ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸರ್ಕಾರದ ನೆರವು ಸಿಕ್ಕರೆ ಭಿಕ್ಷೆ ಬೇಡುವುದಿಲ್ಲ’

Last Updated 14 ಮೇ 2017, 8:21 IST
ಅಕ್ಷರ ಗಾತ್ರ

ಯಾದಗಿರಿ: ‘ಸರ್ಕಾರ ನಮಗೆ ನೀಡುವ ಮಾಸಾಶನ ₹500 ಯಿಂದ ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ. ನಮಗೆ ಸರ್ಕಾರ ಕಲ್ಪಿಸಿರುವ ಸೌಲಭ್ಯಗಳನ್ನು ಅಧಿಕಾರಿಗಳು ಸಮರ್ಪಕವಾಗಿ ನೀಡು ತ್ತಿಲ್ಲ. ಗ್ರಾಮಲೆಕ್ಕಾಧಿಕಾರಿಗಳಿಗೆ ನಮ್ಮ ಬಗ್ಗೆ ಕೊಂಚವೂ ಕರುಣೆ ಇಲ್ಲ. ಚುನಾವಣಾ ಗುರುತಿನ ಚೀಟಿ ಪಡೆ ಯಲೂ ಹರಸಾಹಸ ಪಡಬೇಕಿದೆ. ಸಮಾಜದಲ್ಲಿ ಎಲ್ಲರಂತೆ ನಾವೂ ಬದುಕಲು ಸರ್ಕಾರದ ನೆರವು ಕಲ್ಪಿಸಿ...’

ಜಿಲ್ಲಾಡಳಿತ ಭವನದ ಸಭಾಂಗಣ ದಲ್ಲಿ ಶನಿವಾರ ನಡೆದ ಜನ–ಮನ ಸಂವಾದದಲ್ಲಿ ‘ಮೈತ್ರಿ’ ವಿಷಯ ಚರ್ಚೆಗೆ ಬಂದಾಗ ಲಿಂಗ ಅಲ್ಪಸಂಖ್ಯಾತ ಸದಸ್ಯ ತಾಯಪ್ಪ ಸಚಿವ ಪ್ರಿಯಾಂಕ್‌ ಖರ್ಗೆ ಅವರಿಗೆ ಮೊರೆಯಿಟ್ಟ ಪರಿ ಇದು.

‘ನಿಷ್ಕಾರಣವಾಗಿ ಲಿಂಗ ಅಲ್ಪಸಂಖ್ಯಾತರನ್ನು ಮನೆಯಿಂದ ಹೊರ ಹಾಕುತ್ತಾರೆ! ಇದು ನಾವು ಪಡೆದು ಕೊಂಡು ಬಂದದ್ದಲ್ಲ. ಪ್ರಕೃತಿಯ ವೈಪರೀತ್ಯ. ಇದಕ್ಕೆ ಯಾರೂ ಹೊಣೆ ಯಲ್ಲ. ಆದರೆ, ನಿರ್ಗತಿಕರನ್ನಾಗಿಸುವುದು ಎಷ್ಟು ಸರಿ? ಬೀದಿಗೆ ಬಿದ್ದಮೇಲೆ ಭಿಕ್ಷೆ ಬೇಡದೇ ನಮಗೆ ಗತಿಯಿಲ್ಲ. ಲಿಂಗ ಅಲ್ಪಸಂಖ್ಯಾತರಿಗೂ ಭಾವನೆಗಳು ಇರುತ್ತವೆ. ಭಾವಾವೇಶದಲ್ಲಿ ಬದುಕುವ ನಮ್ಮನ್ನು ಲೈಂಗಿಕ ಕಾರ್ಯಕರ್ತರು ಎಂದು ಹಣೆಪಟ್ಟಿ ಕಟ್ಟುತ್ತಾರೆ.

ಎಲ್ಲೇ ಹೋದರೂ ಯಾರೂ ನಮ್ಮನ್ನು ಸ್ವೀರಿಸುವುದಿಲ್ಲ. ಹಾಗಾಗಿ, ಸಮಾಜ ನೋಡುವ ದೃಷ್ಟಿಕೋನದಲ್ಲೇ ನಾವು ಬದುಕಲು ಪ್ರಯತ್ನಿಸುತ್ತೇವೆ... ಸರ್ಕಾರದ ನೆರವು ಸಿಕ್ಕರೆ ನಾವೂ ಸುಸ್ಥಿರ ಬದುಕು ಕಟ್ಟಿಕೊಳ್ಳುತ್ತೇವೆ’ ಎಂದು ತಾಯಪ್ಪ ಸಚಿವರಿಗೆ ಮನವರಿಕೆ ಮಾಡಿದರು.

‘ನಮಗೆ ಪಡಿತರ, ಚುನಾವಣಾ ಗುರುತಿನ ಚೀಟಿ, ಸ್ವ ಉದ್ಯೋಗ ಕಲ್ಪಿಸಿ, ಶಿಕ್ಷಣದಲ್ಲಿ ಮೀಸಲಾತಿ ನೀಡಿ, ಮಾಸಾಶನ ಹೆಚ್ಚಿಸಿ, ಜಿಲ್ಲೆಯಲ್ಲಿ 450 ಮಂದಿ ಇದ್ದು, ರಚನೆಯಾಗಿರುವ ಸಂಘ ಕ್ಕೊಂದು ಕಟ್ಟಡ ಕಲ್ಪಿಸಿಕೊಡಿ’ ಎಂದು ಲಿಂಗ ಅಲ್ಪಸಂಖ್ಯಾತರು ಸಚಿವರನ್ನು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್ ಖರ್ಗೆ,‘ಸರ್ಕಾರ ಬಡವರ, ನಿರ್ಗತಿಕರ ರಕ್ಷಣೆಗಾಗಿಯೇ ಇದೆ. ನಿಮ್ಮ ನೋವಿಗೆ ಸರ್ಕಾರ ಮಿಡಿದಿ ರುವುದರಿಂದಲೇ ‘ಮೈತ್ರಿ’ಯಂತಹ ಯೋಜನೆ ಜಾರಿಗೊಳಿಸಿದೆ. ಅಧಿಕಾರಿ ಗಳ ಬಳಿ ನೀವು ಸೌಲಭ್ಯಕ್ಕಾಗಿ ಗೋಗರೆ ಯುವುದು ಬೇಡ. ನಿಮಗಾಗಿಯೇ ಒಂದು ವಿಶೇಷ ಅಭಿಯಾನ ಹಮ್ಮಿಕೊಂಡು ಸೌಲಭ್ಯ ಕಲ್ಪಿಸುವ ಕೆಲಸ ಮಾಡುತ್ತೇನೆ. ಕೂಡಲೇ ಈ ನಿಟ್ಟಿನಲ್ಲಿ ಜಿಲ್ಲಾಡಳಿತ ವಿಶೇಷ ಅಭಿಯಾನಕ್ಕೆ ಸಿದ್ಧತೆ ಮಾಡುವಂತೆ ಅವರು ಜಿಲ್ಲಾಧಿಕಾರಿ ಖುಷ್ಬೂ ಗೋಯಲ್ ಚೌಧರಿ ಅವರಿಗೆ ಸೂಚಿಸಿದರು.

ಆರು ದಿನ ಕ್ಷೀರಭಾಗ್ಯಕ್ಕೆ ಒತ್ತಾಯ: ಕ್ಷೀರಭಾಗ್ಯ ಸಂವಾದದಲ್ಲಿ ಕೋಲಿ ವಾಡದ ವಿದ್ಯಾರ್ಥಿಗಳು ಭಾಗವಹಿಸಿ, ‘ವಾರಕ್ಕೆ ಮೂರು ದಿನ ಇರುವ ಹಾಲು ವಿತರಣೆಯನ್ನು ವಾರದ ಆರೂ ದಿನ ಪೂರೈಸುವಂತೆ ಸಚಿವರನ್ನು ಒತ್ತಾಯಿಸಿದರು.ಮಕ್ಕಳ ಮನವಿಗೆ ಓಗೊಟ್ಟ ಸಚಿವರು,‘ಈ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ’ ಭರವಸೆ ನೀಡಿದರು.

ಹೈನುಗಾರಿಕೆಗೆ ಏಕಿಲ್ಲ ಪ್ರೋತ್ಸಾಹ: ಜಿಲ್ಲೆಯಲ್ಲಿ ಹೈನುಗಾರಿಕೆಗೆ ಪ್ರೋತ್ಸಾಹವೇ ಇಲ್ಲ. ಬ್ಯಾಂಕುಗಳು ಸಾಲ ಕೊಡುತ್ತಿಲ್ಲ. ಸಹಕಾರಿಗಳು ಸ್ಪಂದಿಸು ತ್ತಿಲ್ಲ. ಸರ್ಕಾರ ಕಣ್ಣೆತ್ತಿಯೂ ನೋಡುತ್ತಿಲ್ಲ. ಪರಿಣಾಮವಾಗಿ ದೋರನಹಳ್ಳಿ ಶಿಥಲೀಕರಣ ಕದ ಮುಚ್ಚುವಂತಾಗಿದೆ. ಈಗ ಹುಣಸಗಿ ಶಿಥಲೀಕರಣ ಕಾರ್ಯ ನಿರ್ವಹಿಸುತ್ತಿದೆ. ಆದರೆ, ಅಲ್ಲಿ ಸಾಕಷ್ಟು ಹಾಲಿನ ಉತ್ಪಾದನೆ ಆಗುತ್ತಿಲ್ಲ. ಜಿಲ್ಲೆಯ ಹೈನೋದ್ಯಮದತ್ತ ಏಕೀ ನಿರ್ಲಕ್ಷ್ಯ’ ಎಂದು ‘ಕ್ಷೀರಧಾರೆ’ ಸಂವಾದದಲ್ಲಿ ಸುರಪುರ ತಾಲ್ಲೂಕಿನ ಭೈರಿಮಡಿ ಗ್ರಾಮದ ರೈತ ವೆಂಕಟೇಶ್ ಸಚಿವರನ್ನು ತರಾಟೆ ತೆಗೆದುಕೊಂಡರು.

ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್,‘ ಕೆಎಂಎಫ್, ಸಹಕಾರ ಸಂಘಗಳ ಪದಾಧಿ ಕಾರಿಗಳೊಂದಿಗೆ ಸಭೆ ನಡೆಸಿ ಜಿಲ್ಲೆಯಲ್ಲಿ ಹೈನುಗಾರಿಕೆಗೆ ಬೇಕಾದ ಸಾಲ ಸೌಲಭ್ಯ ಕಲ್ಪಿಸಲು ವ್ಯವಸ್ಥೆ ಕಲ್ಪಿಸುವುದಾಗಿ’ ಉತ್ತರಿಸಿದರು.

ಗುರಿ ಮೀರಿ ಕೃಷಿಹೊಂಡ ನಿರ್ಮಿಸಿ:  ‘ಜಿಲ್ಲೆಯಲ್ಲಿ 350 ಕೃಷಿಹೊಂಡ ನಿರ್ಮಿಸಲು ಗುರಿ ಇಟ್ಟುಕೊಳ್ಳಲಾಗಿತ್ತು. ಆದರೆ, ಕೃಷಿಹೊಂಡಗಳು ರೈತರ ಬದುಕನ್ನು ಕಾಪಾಡುತ್ತಿವೆ. ಹಾಗಾಗಿ, ಗುರಿಮೀರಿ ಕೃಷಿಹೊಂಡ ನಿರ್ಮಾಣಕ್ಕೆ ಅನುದಾನ ಕಲ್ಪಿಸಲಾಗು ವುದು. ರೈತರು ಕೃಷಿಹೊಂಡದ ಸೌಲಭ್ಯ ಪಡೆದುಕೊಳ್ಳ ಬಹುದು’ ಎಂದು ಸಚಿವರು ರೈತರ ಪಶ್ನೆಯೊಂದಕ್ಕೆ ಉತ್ತರಿಸಿದರು.

ಕೃಷಿಹೊಂಡಕ್ಕೆ ಪಾಲಿಥಿನ್‌ ಬದಲಾಗಿ ಸಿಸಿ ಕಟ್ಟಡ ಹಾಗೂ ಬೇಲಿ ನಿರ್ಮಾಣಕ್ಕೆ ಅನುದಾನ ಕಲ್ಪಿಸಬೇಕು ಎಂದು ರೈತರು ಸಚಿವರನ್ನು ಒತ್ತಾಯಿಸಿದರು. ಸಿದ್ಧಮಾದರಿಯ ಸಂವಾದ: ಜನ–ಮನ ಕಾರ್ಯಕ್ರಮದಲ್ಲಿ ನಡೆಸದಲಾದ ಸಂವಾದ ಬಹುತೇಕ ಸಿದ್ಧಮಾದರಿಯ ಪ್ರಶ್ನೋತ್ತರದಂತಿತ್ತು. ‘ಅನ್ನಭಾಗ್ಯ,’ ‘ಕೃಷಿ ಭಾಗ್ಯ’, ‘ವಿದ್ಯಾಸಿರಿ’, ‘ಮನಸ್ವಿನಿ’, ‘ಬಿದಾಯಿ’ ಹೀಗೆ ಅನೇಕ ಯೋಜನೆಗಳ ಕುರಿತು ಸಚಿವರೊಂದಿಗೆ ಫಲಾನುಭವಿ ಗಳು ನಡೆಸಿದ ಸಂವಾದ ಸಿದ್ಧಮಾದರಿ ಯನ್ನೇ ಹೋಲುತ್ತಿತ್ತು. ಫಲಾನುಭವಿ ಗಳಿಗೆ ಅಧಿಕಾರಿಗಳು ತರಬೇತಿ ನೀಡಿ ಸಂವಾದಕ್ಕೆ ಕರೆದುಕೊಂಡು ಬಂದಿದ್ದಾರೆ ಎಂಬ ಮಾತುಗಳು ಜನರಿಂದ ಕೇಳಿಬಂತು.

ಗಡಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಬಾಬುರಾವ ಚಿಂಚನಸೂರ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಸರೆಡ್ಡಿ ಗೌಡ ಮಾಲಿಪಾಟೀಲ, ತಾಲ್ಲೂಕು ಪಂಚಾ ಯಿತಿ ಅಧ್ಯಕ್ಷ ಭಾಷು ರಾಥೋಡ, ನಗರಸಭೆ ಅಧ್ಯಕ್ಷ ಲಲಿತಾ ಅನಪೂರ, ಜಿಲ್ಲಾಧಿಕಾರಿ ಖುಷ್ಬೂ ಗೋಯಲ್ ಚೌಧರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್ ಹಾಜರಿದ್ದರು.

₹440 ಕೋಟಿ ವೆಚ್ಚದಲ್ಲಿ 35 ಕೆರೆಗಳಿಗೆ ನೀರು
2017–18ನೇ ಸಾಲಿನಲ್ಲಿ ಸರ್ಕಾರ ಮಂಡಿಸಿರುವ ಬಜೆಟ್‌ನಲ್ಲಿ ಯಾದಗಿರಿ ಜಿಲ್ಲೆಯ ಗುರುಮಠಕಲ್‌ ಮತಕ್ಷೇತ್ರ ವ್ಯಾಪ್ತಿಯಲ್ಲಿ ₹440 ಕೋಟಿ ವೆಚ್ಚದಲ್ಲಿ ಒಟ್ಟು 35 ಕೆರೆಗಳಿಗೆ ನೀರು ತುಂಬಿಸುವ ಬೃಹತ್‌ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಎಂ.ಖರ್ಗೆ ಪ್ರಕಟಿಸಿದರು.

ಜನ–ಮನ ಸಂವಾದದ ನಂತರ ಮಾತನಾಡಿದ ಅವರು,‘ಜಿಲ್ಲಾ ಪಂಚಾಯ್ತಿ ಅಧೀನದ 9 ಹಾಗೂ ಸಣ್ಣ ನೀರಾವರಿ ಇಲಾಖೆಯ 26 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಶೀಘ್ರ ಚಾಲನೆ ದೊರೆಯಲಿದೆ. 35 ಕೆರೆಗಳಲ್ಲಿ ಒಟ್ಟು 0.806 ಟಿಎಂಸಿ ನೀರು ಸಂಗ್ರಹವಾಗಲಿದೆ. ಇದರಿಂದಾಗಿ 720 ಎಕರೆ ಪ್ರದೇಶಗಳಲ್ಲಿ ನೀರಾವರಿ ಪುನಶ್ಚೇತನವಾಗಲಿದೆ. ಶೀಘ್ರದಲ್ಲಿ 35 ಕೆರೆಗಳಿಗೆ ಸ್ವತಃ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT