂಗನವಾಡಿ ಕೇಂದ್ರದ ಮಕ್ಕಳಿಗೆ ಪುಷ್ಪವೃಷ್ಟಿ ಮಾಡುವ ಮೂಲಕ ಸಿಹಿಹಂಚಿ ಮಕ್ಕಳನ್ನು ಸ್ವಾಗತಿಸಿ ಬರಮಾಡಿಕೊಂಡರು.

ಬಳಿಕ ಮಾತನಾಡಿದ ಅವರು, ಅಂಗನವಾಡಿ ಕೇಂದ್ರಗಳು ಮಕ್ಕಳಿಗೆ ಶಿಕ್ಷಣದ ಬುನಾದಿ ಇದ್ದಂತೆ. ಸರ್ಕಾರ ಅಂಗನವಾಡಿ ಕೇಂದ್ರಗಳನ್ನು ಆರಂಭಿಸುವ ಮೂಲಕ ಮಕ್ಕಳಿಗೆ ಬಹಳ ಅನುಕೂಲ ಮಾಡಿದೆ. ಮಕ್ಕಳು ಶಿಕ್ಷಣ ಇಲ್ಲದೆ ಮನೆಯಲ್ಲಿ ಆಟವಾಡುತ್ತಾ ಕಾಲ ಕಳೆಯುತ್ತಿದ್ದರು. ಈಗ ಮತ್ತೆ ಅಂಗನವಾಡಿ ಕೇಂದ್ರಗಳು ಆರಂಭವಾದ ಕಾರಣ ಮಕ್ಕಳು ಕೇಂದ್ರಗಳಿಗೆ ಬರುವಂತಾಗಿದೆ. ಮಕ್ಕಳ ಪಾಲಕ-ಪೋಷಕರು ಮಕ್ಕಳಿಗೆ ಅಂಗನವಾಡಿ ಕೇಂದ್ರಗಳಿಗೆ ತಪ್ಪದೆ ಕಳಿಸಬೇಕು ಎಂದು ಹೇಳಿದರು.

ಕೋವಿಡ್ ಸಮಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಸೇವೆಯನ್ನು ಇದೇ ವೇಳೆ ಶ್ಲಾಘಿಸಿದರು. ಅಂಗನವಾಡಿ ಕೇಂದ್ರದ ಶಿಕ್ಷಕಿ ನಿಂಗಮ್ಮ, ಅಂಬೇಡ್ಕರ್ ನಗರದ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ಚಾಂದಪಾಷಾ, ರತ್ನಪ್ಪ, ಮಲ್ಲಮ್ಮ, ಹಣಮಂತಿ ವಾರ್ಡ್‌ ನಿವಾಸಿಗಳು, ಮಕ್ಕಳ ಪಾಲಕ-ಪೋಷಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT