ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕ, ಮಾಜಿ ಸಚಿವರ ನಡುವೆ ಜಿದ್ದಾ ಜಿದ್ದಿ

Last Updated 12 ಜನವರಿ 2017, 10:57 IST
ಅಕ್ಷರ ಗಾತ್ರ

ಸುರಪುರ:  ತಾಲ್ಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ 11 ಕ್ಷೇತ್ರಗಳಿಗೆ ಗುರುವಾರ ಮತದಾನ ನಡೆಯಲಿದೆ. ಪಕ್ಷ ರಹಿತ ಚುನಾವಣೆ ಇದ್ದರೂ ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳು ತಮ್ಮ ಬೆಂಬ ಲಿತ ಅಭ್ಯರ್ಥಿಗಳ ಗೆಲುವಿಗೆ ಹರ ಸಾಹಸ ಪಡುತ್ತಿವೆ.

ಎಪಿಎಂಸಿಯಲ್ಲಿ ಕಳೆದ ಸಾರಿ ಕಾಂಗ್ರೆಸ್‌ ಪಕ್ಷ ಅಧಿಕಾರದಲ್ಲಿತ್ತು. ಈ ಬಾರಿ ಬಿಜೆಪಿಗೆ ಅಧಿಕಾರದ ಚುಕ್ಕಾಣಿ ಒದಗಿಸಲು ಮಾಜಿ ಸಚಿವ ರಾಜೂಗೌಡ ಹಗಲಿರುಳು ಶ್ರಮಿಸುತ್ತಿದ್ದಾರೆ. ಸಮಿತಿಯ ಚುಕ್ಕಾಣಿ ಹಿಡಿಯಲು ಶಾಸಕ ರಾಜಾ ವೆಂಕಟಪ್ಪನಾಯಕ ಪಣತೊಟ್ಟಿದ್ದಾರೆ.

ಹೀಗಾಗಿ ಇಬ್ಬರೂ ನಾಯಕರು ತಮ್ಮ ಅಭ್ಯರ್ಥಿಗಳ ಗೆಲುವಿಗೆ ಕಳೆದ ಒಂದು ವಾರದಿಂದ ಭರ್ಜರಿ ಪ್ರಚಾರ ನಡೆ ಸಿದ್ದಾರೆ. ಇಬ್ಬರು ನಾಯಕರು ಗೆಲುವು ತಮ್ಮದೇ ಎಂದು ಲೆಕ್ಕಾಚಾರ ಹಾಕುತ್ತಿದ್ದಾರೆ. ಹೀಗಾಗಿ ಇದು ಇಬ್ಬರ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದೆ.

ಸಮಿತಿಗೆ 14 ಕ್ಷೇತ್ರಗಳು ಇವೆ. ಟಿಎಪಿಸಿಎಂಎಸ್‌ ಕ್ಷೇತ್ರದಿಂದ ಅಮರೇಶ ಕಟ್ಟಿಮನಿ, ಆಹಾರ ಸಂಸ್ಕರಣಾ ಕ್ಷೇತ್ರದಿಂದ ಸಣ್ಣಕ್ಕೆಪ್ಪ ಸಾಹುಕಾರ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕೆಂಭಾವಿ ಕ್ಷೇತ್ರಕ್ಕೆ ಕೋರ್ಟ್‌ ತಡೆಯಾಜ್ಞೆ ನೀಡಿದೆ. ಹೀಗಾಗಿ ಒಂದು ವರ್ತಕರ ಕ್ಷೇತ್ರ ಮತ್ತು 10 ವ್ಯವಸಾಯಗಾರರ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ.

ಎಲ್ಲೆಡೆ ಕಾಂಗ್ರೆಸ್‌ ಮತ್ತು ಬಿಜೆಪಿ ಅಭ್ಯರ್ಥಿಗಳ ಮಧ್ಯೆ ನೇರ ಸ್ಪರ್ಧೆ ಏರ್ಪಟ್ಟಿದೆ. 22 ಅಭ್ಯರ್ಥಿಗಳ ಭವಿಷ್ಯ ಗುರುವಾರ ಮತಗಟ್ಟೆಯಲ್ಲಿ ಭದ್ರ ವಾಗಲಿದೆ. ಜ. 14 ರಂದು ಮತ ಏಣಿಕೆ ನಡೆಯಲಿದ್ದು ಅಭ್ಯರ್ಥಿಗಳ ಭವಿಷ್ಯ ಹೊರಬೀಳಲಿದೆ.

ಜಿ.ಪಂ ಮಾಜಿ ಸದಸ್ಯ ನಾಗಣ್ಣ ದಂಡಿನ್‌, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ನಿಂಗಣ್ಣ ಬಾದ್ಯಾಪುರ, ತಾ.ಪಂ ಮಾಜಿ ಸದಸ್ಯರಾದ ಅಮ ರೇಶಗೌಡ ಸರ್ಜಾಪುರ, ದೇವಣ್ಣ ಮಲ ಗಲದಿನ್ನಿ, ಮಾಜಿ ಪುರಸಭೆ ಸದಸ್ಯ ದುರ್ಗಪ್ಪ ಗೋಗಿಕರ್‌, ಎಪಿಎಂಸಿ ಮಾಜಿ ಸದಸ್ಯ ಬಸವಪ್ರಭು ಪಾಟೀಲ ಕಣದಲ್ಲಿರುವ ಪ್ರಮುಖರು.

ಸಕಲ ಸಿದ್ಧತೆ: ಮತದಾನಕ್ಕಾಗಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ 162 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 32- ಅತಿ ಸೂಕ್ಷ್ಮ, 55-ಸೂಕ್ಷ್ಮ, 75- ಸಾಮಾನ್ಯ ಮತಗಟ್ಟೆಗಳಿವೆ. ಪ್ರತಿ ಮತಗಟ್ಟೆಗಳಿಗೆ 5 ಸಿಬ್ಬಂದಿಗಳಂತೆ ಒಟ್ಟು 810 ಸಿಬ್ಬಂದಿ ಚುನಾವಣೆ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ತಹಶೀಲ್ದಾರ್‌ ಸುರೇಶ ಅಂಕಲಿಗಿ ತಿಳಿಸಿದರು.

ಚುನಾವಣೆ ಭದ್ರತೆಗೆ 240 ಪೊಲೀಸರು, 60-ಗೃಹರಕ್ಷಕ ದಳ, 2-ಕೆಎಸ್ಆರ್‌ಪಿ, 2-ಡಿಆರ್ ತುಕಡಿಗಳನ್ನು ನಿಯೋಜಿಸಲಾಗಿದೆ. 23-ಸಾರಿಗೆ ಸಂಸ್ಥೆ ಬಸ್, 18-ಕ್ರೂಸರ್, 16-ಜೀಪ್‌ಗಳನ್ನು ಮತದಾನ ಸಿಬ್ಬಂದಿಯನ್ನು ಮತಗಟ್ಟೆಗಳಿಗೆ ತೆರಳಲು ಬಳಸಿಕೊಳ್ಳಲಾಗುತ್ತಿದೆ ಎಂದರು.

ಮತದಾನ ಶಾಂತಿಯುತ ಮತ್ತು ಪಾರದರ್ಶಕವಾಗಿ ನಡೆಸಲು ಶ್ರಮಿಸುವಂತೆ ತಿಳಿಸಲಾಗಿದೆ. ಮತಗಟ್ಟೆಗಳಲ್ಲಿ ಮತದಾನ ಮುಗಿದ ಬಳಿಕ ಮತಪೆಟ್ಟೆಗೆಗಳನ್ನು ಮುದ್ರೆಯೊಂದಿಗೆ ಪ್ರಭು ಕಾಲೇಜಿಗೆ ತಂದು ಡಿಮಸ್ಟರಿಂಗ್‌ ಮಾಡುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಚುನಾವಣೆಗೆ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿ ಮತ್ತು ಸಿಬ್ಬಂದಿಗಳು ನಗರದ ಪ್ರಭು ಕಾಲೇಜಿನ ಮೈದಾನದಲ್ಲಿ ಮಸ್ಟರಿಂಗ್‌ ಕಾರ್ಯದಲ್ಲಿ ಪಾಲ್ಗೊಂಡು ಮತಪೆಟ್ಟಿಗೆ ಮತ್ತಿತರ ಸಾಮಾಗ್ರಿಗಳೊಂದಿಗೆ ಬುಧವಾರ ತಮ್ಮ ತಮ್ಮ ಮತ ಕೇಂದ್ರಗಳಿಗೆ ತೆರಳಿದರು.

ಗ್ರೇಡ್-2 ತಹಶೀಲ್ದಾರ್ ಸುಫೀಯಾ ಸುಲ್ತಾನ್, ಶಿರಸ್ತೇದಾರ್ ನರೇಶ ಹಳ್ಳದ, ರಂಗಪ್ಪನಾಯಕ, ಕಂದಾಯ ನಿರೀಕ್ಷಕ ಅಣವೀರಪ್ಪ, ಅಶೋಕ ಸುರಪುರಕರ್, ಹೋಮಗಾರ್ಡ್‌ ಕಮಾಂಡೆಂಟ್‌ ಯಲ್ಲಪ್ಪ ಹುಲಿಕಲ್ ಇದ್ದರು.
–ಅಶೋಕ ಸಾಲವಾಡಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT