ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೋಚನೀಯ ಸ್ಥಿತಿಯಲ್ಲಿ ಬುಡಕಟ್ಟು ಸಮಾಜ

Last Updated 13 ನವೆಂಬರ್ 2017, 10:20 IST
ಅಕ್ಷರ ಗಾತ್ರ

ಯಾದಗಿರಿ: ‘ಬುಡಕಟ್ಟುಗಳ ರಕ್ಷಣೆಗಾಗಿ ಸರ್ಕಾರ ಅನುಷ್ಠಾನ ಗೊಳಿಸಿರುವ ಯೋಜನೆಗಳು ಅರ್ಹರಿಗೆ ತಲುಪದ ಕಾರಣ  ರಾಜ್ಯದಲ್ಲಿನ ಬುಡಕಟ್ಟು ಸಮುದಾಯ ಗಳು ಶೋಚನೀಯ ಸ್ಥಿತಿಯಲ್ಲಿವೆ’ ಎಂದು ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್‌ ರಾಜ್ಯ ಘಟಕದ ಅಧ್ಯಕ್ಷ ಎಂ.ಕೃಷ್ಣಯ್ಯ ಆತಂಕ ವ್ಯಕ್ತಪಡಿಸಿದರು.

ಇಲ್ಲಿನ ಪತ್ರಿಕಾ ಭವನದಲ್ಲಿ ಭಾನುವಾರ ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ತಿನ ಜಿಲ್ಲಾ ಘಟಕದಿಂದ ಹಮ್ಮಿಕೊಂಡಿದ್ದ ‘ಬುಡಕಟ್ಟು ಸಮುದಾಯಗಳ ಜೀವನೋಪಾಯ ಹಾಗೂ ಸರ್ಕಾರದ ಸೌಲಭ್ಯ’ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತಾನಾಡಿದರು.

‘ಒಟ್ಟು 50 ಬುಡಕಟ್ಟುಗಳನ್ನು ಕೇಂದ್ರ ಸರ್ಕಾರ ಗುರುತಿಸಿ ಅವುಗಳ ಅಭಿವೃದ್ಧಿಗೆ ಶ್ರಮಿಸುವಂತೆ ಆಯಾ ರಾಜ್ಯಗಳಿಗೆ ಸೂಚಿಸಿದೆ. ಆದರೆ, ರಾಜ್ಯದಲ್ಲಿ ಕೇವಲ 26 ಬುಡಕಟ್ಟು ಗಳಿಗಷ್ಟೆ ಆದ್ಯತೆ ಸಿಕ್ಕಿದೆ. ಉಳಿದ 24 ಬುಡಕಟ್ಟು ಸಮುದಾಯಗಳನ್ನು ರಾಜ್ಯ ಗುರುತಿಸಿಲ್ಲ. ಈ ಕುರಿತು ಬುಡಕಟ್ಟು ಅಧ್ಯಯನ ಸಂಸ್ಥೆ ಸರ್ಕಾರಕ್ಕೆ ಆದಿವಾಸಿ ಸೌಲಭ್ಯ ವಂಚಿತರ ಪಟ್ಟಿ ನೀಡಿದ್ದರೂ ಸರ್ಕಾರ ನಿರ್ಲಕ್ಷಿಸಿದೆ’ ಎಂದರು.

‘ಮುಖ್ಯವಾಗಿ ಆದಿವಾಸಿ ಯೋಜನೆಗಳು ಫಲಾನುಭವಿಗಳಿಗೆ ತಲುಪುತ್ತಿಲ್ಲ. ಏಕರೂಪದ ಯೋಜನೆಗಳಿಂದ ಆದಿವಾಸಿಗಳಿಗೆ ಅನುಕೂಲ ಇಲ್ಲ. ಭೌಗೋಳಿಕ, ಆದಿವಾಸಿಗಳ ಜೀವನ ಕ್ರಮ, ಆಹಾರ ಪದ್ಧತಿಗೆ ತಕ್ಕಂತೆ ಯೋಜನೆಗಳನ್ನು ರೂಪಿಸುವ ಅಗತ್ಯ ಇದೆ. ಈ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಬೇಕಿದೆ’ ಎಂದರು.

‘ಸರ್ಕಾರ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸೂಕ್ಷ್ಮ, ಅತಿಸೂಕ್ಷ, ಅಲೆಮಾರಿ ಹಾಗೂ ಅರೆಅಲೆಮಾರಿ ಅಭಿವೃದ್ಧಿ ಸಮಿತಿ ರಚಿಸಿದೆ. ಪ್ರಾಂತ್ಯವಾರು ಇರುವ ಬುಡಕಟ್ಟುಗಳು ಅನುಭವಿಸುತ್ತಿರುವ ಸಮಸ್ಯೆಗಳನ್ನು ಪಟ್ಟಿ ಮಾಡಿ, ಪರಿಹಾರ ಒದಗಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುವುದು ಈ ಸಮಿತಿ ಕರ್ತವ್ಯವಾಗಿದೆ. ಸಮಿತಿಗಳು ಎಲ್ಲಾ ಕಡೆಗಳಲ್ಲಿ ನಿಷ್ಕ್ರಿಯಗೊಂಡಿವೆ’ ಎಂದರು.

‘ಅಲ್ಲಲ್ಲಿ ಚದುರಿರುವ ಆದಿವಾಸಿಗಳು ಒಗ್ಗೂಡಬೇಕಾಗಿದೆ. ಸಂಘಟನಾತ್ಮಕ ಶಕ್ತಿ ಪಡೆದಾಗ ಮಾತ್ರ ಸೌಲಭ್ಯಗಳು ಸಿಗುತ್ತವೆ. ಈ ನಿಟ್ಟಿನಲ್ಲಿ ಬುಡಕಟ್ಟು ಜನಾಂಗದ ಯುವಕರು ಚಿಂತನೆ ನಡೆಸಬೇಕು’ ಎಂದು ಸಲಹೆ ನೀಡಿದರು.

ಪರಿಷತ್ತಿನ ಕಾನೂನು ಸಲಹೆಗಾರ ಬಂಗಾರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ವಿಜಯಕುಮಾರ ಸಿಂಧೆ, ಡಿ.ವಿ.ಸಿದ್ದಿ, ಪರಿಷತ್ ಜಿಲ್ಲಾ ಘಟಕ ಅಧ್ಯಕ್ಷ ದೊಡ್ಡ ಮರೆಪ್ಪ, ಜ್ಞಾನೇಶ್ವರ ಸಂಧೇನಕರ್, ಬಿ.ಕವೇರಾ, ವೈಜನಾಥ ಹಿರೇಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT