ಭಾನುವಾರ, ಆಗಸ್ಟ್ 25, 2019
25 °C

ಹೆಲಿಕಾಪ್ಟರ್‌ನಿಂದ ರಕ್ಷಣೆ: ಗ್ರಾಮಕ್ಕೆ ನೀರು

Published:
Updated:

ಯಾದಗಿರಿ: ಜಿಲ್ಲೆಯ ನಾರಾಯಣಪುರ ಬಸವಸಾಗರ ಜಲಾಶಯದಿಂದ ನೀರು ಹರಿಬಿಟ್ಟಿದ್ದರಿಂದ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಉಲ್ಬಣಿಸಿದ್ದು ಗ್ರಾಮಗಳಿಗೆ ನೀರು ನುಗ್ಗಿ ಸಂ‍ಪರ್ಕ ಕಡಿತಗೊಂಡಿದೆ.

ಹುಣಸಗಿ ತಾಲ್ಲೂಕಿನ ಗೆದ್ದಲಮರಿ ಗ್ರಾಮದ ಬಳಿ ಕೃಷ್ಣಾ ನದಿ ನಡುಗಡ್ಡೆಯಲ್ಲಿ ಸಿಲುಕಿದ್ದ ಗ್ರಾಮಸ್ಥರಾದ ಹಳ್ಳೆಪ್ಪ ಯರಿಕ್ಯಾಳ, ಹನುಮಂತಿ, ಮಾನಮ್ಮ, ಶಿವರಾಜ ಮತ್ತು ಆದಪ್ಪ ಎಂಬುವರನ್ನು ಸೇನಾ ಹೆಲಿಕಾಪ್ಟರ್ ಮೂಲಕ ರಕ್ಷಿಸಲಾಯಿತು.

ಅಲೆಗಳ ಹೊಡೆತಕ್ಕೆ ಬೋಟ್ ನಲುಗಿದ್ದರಿಂದ ಬೆಳಗಾವಿಯಿಂದ ಬಂದಿದ್ದ ಸೇನಾ ಹೆಲಿಕಾಪ್ಟರ್‌ನ ನೆರವು ಪಡೆಯಲಾಯಿತು. ವಡಗೇರಾ ತಾಲ್ಲೂಕಿನ ಚೆನ್ನೂರು, ಗೋಂದೆನೂರು, ಐಕೂರು, ಕೋಂಕಲ್, ಶಿವನೂರು, ಬಿಳ್ಹಾರ, ಕೊಡಲ್, ಗುಂಡ್ಲೂರು ಗ್ರಾಮಗಳನ್ನು ಸ್ಥಾಳಾಂತರಿಸಲಾಗಿದೆ.

ತಾಲ್ಲೂಕಿನ ಗೋಂದೆನೂರು ಗ್ರಾಮದಲ್ಲಿ ಕೃಷ್ಣಾ ನದಿಯ ಪ್ರವಾಹದಿಂದ ಕಣಕಿಯ (ಜೋಳದ ಸೊಪ್ಪಿ) ಬಣಮಿಯನ್ನು ಸ್ಥಳಾಂತರಿಸುವ ವೇಳೆ ಯಂಕಪ್ಪ ಹೊನ್ನಪ್ಪ (28 ) ಎಂಬುವವರು ಎತ್ತಿನ ಗಾಡಿಯಿಂದ ಬಿದ್ದು ಸಾವನ್ನಪ್ಪಿದ್ದಾರೆ.

ಸುರಪುರ ಮತ್ತು ಶಹಾಪುರ ತಾಲ್ಲೂಕುಗಳ ಕೆಲ ಗ್ರಾಮಗಳ ಜಲಾವೃತಗೊಂಡಿವೆ. ಅಲ್ಲಿನ ಗ್ರಾಮಸ್ಥರನ್ನು ಪರಿಹಾರ ಕೇಂದ್ರದಲ್ಲಿ ಇರಿಸಲಾಗಿದೆ. 

ವಿರುಪಾಪುರ ಗಡ್ಡೆಯಲ್ಲಿ ಪ್ರವಾಸಿಗರು: ತುಂಗಭದ್ರಾ ಜಲಾಶಯದಿಂದ 3 ಲಕ್ಷಕ್ಕೂ ಅಧಿಕ ಕ್ಯುಸೆಕ್ ನೀರನ್ನು ನದಿಗೆ ಬಿಟ್ಟ ಕಾರಣ  ಗಂಗಾವತಿ ತಾಲ್ಲೂಕಿನ ವಿರುಪಾಪುರ ಗಡ್ಡೆ, ನವವೃಂದಾವನ ಗಡ್ಡೆ, ಐತಿಹಾಸಿಕ ಮಂಟಪಗಳು ಸೇರಿ ನಾನಾ ಗ್ರಾಮಗಳ ಜಮೀನುಗಳು ಜಲಾವೃತಗೊಂಡಿವೆ. ನೀರಿನಿಂದ ನಡುಗಡ್ಡೆಯಾಗಿರುವ ವಿರುಪಾಪುರ ಗಡ್ಡೆಯಲ್ಲಿ 200ಕ್ಕೂ ಹೆಚ್ಚು ಪ್ರವಾಸಿಗರು ತಂಗಿದ್ದು ಈವರೆಗೆ 26 ಪ್ರವಾಸಿಗರನ್ನು ರಕ್ಷಿಸಲಾಗಿದೆ.

Post Comments (+)