ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರುದ್ರಭೂಮಿಗೆ ಜಮೀನು ನೀಡಲು ಆಗ್ರಹ

Last Updated 24 ಮೇ 2017, 6:08 IST
ಅಕ್ಷರ ಗಾತ್ರ

ಗುರುಮಠಕಲ್: ಚಂಡರಿಕಿ ರಸ್ತೆಯ ಸರ್ವೆ ನಂ.334ರಲ್ಲಿ ಎರಡು ಎಕರೆ ಭೂಮಿಯ ಸೂಕ್ತ ಭೂಮಾಪನ ಮತ್ತು ಸರಹದ್ದು ಗುರುತಿಸದ ಕಾರಣ ಎರಡು ಸಮುದಾಯಗಳ ನಡುವೆ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಜಮೀನು ವೀರಶೈವ ಸಮುದಾಯಕ್ಕೆ ರುಧ್ರಭೂಮಿ ಯೆಂದು ಮಂಜೂರು ಮಾಡಿ ಆದೇಶಿ ಸಲಾಗಿದೆ ಎನ್ನಲಾಗಿದೆ. ಇದರ ಪರಿಣಾಮ ಸಮಸ್ಯೆ ಗಂಭೀರ ಸ್ವರೂಪ ಪಡೆದಿದೆ.

ವೀರಶೈವ ಸಮುದಾಯದ ನಾಗಮ್ಮ ಬಸ್ಸಣ್ಣ  ಭೂಮಾ ಎಂಬುವರು ಮೃತ ಪಟ್ಟಿದ್ದು ಮಂಗಳವಾರ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆದಿದ್ದ ವೇಳೆ ವಿವಾದ ತೀವ್ರ ಸ್ವರೂಪ ಪಡೆಯಿತು. ಇದನ್ನು ಅರಿತ ಪೊಲೀಸ್ ಸಬ್ಇನ್ಸ್‌ಪೆಕ್ಟರ್‌ ವೈ.ಎನ್. ಗುಂಡುರಾವ್ ಹಾಗೂ ಗುರುಮಠಕಲ್ ವಿಶೇಷ ತಹಸೀಲ್ದಾರ ಇಜಾಜ್ ಉಲ್ ಹಕ್ ಸ್ಥಳಕ್ಕೆ ಬಂದರು.

ಎರಡೂ ಸಮುದಾಯಗಳೊಡನೆ ಸಮಾಲೋಚನೆ ನಡೆಸಿದರು. ನಂತರ ದಾಖಲೆಗಳನ್ನು ಪರಿಶೀಲಿಸಿದರು. ಗಡಿ ಗುರುತಿಸುವ ಮೂಲಕ ಎರಡು ಸಮುದಾಯಗಳನ್ನು ವಿಶ್ವಾಸಕ್ಕೆ ಪಡೆದು ಸಮಸ್ಯೆ ಬಗೆಹರಿಸುವ ಬರವಸೆ ನೀಡಿದರು. ನಂತರ ಪೊಲೀಸ್, ಕಂದಾಯ ಹಾಗೂ ಸ್ಥಳೀಯ ಮುಖಂಡರ ಸಮ್ಮುಖ ದಲ್ಲಿ ಶವಸಂಸ್ಕಾರಕ್ಕೆ ಅವಕಾಶ ಕಲ್ಪಿಸಲಾಯಿತು.

ವಿವಾದದ ಹಿನ್ನಲೆ: 1972 ರಲ್ಲಿ ಬುಗ್ಗಪ್ಪ ಹಾಗೂ ಸಾಯಪ್ಪ ಎಂಬ ದಲಿತ ಕುಟುಂಬಗಳಿಗೆ ತಲಾ 4 ಎಕರೆಯಂತೆ ಒಟ್ಟು 8 ಎಕರೆ ಭೂಮಿ ಮಂಜೂರು ಮಾಡಿ ಆದೇಶಿಸಲಾಗಿತ್ತು, ನಂತರ ಅದೇ ಸರ್ವೆ ನಂ. ನಲ್ಲಿ 1100ಕಿ.ವ್ಯಾ. ವಿದ್ಯುತ್ ಪರಿವರ್ತಕದ ಕಚೇರಿಗೆ 4 ಎಕರೆ ಭೂಮಿ ಮಂಜೂರು ಮಾಡಲಾಗಿತ್ತು, ಸದರಿ ಜಮೀನಿನಲ್ಲಿ ಈಗಾಗಲೇ ವಿದ್ಯುತ್ ಪರಿವರ್ತಕ ಕಾರ್ಯನಿರ್ವಹಿಸುತ್ತಿದೆ.

2006 ರಲ್ಲಿ ಅದೇ ಜಮೀನಿನ ಉಳಿದ ಭಾಗದಲ್ಲಿ ಎರಡು ಎಕರೆ ಪ್ರದೇಶವನ್ನು ವೀರಶೈವ ಸಮುದಾಯಕ್ಕೆ ರುಧ್ರಭೂಮಿಯನ್ನಾಗಿ ಮಂಜೂರು ಮಾಡಿಕೊಡಲಾಗಿದೆ. ಆದರೆ ಜಮೀನಿ  ನಲ್ಲಿ ಯಾರಿಗೆ ಎಷ್ಟೆಷ್ಟು ಭೂಮಿಯನ್ನು ಮಂಜೂರು ಮಾಡಲಾಗಿದೆಯೋ ಅಷ್ಟು ಪ್ರದೇಶದ ಗಡಿಯನ್ನು ಗುರುತಿಸಿ ನೀಡದ ಕಾರಣ ವಿವಾದ ತಾರಕಕ್ಕೇರಿದೆ.

‘ಜಮೀನಿನಲ್ಲಿ ದಲಿತ ಕುಟುಂಬಗಳಿಗೆ ಎಷ್ಟು ಪ್ರದೇಶ ಬರುತ್ತದೆ ಎಂಬುದನ್ನು ಭೂಮಾಪಕರು ಮೊದಲು ಗುರುತಿಸಿ ಸರಹದ್ದು ನೀಡಬೇಕು. ನಂತರ ಉಳಿದ ಜಮೀನಿನಲ್ಲಿ ಜೆಸ್ಕಾಂಗೆ, ಉಳಿದ ಎರಡು ಎಕರೆ ಪ್ರದೇಶವನ್ನು ರುಧ್ರಭೂಮಿಗೆ ನೀಡಬೇಕಿದೆ. ಆದರೆ ದಲಿತ ಕುಟುಂಬಗಳು ಉಳಿಮೆ ಮಾಡುವ ಸ್ಥಳದಲ್ಲಿ ಶವಸಂಸ್ಕಾರ ನಡೆಸಿವೆ’ ಎಂದು ಮುಖಂಡರಾದ ಬಾಲಪ್ಪ ಪ್ಯಾಟಿ ಆರೋಪಿಸಿದರು.  ಮುಖಂಡರಾದ ಭೀಮಶಪ್ಪ ಗುಡ್ಸೆ ಹಾಗೂ ಅಶೋಕ ಸಹ ಇದಕ್ಕೆ ದನಿಗೂಡಿಸಿದರು.

‘ಬೇರೆ ಸಮುದಯಗಳಿಗೆ ನೋವುಂಟು ಮಾಡುವ ಉದ್ದೇಶ ನಮಗಿಲ್ಲ, ಈಗಾಗಲೇ ನಮ್ಮ ಸಮು ದಾಯದಲ್ಲಿ ಯಾರಾದರೂ ಸಾವನ್ನ ಪ್ಪಿದರೆ ಸಂಸ್ಕಾರ ಮಾಡಲು ಸ್ಥಳವಿಲ್ಲ. 2006 ರಲ್ಲಿ ಸರ್ವೆ ನಂ 334ರಲ್ಲಿ ರುಧ್ರಭೂಮಿ ಮಂಜೂರು ಮಾಡಿದ್ದಾರೆ ಮತ್ತು ಅದಕ್ಕೆ ಸಂಬದಿಸಿದಂತೆ ಜೆಸ್ಕಾಂ ಪರಿವರ್ತಕದ ಪಕ್ಕದಲ್ಲಿ ರುಧ್ರಭೂಮಿ ಮಂಜೂರು ಮಾಡಿದ ದಾಖಲೆಗಳನ್ನೂ ನಮಗೆ ನೀಡಲಾಗಿದೆ.

ಆದರೆ ಅಲ್ಲಿ ನಮಗೆ ಶವ ಸಂಸ್ಕಾರ ಮಾಡಲು ಅವಕಾಶ ನೀಡದೆ ಪದೇ ಪದೆ ವಿವಾದ ಎಬ್ಬಿಸುತ್ತಿದ್ದು, ನಮ್ಮನ್ನು ಸಂಕಷ್ಟಕ್ಕೆ ದೂಡುತ್ತಿದ್ದಾರೆ’ ಎಂದು ವೀರಶೈವ ಸಮಾಜದ ಮುಖಂಡ ಶಿವಕುಮಾರ ಆರೋಪಿಸಿದರು. ಮುಖಂಡರಾದ ರವಿ, ನೀಲಕಂಠಯ್ಯ ಸ್ವಾಮಿ ಸಾಲಿಮಠ, ಮಲ್ಲಯ್ಯ ವಸ್ತ್ರದ್ ಸಹ ಅಸಮಾಧಾನ ವ್ಯಕ್ತಪಡಿಸಿದರು.

* * 

ಎರಡೂ ಸಮುದಾಯಗಳ ದಾಖಲೆಗಳನ್ನು ಪರಿಶೀಲಿಸಿ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಶೀಘ್ರವೇ ಸಮಸ್ಯೆಯನ್ನು ಬಗೆಹರಿಸಲಾಗುವುದು.
ಇಜಾಜ್ ಉಲ್ ಹಕ್
ವಿಶೇಷ ತಹಸೀಲ್ದಾರ್‌, ಗುರುಮಠಕಲ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT