ಶಹಾಪುರದಲ್ಲಿ ಸಂಭ್ರಮದ ಸಗರ ಯಲ್ಲಮ್ಮ ಜಾತ್ರೆ

ಶಹಾಪುರ: ತಾಲ್ಲೂಕಿನ ಸಗರ ಯಲ್ಲಮ್ಮ ದೇವಿ ಜಾತ್ರೆ ಮಂಗಳವಾರ ಜರುಗಿತು. ತಾಲ್ಲೂಕಿನ ವಿವಿಧ ಗ್ರಾಮಗಳು ಸೇರಿದಂತೆ ಮಹಾರಾಷ್ಟ್ರದಿಂದಲೂ ಹೆಚ್ಚಿನ ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಜಿಲ್ಲಾಡಳಿತ ಹಲವು ವರ್ಷದಿಂದ ದೇಗುಲದ ಆವರಣದಲ್ಲಿ ಪ್ರಾಣಿ ಬಲಿ ನಿಷೇಧಿಸಿದೆ.
ಭಕ್ತರು ಹರಿಕೆ ತೀರಿಸಲು ಅರೆ ಬೆತ್ತಲೆ ಮೆರವಣಿಗೆಯನ್ನು ನಿಷೇಧಿಸಿದ್ದರಿಂದ ಭಕ್ತರು ಮೈತುಂಬಾ ಸೊಪ್ಪು ಸುತ್ತಿಕೊಂಡು ತಲೆಯ ಮೇಲೆ ಆರತಿ ಹೊತ್ತುಕೊಂಡು ಹರಿಕೆ ತೀರಿಸಿದರು.
ಸರದಿಯಲ್ಲಿ ಸಾಗಿ ದೇವರ ದರ್ಶನ ಪಡೆದೆವು. ಎರಡು ವರ್ಷದಿಂದ ಕೋವಿಡ್ ಕಾಟದಿಂದ ಜಾತ್ರೆಗೆ ಮಂಕು ಕವಿದ್ದಿತ್ತು. ಈ ವರ್ಷ ಇನ್ನೂ ಹೆಚ್ಚಿನ ಖುಷಿಯಿಂದ ಜಾತ್ರೆಯಲ್ಲಿ ಭಾಗವಹಿಸಿದ್ದೇವೆ ಎಂದು ಭಕ್ತೆ ಭೀಮವ್ವ ತಿಳಿಸಿದರು.
ಗ್ರಾಮೀಣ ಪ್ರದೇಶದ ಜನರು ಕುಟುಂಬದ ಸಮೇತ ಟಂಟಂ, ಜೀಪು, ಕಾರಿನಲ್ಲಿ ಆಗಮಿಸಿದ್ದರು. ಮನೆಯಲ್ಲಿ ಸಿದ್ಧಪಡಿಸಿದ್ದ ಹೊಳಿಗೆ, ಕಡುಬು, ಖಡಕ್ ರೊಟ್ಟಿ, ಬದನೆಕಾಯಿ, ಪುಂಡಿಪಲ್ಯ ಹೀಗೆ ಸಿದ್ಧಪಡಿಸಿಕೊಂಡು ಬಂದ ಆಹಾರವನ್ನು
ಸವಿದರು.
ನಮ್ಮಲ್ಲಿ ಯಾವುದೇ ಜಾತಿ, ಧರ್ಮದ ಸೊಂಕು ಇಲ್ಲದೆ ಎಲ್ಲಾ ಸಮುದಾಯದವರು ಜಾತ್ರೆಯಲ್ಲಿ ಭಾಗವಹಿಸಿದ್ದರು ಎನ್ನುತ್ತಾರೆ ಪೀರಸಾಬ್.
ದೇವಸ್ಥಾನದ ಮುಂದೆ ಸಿಹಿ ಪಧಾರ್ಥಗಳನ್ನು ಮಾರಾಟ ಮಾಡುವ ಅಂಗಡಿಗಳು, ಮಹಿಳೆಯರು ಖುಷಿಯಿಂದ ಮಳಿಗೆಯ ಮುಂದೆ ಕೈ ಬಳೆ ತೋಡಿಸಿಕೊಂಡರು. ಕಬ್ಬಿನ ಅಂಗಡಿ, ಮಕ್ಕಳ ಆಟಿಕೆ ಸಾಮಾನು ಮಾರಾಟದ ಭರಾಟೆ ಹೀಗೆ ಜಾತ್ರೆಯಲ್ಲಿ ಜನತೆ ಸಂಭ್ರಮದಿಂದ ಭಾಗವಹಿಸಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.